ಆಧಾರ್ ಕಾರ್ಡ್ ಹೊಂದಿಲ್ಲದವರಿಗೆ ಕಲ್ಯಾಣ ಕಾರ್ಯಕ್ರಮಗಳ ಲಾಭವನ್ನು ನಿರಾಕರಿಸುವಂತಿಲ್ಲ: ಒಡಿಶಾ ಹೈಕೋರ್ಟ್

Update: 2023-05-28 09:09 GMT

ಭುವನೇಶ್ವರ: ಆಧಾರ್ ಕಾರ್ಡ್ ಹಾಗೂ ಮೊಬೈಲ್ ಸಂಖ್ಯೆಯಂಥ ಗುರುತಿನ ಪುರಾವೆ ಇಲ್ಲದ ದುರ್ಬಲ ವರ್ಗದ ನಾಗರಿಕರಿಗೆ ಕಲ್ಯಾಣ ಯೋಜನೆಗಳ ಲಾಭವನ್ನು ನಿರಾಕರಿಸುವಂತಿಲ್ಲ ಎಂದು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಕ್ಕೆ ಒಡಿಶಾ ಹೈಕೋರ್ಟ್ ಎಚ್ಚರಿಕೆ ನೀಡಿದೆ ಎಂದು Live Law ವರದಿ ಮಾಡಿದೆ.

"ಈ ಎರಡನ್ನೂ ಹೊಂದಿರದ ಅನೇಕ ಬಡ ಹಾಗೂ ದುರ್ಬಲ ವರ್ಗಕ್ಕೆ ಸೇರಿದ ವ್ಯಕ್ತಿಗಳು ರಾಜ್ಯ ಹಾಗೂ ದೇಶಾದ್ಯಂತ ಇದ್ದಾರೆ ಎಂಬುದು ವಾಸ್ತವವಾಗಿದೆ" ಎಂದು ಒಡಿಶಾ ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಸಾರ್ವಜನಿಕ ವಿತರಣಾ ವ್ಯವಸ್ಥೆಯು ಒಳಗೊಂಡಿರುವ ಜನಸಂಖ್ಯೆಯು ಏಕರೂಪಿಯಾಗಿಲ್ಲ  ಎಂಬುದನ್ನು ಗಮನಕ್ಕೆ ತೆಗೆದುಕೊಂಡಿರುವ ಮುಖ್ಯ ನ್ಯಾಯಮೂರ್ತಿ ಎಸ್‌.ಮುರಳೀಧರ್ ಹಾಗೂ ನ್ಯಾ. ಗೌರಿಶಂಕರ್ ಸತಪತಿ ಅವರನ್ಮೊಳಗೊಂಡ ದ್ವಿಸದಸ್ಯ ಪೀಠವು ಮೇಲಿನಂತೆ ಅಭಿಪ್ರಾಯ ಪಟ್ಟಿದೆ.

"ಇಂದಿನ ಚರ್ಚೆಯು ಹಂಚಿಕೆ ಹಾಗೂ ಉದ್ಯೋಗಗಳ ಕುರಿತ ಅನಿಸಿಕೆಗಳನ್ನು ಹೊರಹಾಕಿದ್ದು, ನಮ್ಮ ಸಮಾಜದ ಒಂದು ವರ್ಗವು ಅತ್ಯಂತ ದುರ್ಬಲ ಸಮುದಾಯಗಳನ್ನು ಒಳಗೊಂಡಿದೆ ಎಂಬ ಅಂಶದತ್ತ ಬೊಟ್ಟು ಮಾಡಿದೆ. ಅವರೆಲ್ಲ ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಸೇರ್ಪಡೆಯಾಗದಿರುವ ಸಾಧ್ಯತೆಯೂ ಇದೆ" ಎಂದು ಹೇಳಿದೆ.

ಕಲ್ಯಾಣ ಯೋಜನೆಗಳಡಿ ವರ್ಷದಿಂದ ವರ್ಷಕ್ಕೆ ಒಳಗೊಳ್ಳುವುದನ್ನು ಹೆಚ್ಚು ಮಾಡಬೇಕು ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸೂಚಿಸಿದ ಹೈಕೋರ್ಟ್, "ಹೊರಗುಳಿಸುವುದಕ್ಕಿಂತ ಒಳಗೊಳ್ಳುವ" ವ್ಯವಸ್ಥೆಯನ್ನು ಅಳವಡಿಸಿಕೊಂಡಾಗ ಮಾತ್ರ ಇದು ಸಾಧ್ಯವಾಗಲಿದೆ ಎಂದು ಅಭಿಪ್ರಾಯ ಪಟ್ಟಿತು.

ಇದಕ್ಕೆ ಪ್ರತಿಕ್ರಿಯಿಸಿದ ಒಡಿಶಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ, ರಾಜ್ಯಾದ್ಯಂತ ಇದೇ ಕ್ರಮವನ್ನು ಅನುಸರಿಸಲಾಗುವುದು ಎಂದು ಹೈಕೋರ್ಟ್‌ಗೆ ಭರವಸೆ ನೀಡಿದರು.

Similar News