ಭಾರತ್ ಜೋಡೊ ಯಾತ್ರೆ ತಡೆಯಲು ಸರಕಾರ ಪ್ರಯತ್ನಿಸಿತ್ತು: ರಾಹುಲ್ ಗಾಂಧಿ

Update: 2023-05-31 06:06 GMT

ಹೊಸದಿಲ್ಲಿ: ಭಾರತ್ ಜೋಡೊ ಯಾತ್ರೆಯನ್ನು ತಡೆಯಲು ಸರಕಾರ ತನ್ನ ಎಲ್ಲಾ ಶಕ್ತಿಯನ್ನು ಬಳಸಿದೆ ಎಂದು ಬುಧವಾರ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ  ಹೇಳಿದ್ದಾರೆ.

ಮಂಗಳವಾರ ಸ್ಯಾನ್ ಫ್ರಾನ್ಸಿಸ್ಕೋಗೆ ಆಗಮಿಸಿದ ರಾಹುಲ್ ಅಮೆರಿಕದಲ್ಲಿ  ಮೂರು ನಗರಗಳ ಪ್ರವಾಸವನ್ನು ಆರಂಭಿಸಿದರು. ತಮ್ಮ  ಭೇಟಿಯ ವೇಳೆ ಅವರು ಭಾರತೀಯ ವಲಸಿಗರು ಹಾಗೂ  ಅಮೆರಿಕದ ಸಂಸದರನ್ನು ಭೇಟಿಯಾಗಲಿದ್ದಾರೆ.

"ಭಾರತ್ ಜೋಡೊ ಯಾತ್ರೆಯನ್ನು ತಡೆಯಲು ಸರಕಾರ ತನ್ನೆಲ್ಲ ಶಕ್ತಿಯನ್ನು ಬಳಸಿತು. ಬಿಜೆಪಿ ಜನರಿಗೆ ಬೆದರಿಕೆ ಹಾಕುತ್ತಿದೆ   ಹಾಗೂ ಸರಕಾರಿ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಆದರೆ ಏನೂ ಪ್ರಯೋಜನವಾಗಲಿಲ್ಲ. ಯಾತ್ರೆಯ ಪ್ರಭಾವ ಹೆಚ್ಚಾಯಿತು. 'ಭಾರತಕ್ಕೆ ಸೇರಿಕೊಳ್ಳಿ' ಎಂಬ ಆಲೋಚನೆ ಪ್ರತಿಯೊಬ್ಬರ ಹೃದಯದಲ್ಲಿರುವುದರಿಂದ ಇದು ಸಾಧ್ಯವಾಯಿತು'' ಎಂದು  ರಾಹುಲ್  ಗಾಂಧಿ ಹೇಳಿದರು.

" ನಾವು ಜನರೊಂದಿಗೆ ಸಂಪರ್ಕ ಸಾಧಿಸಲು ಬೇಕಾದ ಎಲ್ಲಾ ಸಾಧನಗಳನ್ನು ಬಿಜೆಪಿ-ಆರ್‌ಎಸ್‌ಎಸ್ ನಿಯಂತ್ರಿಸಿದ್ದ ಕಾರಣ ಭಾರತ ಜೋಡೋ ಯಾತ್ರೆ ಆರಂಭವಾಯಿತು’’ ಎಂದು ರಾಹುಲ್ ಹೇಳಿದರು.

ಭಾರತ್ ಜೋಡೋ ಯಾತ್ರೆಯು 2022 ರ ಸೆಪ್ಟೆಂಬರ್ 7 ರಂದು ಕನ್ಯಾಕುಮಾರಿಯಲ್ಲಿ ಆರಂಭವಾಯಿತು.  3,000ಕ್ಕೂ ಅಧಿಕ  ಕಿ.ಮೀ. ದೂರ ಸಾಗಿದ ನಂತರ  ಜನವರಿ 30 ರಂದು ಶ್ರೀನಗರದಲ್ಲಿ ರಾಷ್ಟ್ರಧ್ವಜವನ್ನು  ಹಾರಿಸುವ ಮೂಲಕ ಮುಕ್ತಾಯವಾಯಿತು.

"ಭಾರತ ಜೋಡೋ ಯಾತ್ರೆಯು ವಾತ್ಸಲ್ಯ, ಗೌರವ ಹಾಗೂ  ನಮ್ರತೆಯ ಮನೋಭಾವವನ್ನು ಹೊಂದಿದೆ.  ಇತಿಹಾಸವನ್ನು ಅಧ್ಯಯನ ಮಾಡಿದರೆ, ಗುರುನಾನಕ್ ದೇವ್ ಜಿ, ಗುರು ಬಸವಣ್ಣ ಜಿ, ನಾರಾಯಣ ಗುರು ಜಿ ಸೇರಿದಂತೆ ಎಲ್ಲಾ ಆಧ್ಯಾತ್ಮಿಕ ನಾಯಕರು ಇದೇ ರೀತಿಯಲ್ಲಿ ರಾಷ್ಟ್ರವನ್ನು ಒಂದುಗೂಡಿಸಿದ್ದಾರೆ ಎನ್ನುವುದನ್ನು ಕಾಣಬಹುದು’’ ಎಂದು ರಾಹುಲ್  ಗಾಂಧಿ ಹೇಳಿದರು.

ವಲಸೆ ಕ್ಲಿಯರೆನ್ಸ್‌ಗಾಗಿ ಸರದಿ ಸಾಲಲ್ಲಿ ಎರಡು ಗಂಟೆ ನಿಂತ ರಾಹುಲ್ ಗಾಂಧಿ

ವಲಸೆ ಕ್ಲಿಯರೆನ್ಸ್‌ಗಾಗಿ ರಾಹುಲ್ ಗಾಂಧಿ ವಿಮಾನ ನಿಲ್ದಾಣದಲ್ಲಿ ಎರಡು ಗಂಟೆಗಳ ಕಾಲ ಕಾಯಬೇಕಾಯಿತು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಸರತಿ ಸಾಲಿನಲ್ಲಿ ಏಕೆ ನಿಂತಿದ್ದೀರಿ ಎಂದು ಜನರು ಕೇಳಿದಾಗ, ನಾನು ಸಾಮಾನ್ಯ ಮನುಷ್ಯ, ನನಗಿದು ಇಷ್ಟವಾಗಿದೆ, ನಾನು ಇನ್ನು ಮುಂದೆ ಸಂಸದನಲ್ಲ ಎಂದು ರಾಹುಲ್ ಗಾಂಧಿ ಉತ್ತರಿಸಿದರು.

Similar News