ನೀತಿ ಆಯೋಗದ ಸಭೆಗೆ 11 ಮುಖ್ಯಮಂತ್ರಿಗಳ ಗೈರು

Update: 2023-05-28 02:20 GMT

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ನೀತಿ ಆಯೋಗದ ಆಡಳಿತ ಮಂಡಳಿ ಸಭೆಗೆ 11 ಮಂದಿ ಮುಖ್ಯಮಂತ್ರಿಗಳು ಗೈರುಹಾಜರಾಗಿದ್ದರು. ಕೆಲವರು ಸಭೆಯನ್ನು ಬಹಿಷ್ಕರಿಸಿದ್ದರೆ ಮತ್ತೆ ಕೆಲವರು ಪೂರ್ವನಿಗದಿತ ಕಾರ್ಯಕ್ರಮದ ಕಾರಣ ನೀಡಿ ಹಾಜರಾಗಲಿಲ್ಲ.

ಸಭೆ ಬಹಿಷ್ಕರಿಸಿದ ವಿರೋಧ ಪಕ್ಷಗಳ ನಿರ್ಧಾರವನ್ನು ಕಟುವಾಗಿ ಟೀಕಿಸಿರುವ ಬಿಜೆಪಿ, ಇದು ಜನವಿರೋಧಿ ಹಾಗೂ ಬೇಜವಾಬ್ದಾರಿಯ ನಡೆ ಎಂದು ಬಣ್ಣಿಸಿದೆ. "ನೂರಾರು ವಿಷಯಗಳು ಚರ್ಚೆಯಾಗುವ ಈ ಸಭೆಗೆ ಅವರು ಏಕೆ ಹಾಹರಾಗುವುದಿಲ್ಲ? ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಸಿಎಂಗಳು ಗೈರುಹಾಜರಾದರೆ, ಅವರು ತಮ್ಮ ರಾಜ್ಯಗಳ ಧ್ವನಿಯನ್ನು ಸಭೆಗೆ ತರುವುದಿಲ್ಲ ಎಂಬ ಅರ್ಥ" ಎಂದು ಬಿಜೆಪಿಯ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

ಆರೋಗ್ಯ, ಕೌಶಲ ಅಭಿವೃದ್ಧಿ, ಮಹಿಳಾ ಸಬಲೀಕರಣ ಮತ್ತು ಮೂಲಸೌಕರ್ಯ ಸೇರಿದಂತೆ, 2047ರ ಮುನ್ನ ಭಾರತವನ್ನು ಅಭಿವೃದ್ಧಿಹೊಂದಿದ ದೇಶವಾಗಿ ರೂಪಿಸುವ ಕಾರ್ಯಯೋಜನೆಗಳು ಸಭೆಯ ಕಾರ್ಯಸೂಚಿಯಲ್ಲಿದ್ದವು.

ಸಭೆಯ ನಡಾವಳಿ ಬಗ್ಗೆ ವಿವರಿಸಿದ ನೀತಿ ಆಯೋಗದ ಸಿಇಓ ಬಿ.ವಿ.ಆರ್.ಸುಬ್ರಹ್ಮಣ್ಯಂ ಅವರು, "ನೀವು ಸಭೆಗೆ ಹಾಜರಾಗಿಲ್ಲ ಎಂದರೆ, ಸಮೃದ್ಧ ಯೋಚನೆಯ ಚರ್ಚೆಯನ್ನು ತಪ್ಪಿಸಿಕೊಂಡಿದ್ದೀರಿ ಎಂಬ ಅರ್ಥ. ಬಹಿಷ್ಕರಿಸುವ ಬದಲು ಎಲ್ಲರೂ ಜತೆಯಾಗಿ ಕೆಲಸ ಮಾಡೋಣ. ಕೇಂದ್ರ ಸರ್ಕಾರ ನೀತಿಗಳನ್ನು ರೂಪಿಸುತ್ತದೆ. ಭಾಗವಹಿಸದ ರಾಜ್ಯಗಳನ್ನು ಹೊರಗಿಡಲಾಗುವುದಿಲ್ಲ. ಆದರೆ ಭಾಗವಹಿಸದಿರುವವರಿಗೆ ನಷ್ಟವಾಗುತ್ತದೆ" ಎಂದು ಹೇಳಿದರು.

Similar News