ಮಾಹೆ: ದೈಹಿಕ ಶಿಕ್ಷಣ, ಕ್ರೀಡಾ ವಿಜ್ಞಾನದ ಕುರಿತು ಅಂ.ರಾ.ಸಮ್ಮೇಳನ

Update: 2023-06-02 15:41 GMT

ಮಣಿಪಾಲ, ಜೂ.2: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ) ಮುಂದಿನ ಡಿ.14ರಿಂದ 16ರವರೆಗೆ ದೈಹಿಕ ಶಿಕ್ಷಣ ಹಾಗೂ ಕ್ರೀಡಾ ವಿಜ್ಞಾನದ ಕುರಿತು ಅಂತಾರಾಷ್ಟ್ರೀಯ ಸಮ್ಮೇಳನವನ್ನು (ಐಸಿಪಿಇಎಸ್‌ಎಸ್) ಆಯೋಜಿಸಲಿದೆ.

ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನದ ರಾಷ್ಟ್ರೀಯ ಸಂಘ(ಎನ್‌ಎಪಿ ಇಎಸ್‌ಎಸ್)ನ ಸಹಯೋಗದೊಂದಿಗೆ ಮಾಹೆ ಈ ಅಂತಾರಾಷ್ಟ್ರೀಯ ಮಟ್ಟದ ಸಮ್ಮೇಳನವನ್ನು ಹಮ್ಮಿಕೊಳ್ಳಲಿದ್ದು, ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದಂತ ಇತ್ತೀಚಿನ ಬೆಳವಣಿಗೆಗಳು, ಅಭಿವೃದ್ಧಿ ಹಾಗೂ ಸಂಶೋಧನೆಯ ಕುರಿತಂತೆ ವಿಶ್ವ ಮಟ್ಟದ ತಜ್ಞರು ಹಾಗೂ ಸಂಶೋಧಕರನ್ನು ಸಮಾವೇಶಕ್ಕೆ ಆಹ್ವಾನಿಸಲಿದೆ.

ಇದಕ್ಕೆ ಸಂಬಂಧಿಸಿದಂತೆ ಮಾಹೆಯ ಬೋರ್ಡ್ ರೂಮ್‌ನಲ್ಲಿ ಸಮ್ಮೇಳನದ ವೆಬ್‌ಸೈಟ್‌ನ್ನು ಉದ್ಘಾಟಿಸ ಲಾಯಿತು. ವೆಬ್‌ಸೈಟ್‌ಗೆ ಮಾಹೆಯ ಕುಲಪತಿ ಲೆ.ಜ.(ಡಾ.) ಎಂ.ಡಿ.ವೆಂಕಟೇಶ್ ಅವರು ಚಾಲನೆ ನೀಡಿದರು. ಪ್ರೊ ವೈಸ್ ಚಾನ್ಸಲರ್ ಡಾ.ಶರತ್ ಕೆ.ರಾವ್ ಅವರು ಸಮ್ಮೇಳನದ ಪೋಸ್ಟರ್‌ನ್ನು ಬಿಡುಗಡೆಗೊಳಿಸಿದರು.

ಕ್ರೀಡಾ ವಿಜ್ಞಾನ ಹಾಗೂ ದೈಹಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ವಿಶ್ವ ಮಟ್ಟದ ತಜ್ಞರು, ಸಂಶೋಧಕರು ತಮ್ಮ ಅನುಭವ ಹಾಗೂ ಯೋಜನೆಗಳನ್ನು ಈ ಸಮ್ಮೇಳನದಲ್ಲಿ ಹಂಚಿಕೊಳ್ಳಲಿದ್ದು, ಇದು ಭಾಗವಹಿಸುವ ಆಸಕ್ತರಿಗೆ ಉಪಯುಕ್ತವೆನಿಸಲಿದೆ. ಕ್ಷೇತ್ರಕ್ಕೆ ಸಂಬಂದಿಸಿದ ಮಾಹಿತಿಗಳ ವಿನಿಮಯವೂ, ಇತ್ತೀಚಿನ ಪ್ರಗತಿ, ತಂತ್ರಜ್ಞಾನ ಹಾಗೂ ಕ್ಷೇತ್ರದ ಸಮಸ್ಯೆಗಳಿಗೆ ಪರಿಹಾರವನ್ನೂ  ಇಲ್ಲಿ ಕಂಡುಕೊಳ್ಳಬಹುದಾಗಿದೆ ಎಂದು ಡಾ.ವೆಂಕಟೇಶ್ ತಿಳಿಸಿದರು. 

ರಿಜಿಸ್ಟ್ರಾರ್ ಡಾ.ಗಿರಿಧರ ಕಿಣಿ, ಎನ್‌ಎಪಿಇಎಸ್‌ಎಸ್‌ನ ಪೋಷಕ ಡಾ.ಪಿ. ಚಿನ್ನಪ್ಪ ರೆಡ್ಡಿ, ಎನ್‌ಎಪಿಇಎಸ್‌ಎಸ್‌ನ ಅಧ್ಯಕ್ಷ ಡಾ.ಅನಿಲ್ ದೇಶ್‌ಮುಖ್, ಐಸಿಪಿಇಎಸ್‌ಎಸ್ 2023ರ ಸಂಚಾಲಕ ಡಾ.ವಿನೋದ್ ಸಿ.ನಾಯಕ್, ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಡಾ.ದೀಪಕ್‌ರಾಮ್ ಬಾಯರಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 

Similar News