ಸರ್ಕಾರದ ಸಂಧಾನ ಸೂತ್ರಕ್ಕೆ ಕುಸ್ತಿಪಟುಗಳ ತಿರಸ್ಕಾರ; ಇಂದು ಮಹಿಳಾ ಮಹಾಪಂಚಾಯತ್

Update: 2023-05-28 03:01 GMT

ಹೊಸದಿಲ್ಲಿ: ಕಳೆದ 35 ದಿನಗಳಿಂದ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳನ್ನು ಶನಿವಾರ ಸರ್ಕಾರದ ಪ್ರತಿನಿಧಿಗಳು ಭೇಟಿ ಮಾಡಿ ಧರಣಿ ನಿರತರ ಮನವೊಲಿಸುವ ವಿಫಲ ಯತ್ನ ನಡೆಸಿದರು. ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿ, ಭಾರತದ ಕುಸ್ತಿ ಫೆಡರೇಷನ್ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬೃಜ್‌ಭೂಷಣ್ ಶರಣ್ ಸಿಂಗ್‌ನನ್ನು ಬಂಧಿಸಬೇಕು ಎಂಬ ಕುಸ್ತಿಪಟುಗಳ ಮುಖ್ಯ ಬೇಡಿಕೆಯನ್ನು ಸರ್ಕಾರ ಈಡೇರಿಸದ ಹಿನ್ನೆಲೆಯಲ್ಲಿ ಮಾತುಕತೆ ವಿಫಲವಾಯಿತು ಎಂದು ಕುಸ್ತಿಪಟುಗಳು ಹೇಳಿದ್ದಾರೆ.

ದಿನವಿಡೀ ಸರ್ಕಾರಿ ಅಧಿಕಾರಿಗಳು ಮತ್ತು ಖಪ್ ಪಂಚಾಯತ್ ಮುಖಂಡರ ಜತೆ ಸಭೆ ನಡೆಸಿದ ಬಳಿಕ ತಡರಾತ್ರಿ ಪತ್ರಿಕಾಗೋಷ್ಠಿ ನಡೆಸಿದ ಕುಸ್ತಿಪಟುಗಳು, ಭಾನುವಾರ ನಡೆಸಲು ಉದ್ದೇಶಿಸಿರುವ ಮಹಿಳಾ ಮಹಾ ಪಂಚಾಯತ್‌ಗೆ ಆಗಮಿಸುತ್ತಿರುವ ಜನರನ್ನು ಸರ್ಕಾರ ದೆಹಲಿ ಗಡಿಯಲ್ಲಿ ತಡೆಯುತ್ತಿದೆ ಎಂದು ಆಪಾದಿಸಿದರು. ಸಂಸತ್‌ನ ನೂತನ ಕಟ್ಟಡ ಉದ್ಘಾಟನಾ ಸಮಾರಂಭದ ಸ್ಥಳದಲ್ಲಿ ಮಹಿಳಾ ಮಹಾ ಪಂಚಾಯತ್ ನಡೆಸಲು ಧರಣಿ ನಿರತರು ಉದ್ದೇಶಿಸಿದ್ದಾರೆ.

"ಆರೋಪಿಯನ್ನು ಬಂಧಿಸಬೇಕು ಎಂಬ ನಮ್ಮ ಪ್ರಮುಖ ಬೇಡಿಕೆಗೆ ಸರ್ಕಾರ ಒಪ್ಪಿಕೊಳ್ಳದ ಕಾರಣ ಮಾತುಕತೆ ವಿಫಲವಾಗಿದೆ. ಧರಣಿ ನಿಲ್ಲಿಸುವಂತೆ ನಮ್ಮ ಮೇಲೆ ಭಾರಿ ಒತ್ತಡ ಇದೆ. ಆದರೆ ತಾತ್ವಿಕ ಅಂತ್ಯ ಕಾಣಿಸುವವರೆಗೂ ಹೋರಾಟ ಮುಂದುವರಿಸುತ್ತೇವೆ" ಎಂದು ಎರಡು ಬಾರಿಯ ವಿಶ್ವಚಾಂಪಿಯನ್‌ಶಿಪ್ ಕಂಚಿನ ಪದಕ ವಿಜೇತ ವಿನೇಶ್ ಫೋಗತ್ ಹೇಳಿದರು. ರಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್ ಕೂಡಾ ಜತೆಗಿದ್ದರು. 

ಕಳೆದ ವರ್ಷ ರಾಜ್ಯಸಭೆಗೆ ಆಯ್ಕೆಯಾದ ಹರ್ಯಾಣ ಮುಖಂಡ ಕಾರ್ತಿಕೇಯ ಶರ್ಮಾ ಶನಿವಾರ ಕುಸ್ತಿಪಟುಗಳ ಜತೆ ರಹಸ್ಯ ಸಭೆ ನಡೆಸಿದರು ಎಂದು ತಿಳಿದುಬಂದಿದೆ. ಡಬ್ಲ್ಯುಎಫ್‌ಐ ಸ್ವಚ್ಛಗೊಳಿಸುವ ಮತ್ತು ಸಿಂಗ್ ಕುಟುಂಬ ಸದಸ್ಯರು ಒಕ್ಕೂಟದಲ್ಲಿ ಯಾವುದೇ ಹುದ್ದೆ ಹೊಂದಬಾರದು ಎಂಬ ಕುಸ್ತಿಪಟುಗಳ ಬೇಡಿಕೆಗೆ ಸರ್ಕಾರದ ಪ್ರತಿನಿಧೀ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ ಸಿಂಗ್ ಬಂಧನದ ವಿಚಾರ, ಮಾತುಕತೆ ಫಲಪ್ರದವಾಗಲು ವಿಫಲವಾಯಿತು ಎನ್ನಲಾಗಿದೆ.

Similar News