ನಾಗರಿಕ ಗುಂಪುಗಳು, ಮಹಿಳಾ ನಾಯಕರೊಂದಿಗೆ ಅಮಿತ್ ಶಾ ಮಾತುಕತೆ

Update: 2023-05-30 16:25 GMT

ಶಿಲ್ಲಾಂಗ್ (ಮಣಿಪುರ): ಹಿಂಸಾಗ್ರಸ್ತ ಮಣಿಪುರ ರಾಜ್ಯದ ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಭೇಟಿಯ ಎರಡನೇ ದಿನವಾದ ಮಂಗಳವಾರ ನಾಗರಿಕ ಸಮಾಜದ ಸಂಘಟನೆಗಳು ಮತ್ತು ಮಹಿಳಾ ನಾಯಕರ ಗುಂಪೊಂದನ್ನು ಭೇಟಿಯಾಗಿದ್ದಾರೆ.

ಅಮಿತ್ ಶಾ ಸೋಮವಾರ ಮಣಿಪುರ ರಾಜಧಾನಿ ಇಂಫಾಲ್ ತಲುಪಿದರು. ಇದು ರಾಜ್ಯದಲಿ ಹಿಂಸೆ ಆರಂಭಗೊಂಡ ಬಳಿಕ ಅವರು ನೀಡುತ್ತಿರುವ ಮೊದಲ ಭೇಟಿಯಾಗಿದೆ.

ವಿವಿಧ ನಾಗರಿಕ ಸಮಾಜ ಸಂಘಟನೆಗಳ ಸದಸ್ಯರೊಂದಿಗೆ ನಾನು ಇಂಫಾಲದಲ್ಲಿ ಫಲಪ್ರದ ಮಾತುಕತೆ ನಡೆಸಿದ್ದೇನೆ ಎಂದು ಶಾ ಮಂಗಳವಾರ ಹೇಳಿದರು. ‘’ಅವರು ಶಾಂತಿಗೆ ತಮ್ಮ ಬದ್ಧತೆಯನ್ನು ವ್ಯಕ್ತಪಡಿಸಿದ್ದಾರೆ ಮತ್ತು ಮಣಿಪುರದಲ್ಲಿ ಸಾಮಾನ್ಯ ಸ್ಥಿತಿಯನ್ನು ಮರಳಿಸಲು ತಾವು ಜೊತೆಯಾಗಿ ಕೆಲಸ ಮಾಡುತ್ತೇವೆ ಎಂಬ ಭರವಸೆಯನ್ನು ನೀಡಿದ್ದಾರೆ’’ ಎಂದು ಶಾ ನುಡಿದರು.

ಮಣಿಪುರದಲ್ಲಿ ತಾನು ಮಹಿಳಾ ಮುಂದಾಳುಗಳ ಗುಂಪಿನೊಂದಿಗೂ ಮಾತುಕತೆ ನಡೆಸಿದ್ದೇನೆ ಎಂದು ಗೃಹ ಸಚಿವ ತಿಳಿಸಿದರು. ‘‘ಮಣಿಪುರ ಸಮಾಜದಲ್ಲಿ ಮಹಿಳೆಯರ ಪಾತ್ರದ ಮಹತ್ವವನ್ನು ನಾನು ಪುನರುಚ್ಚರಿಸಿದೆ’’ ಎಂದರು.

ಗೃಹ ಸಚಿವರೊಂದಿಗೆ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಮತ್ತು ಇಂಟಲಿಜನ್ಸ್ ಬ್ಯೂರೋ ನಿರ್ದೇಶಕ ತಪನ್ ಕುಮಾರ್ ದೇಕ ಇದ್ದರು.

ನಾಗರಿಕ ಸಮಾಜದ ಗುಂಪುಗಳೊಂದಿಗೆ ನಡೆದ ಸಭೆಗಳ ಪೈಕಿ ಒಂದರಲ್ಲಿ ಮುಖ್ಯಮಂತ್ರಿ ಎನ್. ಬೀರೇನ್ ಸಿಂಗ್ ಕೂಡ ಉಪಸ್ಥಿತರಿದ್ದರು.

ಅಮಿತ್ ಶಾ ಜೂನ್ 1ರವರೆಗೆ ಮಣಿಪುರದಲ್ಲಿರುತ್ತಾರೆ. ಅವರು ಚುರಚಾಂದ್ಪುರ್, ಮೊರೆಹ್ ಮತ್ತು ಕಂಗ್ಕೋಕ್ಪಿ ಮುಂತಾದ ಗುಡ್ಡಗಾಡು ಜಿಲ್ಲೆಗಳಿಗೆ ತೆರಳಿ ಬುಡಕಟ್ಟು ಜನರನ್ನು ಭೇಟಿಯಾಗುವ ನಿರೀಕ್ಷೆಯಿದೆ.

Similar News