ಸುಸ್ತೀದಾರನಾಗುವ ಅಪಾಯದಿಂದ ಅಮೆರಿಕ ಪಾರು: ಸಾಲದ ಮಿತಿ ಹೆಚ್ಚಳಕ್ಕೆ ಸೆನೆಟ್ ಸಮ್ಮತಿ

Update: 2023-06-02 16:37 GMT

ವಾಷಿಂಗ್ಟನ್: ಅಮೆರಿಕದ ಶಾಸನಬದ್ಧ ಸಾಲದ ಮಿತಿ(ಡೆಟ್ ಸೀಲಿಂಗ್) ಹೆಚ್ಚಳ ಮಾಡುವ ನಿರ್ಣಯಕ್ಕೆ ಸೆನೆಟ್(ಸಂಸತ್ತಿನ ಮೇಲ್ಮನೆ)ಯಲ್ಲಿ ಅನುಮೋದನೆ ಪಡೆಯಲು ಬೈಡನ್ ಸರಕಾರ ಸಫಲವಾಗುವುದರೊಂದಿಗೆ, ಇದೇ ಮೊತ್ತಮೊದಲ ಬಾರಿಗೆ ಸುಸ್ತೀದಾರನಾಗುವ ಅಪಾಯದಿಂದ ಅಮೆರಿಕ ಪಾರಾಗಿದೆ.

ವಿಪಕ್ಷ ರಿಪಬ್ಲಿಕನ್ನರ ಬಹುಮತ ಇರುವ  ಅಮೆರಿಕ ಸಂಸತ್ತಿನ ಕೆಳಮನೆ(ಹೌಸ್ ಆಫ್ ರೆಪ್ರಸೆಂಟೇಟಿವ್ಸ್)ಯ  ಅನುಮೋದನೆ ಪಡೆಯುವುದರೊಂದಿಗೆ ಮೊದಲ ಹಂತದ ಅಗ್ನಿಪರೀಕ್ಷೆಯಲ್ಲಿ ಬೈಡನ್ ಸರಕಾರ ಬುಧವಾರ ಗೆದ್ದುಬಂದಿತ್ತು.   ಇದೀಗ ನಿರ್ಣಯಕ್ಕೆ  ಸೆನೆಟ್(ಮೇಲ್ಮನೆ) ಕೂಡಾ ಸಮ್ಮತಿಸುವುದರೊಂದಿಗೆ 2024ರ ಅಂತ್ಯದವರೆಗೆ ಶಾಸನಬದ್ದಧ ಸಾಲದ ಮಿತಿ ಹೆಚ್ಚಿಸಲು ಸರಕಾರಕ್ಕೆ ಅವಕಾಶ ಲಭಿಸಿದಂತಾಗಿದೆ. ಸಂಸತ್ತಿನ ಎರಡೂ ಸದನಗಳಲ್ಲಿ ಅನುಮೋದನೆ ಲಭಿಸಿರುವ ಈ ಮಸೂದೆಯನ್ನು ಇದೀಗ ಅಧ್ಯಕ್ಷ ಬೈಡನ್‌ರ ಸಹಿಗಾಗಿ ರವಾನಿಸಲಾಗುವುದು ಎಂದು ಮೂಲಗಳು ಹೇಳಿವೆ.

ಸೆನೆಟ್‌ನಲ್ಲಿ ಸಾಲದ ಮಿತಿ ಹೆಚ್ಚಳವನ್ನು 63-36 ಮತಗಳಿಂದ ಅಂಗೀಕರಿಸಲಾಗಿದೆ. ಜೂನ್ 5ರ ಬಳಿಕ ಸರಕಾರದ ಬಿಲ್ ಪಾವತಿಗೆ ಹಣದ ಕೊರತೆಯಾಗಬಹುದು ಎಂದು ಹಣಕಾಸು ಕಾರ್ಯದರ್ಶಿ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಸಂಸತ್ತಿನ ಎರಡೂ ಸದನಗಳಲ್ಲಿ ತರಾತುರಿಯಿಂದ ಮಸೂದೆ ಮಂಡಿಸಿ ಅನುಮೋದನೆ ಪಡೆಯುವಲ್ಲಿ ಸರಕಾರ ಯಶಸ್ವಿಯಾಗಿದೆ.

ಇದು ಅಮೆರಿಕನ್ನರಿಗೆ ದೊರಕಿದ ದೊಡ್ಡ ಗೆಲುವಾಗಿದೆ. ತಾವು ಬಯಸಿದ್ದೆಲ್ಲವನ್ನೂ ಪಡೆಯಲು ಯಾರಿಂದಲೂ ಸಾಧ್ಯವಿಲ್ಲ. ಏನಿದ್ದರೂ ಈ ದ್ವಿಪಕ್ಷೀಯ ಒಪ್ಪಂದವು  ನಮ್ಮ ಜನರ, ಅಮೆರಿಕದ ಅರ್ಥವ್ಯವಸ್ಥೆಯ ಗೆಲುವಾಗಿದೆ. ಸಾಧ್ಯವಾದಷ್ಟು ಬೇಗ ಈ ಮಸೂದೆಗೆ ತಾನು ಸಹಿ ಹಾಕಲಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಪ್ರತಿಕ್ರಿಯಿಸಿದ್ದಾರೆ.

Similar News