ಹಾವು ಕಚ್ಚಿ ಮಗು ಸಾವು: ಸರಿಯಾದ ರಸ್ತೆಯಿಲ್ಲದ ಕಾರಣ 6 ಕಿ.ಮೀ ಮಗುವನ್ನು ಹೊತ್ತು ಸಾಗಿದ ತಾಯಿ

Update: 2023-05-29 11:12 GMT

ಚೆನ್ನೈ: ತಮಿಳುನಾಡಿನ ವೆಲ್ಲೋರ್ ಜಿಲ್ಲೆಯಲ್ಲಿ 18 ತಿಂಗಳ ಮಗುವೊಂದು ಹಾವು ಕಡಿತದಿಂದ ಮೃತಪಟ್ಟಿದ್ದು, ಆ ಪ್ರದೇಶದಲ್ಲಿ ಸಮರ್ಪಕ ರಸ್ತೆ ಇಲ್ಲದೆ ಹೋಗಿದ್ದರಿಂದ ಮಗುವನ್ನು ಆಸ್ಪತ್ರೆಗೆ ಕೊಂಡೊಯ್ಯಲು ತಾಯಿಗೆ ಸಾಧ್ಯವಾಗಿಲ್ಲ. ಆ್ಯಂಬುಲೆನ್ಸ್‌ನ ಸಿಬ್ಬಂದಿಗಳು ಅವರನ್ನು ಮಧ್ಯ ದಾರಿಯಲ್ಲೇ ಬಿಟ್ಟು ಹೋಗಿರುವುದರಿಂದ ಗುಡ್ಡಗಾಡು ದಾರಿಯಲ್ಲಿ ತಾಯಿಯು ಮಗುವನ್ನು ಹೊತ್ತುಕೊಂಡು ಆರು ಕಿಮೀ ನಡೆದಿದ್ದಾಳೆ ಎಂದು ndtv.com ವರದಿ ಮಾಡಿದೆ.

ಹಾವು ಕಡಿತದ ನಂತರ 18 ತಿಂಗಳ ಮಗು ಧನುಷ್ಕಾಳನ್ನು ಹೊತ್ತುಕೊಂಡು ಆಕೆಯ ಪೋಷಕರು ವೆಲ್ಲೋರ್ ಜಿಲ್ಲಾಸ್ಪತ್ರೆಗೆ ಧಾವಿಸಿದ್ದಾರೆ. ಆದರೆ, ಮಗು ಮಾರ್ಗಮಧ್ಯದಲ್ಲೇ ಮೃತಪಟ್ಟಿದೆ ಎಂದು ವರದಿಯಾಗಿದೆ.

ಸಮರ್ಪಕವಾದ ರಸ್ತೆ ಇಲ್ಲದೆ ಹೋಗಿದ್ದರಿಂದ ಸರಿಯಾದ ಸಮಯಕ್ಕೆ ಮಗುವನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿಲ್ಲ ಹಾಗೂ ಇದರ ಪರಿಣಾಮವಾಗಿ ಮಗುವಿಗೆ ಸೂಕ್ತ ಚಿಕಿತ್ಸೆ ಒದಗಿಸಲು ಸಾಧ್ಯವಾಗಲಿಲ್ಲ ಎಂದು ಮಗುವಿನ ಸಂಬಂಧಿಕರು ಆರೋಪಿಸಿದ್ದಾರೆ.

ಈ ಕುರಿತು NDTV ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿರುವ ವೆಲ್ಲೋರ್ ಜಿಲ್ಲಾಧಿಕಾರಿ, ಗುಡ್ಡಗಾಡು ಪ್ರದೇಶದಲ್ಲಿ ಮಿನಿ ಆ್ಯಂಬುಲೆನ್ಸ್ ಸೇವೆ ಲಭ್ಯವಿದ್ದು, ಮಗುವಿನ ಪೋಷಕರು ಸ್ಥಳೀಯ ಆಶಾ ಕಾರ್ಯಕರ್ತೆಯರನ್ನು ಸಂಪರ್ಕಿಸಿದ್ದರೆ ಅವರು ಮಗುವಿನ ಪ್ರಥಮ ಚಿಕಿತ್ಸೆ ಒದಗಿಸಿರುತ್ತಿದ್ದರು ಎಂದು ತಿಳಿಸಿದ್ದಾರೆ.

ಈ ಸಂಬಂಧ ಅನ್ನೈಕಟ್ಟು ಠಾಣೆ ಪೊಲೀಸರು ಸೂಕ್ತ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ನಡುವೆ, ತಮಿಳುನಾಡು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ‌. ಅಣ್ಣಾಮಲೈ ಘಟನೆಯನ್ನು ಖಂಡಿಸಿದ್ದು, ಇದು ತೀವ್ರ ನೋವಿನ ಘಟನೆಯಾಗಿದ್ದು, ಈ ಘಟನೆಗೆ ತಮಿಳುನಾಡು ಸರ್ಕಾರವೇ ಸಂಪೂರ್ಣ ಹೊಣೆ ಎಂದು ಆರೋಪಿಸಿದ್ದಾರೆ.

Similar News