ಶಿಕ್ಷಣದ ಇಸ್ರೇಲೀಕರಣ: ಇಸ್ರೇಲ್ ವಿರುದ್ಧ ಫೆಲೆಸ್ತೀನೀಯರ ಆಕ್ರೋಶ

Update: 2023-06-02 16:59 GMT

ರಮಲ್ಲಾ: ಪೂರ್ವ ಜೆರುಸಲೇಂನಲ್ಲಿ ಇಸ್ರೇಲಿ ಅಧಿಕಾರಿಗಳು ಫೆಲೆಸ್ತೀನೀಯರ ಶಿಕ್ಷಣ ಕ್ರಮದ ಮೇಲೆ ಯುದ್ಧ ನಡೆಸುತ್ತಿದ್ದು ಶಿಕ್ಷಣದ  ಇಸ್ರೇಲೀಕರಣ ನಡೆಯುತ್ತಿದೆ ಎಂದು ಫೆಲೆಸ್ತೀನಿಯನ್ ಕಾರ್ಯಕರ್ತರು ಮತ್ತು ರಾಜಕೀಯ ಮುಖಂಡರು ಆರೋಪಿಸಿದ್ದಾರೆ.

ಆಕ್ರಮಿತ ಪೂರ್ವ ಜೆರುಸಲೇಂನಲ್ಲಿ ಮತ್ತು ಇಸ್ರೇಲ್ ಪ್ರದೇಶದಲ್ಲಿರುವ ಫೆಲೆಸ್ತೀನ್ ಸಮುದಾಯದ ಶಾಲೆಗಳ ಮೇಲೆ ಮೇಲ್ವಿಚಾರಣೆ ಮತ್ತು ನಿಗಾ ವ್ಯವಸ್ಥೆ ಹೆಚ್ಚಿಸುವ ಎರಡು ಮಸೂದೆಗಳನ್ನು ಇಸ್ರೇಲ್ ಸಂಸತ್ತು ಅನುಮೋದಿಸಿರುವುದನ್ನು ಖಂಡಿಸಿರುವ ಫೆಲೆಸ್ತೀನೀಯರು, ಇದು ಫೆಲೆಸ್ತೀನಿಯರ ಪಠ್ಯಕ್ರಮದ ಇಸ್ರೇಲೀಕರಣವಾಗಿದೆ ಎಂದಿದ್ದಾರೆ. ಶಿನ್‌ಬೆಟ್ ಎಂದು ಕರೆಯಲಾಗುವ  ಇಸ್ರೇಲ್‌ನ ಗುಪ್ತಚರ ಸೇವಾ ವಿಭಾಗವು ಫೆಲೆಸ್ತೀನಿಯರ ಶಿಕ್ಷಣ ವ್ಯವಸ್ಥೆಯ ಮೇಲೆ ನಿಗಾ ವಹಿಸುತ್ತಿದೆ.  ಫೆಲೆಸ್ತೀನಿಯನ್ ಶಿಕ್ಷಕರ ಚಟುವಟಿಕೆಗಳನ್ನು ಪರಿಶೀಲಿಸುವುದು, ಶಿಕ್ಷಕರು ಇಸ್ರೇಲ್ ಕಾರ್ಯಾಚರಣೆಯ, ಇಸ್ರೇಲ್‌ನ ದಮನಕಾರಿ ಕ್ರಮಗಳು, ವರ್ಣಭೇದ ನೀತಿಯ ವಿರುದ್ಧ ನಡೆಯುತ್ತಿರುವ ಚಟುವಟಿಕೆಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿ ಅವರನ್ನು ವಜಾಗೊಳಿಸುವ ಪ್ರಕ್ರಿಯೆ ಹೆಚ್ಚುತ್ತಿದೆ ಎಂದು ಹೇಳಿದೆ.

ಫೆಲೆಸ್ತೀನಿಯನ್ ಅಸ್ಮಿತೆ, ಇತಿಹಾಸ ಮತ್ತು ಸಂಸ್ಕೃತಿಯನ್ನು ಶಿಕ್ಷಣ ಪಠ್ಯಕ್ರಮದಿಂದ ಅಳಿಸಿಹಾಕಲು ಪ್ರಯತ್ನಿಸುತ್ತಿರುವ ಇಸ್ರೇಲ್, ಶಿಕ್ಷಕರನ್ನೇ ಟಾರ್ಗೆಟ್ ಮಾಡುತ್ತಿದೆ. ಫೆಲೆಸ್ತೀನಿಯನ್ ಅಸ್ಮಿತೆಯ ಮಹತ್ವ ಮತ್ತು ಅದನ್ನು ಪೀಳಿಗೆಯಿಂದ ಪೀಳಿಗೆಗೆ ಜೀವಂತವಾಗಿಡುವ ಪ್ರಯತ್ನವನ್ನು ಅರಿತಿರುವ ಇಸ್ರೇಲ್ ಈಗ ಅದನ್ನು ದುರ್ಬಲಗೊಳಿಸಲು ಕಾರ್ಯನಿರ್ವಹಿಸುತ್ತಿದೆ.  ಪೂರ್ವ ಜೆರುಸಲೇಂನಲ್ಲಿ, ವೆಸ್ಟ್‌ಬ್ಯಾಂಕ್ ಮತ್ತು ಗಾಝಾ ಪಟ್ಟಿಯಲ್ಲಿ  ಫೆಲೆಸ್ತೀನೀಯರನ್ನು ಒಗ್ಗೂಡಿಸಿರುವ ಫೆಲೆಸ್ತೀನಿಯನ್ ಅಸ್ಮಿತೆಯನ್ನು ನಾಶಗೊಳಿಸುವುದು ಅವರ ಗುರಿಯಾಗಿದೆ  ಎಂದು ಪೂರ್ವ ಜೆರುಸಲೇಂನಲ್ಲಿ ಫತಾಹ್ ಚಳವಳಿಯ ಪ್ರಮುಖ ನಾಯಕ ಅಹ್ಮದ್ ಘುನೈಮ್ ಹೇಳಿರುವುದಾಗಿ ‘ಅರಬ್ ನ್ಯೂಸ್’ ವರದಿ ಮಾಡಿದೆ. ಶಿಕ್ಷಣದ ಯೆಹೂದೀಕರಣ ಮತ್ತು ಇಸ್ರೇಲೀಕರಣವನ್ನು ಫೆಲೆಸ್ತೀನೀಯರು ಒಪ್ಪಬೇಕೆಂದು ಇಸ್ರೇಲ್ ಬಲವಂತಗೊಳಿಸುತ್ತಿದೆ. ಆದರೆ ಇದು ಫಲನೀಡದು ಎಂದವರು ಹೇಳಿದ್ದಾರೆ.

ಇಸ್ರೇಲ್ ಸಂಸತ್ತು ಹೊಸ ಕಾನೂನನ್ನು ಅನುಮೋದಿಸಿರುವುದನ್ನು ಫೆಲೆಸ್ತೀನ್ ವಿದೇಶಾಂಗ ಇಲಾಖೆ ಖಂಡಿಸಿದೆ. ಇಸ್ರೇಲಿ ಪಠ್ಯಕ್ರಮ ಕಲಿಸುವ ಶಾಲೆಗಳಿಗೆ ಮಾತ್ರ ಲೈಸೆನ್ಸ್ ನೀಡುವುದು, ಯಾವುದೇ ವಿದ್ಯಾರ್ಥಿ, ಶಿಕ್ಷಕರು ಅಥವಾ ಶಿಕ್ಷಣ ನಿರ್ವಾಹಕರು  ಹೊಸ ಕಾನೂನನ್ನು ಉಲ್ಲಂಘಿಸಿದ ಆರೋಪದಲ್ಲಿ ಪ್ರಕರಣ ದಾಖಲಿಸಲು ಹೊಸ ಕಾನೂನಿನಲ್ಲಿ ಅವಕಾಶವಿದೆ. ಫೆಲೆಸ್ತೀನೀಯರ ಶೋಷಣೆಯನ್ನು ಸಕ್ರಮಗೊಳಿಸುವ ಈ ಜನಾಂಗೀಯ ಕಾನೂನುಗಳಿಂದ ಗಂಭೀರ ಪರಿಣಾಮವಾಗಲಿದೆ. ತಲೆಮಾರುಗಳ ಪ್ರಜ್ಞೆಯನ್ನು ನಿಯಂತ್ರಣಕ್ಕೆ ಒಳಪಡಿಸುವ ಪ್ರಯತ್ನ  ಮತ್ತು ಆಕ್ರಮಣಕಾರರ ಕ್ರಮ ಮತ್ತು ಪದ್ಧತಿಗಳನ್ನು ಒಪ್ಪಿಕೊಳ್ಳುವಂತೆ ಅವರನ್ನು ಬಲಪಡಿಸುವ ಪ್ರಕ್ರಿಯೆ ಇದು ಎಂಬುದು ಸ್ಪಷ್ಟವಾಗಿದೆ. ಈ ಕ್ರಮಗಳು ಅಂತರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಇಲಾಖೆ ಹೇಳಿದೆ.

ಮಾನವ ಹಕ್ಕುಗಳಿಗೆ ಸಂಬಂಧಿಸಿದ ಅಂತರಾಷ್ಟ್ರೀಯ ಸಂಸ್ಥೆಗಳು ತಮ್ಮ ಧ್ವನಿಯನ್ನು ಎತ್ತಬೇಕು ಮತ್ತು ಈ ಕಾನೂನುಗಳನ್ನು ಜಾರಿಗೊಳಿಸದಂತೆ ಇಸ್ರೇಲ್ ಮೇಲೆ ಒತ್ತಡ ಹೇರಬೇಕು. ಈ ಕಾನೂನು ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯ ಅಡಿಯಲ್ಲಿ ನಾಗರಿಕರ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಇಲಾಖೆ ಕರೆ ನೀಡಿದೆ.

‘ಶಾಲೆಗಳ ಮೇಲ್ವಿಚಾರಣಾ ಕಾನೂನಿಗೆ’ ತಿದ್ದುಪಡಿಯಾಗಿ ಮಂಡಿಸಲಾದ ಈ ಕರಡು ಮಸೂದೆಯು ‘ಶಿಕ್ಷಕರ ಕೆಲಸಕ್ಕೆ ಅರ್ಜಿ ಸಲ್ಲಿಸುವ ಫೆಲೆಸ್ತೀನಿಯನ್ ಅಭ್ಯರ್ಥಿಗಳ ಭದ್ರತಾ ಹಿನ್ನೆಲೆ ಪರಿಶೀಲಿಸಲು ಶಿಕ್ಷಣ ಇಲಾಖೆಯನ್ನು ನಿರ್ಬಂಧಿಸುತ್ತದೆ. ಅಭ್ಯರ್ಥಿಯನ್ನು ಆಯ್ಕೆ ಮಾಡುವ ಮೊದಲು ಆತ ಯಾವುದೇ ಭಯೋತ್ಪಾದಕ ಕೃತ್ಯ ಅಥವಾ ಭದ್ರತೆಗೆ ಅಡ್ಡಿಯಾದ ಕೃತ್ಯದಲ್ಲಿ ತೊಡಗಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವನ್ನು ಕಡ್ಡಾಯಗೊಳಿಸಿದೆ. ಈ ಮಸೂದೆಗೆ ಸಂಸತ್ತಿನ 45 ಸದಸ್ಯರು ಬೆಂಬಲ ಸೂಚಿಸಿದ್ದರೆ 25 ಸದಸ್ಯರು ವಿರೋಧಿಸಿದ್ದಾರೆ.

ಪೂರ್ವ ಜೆರುಸಲೇಂನಲ್ಲಿ ಅಥವಾ ಇಸ್ರೇಲ್‌ನಲ್ಲಿರುವ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುವ ಫೆಲೆಸ್ತೀನಿಯನ್ ಶಿಕ್ಷಕರ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಲು ಈ ಕಾನೂನು ಇಸ್ರೇಲಿ ಗುಪ್ತಚರ ಇಲಾಖೆಗೆ ಅವಕಾಶ ನೀಡುತ್ತದೆ.

Similar News