ತಿದ್ದುಪಡಿಗಳೊಂದಿಗೆ ದೇಶದ್ರೋಹ ಕಾನೂನು ಉಳಿಸುವಂತೆ ಕೇಂದ್ರ ಸರಕಾರಕ್ಕೆ ಆಯೋಗ ಸಲಹೆ

Update: 2023-06-02 17:23 GMT

ಹೊಸದಿಲ್ಲಿ: ಪ್ರಮುಖ ತಿದ್ದುಪಡಿಗಳೊಂದಿಗೆ ದೇಶದ್ರೋಹ ವಿರೋಧಿ ಕಾನೂನನ್ನು ಉಳಿಸಿಕೊಳ್ಳುವ ಬಗ್ಗೆ ಕಾನೂನು ಆಯೋಗವು ಕೇಂದ್ರ ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದೆ.

ದೇಶದ್ರೋಹ ಕಾನೂನು ‘ವಸಾಹತುಶಾಹಿ ಪರಂಪರೆ’ಯ ಭಾಗವಾಗಿದೆಯಾದರೂ, ಅದನ್ನು ರದ್ದುಪಡಿಸುವುದಕ್ಕೆ ಯಾವುದೇ ಸೂಕ್ತವಾದ ಕಾರಣವಿಲ್ಲವೆಂದು ಕರ್ನಾಟಕದ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ ನೇತೃತ್ವದ ಕಾನೂನು ಆಯೋಗವು ಅಭಿಪ್ರಾಯಿಸಿದೆ.

‘‘ ಆ ನೆಲೆಯಲ್ಲಿ ಹೇಳುವುದಾದರೆ, ಭಾರತೀಯ ಕಾನೂನು ವ್ಯವಸ್ಥೆಯ ಸಮಗ್ರ ಚೌಕಟ್ಟೇ ವಸಾಹತು ಪರಂಪರೆಯದ್ದಾಗಿದೆ. ಪೊಲೀಸ್ ಪಡೆ ಹಾಗೂ ಅಖಿಲ ಭಾರತ ನಾಗರಿಕ ಸೇವೆ ಕೂಡಾ ಬ್ರಿಟಿಶ್ ಆಡಳಿತ ಯುಗದ ಪಳೆಯುಳಿಕೆಗಳಾಗಿವೆ ’’ ಎಂದು ಆಯೋಗ ಹೇಳಿದೆ. ದೇಶದ್ರೋಹ ವಿರೋಧಿ ಕಾನೂನಿನಡಿ ವಿಧಿಸಲಾಗುವ ಜೈಲು ಶಿಕ್ಷೆಯ ಅವಧಿಯನ್ನು ಮೂರು ವರ್ಷಗಳಿಂದ ಏಳು ವರ್ಷಗಳಿಗೆ ಹೆಚ್ಚಿಸುವಂತೆಯೂ ಆಯೋಗ ಸಲಹೆ ನೀಡಿದೆ.

ಕಳೆದ ವರ್ಷ ಸುಪ್ರೀಂಕೋರ್ಟ್ ನೀಡಿದ ಆದೇಶವೊಂದರಲ್ಲಿ ಭಾರತೀಯ ದಂಡಸಂಹಿತೆಯ ಸೆಕ್ಷನ್ 124ಎ ಅಡಿ ಬರುವ ವಸಾಹತುಶಾಹಿ ಕಾಲದ ದೇಶದ್ರೋಹಿ ಕಾನೂನನ್ನು ತಡೆಹಿಡಿದಿತ್ತು ಹಾಗೂ ಆ ಕಾನೂನನ್ನು ಮರುಪರಿಶೀಲಿಸುವ ತನಕ ಅದರಡಿಯಲ್ಲಿ ಯಾವುದೇ ಹೊಸ ಪ್ರಕರಣ ದಾಖಲಿಸದಂತೆಯೂ ನಿರ್ದೇಶನ ನೀಡಿತ್ತು.

ಸಾರ್ವಜನಿಕ ಅಶಾಂತಿಯನ್ನು ಸೃಷ್ಟಿಸುವ ಅಥವಾ ಹಿಂಸೆಯನ್ನು ಪ್ರಚೋದಿಸಲು ಪ್ರಯತ್ನಿಸುವುದನ್ನು ಕೂಡಾ ತಿದ್ದುಪಡಿಗೊಳಿಸಲಾದ ದೇಶದ್ರೋಹಿ ಕಾನೂನಿನ ವ್ಯಾಪ್ತಿಗೆ ಸೇರ್ಪಡೆಗೊಳಿಸಬೇಕೆಂದು ಆಯೋಗವು ಪ್ರತಿಪಾದಿಸಿದೆ.

ಬೇರೆ ದೇಶಗಳು ದೇಶದ್ರೋಹಿ ಕಾನೂನನ್ನು ರದ್ದುಪಡಿಸಿವೆ ಎಂಬ ಅಧಾರದಲ್ಲಿ , ಭಾರತ ಕೂಡಾ ಅವುಗಳನ್ನು ಅನುಸರಿಸುವುದು ಭಾರತದಲ್ಲಿ ಅಸ್ತಿತ್ವದಲ್ಲಿರುವ ವಾಸ್ತವಿಕತೆಗಳ ಬಗ್ಗೆ ಕುರುಡುತನ ಪ್ರದರ್ಶಿಸಿದಂತಾಗುತ್ತದೆ ಎಂದು ಆಯೋಗವು ಹೇಳಿದೆ.

Similar News