ಪ್ರತಿಪಕ್ಷಗಳ ನಡುವೆ ಸರಿಯಾದ ಹೊಂದಾಣಿಕೆಯಿದ್ದರೆ ಬಿಜೆಪಿಯನ್ನು ಸೋಲಿಸಲು ಸಾಧ್ಯ: ರಾಹುಲ್ ಗಾಂಧಿ

Update: 2023-05-31 16:19 GMT

ಸಾಂತಾ ಕ್ಲಾರಾ (ಅಮೆರಿಕ): ಪ್ರತಿಪಕ್ಷಗಳ ನಡುವೆ ಸರಿಯಾದ ಹೊಂದಾಣಿಕೆಯಿದ್ದರೆ ಮಾತ್ರ 2024ರ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿಯನ್ನು ಪರಾಭವಗೊಳಿಸಬಹುದು ಎಂದು ಹಿರಿಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಮಂಗಳವಾರ ಇಲ್ಲಿ ಹೇಳಿದರು.

ಭಾರತೀಯ ಅಮೆರಿಕನ್ರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು,‘ಕಾಂಗ್ರೆಸ್ ಪ್ರಸ್ತುತ ಸಮಸ್ತ ಪ್ರತಿಪಕ್ಷಗಳನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ ಮತ್ತು ಇದಕ್ಕೆ ಉತ್ತಮ ಸ್ಪಂದನವೂ ದೊರೆಯುತ್ತಿದೆ. ಆದರೆ ಪ್ರತಿಪಕ್ಷಗಳನ್ನು ಒಗ್ಗೂಡಿಸುವುದಷ್ಟೇ ಸಾಲದು,ಬಿಜೆಪಿಗೆ ಪರ್ಯಾಯ ದೃಷ್ಟಿಯೂ ನಮಗೆ ಅಗತ್ಯವಾಗಿದೆ ’ ಎಂದರು.

ಸಾಂತಾಕ್ರೂಜ್ನ ಕ್ಯಾಲಿಫೋರ್ನಿಯಾ ವಿವಿಯ ಸಿಲಿಕಾನ್ ವ್ಯಾಲಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ನಿರೂಪಕರ ಮತ್ತು ಸಭಿಕರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಅವರು,‘ಓರ್ವ ರಾಜಕಾರಣಿಯಾಗಿ ನಾನು ಬಿಜೆಪಿಯ ದೌರ್ಬಲ್ಯಗಳನ್ನು ಸ್ಪಷ್ಟವಾಗಿ ನೋಡಬಲ್ಲೆ. ಪ್ರತಿಪಕ್ಷಗಳ ನಡುವೆ ಸರಿಯಾದ ಹೊಂದಾಣಿಕೆಯಿದ್ದರೆ ಬಿಜೆಪಿಯನ್ನು ಸೋಲಿಸಬಹುದು ’ಎಂದು ಹೇಳಿದರು.

‘ನೀವು ಕರ್ನಾಟಕ ಚುನಾವಣೆಗಳನ್ನು ನೋಡಿದರೆ ಕಾಂಗ್ರೆಸ್ ಪಕ್ಷವು ಬಿಜೆಪಿಯ ವಿರುದ್ಧ ಹೋರಾಡಿ ಅದನ್ನು ಸೋಲಿಸಿದೆ ಎನ್ನುವುದು ಸಾಮಾನ್ಯ ಅನಿಸಿಕೆಯಾಗಿದೆ. ಆದರೆ ನಾವು ಬಳಸಿದ್ದ ಕಾರ್ಯವಿಧಾನವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲಾಗಿಲ್ಲ.

ಕಾಂಗ್ರೆಸ್ ಚುನಾವಣೆಯಲ್ಲಿ ಹೋರಾಡಲು ಮತ್ತು ನಿರೂಪಣೆಯೊಂದನ್ನು ರೂಪಿಸಲು ಸಂಪೂರ್ಣ ವಿಭಿನ್ನ ಕಾರ್ಯತಂತ್ರವನ್ನು ಬಳಸಿತ್ತು. ಕರ್ನಾಟಕದಲ್ಲಿ ಬೆಳವಣಿಗೆಗಳು ಭಾರತ ಜೋಡೊ ಯಾತ್ರೆಯಿಂದ ಪ್ರಭಾವಿತವಾಗಿದ್ದವು ’ ಎಂದು ಹೇಳಿದ ರಾಹುಲ್,2024ರ ಸಾರ್ವತ್ರಿಕ ಚುನಾವಣೆಗಳಲ್ಲಿ ಆಡಳಿತಾರೂಢ ಬಿಜೆಪಿಯನ್ನು ಸೋಲಿಸಲು ದೇಶಕ್ಕೆ ಪ್ರತಿಪಕ್ಷಗಳ ಒಗ್ಗಟ್ಟಿನ ಜೊತೆಗೆ ಪರ್ಯಾಯ ದೃಷ್ಟಿಕೋನವೊಂದರ ಅಗತ್ಯವಿದೆ ಎಂದರು.

ಭಾರತ ಜೋಡೊ ಯಾತ್ರೆಯ ಭಾಗವು ಇಂತಹ ದೃಷ್ಟಿಕೋನವನ್ನು ಪ್ರಸ್ತಾವಿಸುವಲ್ಲಿ ಮೊದಲ ಹೆಜ್ಜೆಯಾಗಿತ್ತು. ಅದು ಎಲ್ಲ ಪ್ರತಿಪಕ್ಷಗಳು ಒಪ್ಪಿಕೊಂಡ ದೃಷ್ಟಿಕೋನವಾಗಿತ್ತು. ಭಾರತ ಜೋಡೊ ಯಾತ್ರೆಯ ಪರಿಕಲ್ಪನೆಯನ್ನು ಯಾವುದೇ ಪ್ರತಿಪಕ್ಷವು ವಿರೋಧಿಸುವುದಿಲ್ಲ ಎಂದು ರಾಹುಲ್ ಹೇಳಿದರು.

‘ಹೀಗಾಗಿ ಪ್ರತಿಪಕ್ಷಗಳನ್ನು ಒಗ್ಗೂಡಿಸುವುದು ಮುಖ್ಯ ಎಂದು ನಾನು ಭಾವಿಸಿದ್ದೇನೆ. ಆದರೆ ಪ್ರತಿಪಕ್ಷಗಳ ನಡುವೆ ಹೊಂದಾಣಿಕೆಯನ್ನು ಮೂಡಿಸುವುದು ಮತ್ತು ಇದು ಕೇವಲ ಪ್ರತಿಪಕ್ಷಗಳ ಗುಂಪಲ್ಲ,ಇದು ದೇಶದ ಮುಂದಿನ ದಾರಿಯನ್ನು ಪ್ರಸ್ತಾಪಿಸುತ್ತಿದೆ ಎನ್ನುವುದನ್ನು ಭಾರತದ ಜನರಿಗೆ ಅರ್ಥವಾಗುವಂತೆ ಮಾಡುವುದೂ ಮುಖ್ಯವಾಗಿದೆ. ನಾವು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ ’ಎಂದು ಹೇಳಿದರು.

ತನ್ನ ಭಾಷಣದಲ್ಲಿ ಬಿಜೆಪಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್,ಅದು ಜನರಿಗೆ ಬೆದರಿಕೆಯೊಡ್ಡುತ್ತಿದೆ ಮತ್ತು ದೇಶದ ತನಿಖಾ ಸಂಸ್ಥೆಗಳನ್ನು ದುರುಪಯೋಗಿಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ಮೂರು ದಿನಗಳ ಭೇಟಿಗಾಗಿ ಮಂಗಳವಾರ ಅಮೆರಿಕಕ್ಕೆ ಆಗಮಿಸಿರುವ ರಾಹುಲ್ ಭಾರತೀಯ ಸಮುದಾಯದೊಂದಿಗೆ ಸಂವಾದ ನಡೆಸುವ ಜೊತೆಗೆ ಅಮೆರಿಕದ ಸಂಸದರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.

ಅಮೆರಿಕದ ವಿಮಾನ ನಿಲ್ದಾಣಗಳಲ್ಲಿ ಸಿಬ್ಬಂದಿಗಳ ಕೊರತೆಯು ಸಾಮಾನ್ಯವಾಗಿರುವುದರಿಂದ ಇಮಿಗ್ರೇಷನ್ ಕ್ಲಿಯರನ್ಸ್ಗಾಗಿ ಇತರ ಸಹಪ್ರಯಾಣಿಕರೊಂದಿಗೆ ಏರ್ ಇಂಡಿಯಾ ವಿಮಾನದಲ್ಲಿ ಸುಮಾರು ಎರಡು ಗಂಟೆಗಳ ಕಾಲ ಕಾದು ಕುಳಿತಿದ್ದ ರಾಹುಲ್ಗೆ ಆ ದೇಶದ ವಲಸೆ ವ್ಯವಸ್ಥೆಯ ಪ್ರತ್ಯಕ್ಷ ಅನುಭವವೂ ಆಯಿತು.

Similar News