ಸೆಂಗೋಲ್‌ ಕುರಿತು ಪ್ರಕಟವಾಗಿದ್ದ ಜಾಹಿರಾತನ್ನೇ 'ಸುದ್ದಿ' ಎಂದು ಹಂಚಿಕೊಂಡ ಬಿಜೆಪಿ ನಾಯಕ

Update: 2023-05-30 11:50 GMT

ಹೊಸದಿಲ್ಲಿ: ನೂತನ ಸಂಸತ್‌ ಭವನದಲ್ಲಿ ಪ್ರತಿಷ್ಠಾಪಿಸಲಾಗಿರುವ ಸೆಂಗೋಲ್‌ ಕುರಿತು ವಿವಾದಗಳು ಎದ್ದಿರುವ ನಡುವೆಯೇ ಬಿಜೆಪಿ ನಾಯಕರೊಬ್ಬರು ಸೆಂಗೋಲ್‌ ಕುರಿತು 'ದಿ ಹಿಂದೂ' ಪತ್ರಿಕೆಯಲ್ಲಿ ಪ್ರಕಟಿಸಲಾಗಿದ್ದ ಜಾಹಿರಾತನ್ನು ಸುದ್ದಿ ಎಂಬಂತೆ ಬಿಂಬಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. 

ಮೇ 28 ರಂದು ಧಾರ್ಮಿಕ ವಿಧಿವಿಧಾನಗಳ ಬಳಿಕ ತಮಿಳುನಾಡಿನ ಅಧೀನಂಗಳಿಂದ ಪಡೆದುಕೊಂಡ ಸೆಂಗೋಲ್ ಅನ್ನು ಲೋಕಸಭೆ ಸ್ಪೀಕರ್ ಪೀಠದ ಬಲಭಾಗದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ. ಈ ಸೆಂಗೋಲ್‌ ರಾಜಾಡಳಿತದ ಪ್ರತೀಕ ಎಂದೂ ಪ್ರಜಾಪ್ರಭುತ್ವದಲ್ಲಿ ಇದಕ್ಕೆ ಪ್ರಸಕ್ತಿ ಇಲ್ಲವೆಂದೂ ಆಕ್ಷೇಪಗಳು ವ್ಯಕ್ತವಾಗಿದ್ದವು. 

ಈ ಹಿನ್ನೆಲೆಯಲ್ಲಿ  ಬಿಜೆಪಿ ಮಾಜಿ ಸಂಸದ ಸುರೇಂದ್ರ ಟಾಪುರಿಯ ಅವರು 'ದಿ ಹಿಂದೂ' ಪತ್ರಿಕೆಯ ತುಣುಕನ್ನು ಹಂಚಿಕೊಂಡಿದ್ದು, ಸೆಂಗೋಲ್‌ನ ಇತರ ಪುರಾವೆಗಳು ಮತ್ತು ಲೇಖನಗಳ ಬಗ್ಗೆ ಕಟ್ಟುನಿಟ್ಟಾಗಿ ಸತ್ಯ ಪರಿಶೀಲಿಸಿದ ದಿ ಹಿಂದೂ, ಆಗಸ್ಟ್ 29, 1947 ರಂದು ಮದ್ರಾಸ್ ಆವೃತ್ತಿಯ ತಮ್ಮದೇ ಪತ್ರಿಕೆಯ ಶೀರ್ಷಿಕೆಯನ್ನು ಪರಿಶೀಲಿಸಲು ವಿಫಲವಾಗಿದೆ ಎಂದ ಟ್ವೀಟ್‌ ಮಾಡಿದ್ದರು. 

ಇದಕ್ಕೆ ಪ್ರತಿಕ್ರಿಯಿಸಿರುವ "ದಿ ಹಿಂದೂ" ಪತ್ರಿಕೆಯ ಹಿರಿಯ ಪತ್ರಕರ್ತೆ, ಮಾಲಿನಿ ಪಾರ್ಥಸಾರಥಿ ಅವರು, ಅಂದಿನ "ದಿ ಹಿಂದೂ" ಮೂಲ ಪತ್ರಿಕೆಯ ಪುಟವನ್ನು ಹಂಚಿಕೊಂಡಿದ್ದಾರೆ. 

ಸುರೇಂದ್ರ ಅವರು ಹಂಚಿಕೊಂಡಿರುವ ಚಿತ್ರವು ಎಡಿಟೆಡ್‌ ಚಿತ್ರವಾಗಿದ್ದು, ಅದು ಒಳಪುಟದಲ್ಲಿ ಪ್ರಕಟವಾಗಿದ್ದ ಜಾಹಿರಾತಾಗಿತ್ತು, ಅದನ್ನು ಅಧೀನಂ ಮಠ ಪ್ರಕಟಿಸಿತ್ತು. ಹೊರತು, ಮುಖಪುಟ ಸುದ್ದಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Similar News