ಬಿರುಗಾಳಿಯೊಂದಿಗೆ ಸುರಿದ ಮಳೆ; ಹೆಬ್ರಿ ಆಸುಪಾಸಿನಲ್ಲಿ ತೋಟಗಾರಿಕಾ ಬೆಳೆಗಳಿಗೆ ಹಾನಿ

Update: 2023-06-01 14:36 GMT

ಉಡುಪಿ, ಜೂ.1: ಬಿರುಗಾಳಿಯೊಂದಿಗೆ ಬುಧವಾರ ಸಂಜೆ ಸುರಿದ ಮಳೆಯಿಂದ ಹೆಬ್ರಿಯ ಆಸುಪಾಸಿನಲ್ಲಿ ತೋಟಗಾರಿಕಾ ಬೆಳೆಗಳಿಗೆ ಅಪಾರ ಪ್ರಮಾಣದ ಹಾನಿಯಾಗಿರುವ ಬಗ್ಗೆ ವರದಿಗಳು ಬಂದಿವೆ.

ಹೆಬ್ರಿಯಲ್ಲಿ ಬಚ್ಚಹಾಂಡ ಎಂಬವರ ಅಡಿಕೆ ತೋಟ ಹಾಗೂ ಮಾವಿನ  ಮರಗಳು ಬಿರುಗಾಳಿಗೆ ಹಾನಿಗೊಂಡಿವೆ. ಇದರಿಂದ 50,000ರೂ.ಗಳಷ್ಟು ನಷ್ಟವಾಗಿರುವ ಬಗ್ಗೆ ಅಂದಾಜಿಸಲಾಗಿದೆ. ಅದೇ ರೀತಿ ಶೀನ ಹಾಂಡ ಎಂಬವರ ಅಡಿಕೆ ತೋಟ ಹಾಗೂ ಮಾವಿನ ಮರಗಳು ಗಾಳಿಗೆ ಭಾಗಶ: ಹಾನಿಗೊಂಡಿವೆ. ಇಲ್ಲೂ 50ಸಾವಿರದಷ್ಟು ನಷ್ಟದ ಅಂದಾಜು ಮಾಡಲಾಗಿದೆ.

ಇನ್ನು ಹೆಬ್ರಿ ತಾಲೂಕು ಬೆಳ್ವೆಯ ಶ್ರೀಮತಿ ಎಂಬವರ ಅಡಿಕೆ ಮರಗಳು ಹಾಗೂ ತೆಂಗಿನ ಮರಗಳು ರಾತ್ರಿಯ ಬಿರುಗಾಳಿಗೆ ಭಾಗಶ: ಹಾನಿಗೊಳಗಾಗಿವೆ. ಇದರಿಂದ 45,000ರೂ.ಗಳ ನಷ್ಟವಾಗಿರುವ ಬಗ್ಗೆ ಅಂದಾಜಿಸಲಾಗಿದೆ.

ಬೆಳ್ವೆ ಗ್ರಾಮದಲ್ಲೇ ಭಾರತಿ ಎಂಬವರ ವಾಸ್ತವ್ಯದ ಮನೆ ಗಾಳಿ-ಮಳೆಯಿಂದ ಭಾಗಶ: ಹಾನಿಗೊಂಡಿದ್ದು, 40ಸಾವಿರ ರೂ.ಗಳ ನಷ್ಟವಾ ಗಿದ್ದರೆ, ಅದೇ ಗ್ರಾಮದ ಗಿರಿಯ ಪೂಜಾರಿ ಎಂಬವರ ಮನೆಯೂ ಗಾಳಿ- ಮಳೆಗೆ ಭಾಗಶ: ಕುಸಿದಿದ್ದು 36,000ರೂ.ನಷ್ಟವಾಗಿದೆ.

ಬುಧವಾರ ಸಂಜೆಯ ಬಳಿಕ ಉಡುಪಿ, ಬ್ರಹ್ಮಾವರ ಹಾಗೂ ಹೆಬ್ರಿ ತಾಲೂಕುಗಳಲ್ಲಿ ಸಾಧಾರಣ ಪ್ರಮಾಣದ ಮಳೆ ಸುರಿದಿದೆ. ಮಳೆಗೆ ಮುನ್ನ ಬೀಸಿದ ಬಿರುಗಾಳಿ ಸಾಕಷ್ಟು ಹಾನಿಗೆ ಕಾರಣವಾಗಿದೆ.

ಕಾಪು ತಾಲೂಕಿನ ಮೂಳೂರು ಗ್ರಾಮದ ಸುಭಾಷಿಣಿ ವಿ.ಬಂಗೇರ ಎಂಬವರ ವಾಸದ ಮನೆಗೆ ಮಂಗಳವಾರ ಸಂಜೆ ಸಿಡಿಲು ಬಡಿದು ಮನೆಯಲ್ಲಿ ಯುವತಿಯೊಬ್ಬರು ಆಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆಯ ಬಳಿಕ ಚೇತರಿಸಿಕೊಂಡಿದ್ದಾರೆ. ಸಿಡಿಲಿನಿಂದ ಮನೆಗೆ ಭಾರೀ ಹಾನಿ ಸಂಭವಿಸಿದ್ದು,  ಒಂದು ಲಕ್ಷ ರೂ.ನಷ್ಟದ ಅಂದಾಜು ಮಾಡಲಾಗಿದೆ.

Similar News