ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಪ್ರತ್ಯೇಕ ಸಚಿವರು ಇರಲಿ

Update: 2023-05-31 18:17 GMT

ಮಾನ್ಯರೇ,

ನಮ್ಮ ನಾಡಿನ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸುವ ಮತ್ತು ಬೆಳೆಸುವ ನಿಟ್ಟಿನಲ್ಲಿ ಪರಿಣಾಮಕಾರಿಯಾದ ಕೆಲಸವನ್ನು ಮಾಡುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಖಾತೆಯ ಬಗ್ಗೆ ಇತ್ತೀಚಿನ ದಶಕಗಳಲ್ಲಿ ನಿರ್ಲಕ್ಷ್ಯವಾಗುತ್ತಿರುವುದು ಬೇಸರದ ಸಂಗತಿ. ಬಹುತೇಕ ಸಚಿವ ಸಂಪುಟಗಳಲ್ಲಿ ಈ ಖಾತೆಯನ್ನು ವಹಿಸಿಕೊಳ್ಳಲು ಯಾರೂ ಆಸಕ್ತರಿಲ್ಲದಿರುವುದು ಮತ್ತೊಂದು ಆತಂಕದ ಸಂಗತಿ. ಕೆಂಗಲ್ ಹನುಮಂತಯ್ಯರವರ ದೂರದೃಷ್ಟಿತ್ವದಿಂದ ಮತ್ತು ಕನ್ನಡ ಭಾಷೆಯ ಮೇಲಿನ ಪ್ರೀತಿಯಿಂದ ಸ್ಥಾಪಿತವಾದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಲವಾರು ಸಚಿವರನ್ನು ಇಲ್ಲಿಯತನಕ ಕಂಡಿರುತ್ತದೆ. ಸಾಮಾನ್ಯವಾಗಿ ವಾರ್ತಾ ಇಲಾಖೆಯ ಸಚಿವರು ಈ ಖಾತೆಯನ್ನು ಕೂಡಾ ನಿರ್ವಹಿಸಿರುವುದೇ ಹೆಚ್ಚು. ಆದರೆ ನಿಜಲಿಂಗಪ್ಪ, ದೇವರಾಜ ಅರಸ್, ರಾಮಕೃಷ್ಣ ಹೆಗಡೆ ಹಾಗೂ ಎಸ್.ಎಂ. ಕೃಷ್ಣ ಈ ಎಲ್ಲರೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಪ್ರತ್ಯೇಕ ಸಚಿವರನ್ನು ನೇಮಕ ಮಾಡಿ ಇದರ ಘನತೆಯನ್ನು ಹೆಚ್ಚಿಸಿರುತ್ತಾರೆ. ಡಾ. ಜೀವರಾಜ್ ಆಳ್ವ, ಎಂ.ಪಿ. ಪ್ರಕಾಶ್, ಲಲಿತಾನಾಯಕ್, ಲೀಲಾದೇವಿ ಆರ್.ಪ್ರಸಾದ್, ರಾಣಿಸತೀಶ್ ಹೀಗೆ ಅನೇಕರ ಹೆಸರುಗಳನ್ನು ಇತ್ತೀಚಿನ ದಶಕದಲ್ಲಿ ಈ ಇಲಾಖೆಯಲ್ಲಿ ಗುರುತಿಸಬಹುದಾಗಿದೆ. ಆದರೆ ಕಳೆದ ಕೆಲವು ಸಂಪುಟಗಳಲ್ಲಿ ಅನ್ಯಖಾತೆಗಳ ಜವಾಬ್ದಾರಿಯನ್ನು ಹೊತ್ತವರಿಗೆ ಈ ಖಾತೆಯನ್ನು ನೀಡಿ ಇದನ್ನು ಒಂದು ಉಚಿತ ಖಾತೆ ಎನ್ನುವ ಮಟ್ಟಕ್ಕೆ ತಂದು ನಿಲ್ಲಿಸಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅತೀಹೆಚ್ಚು ಸರಕಾರದ ಕಾರ್ಯಕ್ರಮಗಳನ್ನು ನಿಯೋಜಿಸುವಂತಹ ಇಲಾಖೆಯಾಗಿರುತ್ತದೆ. ನಾಡಿನ ಕಲಾವಿದರು, ನಾಟಕಕಾರರು, ಸಂಗೀತಗಾರರು, ಸಾಹಿತಿಗಳು, ಬರಹಗಾರರು, ಚಿಂತಕರು ಇವರೆಲ್ಲರ ಪರಿಚಯವಿಲ್ಲದಿದ್ದರೂ ಕನಿಷ್ಠಪಕ್ಷ ಈ ವಿಚಾರಗಳ ಬಗ್ಗೆ ಸ್ವಲ್ಪಮಟ್ಟಿನ ಆಸಕ್ತಿ ಉಳ್ಳವರು ಇದರ ಸಚಿವರಾಗಬೇಕು. ಕನ್ನಡ ಕಾವಲು ಸಮಿತಿ ಹೋಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವಾಯಿತು. ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದಲೂ ಆಡಳಿತದಲ್ಲಿ ಕನ್ನಡ ಭಾಷೆ ಅನುಷ್ಠಾನಕ್ಕೆ ಯಾವುದೇ ರೀತಿಯ ಪರಿಣಾಮಕಾರಿಯಾದ ಕಾರ್ಯಕ್ರಮಗಳು ಅನುಷ್ಠಾನವಾಗಿಲ್ಲ. ಈ ಹುದ್ದೆಯನ್ನು ಅಲಂಕರಿಸುವವರು ಕೇವಲ ವರ್ಷದಲ್ಲಿ ಒಂದಷ್ಟು ಕಾರ್ಯಕ್ರಮವನ್ನು ಮಾಡುವುದಕ್ಕೆ ಮಾತ್ರ ಮೀಸಲು ಮಾಡಿಕೊಂಡಿದ್ದಾರೆ. ಎಚ್.ನರಸಿಂಹಯ್ಯ, ಜಿ. ನಾರಾಯಣ ಮುಂತಾದವರು ಇದರ ಜವಾಬ್ದಾರಿಯನ್ನು ಹೊತ್ತಾಗ ಹಲವಾರು ಇಲಾಖೆಗಳಿಗೆ ಭೇಟಿಕೊಟ್ಟು ಕನ್ನಡದ ಅನುಷ್ಠಾನ ಆಡಳಿತದಲ್ಲಿ ಎಷ್ಟರಮಟ್ಟಿಗೆ ಆಗಿದೆ ಎನ್ನುವ ಚಿಂತನೆಯನ್ನು ನಡೆಸುತ್ತಿದ್ದರು. ಕಚೇರಿಗಳಿಗೆ ಅನಿರೀಕ್ಷಿತವಾಗಿ ಭೇಟಿಕೊಟ್ಟು ಟಿಪ್ಪಣಿಗಳು ಯಾವ ಭಾಷೆಯಲ್ಲಿದೆ ಎಂದು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತಿದ್ದರು. ಇಂತಹ ಯಾವ ಕಾರ್ಯಕ್ರಮಗಳೂ ಇತ್ತೀಚಿನ ದಶಕಗಳಲ್ಲಿ ಆಗಿರುವುದಿಲ್ಲ.

Similar News