ಪಶ್ಚಿಮ ಕಡಲ ತಡಿಯಲ್ಲಿ ಹೆಮ್ಮರವಾದ ಸಿರಿಗನ್ನಡ

Update: 2023-05-28 05:03 GMT

ಕನ್ನಡದ ಅಧ್ಯಯನ, ಅಧ್ಯಾಪನ ಹೊಸತನದ ಅನ್ವೇಷಣೆಯಲ್ಲಿ ಕಳೆದ ಹಲವು ದಶಕಗಳಿಂದ ಕನ್ನಡದ ಸೇವೆಗೆ ಮುನ್ನುಡಿ ಬರೆಯುತ್ತಿರುವ ಮುಂಬೈ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗ

167 ವರ್ಷಗಳ ಇತಿಹಾಸವುಳ್ಳ ಮುಂಬೈ ವಿಶ್ವವಿದ್ಯಾನಿಲಯದ ಹಲವು ವಿಭಾಗಗಳಲ್ಲಿ ಒಂದಾದ ಕನ್ನಡ ವಿಭಾಗ ‘ಎ’ ಶ್ರೇಯಾಂಕವನ್ನು ಪಡೆದು ತನ್ನ ಸಾಧನೆಯನ್ನು ಸಾಬೀತುಪಡಿಸಿದೆ. ಸಮಸ್ತ ಮುಂಬೈ ಕನ್ನಡಿಗರನ್ನು ಒಳಗೊಂಡು ಕನ್ನಡ ವ್ಮಾಯದ ಕೇಂದ್ರ ಸ್ಥಾನದಲ್ಲಿದ್ದುಕೊಂಡು ತನ್ನ ಸಾಧನೆಯ ಪರಿಧಿಯನ್ನು ವಿಸ್ತರಿಸುತ್ತಲೇ ಈಗ ನಲತ್ತೈದರ ಸಂಭ್ರಮದಲ್ಲಿದೆ. ಮುಂಬೈ ವಿಶ್ವವಿದ್ಯಾನಿಲಯ ಕನ್ನಡ ವಿಭಾಗ ನಮ್ಮ ನಾಡಿಗೆ ಮಾದರಿ ಎನ್ನುವುದು ನಿಸ್ಸಂದೇಹ.

‘ಕಾವೇರಿಯಿಂದ ಮಾ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್’ ಎಂಬುದಾಗಿ ಕವಿರಾಜಮಾರ್ಗಕಾರ ಹೇಳಿದ್ದಾನೆ. ಭವ್ಯ ಕನ್ನಡ ನಾಡು ಕೇವಲ ಇಂದಿನ ಭೌಗೋಳಿಕ ಗಡಿಗಳಿಗೆ ಸೀಮಿತವಾದುದಲ್ಲ. ಸಾಂಸ್ಕೃತಿಕವಾಗಿ ಅದು ವಿಶಾಲ ನೆಲೆಯಲ್ಲಿ ವ್ಯಾಪಿಸಿದೆ ಎಂಬುದನ್ನು ಐತಿಹಾಸಿಕ ಸಂಶೋಧನೆಗಳು ಈಗಾಗಲೇ ದೃಢಪಡಿಸಿವೆ. ಇಂದು ಕನ್ನಡಿಗರು ದೇಶವಿದೇಶಗಳ ಗಡಿ ದಾಟಿ ವಲಸೆ ಹೋಗಿ ನೆಲೆ ನಿಂತು ಕನ್ನಡತನವನ್ನು ಎಲ್ಲೆಡೆ ಪಸರಿಸಿದ್ದಾರೆ. 

ಹೊರನಾಡ ಕನ್ನಡಿಗರೆಂದು ಕರೆಸಿಕೊಳ್ಳುತ್ತಲೇ ಕನ್ನಡದ ಬಾವುಟವನ್ನು ವಿಶ್ವದಾದ್ಯಂತ ಎತ್ತಿ ಹಿಡಿದಿದ್ದಾರೆ. ಕರ್ನಾಟಕದ ರಾಜಧಾನಿ ಬೆಂಗಳೂರನ್ನು ಬಿಟ್ಟರೆ ಅತಿ ಹೆಚ್ಚು ಕನ್ನಡಿಗರು ನೆಲೆಸಿರುವುದು ಭಾರತದ ವಾಣಿಜ್ಯ ನಗರಿಯಾದ ಮುಂಬೈ ಮಹಾನಗರದಲ್ಲಿ ಎಂಬ ಅಭಿಪ್ರಾಯ ಸಮ್ಮತವಾದರೂ ಕೇವಲ ಜನಸಂಖ್ಯೆ ಇರುವ ಮಾತ್ರಕ್ಕೆ ಕನ್ನಡ ಕೈಂಕರ್ಯ ಮುಂದುವರಿಯಲು ಸಾಧ್ಯವಿಲ್ಲ. ಅಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಬಿತ್ತರಿಸುವ ಕೆಲಸವಾದಾಗ ಮಾತ್ರ ಅದರ ಅಭಿವೃದ್ಧಿಯಾಗಿ ಅದು ನಮ್ಮ ಅಸ್ಮಿತೆಯ ಪ್ರತೀಕವಾಗುವುದು. 

ಬಹು ಭಾಷೆ ಬಹು ಸಂಸ್ಕೃತಿಗಳ ಬೀಡಾದ ಮುಂಬೈ ಮಹಾನಗರದಲ್ಲಿ ಕನ್ನಡದ ಬೇರನ್ನು ಗಟ್ಟಿಗೊಳಿಸುವ, ಕನ್ನಡವನ್ನು ಕಟ್ಟಿ ಬೆಳೆಸಿ, ಉಳಿಸುವ  ಅಸಾಧಾರಣವಾದ ಕೆಲಸ ನಡೆಯುತ್ತಿರುವುದು ಅತ್ಯಂತ ಶ್ಲಾಘನೀಯ. ಕನ್ನಡ ವ್ಮಾಯಕ್ಕೆ ಮುಂಬೈ ಮಹಾನಗರದ ಕೊಡುಗೆ ಗಮನಾರ್ಹವಾದುದು. ಈ ಎಲ್ಲ ದೃಷ್ಟಿಕೋನದಲ್ಲಿ ಗಮನಿಸಿದರೆ ಮುಂಬೈ ವಿಶ್ವವಿದ್ಯಾನಿಲಯ ಕನ್ನಡ ವಿಭಾಗ ಶೈಕ್ಷಣಿಕವಾಗಿ, ಸಾಹಿತ್ಯಕವಾಗಿ ಹಾಗೂ ಸಾಂಸ್ಕೃತಿಕವಾಗಿ ಕನ್ನಡವನ್ನು ಗಟ್ಟಿಗೊಳಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಲಿದೆ. ಪ್ರಸ್ತುತದಲ್ಲಿ ಮುಂಬೈಯ ಕನ್ನಡ ವ್ಮಾಯದ ಶಕ್ತಿ ಕೇಂದ್ರವಾಗಿ ಕನ್ನಡ ವಿಭಾಗ ರೂಪುಗೊಂಡಿರುವುದು ಹಾಗೂ ಪ್ರಗತಿಯತ್ತ ದಾಪುಗಾಲು ಹಾಕಿರುವುದು ಹೆಮ್ಮೆಯ ಸಂಗತಿ.

1857ರಲ್ಲಿ ಭಾರತದಲ್ಲಿ ಮೊತ್ತ ಮೊದಲಿಗೆ ಆರಂಭವಾದ ಮೂರು ವಿಶ್ವವಿದ್ಯಾನಿಲಯಗಳಲ್ಲಿ ಮುಂಬೈ ವಿಶ್ವವಿದ್ಯಾನಿಲಯವೂ ಒಂದು. ಐತಿಹಾಸಿಕ ಮಹತ್ವವನ್ನು ಹೊಂದಿದ ಮುಂಬೈ ವಿಶ್ವವಿದ್ಯಾನಿಲಯದಲ್ಲಿ ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ಕನ್ನಡ ಅಧ್ಯಯನಕ್ಕೆ ಅವಕಾಶವನ್ನು ಕಲ್ಪಿಸಲಾಗಿತ್ತು. ನಂತರ 1979-80ರ ಶೈಕ್ಷಣಿಕ ವರ್ಷದಲ್ಲಿ ಸ್ವತಂತ್ರವಾದ ಪ್ರತ್ಯೇಕ ಕನ್ನಡ ವಿಭಾಗ ಅಸ್ತಿತ್ವಕ್ಕೆ ಬಂದಿತು. 

ಇದರ ಮೊದಲ ಮುಖ್ಯಸ್ಥರ ಸ್ಥಾನವನ್ನು ಪ್ರೊ. ಚಿದಂಬರ ದೀಕ್ಷಿತ್ ಅವರು ನಿರ್ವಹಿಸಿದರು. ಕನ್ನಡ ಪ್ರಾಧ್ಯಾಪಕರಾಗಿದ್ದ ಅವರು ವಿಭಾಗದ ಬೆಳವಣಿಗೆಗೆ ಬೇಕಾದ ರೂಪರೇಷೆಯನ್ನು ಹಾಕಿಕೊಟ್ಟು ಅದರ ಬೆಳವಣಿಗೆಗೆ ಶ್ರಮಿಸಿದರು. 1984ರಲ್ಲಿ ಡಾ. ಶ್ರೀನಿವಾಸ ಹಾವನೂರು ಅವರು ಕನ್ನಡ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥರಾಗಿ ನಿಯುಕ್ತರಾದರು. ವಿಭಾಗದ ಅಭಿವೃದ್ಧಿಯಲ್ಲಿ ಅವರ ಕೊಡುಗೆಯೂ ಮಹತ್ವದ್ದು. 

ಹಾವನೂರು ಅವರ ನಿವೃತ್ತಿಯ ನಂತರ ಮುಖ್ಯಸ್ಥರಾಗಿ ಜವಾಬ್ದಾರಿಯನ್ನು ವಹಿಸಿಕೊಂಡ ಡಾ. ತಾಳ್ತಜೆ ವಸಂತಕುಮಾರ್ ಅವರು ವಿಚಾರ ಸಂಕಿರಣಗಳು, ಕಮ್ಮಟಗಳು, ವಿಶೇಷ ಉಪನ್ಯಾಸಗಳು, ಕೃತಿಗಳ ಪ್ರಕಟಣೆ ಹೀಗೆ ಅನೇಕ ನೆಲೆಗಳಲ್ಲಿ ಕನ್ನಡ ವಿಭಾಗವನ್ನು ಕ್ರಿಯಾಶೀಲವಾಗಿ ಮುನ್ನಡೆಸಿದರು. ಆನಂತರ. ಡಾ. ಜಿ.ಎನ್. ಉಪಾಧ್ಯ ಅವರು 2001ರಿಂದ ವಿಭಾಗದ ಮುಖ್ಯಸ್ಥರಾಗಿ ನಿಯುಕ್ತರಾದರು. ಅಲ್ಲಿಂದ ಇಲ್ಲಿಯವರೆಗೆ ಅವರು ಕನ್ನಡ ವಿಭಾಗವನ್ನು ಸರ್ವತೋಮುಖವಾಗಿ ವಿಸ್ತಾರಗೊಳಿಸುವಲ್ಲಿ ಅವಿರತ ಶ್ರಮವಹಿಸಿ ಸಮರ್ಥವಾಗಿ ಕಾರ್ಯನಿರ್ವಹಿಸಿ ಯಶಸ್ವಿಯಾಗಿದ್ದಾರೆ. ಕಳೆದ ಹತ್ತು ವರ್ಷಗಳಿಂದ ವಿಭಾಗದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಕೈ ಜೋಡಿಸುತ್ತಿರುವ ಸಹ ಪ್ರಾಧ್ಯಾಪಕರಾದ ಡಾ. ಪೂರ್ಣಿಮಾ ಶೆಟ್ಟಿ ಅವರ ಕೊಡುಗೆಯೂ ಸ್ತುತ್ಯಾರ್ಹವಾದದ್ದು.

ಮುಂಬೈ ವಿವಿ ಕನ್ನಡ ವಿಭಾಗದಲ್ಲಿ ಇಂದು ಸ್ನಾತಕೋತ್ತರ ಕನ್ನಡ ಎಂ.ಎ., ಎಂ.ಫಿಲ್., ಪಿಎಚ್.ಡಿ. ಅಧ್ಯಯನಕ್ಕೆ ಅವಕಾಶವಿದೆ. ಪಾಠ, ಪ್ರವಚನಗಳ ಜೊತೆಗೆ ಸಂಶೋಧನಾ ಯೋಜನೆಗಳಲ್ಲೂ ತೊಡಗಿಸಿಕೊಂಡಿರುವ ವಿಭಾಗ ಈಗಾಗಲೇ ಮೂರು ಯು.ಜಿ.ಸಿ. ಮೇಜರ್ ಪ್ರಾಜೆಕ್ಟ್ ಹಾಗೂ ಆರು ಮೈನರ್ ರಿಸರ್ಚ್ ಯೋಜನೆಗಳನ್ನು ಯಶಸ್ವಿಯಾಗಿ ಮುಗಿಸಿದೆ. ಕನ್ನಡೇತರರಿಗೆ, ಕನ್ನಡ ಬಾರದವರಿಗೆ ಕನ್ನಡ ಕಲಿಸುವ ಯೋಜನೆಯಡಿಯಲ್ಲಿ ಸರ್ಟಿಫಿಕೇಟ್ ಹಾಗೂ ಡಿಪ್ಲೊಮಾ ತರಗತಿಗಳನ್ನು ನಡೆಸಿಕೊಂಡು ಬರುತ್ತಿರುವ ಶ್ರೇಯಸ್ಸು ಕನ್ನಡ ವಿಭಾಗದ್ದು. 

ಮುಂಬೈ ಹಾಗೂ ಅದರ ಉಪನಗರಗಳಲ್ಲಿ ಇದಕ್ಕೆ ಒಳ್ಳೆಯ ಪ್ರತಿಕ್ರಿಯೆಯೂ ವ್ಯಕ್ತವಾಗಿದೆ. ಕನ್ನಡ ವಿಭಾಗವು ಸ್ಥಳೀಯ ಕನ್ನಡ ಸಂಘ - ಸಂಸ್ಥೆಗಳೊಡನೆ ಸೇರಿಕೊಂಡು ವಿಚಾರ ಸಂಕಿರಣ, ದತ್ತಿ ಉಪನ್ಯಾಸ ಮೊದಲಾದ ಕಾರ್ಯಕ್ರಮಗಳನ್ನು ಅನೂಚಾನವಾಗಿ ನಡೆಸಿಕೊಂಡು ಬರುತ್ತಿದೆ. ಉತ್ತಮ ಕಾರ್ಯ ವೈಖರಿಯ ಮೂಲಕ ಕನ್ನಡ ವಿಭಾಗ ಇಂದು ವಿಶ್ವವಿದ್ಯಾನಿಲಯದ ದೊಡ್ಡ ವಿಭಾಗಗಳಿಗೆ ಸರಿದೊರೆಯಾಗಿ ನಿಂತಿದೆ. 

ಮುಖ್ಯಸ್ಥರ ಕನ್ನಡ ನಿಷ್ಠೆ, ನಿಸ್ವಾರ್ಥ ಪರಿಶ್ರಮ, ವ್ಯವಸ್ಥಿತವಾದ ಕಾರ್ಯಕ್ಷಮತೆಯಿಂದ ಪ್ರಭಾವಿತರಾದ ವಿದ್ಯಾರ್ಥಿಗಳ ಸಹಕಾರ, ಸ್ಥಳೀಯ ಕನ್ನಡ ಸಂಘ - ಸಂಸ್ಥೆಗಳೊಂದಿಗೆ ಕನ್ನಡ ವಿಭಾಗ ಹೊಂದಿರುವ ಆರೋಗ್ಯಕರ ಸಂಬಂಧ; ಅವರ ನೆರವು ಹಾಗೂ ಮುಂಬೈ ಕನ್ನಡಿಗರ ಬೆಂಬಲ ಇವೆಲ್ಲವೂ ಒಟ್ಟಾಗಿ ಕನ್ನಡದ ಬೆಳವಣಿಗೆಗೆ ಪೋಷಕವಾದ ವಾತಾವರಣವನ್ನು ಇಲ್ಲಿ ಸೃಷ್ಟಿಸಿದೆ. ಈವರೆಗೆ ವಿಭಾಗದ ಮೂಲಕ 53 ಮಂದಿ ಪಿಎಚ್.ಡಿ. ಹಾಗೂ 89 ಮಂದಿ ಎಂ.ಫಿಲ್. ಪದವಿಯನ್ನು ಪಡೆದಿರುವುದು ವಿಶೇಷ.

‘ಗ್ರಂಥಾಲಯದ ಮೂಲಕ ವಿಶ್ವವಿದ್ಯಾನಿಲಯ ಯೋಚಿಸುತ್ತದೆ; ವಿಚಾರ ಮಾಡುತ್ತದೆ’ ಎಂಬ ಮಾತಿದೆ. ಕನ್ನಡ ವಿಭಾಗವು ಮುಂಬೈ ವಿಶ್ವವಿದ್ಯಾನಿಲಯದಲ್ಲಿರುವ ಬಹುಭಾಷೆಗಳ ಗ್ರಂಥಾಲಯಗಳ ನಡುವೆ ಸುಸಜ್ಜಿತವಾದ ಸುಮಾರು ಆರು ಸಾವಿರಕ್ಕೂ ಹೆಚ್ಚು ಪುಸ್ತಕಗಳಿರುವ ಪ್ರತ್ಯೇಕ ಗ್ರಂಥಾಲಯವನ್ನೂ ಬೆಳೆಸಿದೆ. ಕನ್ನಡ ನಾಡು, ನುಡಿ, ಸಂಸ್ಕೃತಿ, ಧರ್ಮ, ಶಿಕ್ಷಣ, ಜನಜೀವನ, ಕಲೆ, ಇತಿಹಾಸ ಎಲ್ಲವನ್ನೂ ಒಳಗೊಂಡ ಪುಸ್ತಕಗಳು ಕನ್ನಡ ಸಂಸ್ಕೃತಿಯ ಪೋಷಕವಾದ ಓದು, ಅಧ್ಯಯನಕ್ಕೆ ಅನುಕೂಲವಾಗಿದೆ.

ಕನ್ನಡ ವಿಭಾಗ ಸತತವಾಗಿ ಅನೇಕ ಮಹತ್ವದ ಕೃತಿಗಳನ್ನು ಪ್ರಕಟಿಸುತ್ತಿರುವುದು ಕನ್ನಡದ ಭಾಗ್ಯವೆಂದೇ ಹೇಳಬೇಕು. ಇಂದಿನ ದಿನಗಳಲ್ಲಿ ಒಳನಾಡಿನಲ್ಲಿ ಕೇವಲ ಪಿಎಚ್.ಡಿ. ಪದವಿಗಾಗಿ ಮಾತ್ರವಲ್ಲದೆ ಆಸಕ್ತಿಯಿಂದ ವಿದ್ಯಾರ್ಥಿಗಳು ಶ್ರಮವಹಿಸಿ ಸಿದ್ಧಪಡಿಸುವ ಅದೆಷ್ಟೋ ಮಹತ್ವದ ಮಹಾಪ್ರಬಂಧಗಳು ಪ್ರಕಟಣೆ ಕಾಣದೆ ಮೂಲೆಗುಂಪಾಗಿರುವುದು ಖೇದದ ಸಂಗತಿ. ಆದರೆ ಮುಂಬೈ ವಿಶ್ವವಿದ್ಯಾನಿಲಯ ಕನ್ನಡ ವಿಭಾಗದಲ್ಲಿ ಪ್ರಕಟಣೆಗೆ ಅರ್ಹವಾದ ಮಹಾಪ್ರಬಂಧಗಳು, ಇತರ ಸಂಶೋಧನಾ ಕೃತಿಗಳು, ಎಂ.ಫಿಲ್. ಸಂಪ್ರಬಂಧಗಳು ವ್ಯವಸ್ಥಿತವಾಗಿ ಪ್ರಕಟಗೊಂಡು ನಾಡಿನ ವಿದ್ವಾಂಸರ, ಸಂಶೋಧಕರ ಮೆಚ್ಚುಗೆಗೆ ಪಾತ್ರವಾಗಿ ಅಭಿಮಾನ ಪಡುವಂತಾಗಿದೆ. 

ಇತ್ತೀಚೆಗೆ ಇಲ್ಲಿನ ಸ್ನಾತಕೋತ್ತರ ವಿದ್ಯಾರ್ಥಿಗಳೂ ಶೋಧ ಸಂಪ್ರಬಂಧಗಳನ್ನು ರಚಿಸಿ ವಿಭಾಗದ ಮೂಲಕ ಪ್ರಕಟಿಸಿರುವುದು ಕನ್ನಡ ವಿಭಾಗದ ಹಿರಿಮೆಗೆ ಸಾಕ್ಷಿ. ಅಷ್ಟೇ ಅಲ್ಲದೆ ಕನ್ನಡ ವಿಭಾಗ ಹಲವು ವಿಮರ್ಶಾ ಕೃತಿಗಳನ್ನು, ವಿಶೇಷ ಉಪನ್ಯಾಸ ಕೃತಿಗಳನ್ನು, ವ್ಯಕ್ತಿ ಚಿತ್ರಗಳನ್ನು, ಅನುವಾದಿತ ಕೃತಿಗಳನ್ನು, ಕನ್ನಡ ವಿಭಾಗದ ಸಾಧನೆಯನ್ನು ಬಿಂಬಿಸುವ ಕೃತಿಗಳನ್ನು, ಆಂಗ್ಲ ಕೃತಿಗಳನ್ನು, ಸ್ವತಂತ್ರ ಕೃತಿಗಳನ್ನು ಹಾಗೂ ಇತರ ಕೃತಿಗಳನ್ನು ಪ್ರಕಟಿಸಿ ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಿದೆ.

 ಇದುವರೆಗೆ ಸುಮಾರು 90 ಕೃತಿಗಳು ಕನ್ನಡ ವಿಭಾಗದಿಂದ ಪ್ರಕಟಗೊಂಡಿದ್ದು ಹೊರನಾಡಿನಲ್ಲಿರುವ ಕನ್ನಡ ವಿಭಾಗಗಳಲ್ಲಿ ಅತಿ ಹೆಚ್ಚು ಕೃತಿಗಳನ್ನು ಪ್ರಕಟಿಸಿದ ಕೀರ್ತಿಗೂ ಇದು ಪಾತ್ರವಾಗಿದೆ. ಪ್ರಕಟವಾದ ಮೌಲಿಕ ಕೃತಿಗಳು ಎರಡು ಬಾರಿ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ ಹಾಗೂ ಅನೇಕ ಮಹತ್ವದ ಪ್ರಶಸ್ತಿಗಳಿಗೆ ಭಾಜನ ವಾಗಿರುವುದು ಕನ್ನಡ ವಿಭಾಗದ ಹಿರಿಮೆ. 

ಮುಂಬೈ ವಿಶ್ವವಿದ್ಯಾನಿಲಯ ಕನ್ನಡ ವಿಭಾಗದ ಪ್ರಕಟಣಾ ಕಾರ್ಯವನ್ನು ಗಮನಿಸಿ ಕರ್ನಾಟಕ ಸರಕಾರ ಕನ್ನಡ ಪುಸ್ತಕ ಪ್ರಾಧಿಕಾರ 2022ರ ಸಾಲಿನ ಗೌರವ ಪುರಸ್ಕಾರವನ್ನು ನೀಡಿ ಸತ್ಕರಿಸಿರುವುದು ವಿಭಾಗಕ್ಕೆ ಸಂದ ಗೌರವ ಎಂಬುದು ಮುಖ್ಯಸ್ಥರಾದ ಡಾ. ಜಿ.ಎನ್. ಉಪಾಧ್ಯ ಅವರ ಅಭಿಪ್ರಾಯ.

ಮುಂಬೈ ವಿಶ್ವವಿದ್ಯಾನಿಲಯ ಕನ್ನಡ ವಿಭಾಗದಲ್ಲಿ ಅಧ್ಯಯನಕ್ಕೆ ಬರುವ ವಿದ್ಯಾರ್ಥಿಗಳು ಕೇವಲ ಕನ್ನಡ ಸಾಹಿತ್ಯದ ಹಿನ್ನೆಲೆಯಿಂದ ಬರುವವರಲ್ಲ. ಬದಲಾಗಿ ವಿಜ್ಞಾನ, ವಾಣಿಜ್ಯ, ತಂತ್ರಜ್ಞಾನ, ವೈದ್ಯಕೀಯ, ಲೆಕ್ಕಪರಿಶೋಧನೆ ಮುಂತಾದ ಹಲವು ಹಿನ್ನೆಲೆಗಳಿಂದ ಬರುವ ಪ್ರೌಢ ವಿದ್ಯಾರ್ಥಿಗಳು. ಕನ್ನಡ ವಿಭಾಗ ಇವರಿಗೆಲ್ಲ ಪ್ರೇರಣೆಯಾಗಿ ತನ್ನತ್ತ ಆಕರ್ಷಿಸಿರುವುದಂತೂ ಸತ್ಯ.

 ಕನ್ನಡ ಸಾಹಿತ್ಯ, ಸಂಸ್ಕೃತಿಯನ್ನು ಆಸಕ್ತಿಯಿಂದ, ಕ್ರಿಯಾಶೀಲರಾಗಿ ವ್ಯವಸ್ಥಿತವಾಗಿ ಅಧ್ಯಯನ ಮಾಡಿ, ಹೊಸ ಬಗೆಯ ಚಿಂತನ ಕ್ರಮದ ಮೂಲಕ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ, ಅನೇಕ ವಿಚಾರಗಳನ್ನು ಕ್ರೋಡೀಕರಿಸುವ ಜಾಯಮಾನವನ್ನು ವಿಭಾಗ ಬೆಳೆಸಿಕೊಂಡು ಬಂದಿದೆ. ಪೂರಕವಾದ ಶಿಸ್ತು ಹಾಗೂ ಸ್ನೇಹಮಯ ವಾತಾವರಣವನ್ನು ವಿಭಾಗ ಕಲ್ಪಿಸಿರುವುದು ಇದಕ್ಕೆ ಕಾರಣ ಎನ್ನುವುದು ಒಪ್ಪಲೇ ಬೇಕಾದ ಸಂಗತಿ. ಅಷ್ಟೇ ಅಲ್ಲ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಅವರನ್ನು ಬೆಳೆಸಿ ರೂಪಿಸುವುದು, ಮುಂಬೈಯ ಅನೇಕ ಕನ್ನಡ ಸಾಧಕರನ್ನು ಗುರುತಿಸಿ ಗೌರವಿಸುವುದು ಇಲ್ಲಿನ ಪರಿಪಾಠವಾಗಿದೆ.

ಕನ್ನಡದ ಅನೇಕ ವಿದ್ವಾಂಸರನ್ನು ಕಾಲಕಾಲಕ್ಕೆ ವಿಭಾಗಕ್ಕೆ ಬರಮಾಡಿಕೊಂಡು ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸುವ ವಾಡಿಕೆ ಹಾಗೂ ಅವರೊಂದಿಗೆ ಮುಕ್ತವಾಗಿ ಸಂವಾದಿಸುವ ವಿಶೇಷ ಅವಕಾಶ ಇವೆರಡೂ ವಿದ್ಯಾರ್ಥಿಗಳನ್ನು ಹಾಗೂ ಮುಂಬೈ ಕನ್ನಡಿಗರನ್ನು ಉನ್ಮೇಷಣೆಗೊಳಿಸುವ ದಿಶೆಯಲ್ಲಿ ನಡೆಯುವ ವಿಭಾಗದ ಮುಖ್ಯ ಪ್ರಕ್ರಿಯೆಗಳಾಗಿವೆ. 

ಈ ಕಾರ್ಯ ಚಟುವಟಿಕೆಯಲ್ಲಿ ಕೇವಲ ವಿದ್ಯಾರ್ಥಿಗಳಷ್ಟೇ ಅಲ್ಲದೆ ಮುಂಬೈಯ ಕನ್ನಡಿಗರೂ ಆಸ್ಥೆಯಿಂದ ಭಾಗವಹಿಸುವುದನ್ನು ಕಂಡು ಅವರೆಲ್ಲ ಸಂತೋಷಪಟ್ಟಿದ್ದಾರೆ. ಕೊರೋನ ದುರಿತ ಕಾಲದಲ್ಲಿ ನೂತನ ಉಪಕ್ರಮಗಳ ಅಡಿಯಲ್ಲಿ ಕನ್ನಡ ವಿಭಾಗ ತನ್ನದೇ ಆದ ಯೂಟ್ಯೂಬ್ ಚಾನೆಲನ್ನು ಹೊರತಂದು ರಾಷ್ಟ್ರೀಯ ಹಾಗೂ ಅಂತರ್ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಗಳನ್ನು, ಭಾಷೆ, ಇತಿಹಾಸ, ಸಾಹಿತ್ಯ, ಸಂಸ್ಕೃತಿ, ಕಲೆ ಮುಂತಾದವುಗಳಿಗೆ ಸಂಬಂಧಿಸಿದ ಹಲವು ಉಪನ್ಯಾಸಗಳನ್ನು ಆಯೋಜಿಸಿ ಅವುಗಳನ್ನು ದಾಖಲಿಸಿದೆ.

167 ವರ್ಷಗಳ ಇತಿಹಾಸವುಳ್ಳ ಮುಂಬೈ ವಿಶ್ವವಿದ್ಯಾನಿಲಯದ ಹಲವು ವಿಭಾಗಗಳಲ್ಲಿ ಒಂದಾದ ಕನ್ನಡ ವಿಭಾಗ ‘ಎ’ ಶ್ರೇಯಾಂಕವನ್ನು ಪಡೆದು ತನ್ನ ಸಾಧನೆಯನ್ನು ಸಾಬೀತುಪಡಿಸಿದೆ. ಸಮಸ್ತ ಮುಂಬೈ ಕನ್ನಡಿಗರನ್ನು ಒಳಗೊಂಡು ಕನ್ನಡ ವ್ಮಾಯದ ಕೇಂದ್ರ ಸ್ಥಾನದಲ್ಲಿದ್ದುಕೊಂಡು ತನ್ನ ಸಾಧನೆಯ ಪರಿಧಿಯನ್ನು ವಿಸ್ತರಿಸುತ್ತಲೇ ಈಗ ನಲತ್ತೈದರ ಸಂಭ್ರಮದಲ್ಲಿದೆ. ಮುಂಬೈ ವಿಶ್ವವಿದ್ಯಾನಿಲಯ ಕನ್ನಡ ವಿಭಾಗ ನಮ್ಮ ನಾಡಿಗೆ ಮಾದರಿ ಎನ್ನುವುದು ನಿಸ್ಸಂದೇಹ.

Similar News