ಲಕ್ಷ ಕೋಟಿ ರೂಪಾಯಿ ವೆಚ್ಚದಲ್ಲಿ ವಿಶ್ವದ ಅತಿದೊಡ್ಡ ಧಾನ್ಯ ದಾಸ್ತಾನು ವ್ಯವಸ್ಥೆಗೆ ಅಸ್ತು

Update: 2023-06-01 02:19 GMT

ಹೊಸದಿಲ್ಲಿ: ಸುಮಾರು ಒಂದು ಲಕ್ಷ ಕೋಟಿ ರೂಪಾಯಿ ವೆಚ್ಚದಲ್ಲಿ ವಿಶ್ವದಲ್ಲೇ ಅತಿ ದೊಡ್ಡ ಧಾನ್ಯ ದಾಸ್ತಾನು ವ್ಯವಸ್ಥೆ ನಿರ್ಮಿಸುವ ಬೃಹತ್ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ರ್ಕಋಷಿ, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಆಹಾರ ಸಂಸ್ಕರಣೆ ಉದ್ಯಮ ಸಚಿವಾಲಯಗಳ ಹಾಲಿ ಯೋಜನೆಗಳನ್ನು ಸೇರಿಸಿ ಸಹಕಾರ ಕ್ಷೇತ್ರದ ಮೂಲಕ ಈ ವ್ಯವಸ್ಥೆ ಅಭಿವೃದ್ಧಿಪಡಿಸಲಾಗುತ್ತದೆ.

ಸರ್ಕಾರದ ಈ ಕ್ರಮದಿಂದ ಬೆಳೆ ಹಾನಿ ಕಡಿಮೆಯಾಗುವುದು ಮಾತ್ರವಲ್ಲದೇ, ರೈತರು ಬೆಲೆ ಇಳಿಕೆ ಸಂದರ್ಭದಲ್ಲಿ ಹತಾಶರಾಗಿ ಆಹಾರಧಾನ್ಯಗಳನ್ನು ಮಾರಾಟ ಮಾಡುವುದು ತಪ್ಪಲಿದೆ. ಜತೆಗೆ ದೇಶದ ಆಹಾರ ಭದ್ರತೆ ಬಲಗೊಳಿಸಲು ಮತ್ತು ಗ್ರಾಮೀಣ ಭಾರತದಲ್ಲಿ ಉದ್ಯೋಗ ಸೃಷ್ಟಿಗೂ ನೆರವಾಗಲಿದೆ.

ಅಂತರ ಸಚಿವಾಲಯ ಸಮಿತಿ (ಐಎಂಸಿ) ಸೌಲಭ್ಯ ಕಲ್ಪಿಸಲಿರುವ ಈ ಯೋಜನೆಯಡಿ, ಮುಂದಿನ ಐದು ವರ್ಷಗಳ ಅವಧಿಯಲ್ಲಿ ಸಹಕಾರ ವಲಯದಲ್ಲಿ 700 ಲಕ್ಷ ಟನ್ ಆಹಾರಧಾನ್ಯ ದಾಸ್ತಾನು ಸಾಮರ್ಥ್ಯವನ್ನು ಸೃಷ್ಟಿಸಲಾಗುತ್ತದೆ. ಇದಕ್ಕಾಗಿ ಐಎಂಸಿ ಸ್ಥಾಪಿಸಲು ಕೂಡಾ ಸಂಪುಟ ಅನುಮೋದನೆ ನೀಡಿದೆ.

ಈ ದೂರದೃಷ್ಟಿಯ ಯೋಜನೆ ಸಮೃದ್ಧ, ಸ್ವಾವಲಂಬಿ ಮತ್ತು ಆಹಾರಧಾನ್ಯ ಸಮೃದ್ಧವಾದ ಭಾರತ ನಿರ್ಮಾಣಕ್ಕೆ ಅಡಗಲ್ಲು ಆಗಲಿದೆ. ಕೃಷಿ ಉತ್ಪನ್ನಗಳ ದಾಸ್ತಾನು ಸಾಮರ್ಥ್ಯದ ಕೊರತೆಯಿಂದಾಗಿ ಆಹಾರಧಾನ್ಯಗಳು ಹಾಳಾಗುತ್ತಿವೆ ಹಾಗೂ ರೈತರು ಕಡಿಮೆ ಬೆಲೆಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ಅನಿವಾರ್ಯ ಸ್ಥಿತಿ ನಿರ್ಮಾಣವಾಗುತ್ತಿದೆ. ಈ ಯೋಜನೆಯಡಿ ರೈತರು ತಮ್ಮ ತಾಲೂಕುಗಳಲ್ಲೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಅತ್ಯಾಧುನಿಕ ಧಾನ್ಯ ಸಂಗ್ರಹಾಗಾರಗಳ ಸೌಲಭ್ಯ ಪಡೆಯಲಿದ್ದಾರೆ. ಈ ಮೂಲಕ ಅವರು ತಮ್ಮ ಧಾನ್ಯಗಳಿಗೆ ನ್ಯಾಯಸಮ್ಮತ ಬೆಲೆ ಪಡೆಯುವುದು ಸಾಧ್ಯವಾಗಲಿದೆ ಎಂದು ಸಹಕಾರ ಸಚಿವ ಅಮಿತ್ ಶಾ ಹೇಳಿದ್ದಾರೆ.

Similar News