ಕುಂದಾಪುರ ಸರ್ವಿಸ್ ರಸ್ತೆಯಲ್ಲಿ ಕುಸಿದ ಕಾಂಕ್ರಿಟ್ ಸ್ಲ್ಯಾಬ್ ದುರಸ್ತಿ

Update: 2023-05-29 12:55 GMT

ಕುಂದಾಪುರ, ಮೇ 29: ಕುಂದಾಪುರ ಶಾಸ್ತ್ರಿ ವೃತ್ತದ ಅನತಿ ದೂರದ ಪ್ಲೈಓವರ್ ಕೆಳಭಾಗ ಸರ್ವಿಸ್ ರಸ್ತೆಯಲ್ಲಿನ ಕುಸಿದ ಒಳಚರಂಡಿಯ ಸ್ಲ್ಯಾಬ್‌ನ್ನು ಇದೀಗ ದುರಸ್ತಿ ಮಾಡಲಾಗಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಒಳಪಡುವ ಕುಂದಾಪುರ ಫ್ಲೈಓವರ್ ಕೆಳಭಾಗದ ಸರ್ವೀಸ್ ರಸ್ತೆಯಲ್ಲಿ ಒಂದಷ್ಟು ಮೀಟರ್ ದೂರ ಒಳಚರಂಡಿ ಕಾಮಗಾರಿಯನ್ನು ನಡೆಸಲಾಗಿತ್ತು. ಕಳೆದ ವಾರ ಕಾಂಕ್ರಿಟ್ ಸ್ಲ್ಯಾಬ್ ಕುಸಿದಿತ್ತು. ಸ್ಥಳೀಯರೇ ಟ್ರಾಫಿಕ್ ನಿರ್ವಹಣೆಯ ಕೋನ್ ಅಳವಡಿಸಿ, ಗಿಡಗಂಟಿ ಹಾಕುವ ಮೂಲಕ ವಾಹನ ಸವಾರರಿಗೆ ಎಚ್ಚರಿಸುವ ಕೆಲಸ ಮಾಡಿದ್ದರು.

ಈ ಬಗ್ಗೆ ’ಕುಂದಾಪುರ ಸರ್ವೀಸ್ ರಸ್ತೆಯ ಕಾಂಕ್ರಿಟ್ ಸ್ಲ್ಯಾಬ್ ಕುಸಿತ’ ಎಂಬ ತಲೆಬರಹದಡಿಯಲ್ಲಿ ಮೇ 26ರಂದು ವಾರ್ತಾಭಾರತಿ ಸಚಿತ್ರ ವರದಿ ಪ್ರಕಟಿಸಿತ್ತು. ವರದಿಗೆ ಸ್ಪಂದಿಸಿದ ಕುಂದಾಪುರ ಉಪವಿಭಾಗಾಧಿಕಾರಿ ರಶ್ಮಿ ಎಸ್.ಆರ್ ರಾ.ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಶೀಘ್ರ ದುರಸ್ತಿ ಕಾಮ ಗಾರಿ ನಡೆಸುವಂತೆ ಸೂಚಿಸಿದ್ದರು. ಅದರಂತೆ ರವಿವಾರ ರಾತ್ರಿ ಸ್ಲ್ಯಾಬ್ ದುರಸ್ತಿ ಮಾಡಲಾಗಿದೆ.

"ರಾಷ್ಟ್ರೀಯ ಹೆದ್ದಾರಿಯಲ್ಲಿನ ಸಮಸ್ಯೆಗಳ ಕುರಿತು ಗಮನಕ್ಕೆ ಬಂದಾಕ್ಷಣ ಹೆದ್ದಾರಿ ಪ್ರಾಧಿಕಾರಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿ, ವಾಹನ ಸವಾರರ ಹಿತದೃಷ್ಟಿಯಿಂದ ಶೀಘ್ರ ಸಮಸ್ಯೆ ಪರಿಹರಿಸುವಂತೆ ನಿರ್ದೇಶನ ನೀಡಲಾಗುತ್ತಿದೆ. ಮಳೆಗಾಲ ಆರಂಭವಾಗುತ್ತಿರುವ ಹಿನ್ನೆಲೆ ಹೆದ್ದಾರಿಗೆ ಸಂಬಂದಪಟ್ಟ ಯಾವುದೇ ಸಮಸ್ಯೆಗಳಿದ್ದರೂ ಕೂಡ ಆದ್ಯತೆ ಮೇರೆಗೆ ತಕ್ಷಣ ಕ್ರಮಕೈಗೊಳ್ಳುವಂತೆಯೂ ಸೂಚಿಸಲಾಗಿದೆ".
-ರಶ್ಮೀ ಎಸ್.ಆರ್., ಕುಂದಾಪುರ ಉಪವಿಭಾಗಾಧಿಕಾರಿ

Similar News