ಒಟಿಟಿ ವೇದಿಕೆಗಳಲ್ಲಿ ತಂಬಾಕು ಬಳಕೆಯ ದುಷ್ಪರಿಣಾಮದ ಕುರಿತು ಎಚ್ಚರಿಕೆ ಸಂದೇಶ ಕಡ್ಡಾಯಗೊಳಿಸಿದ ಕೇಂದ್ರ ಸರಕಾರ

Update: 2023-05-31 16:21 GMT

ಹೊಸದಿಲ್ಲಿ: ನೆಟ್‍ಫ್ಲಿಕ್ಸ್ ಹಾಗೂ ಅಮೆಜಾನ್ ಪ್ರೈಮ್ ನಂತಹ ಮಾಧ್ಯಮ ಸೇವೆಯ ವೇದಿಕೆಗಳ ವೀಡಿಯೊಗಳಲ್ಲಿ ತಂಬಾಕು ಬಳಕೆಯ ದುಷ್ಪರಿಣಾಮದ ಕುರಿತ ಎಚ್ಚರಿಕೆ ಸಂದೇಶವನ್ನು ಕೇಂದ್ರ ಸರಕಾರ ಬುಧವಾರ ಕಡ್ಡಾಯಗೊಳಿಸಿದೆ. ಕೇಂದ್ರ ಆರೋಗ್ಯ ಸಚಿವಾಲಯ ಸಿಗರೇಟಗಳು ಹಾಗೂ ಇತರ ತಂಬಾಕು ಉತ್ಪನ್ನಗಳ ಕಾಯ್ದೆ, 2004ರ ಅಡಿಯ ನಿಯಮಗಳಿಗೆ ತಿದ್ದುಪಡಿ ಮಾಡಿದ ಬಳಿಕ ಈ ನಿರ್ದೇಶ ಜಾರಿಗೆ ಬಂದಿದೆ.

ತಂಬಾಕು ಉತ್ಪನ್ನಗಳು ಅಥವಾ ಅದರ ಬಳಕೆಯನ್ನು ಪ್ರದರ್ಶಿಸುವ ಆನ್ಲೈನ್ ವಿಷಯ ಪ್ರಸಾರಕರು ಕಾರ್ಯಕ್ರಮದ ಆರಂಭ ಹಾಗೂ ಮಧ್ಯದಲ್ಲಿ ಕನಿಷ್ಠ 30 ಸೆಕೆಂಡುಗಳು ತಂಬಾಕು ಬಳಕೆಯ ದುಷ್ಪರಿಣಾಮದ ಕುರಿತು ಎಚ್ಚರಿಕೆಗಳನ್ನು ಪ್ರದರ್ಶಿಸುವ ಅಗತ್ಯತೆ ಇರುತ್ತದೆ. ಕಾರ್ಯಕ್ರಮದ ಸಂದರ್ಭ ತಂಬಾಕು ಉತ್ಪನ್ನಗಳು ಅಥವಾ ಅದರ ಬಳಕೆಯನ್ನು ಪ್ರದರ್ಶಿಸುವಾಗ ಪರದೆಯ ಕೆಳಗೆ ಪ್ರಮುಖ ಸ್ಥಿರ ಸಂದೇಶವಾಗಿ ತಂಬಾಕು ಬಳಕೆಯ ದುಷ್ಪರಿಣಾಮದ ಕುರಿತು ಎಚ್ಚರಿಕೆಯನ್ನು ಕೂಡ ಪ್ರಸಾರ ಮಾಡಬೇಕು.

ಕಾರ್ಯಕ್ರಮದ ಆರಂಭದಲ್ಲಿ ಹಾಗೂ ಮಧ್ಯದಲ್ಲಿ ತಂಬಾಕು ದುಷ್ಪರಿಣಾಮದ ಕುರಿತು ಕನಿಷ್ಠ 20 ಸೆಕೆಂಡುಗಳ ಶ್ಯವ್ಯ ಅಥವಾ ದೃಶ್ಯಗಳಲ್ಲಿ ಹಕ್ಕು ಪ್ರತಿಪಾದನೆ ಮಾಡಬೇಕು ಎಂದು ನೂತನ ನಿಯಮ ಹೇಳಿದೆ. ಈ ನಿಮಯಗಳನ್ನು ಅನುಸರಿಸಲಾಗುತ್ತಿದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಲು ಆರೋಗ್ಯ ಸಚಿವಾಲಯ, ಮಾಹಿತಿ ಹಾಗೂ ಪ್ರಸಾರ ಸಚಿವಾಲಯ, ಇಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯದ ಪ್ರತಿನಿಧಿಗಳನ್ನು ಹೊಂದಿರುವ ಸಮಿತಿಯನ್ನು ರೂಪಿಸಲಾಗುವುದು ಎಂದು ಕೇಂದ್ರ ಸರಕಾರ ತಿಳಿಸಿದೆ.

ಪ್ರದರ್ಶನಗಳು ನಿಯಮಗಳನ್ನು ಅನುಸರಿಸಲು ವಿಫಲರಾದರೆ, ಅಂತಹ ವೇದಿಕೆಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕೇಂದ್ರ ಸರಕಾರ ತಿಳಿಸಿದೆ. 

Similar News