×
Ad

ಬಿರುಗಾಳಿಗೆ ಧರೆಗುರುಳಿದ ಸಪ್ತರ್ಷಿಗಳ ಪ್ರತಿಮೆ: ಕಳೆದ ವರ್ಷ ಪ್ರಧಾನಿ ಮೋದಿ ಉದ್ಘಾಟಿಸಿದ್ದ 6 ಮೂರ್ತಿಗಳಿಗೆ ಹಾನಿ

ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ ಎಂದ ಕಾಂಗ್ರೆಸ್‌

Update: 2023-05-29 16:56 IST

ಭೋಪಾಲ್:‌ ಕಳೆದ ವರ್ಷದ ಅಕ್ಟೋಬರ್‌ ತಿಂಗಳಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದ  ಉಜ್ಜಯನಿ ನಗರದಲ್ಲಿನ ಮಹಾಕಾಲ್‌ ಲೋಕ್‌ ಕಾರಿಡಾರ್‌ ಯೋಜನೆಯ ಪ್ರಥಮ ಹಂತದ ಭಾಗದಲ್ಲಿದ್ದ ಏಳು ಸಪ್ತರ್ಷಿಗಳ ಮೂರ್ತಿಗಳ ಪೈಕಿ ಆರು ರವಿವಾರದ ಭಾರೀ ಮಳೆಗೆ ಕುಸಿದು ಹಾನಿಗೊಳಗಾಗಿವೆ. ರವಿವಾರ ಸಂಜೆ ಸುಮಾರು 4 ಗಂಟೆಗೆ ಈ ಘಟನೆ ಸಂಭವಿಸಿದ್ದು ಆ ಸಂದರ್ಭ ಅಲ್ಲಿ ಸಾಕಷ್ಟು ಜನರಿದ್ದರೂ ಯಾರಿಗೂ ಅಪಾಯವುಂಟಾಗಿಲ್ಲ. ಘಟನೆ ನಂತರ ಸ್ಥಳವನ್ನು ಕೆಲ ಗಂಟೆಗಳ ಕಾಲ ಸಂದರ್ಶಕರಿಗೆ ಮುಚ್ಚಲಾಯಿತು.

ಈ ಘಟನೆ ಬೆನ್ನಲ್ಲೇ ವಿಪಕ್ಷಗಳು ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಲು ಆರಂಭಿಸಿವೆ. ಕಾಮಗಾರಿಯಲ್ಲಿ ಅವ್ಯವಹಾರಗಳಾಗಿವೆ ಹಾಗೂ ಕಾಮಗಾರಿ ಕಳಪೆ ಗುಣಮಟ್ಟದ್ದಾಗಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

ಹಾನಿಗೊಳಗಾಗಿದ್ದ ಮೂರ್ತಿಗಳು ಮಹಾಕಾಲೇಶ್ವರ್‌ ದೇವಸ್ಥಾನದೊಳಗಿನದ್ದಲ್ಲ ಬದಲು ಮಹಾಕಾಲ್‌ ಲೋಕ್‌ ಕಾರಿಡಾರಿನಲ್ಲಿತ್ತು ಇವುಗಳು 10 ಅಡಿ ಎತ್ತರವಿದ್ದವು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಗುಜರಾತಿನ ಕಂಪೆನಿಗಳು ಈ ಕಾಮಗಾರಿಯನ್ನು ಜಾರಿಗೊಳಿಸುವ ಹೊಣೆಹೊತ್ತುಕೊಂಡಿವೆ. ಮಹಾಕಾಲ್‌ ಲೋಕ್‌ ಯೋಜನೆಯ ಒಟ್ಟು ವೆಚ್ಚ ರೂ.  856 ಕೋಟಿ ಆಗಿದ್ದರೆ ಮೊದಲನೇ ಹಂತದ ಕಾಮಗಾರಿಯನ್ನು ರೂ.  351 ಕೋಟಿ ವೆಚ್ಚದಲ್ಲಿ ಪೂರ್ಣಗೊಳಿಸಲಾಗಿದೆ.

ಕಳಪೆ ಗುಣಮಟ್ಟದ ಕಾಮಗಾರಿ ಕುರಿತು ತನಿಖೆ ನಡೆಯಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಕಮಲ್‌ ನಾಥ್‌ ಆಗ್ರಹಿಸಿದ್ದಾರೆ.

Similar News