ನೂತನ ಸಂಸತ್ ಭವನದ ಕಡೆಗಿನ ಕುಸ್ತಿ ಪಟುಗಳ ಮೆರವಣಿಗೆಗೆ ತಡೆ: ಕೆಲವರು ಪೊಲೀಸ್ ವಶಕ್ಕೆ

Update: 2023-05-28 08:05 GMT

ಹೊಸ ದಿಲ್ಲಿ: ರವಿವಾರ ಉದ್ಘಾಟನೆಗೊಂಡಿರುವ ನೂತನ ಸಂಸತ್ ಭವನದ ಎದುರು ಪ್ರತಿಭಟನೆ ನಡೆಸಲು ಪ್ರಯತ್ನಿಸಿದ ಒಲಿಂಪಿಕ್ ಕ್ರೀಡಾಪಟುಗಳು, ಕಾಮನ್‌ವೆಲ್ತ್ ಕ್ರೀಡಾಕೂಟದ ವಿಜೇತರು ಸೇರಿದಂತೆ ಖ್ಯಾತ ಭಾರತೀಯ ಕುಸ್ತಿ ಪಟುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಲೈಂಗಿಕ ಕಿರುಕುಳ ಹಾಗೂ ಬೆದರಿಕೆ ಆರೋಪವನ್ನು ಎದುರಿಸುತ್ತಿರುವ ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸಬೇಕು ಎಂದು ಕ್ರೀಡಾಪಟುಗಳು ಒತ್ತಾಯಿಸುತ್ತಿದ್ದಾರೆ.

ಆದರೆ, ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಬಿಜೆಪಿ ಪಕ್ಷದ ಸಂಸದ ಬ್ರಿಜ್ ಭೂಷಣ್ ಈ ಆರೋಪಗಳನ್ನು ನಿರಾಕರಿಸಿದ್ದಾರೆ. ಜಂತರ್ ಮಂತರ್‌ನಲ್ಲಿ ಕಳೆದ ಒಂದು ತಿಂಗಳಿನಿಂದ ಧರಣಿ ನಡೆಸುತ್ತಿರುವ ಭಾರಿ ಸಂಖ್ಯೆಯ ಕುಸ್ತಿ ಪಟುಗಳ ಇತ್ತೀಚಿನ ಪ್ರತಿಭಟನಾ ನಡೆ ಇದಾಗಿದೆ.

ನೂತನ ಸಂಸತ್ ಭವನ ಉದ್ಘಾಟನೆ ಹಾಗೂ ಮಹಿಳಾ ಕುಸ್ತಿ ಪಟುಗಳು ನಡೆಸಲು ಉದ್ದೇಶಿಸಿದ್ದ 'ಮಹಿಳಾ ಮಹಾ ಪಂಚಾಯತ್' ಹಿನ್ನೆಲೆಯಲ್ಲಿ ಕೇಂದ್ರ ದಿಲ್ಲಿಯಲ್ಲಿ ಸಾವಿರಾರು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. ಕೇಂದ್ರ ಕಾರ್ಯಾಲಯ ಹಾಗೂ ದಿಲ್ಲಿ ಮೆಟ್ರೋದ ಉದ್ಯೋಗ ಭವನ್ ನಿಲ್ದಾಣದ ಎಲ್ಲ ಪ್ರವೇಶ ಹಾಗೂ ನಿರ್ಗಮನ ದ್ವಾರಗಳನ್ನೂ ಅಧಿಕಾರಿಗಳು ಮುಚ್ಚಿದ್ದರು.

ಪ್ರತಿಭಟನೆ ನಡೆಸಲು ಅವಕಾಶ ನಿರಾಕರಿಸಿದ ಹೊರತಾಗಿಯೂ ಕುಸ್ತಿ ಪಟುಗಳು ನೂತನ ಸಂಸತ್ ಭವನದ ಎದುರು 'ಮಹಿಳಾ ಮಹಾ ಪಂಚಾಯತ್' ನಡೆಸಿಯೇ ತೀರುವುದಾಗಿ ಪಟ್ಟು ಹಿಡಿದಿದ್ದರು. "ನಾವು ನಮ್ಮ ಕ್ರೀಡಾಪಟುಗಳನ್ನು ಗೌರವಿಸುತ್ತೇವೆ. ಆದರೆ, ಉದ್ಘಾಟನೆಗೆ ಯಾವುದೇ ತೊಂದರೆಯಾಗಲು ನಾವು ಅವಕಾಶ ನೀಡುವುದಿಲ್ಲ" ಎಂದು ವಿಶೇಷ ಪೊಲೀಸ್ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ದೀಪೇಂದ್ರ ಪಾಠಕ್ ಸ್ಪಷ್ಟಪಡಿಸಿದ್ದಾರೆ.

Similar News