40 ಬಂಡುಕೋರರ ಹತ್ಯೆ; ಮುಂದುವರಿದ ಎನ್‌ಕೌಂಟರ್: ಮಣಿಪುರ ಸಿಎಂ

Update: 2023-05-28 13:45 GMT

ಹೊಸದಿಲ್ಲಿ/ಇಂಫಾಲ: ಜನಾಂಗೀಯ ಹಿಂಸೆಯಿಂದ ನಲುಗಿರುವ ಮಣಿಪುರದಲ್ಲಿ, ರಾಜ್ಯ ಪೊಲೀಸ್ ಇಲಾಖೆಯ ಕಮಾಂಡೊಗಳು ಕಳೆದ ಎಂಟು ಗಂಟೆಗಳಿಂದ ಬಂಡುಕೋರರೊಂದಿಗೆ ಹೋರಾಡುತ್ತಿದ್ದಾರೆ ಎಂದು ndtv.com ವರದಿ ಮಾಡಿದೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಮುಖ್ಯಮಂತ್ರಿ ಬೀರೇನ್ ಸಿಂಗ್, ಇದುವರೆಗೆ 40 ಬಂಡುಕೋರರನ್ನು ಹತ್ಯೆಗೈಯ್ಯಲಾಗಿದೆ ಎಂಬ ವರದಿ ನನ್ನ ಕೈ ಸೇರಿದೆ ಎಂದು ತಿಳಿಸಿದ್ದಾರೆ.

"ಬಂಡುಕೋರರು ನಾಗರಿಕರ ವಿರುದ್ಧ ಎಂ-16, ಎಕೆ-47 ಹಾಗೂ ಸ್ನೈಪರ್ ಗನ್‌ಗಳನ್ನು ಬಳಸುತ್ತಿದ್ದಾರೆ. ಅವರು ಮನೆಗಳನ್ನು ಸುಟ್ಟು ಹಾಕಲು ಗ್ರಾಮಗಳಿಗೆ ಧಾವಿಸಿದ್ದಾರೆ. ನಾವು ಸೇನೆ ಹಾಗೂ ಇತರ ಭದ್ರತಾ ಪಡೆಗಳ ನೆರವಿನೊಂದಿಗೆ ಅವರ ವಿರುದ್ಧ ಬಲವಾದ ಕ್ರಮ ಕೈಗೊಳ್ಳುತ್ತಿದ್ದೇವೆ. ಸುಮಾರು 40 ಬಂಡುಕೋಋನ್ನು ಹತ್ಯೆಗೈಯ್ಯಲಾಗಿದೆ ಎಂಬ ವರದಿಗಳು ನಮ್ಮ ಕೈ ಸೇರಿವೆ" ಎಂದು ಅವರು ಹೇಳಿದ್ದಾರೆ.

"ಬಂಡುಕೋರರು ನಿಶ್ಯಸ್ತ್ರ ನಾಗರಿಕರ ಮೇಲೆ ಗುಂಡಿನ ದಾಳಿ ನಡೆಸುತ್ತಿದ್ದಾರೆ" ಎಂದು ತಿಳಿಸಿರುವ ಬೀರೇನ್ ಸಿಂಗ್, ಮಣಿಪುರವನ್ನು ಒಡೆಯಲು ಯತ್ನಿಸುತ್ತಿರುವ ಸಶಸ್ತ್ರ ಬಂಡುಕೋರರು ಹಾಗೂ ಕೇಂದ್ರ ಸರ್ಕಾರದ ನೆರವು ಹೊಂದಿರುವ ರಾಜ್ಯ ಸರ್ಕಾರದೊಂದಿಗೆ ಕಾಳಗ ನಡೆಯುತ್ತಿದೆ" ಎಂದೂ ಪ್ರತಿಪಾದಿಸಿದ್ದಾರೆ.

ಈ ನಡುವೆ, ಇಂದು ಮುಂಜಾನೆ ಎರಡು ಗಂಟೆ ಸಮಯದಲ್ಲಿ ಏಕಕಾಲಕ್ಕೆ ಇಂಫಾಲ ಕಣಿವೆಯ ಒಳಗೆ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಬಂಡುಕೋರರು ಐದು ದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Similar News