ಇದ್ರಿಸ್ ಪಾಷಾ ಕೊಲೆ: ಒಂದು ಸತ್ಯ ಶೋಧನಾ ವರದಿ

Update: 2023-06-03 03:20 GMT

ಎಪ್ರಿಲ್ 1, 2023ರಂದು ಸುದ್ದಿ ಪತ್ರಿಕೆಗಳು ಮಾರ್ಚ್ 30, 2023 ರಂದು ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಸಾತನೂರು ಗ್ರಾಮದಲ್ಲಿ ಪುನೀತ್ ಕೆರೆಹಳ್ಳಿ ಹಾಗೂ ರಾಷ್ಟ್ರ ರಕ್ಷಣಾ ಪಡೆಯ ಸ್ವಯಂ-ಘೋಷಿತ ‘ಗೋರಕ್ಷಕರು’ ಮೂವರು ಜಾನುವಾರು ವ್ಯಾಪಾರಿಗಳ ಮೇಲೆ ನಡೆಸಿದ ಒಂದು ಹಲ್ಲೆಯ ಕುರಿತು ವರದಿ ಮಾಡಿದವು. ಇವರು ನಡೆಸಿದ ಈ ಹಲ್ಲೆಯಲ್ಲಿ ಇದ್ರಿಸ್ ಪಾಷಾ ಎಂಬವರು ಮರಣಕ್ಕೀಡಾದರೆ ಅವರ ಸಹಚರರಿಗೆ ಗಾಯಗಳಾಗಿದ್ದವು. ಈ ಮೂವರು ಮಂಡ್ಯ ಮೂಲದವರಾಗಿದ್ದರು. ಈ ಮೇಲಿನ ಕೃತ್ಯದ ಕುರಿತು ವಕೀಲ ಸಿವಮಣಿದನ್, ಡಾ. ಸಿಲ್ವಿಯ ಕರ್ಪಗಂ, ಸಿದ್ಧಾರ್ಥ್ ಕೆ.ಜೆ. ಮತ್ತು ಖಾಸಿಂ ಶುಐಬ್ ಖುರೇಶಿ ಹಾಗೂ ಆಲ್ ಇಂಡಿಯಾ ಜಮೀಯತುಲ್ ಖುರೇಶ್ (ಕರ್ನಾಟಕ) ಸದಸ್ಯರ ತಂಡವು ಸತ್ಯ ಶೋಧನೆ ನಡೆಸಿದೆ.

ಈ ಸತ್ಯ ಶೋಧನಾ ತಂಡವು ಕೃತ್ಯ ನಡೆದ ಸ್ಥಳಕ್ಕೆ (ರಾಮನಗರ ಜಿಲ್ಲೆ, ಕನಕಪುರ ತಾಲೂಕು, ಸಾತನೂರು ಗ್ರಾಮ) ಭೇಟಿ ನೀಡಿ, ಸ್ಥಳೀಯ ನಿವಾಸಿಗಳೊಂದಿಗೆ ಮಾತುಕತೆ ನಡೆಸಿದೆ. ಮುಂದುವರಿದು, ಈ ಸತ್ಯ ಶೋಧನಾ ತಂಡವು ಮಂಡ್ಯಕ್ಕೆ ಭೇಟಿ ನೀಡಿ ಇದ್ರಿಸ್ ಪಾಷಾ ಅವರ ಸಹೋದರ ಯೂನುಸ್ ಪಾಷಾ ಸೇರಿದಂತೆ ಅವರ ಇನ್ನಿತರ ಕುಟುಂಬಸ್ಥರ ಜೊತೆ ಹಾಗೂ ಜಾನುವಾರು ವ್ಯಾಪಾರದಲ್ಲಿ ತೊಡಗಿಸಿಕೊಂಡಿರುವ ಇನ್ನಿತರ ಸಮುದಾಯದ ಸದಸ್ಯರೊಂದಿಗೆ ಮಾತುಕತೆ ನಡೆಸಿದೆ.

ಆ ನಂತರ, ಈ ಪ್ರಕರಣಗಳ ತನಿಖಾಧಿಕಾರಿಯಾದ ಸರ್ಕಲ್ ಇನ್ಸ್ಪೆಕ್ಟರ್ (ಕನಕಪುರ) ಹಾಗೂ ಪೊಲೀಸ್ ಅಧೀಕ್ಷಕರ (ರಾಮನಗರ) ಜೊತೆ ಸತ್ಯ ಶೋಧನಾ ತಂಡವು ಮಾತಾಡಿತು. ವ್ಯಕ್ತಿಗಳ ವೈಯಕ್ತಿಕ ಗುರುತಿನ ರಕ್ಷಣೆಯ ಕಾರಣದಿಂದ ಈ ತಂಡವು ಸಂದರ್ಶಿಸಿದ ಹಲವು ವ್ಯಕ್ತಿಗಳ ಗುರುತನ್ನು ಇಲ್ಲಿ ಬಹಿರಂಗಪಡಿಸಿರುವುದಿಲ್ಲ. ಈ ವ್ಯಕ್ತಿಗಳು ಹಾಗೂ ಅಧಿಕಾರಿಗಳು ನೀಡಿದ ಹೇಳಿಕೆಗಳ ಆಧಾರದ ಮೇಲೆ ಸಾತನೂರಿನಲ್ಲಿ ಮಾರ್ಚ್ 30 ಹಾಗೂ ಎಪ್ರಿಲ್ 1ರ ನಡುವಿನ ರಾತ್ರಿಯಲ್ಲಿ ನಡೆದ ಕೃತ್ಯಗಳ ಕುರಿತು ಸತ್ಯ ಶೋಧನಾ ತಂಡವು ಗಮನಿಸಿದ ಅಂಶಗಳು ಹಾಗೂ ಅದರ ಶಿಫಾರಸುಗಳನ್ನು ಈ ವರದಿಯಲ್ಲಿ ನೀಡಿದೆ.

ಹಿನ್ನೆಲೆ

ಸ್ವಯಂಘೋಷಿತ ಗೋ-ರಕ್ಷಕರು ಕಾನೂನುಬಾಹಿರವಾಗಿ ಕಾನೂನನ್ನು ಕೈಗೆ ತೆಗೆದುಕೊಂಡು ಜಾನುವಾರು ವ್ಯಾಪಾರಿಗಳು ಜಾನುವಾರುಗಳನ್ನು ಸಾಗಿಸುವಾಗ ಅವರ ವಾಹನಗಳನ್ನು ಅಡ್ಡಗಟ್ಟಿ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದು ಸಾತನೂರಿನಲ್ಲೇ ಮೊದಲಲ್ಲ ಎಂಬುದನ್ನು ಗಮನಿಸುವುದು ಮುಖ್ಯವಾಗುತ್ತದೆ. ಇಂತಹ ಕೃತ್ಯಗಳು ಬಿಜೆಪಿ ಸರಕಾರ ಕರ್ನಾಟಕ ಜಾನುವಾರು ಹತ್ಯೆ ತಡೆಗಟ್ಟುವಿಕೆ ಮತ್ತು ಸಂರಕ್ಷಣಾ ಕಾಯ್ದೆ, 2020 ಅನ್ನು ಜಾರಿಗೆ ತಂದ ನಂತರ ಹೆಚ್ಚಾಗಿವೆ. ನಿಜ ಹೇಳಬೇಕೆಂದರೆ, ರಾಮನಗರ ಜಿಲ್ಲೆಯ ಪೊಲೀಸ್ ಅಧೀಕ್ಷಕರು ಹೇಳುವಂತೆ ಇದ್ರಿಸ್ ಪಾಷಾ ಕೊಲೆ ಆರೋಪಿ ಪುನೀತ್ ಕೆರೆಹಳ್ಳಿಯ ಮೇಲೆ ಇಂತಹ 11 ಕ್ರಿಮಿನಲ್ ಪ್ರಕರಣಗಳು ಬಾಕಿ ಇವೆ.

ಉತ್ತರ ಭಾರತದ ಹಲವು ರಾಜ್ಯಗಳಲ್ಲಿರುವ (ಉತ್ತರ ಪ್ರದೇಶ ಮತ್ತು ಗುಜರಾತ್) ಕಾಯ್ದೆಗಳ ರೀತಿಯಲ್ಲಿಯೇ ಸಿದ್ಧಪಡಿಸಲಾದ 2020ರ ಕಾಯ್ದೆಯು ಜಾನುವಾರುಗಳ (ಹಸು, ಹಸುವಿನ ಕರು, ಗೂಳಿ, ಎಲ್ಲಾ ವಯಸ್ಸಿನ ಎತ್ತುಗಳು, ಹದಿಮೂರು ವರ್ಷಕ್ಕೂ ಕೆಳಗಿನ ಎಮ್ಮೆಗಳು) ಹತ್ಯೆಯನ್ನು ಮಾತ್ರವಲ್ಲದೆ ಹತ್ಯೆಗಾಗಿ ಜಾನುವಾರುಗಳನ್ನು ಸಾಗಿಸುವುದನ್ನು ಸಹ ನಿಷೇಧಿಸುತ್ತದೆ. ಜಾನುವಾರುಗಳನ್ನು ಸಾಗಿಸುವುದು ಹತ್ಯೆಯ ಸಂಭವನೀಯ ಕ್ರಿಯೆಗೆ ಮುಂಚಿತವಾಗಿ ನಡೆಯುವ ಚಟುವಟಿಕೆಯಾಗಿರುವುದರಿಂದ ಸಾರಿಗೆಯ ಉದ್ದೇಶಿತ ನಿರ್ಣಯವು ಕೆಲವು ಆಂತರಿಕ ತೊಂದರೆಗಳನ್ನುಂಟು ಮಾಡುತ್ತದೆ, ಏಕೆಂದರೆ ಇದು ಕಾನೂನಿನ ಅಡಿಯಲ್ಲಿ ಸಮರ್ಥನೀಯವಾಗಿರುತ್ತದೆ. ಜಾನುವಾರುಗಳ ಸಾಗಣೆಯ ಉದ್ದೇಶವನ್ನು ವ್ಯಾಖ್ಯಾನಿಸುವ 2020ರ ಈ ಕಾಯ್ದೆಯು ‘ಕೃಷಿ ಅಥವಾ ಪಶು ಸಂಗೋಪನೆ ಮಾತ್ರವೇ’ ಎಂದು ಹೇಳುವ ಮೂಲಕ, ಜಾನುವಾರುಗಳನ್ನು ಸಾಗಿಸುತ್ತಿರುವವರ ಉದ್ದೇಶ ಈ ವ್ಯಾಖ್ಯಾನದೊಳಗೆ ಇರಬೇಕು ಎನ್ನುತ್ತಾ ಅದರ ಪ್ರಕ್ರಿಯಾತ್ಮಕ ಭಾರವನ್ನು ಹಾಗೂ ದಾಖಲೆಗಳ ಹೊಣೆಯನ್ನು ಸಾಗಿಸುವವರ ಮೇಲೆ ಹಾಕುತ್ತದೆ.

ಇದರ ಹೊರತು ಇನ್ಯಾವುದೇ ರೀತಿಯ ಜಾನುವಾರು ಸಾಗಣೆಯನ್ನು ನಿಷೇಧಿಸಲಾಗಿದ್ದು, ಒಂದು ವೇಳೆ ಕಂಡು ಬಂದರೆ ಅದಕ್ಕೆ ಕನಿಷ್ಠ 3 ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದು ಎಂಬ ನಿಯಮವನ್ನು ರೂಪಿಸಲಾಗಿದೆ. ಇದರ ಅರ್ಥ ಕಾಯಿಲೆ ಬಿದ್ದಿರುವ ಪ್ರಾಣಿಯನ್ನು ಹೊಂದಿರುವ ರೈತನೊಬ್ಬ ಅದನ್ನು ಸಾಗಿಸುವ ಸಲುವಾಗಿ ಸಾಗಣೆ ದಾಖಲಾತಿಗಳಿಗಾಗಿ ಪಶುವೈದ್ಯಾಧಿಕಾರಿಯನ್ನು ಹುಡುಕಿಕೊಂಡು ಹೋಗಬೇಕು. ಒಂದು ವೇಳೆ ಪಶುವೈದ್ಯಾಧಿಕಾರಿ ಸಿಗದ ಸಂದರ್ಭದಲ್ಲಿ ಆ ರೈತ ಒಂದೋ ತನ್ನ ಜಾನುವಾರು ಸಾಯಲು ಬಿಡಬೇಕು ಅಥವಾ 3 ವರ್ಷ ಜೈಲಿಗೆ ಹೋಗುವ ಅಪಾಯವನ್ನು ತೆಗೆದುಕೊಳ್ಳಬೇಕು. ಉದಾಹರಣೆಗೆ, ಒಬ್ಬ ರೈತ ಪಕ್ಕದ ಗ್ರಾಮದ ಮತ್ತೊಬ್ಬ ರೈತನಿಂದ ಜಾನುವಾರನ್ನು ಖರೀದಿಸಿ, ಅದೇ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ತನ್ನ ಊರಿಗೆ ಅದನ್ನು ಸಾಗಿಸಬೇಕು ಎಂದರೂ ಆತ ಪಶುವೈದ್ಯಾಧಿಕಾರಿಯಿಂದ ಕಾನೂನಾತ್ಮಕವಾಗಿ ಅಗತ್ಯ ದಾಖಲೆಗಳನ್ನು ಪಡೆಯಬೇಕಿದೆ. ಹೀಗೆ, 2020ರ ಕಾಯ್ದೆಯ ಅಡಿಯಲ್ಲಿರುವ ನಿಯಮಗಳು ದೈನಂದಿನ ಜಾನುವಾರು ವ್ಯಾಪಾರವನ್ನು ನಿಷೇಧಾತ್ಮಕವಾಗಿ ಕಷ್ಟಕರ ಹಾಗೂ ಅಪಾಯಕಾರಿ ಮಾಡುತ್ತವೆ.

ಬೀಫ್ ಸೇವಿಸುವುದು, ಮಾರಾಟ ಮಾಡುವುದು ಅಥವಾ ವಶದಲ್ಲಿ ಹೊಂದಿರುವುದನ್ನು ನಿಷೇಧಿಸದೆ ಇದ್ದರೂ  ಹಲವು ಪ್ರಕರಣಗಳಲ್ಲಿ ಕಾನೂನನ್ನು ಉಲ್ಲಂಘಿಸಿದ್ದಾರೆ ಎಂಬ ಸಂಶಯದ ಮೇಲೆ ಬೀಫ್ ಹೊಂದಿರುವವರ ಅಥವಾ ಬೀಫ್ ಮಾರಾಟ ಮಾಡುವವರ ವಿರುದ್ಧ ಈ ಕಾಯ್ದೆಯನ್ನು ಹೊರಿಸಲಾಗಿದೆ. 2020ರ ಈ ಕಾಯ್ದೆಯು ಜಾರಿಗೆ ಬಂದ ನಂತರ (ಅ)ನೈತಿಕ ಪೊಲೀಸ್ಗಿರಿ ಹೆಚ್ಚಾಗಿದ್ದು, ಯಾವುದೇ ಅಂಜಿಕೆಯಿಲ್ಲದೆ ಹೆದ್ದಾರಿಗಳಲ್ಲಿ ಗೂಂಡಾಗಳು ಆಯುಧಗಳನ್ನು ಹಿಡಿದುಕೊಂಡು ಗಸ್ತು ತಿರುಗುವುದು, ಮೂಲೆಗಳಲ್ಲಿ ಅವಿತುಕೊಂಡಿದ್ದು ಜಾನುವಾರು ಸಾಗಾಟ ಮಾಡುವ ವ್ಯಾಪಾರಿಗಳ ಮೇಲೆ ದಾಳಿ ಮಾಡುವುದು ಹೆಚ್ಚಾಗಿದೆ.

ಕೃತ್ಯಗಳ ಸಂಕ್ಷಿಪ್ತ ವಿವರಣೆ

ಮಾರ್ಚ್ 30 ಮತ್ತು ಎಪ್ರಿಲ್ 1ರ ನಡುವಿನ ರಾತ್ರಿ 12 ಗಂಟೆ ಮಧ್ಯರಾತ್ರಿಗೂ ಮುಂಚೆ, 16 ಜಾನುವಾರುಗಳನ್ನು ಸಾಗಿಸಿಕೊಂಡು  ಜಹೀರ್ ಪಾಷಾ ಅವರು ವಾಹನವನ್ನು ಚಲಾಯಿಸುತ್ತಾ ಇರ್ಫಾನ್ ಮತ್ತು ಇದ್ರಿಸ್ ಪಾಷಾ ಅವರ ಜೊತೆ ಬರುತ್ತಿದ್ದಾಗ ಸಾತನೂರಿನ ಸಂತೆಮೇಳ ಸರ್ಕಲ್ ಬಳಿ ಪುನೀತ್ ಕೆರೆಹಳ್ಳಿ ಮತ್ತು ಆತನ 5 ಜನ ಸಹಚರರು ಇವರ ವಾಹನವನ್ನು ಅಡ್ಡಗಟ್ಟಿ ನಿಲ್ಲಿಸುತ್ತಾರೆ. ಸತ್ಯ ಶೋಧನಾ ತಂಡಕ್ಕೆ ನೀಡಿದ ಹೇಳಿಕೆಗಳ ಪ್ರಕಾರ, ಪುನೀತ್ ಕೆರೆಹಳ್ಳಿ ಮತ್ತು ಆತನ ಸಹಚರರು ತಮ್ಮ ಕೈಗಳಲ್ಲಿ ದೊಣ್ಣೆಗಳು ಹಾಗೂ ಕ್ರಿಕೆಟ್ ವಿಕೆಟ್ಗಳನ್ನು ಹೊಂದಿದ್ದರು. ಜಾನುವಾರುಗಳನ್ನು ಸಾಗಿಸುವ ವಾಹನಗಳನ್ನು ಹಿಡಿಯಲೆಂದು ಅವರು ಅಲ್ಲಿ ಬೀಡುಬಿಟ್ಟಿದ್ದರು ಹಾಗೂ ಅವರು ಇಂತಹ ಕೃತ್ಯಗಳಲ್ಲಿ ತೊಡಗಿರುವುದು ಇದೇ ಮೊದಲಲ್ಲ. ಈ ಕೃತ್ಯ ನಡೆದ ಸ್ಥಳ ಸಾತನೂರು ಪೊಲೀಸ್ ಠಾಣೆಗಿಂತ 600 ಮೀಟರ್ಗಿಂತ ಹೆಚ್ಚು ದೂರವಿಲ್ಲ. ಆ ದಿನ ರಾತ್ರಿ ಕೇವಲ ಮೂರು ಜನ ಪೊಲೀಸ್ ಸಿಬ್ಬಂದಿ ಮಾತ್ರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ಪೊಲೀಸ್ ಅಧೀಕ್ಷಕರು ಹೇಳುತ್ತಾರೆ. ಇದಕ್ಕೂ ಮುಂಚೆ ಗಸ್ತು ತಿರುಗಲು ಹೋಗಿದ್ದ ವಾಹನವು ಪುನೀತ್ ಕೆರೆಹಳ್ಳಿಯವರ ವಾಹನವನ್ನು ನೋಡಿರಲಿಲ್ಲ.

ನಿಲ್ಲಿಸಿದ ನಂತರ ಅದರಲ್ಲಿ ಕದ್ದ ಜಾನುವಾರುಗಳನ್ನು ಸಾಗಿಸಲಾಗು ತ್ತಿದೆ ಎಂದು ಪುನೀತ್ ಕೆರೆಹಳ್ಳಿ ಹೇಳುತ್ತಾನೆ. ಇದನ್ನು ನಿರಾಕರಿಸಿದ ಡ್ರೈವರ್, ಜಾನುವಾರುಗಳನ್ನು ಖರೀದಿಸಿದ್ದಕ್ಕೆ ಅವರ ಬಳಿ ಆರ್ಎಂಸಿ ಯಾರ್ಡ್ನಿಂದ ಪಡೆಯಲಾದ ರಶೀದಿಗಳು ಇವೆ ಎಂದು ಹೇಳಿದ ನಂತರವೂ ಇದನ್ನು ಕೇಳದ ಪುನೀತ್ ಕೆರೆಹಳ್ಳಿ ಜಾನುವಾರುಗಳ ಮಾಲಕನಿಗೆ ಫೋನ್ ಮಾಡಿ, 2 ಲಕ್ಷ ರೂ.ಗಳನ್ನು ಕಳುಹಿಸುವಂತೆ ಹೇಳು ಎಂದು ಬೆದರಿಸುತ್ತಾನೆ. ಈ ಬೇಡಿಕೆಗೆ ಒಪ್ಪದ ಇದ್ರಿಸ್ ಪಾಷಾ, ಚಾಲಕನಿಗೆ ವಾಹನ ಚಲಾಯಿಸುವುದಕ್ಕೆ ಹೇಳುತ್ತಾರೆ. ಪೊಲೀಸ್ ಠಾಣೆಯ ಮೂಲಕ ಹಾದು ಹೋಗುವ ರಸ್ತೆಗೆ ವಾಹನ ಬಲ ತಿರುವು ಪಡೆದುಕೊಂಡಾಗ ಅದು 100ರಿಂದ 200 ಮೀಟರ್ ತಲುಪುವಷ್ಟರಲ್ಲಿ ಪುನೀತ್ ಕೆರೆಹಳ್ಳಿ ಮತ್ತು ಆತನ ಸಹಚರರು ವಾಹನವನ್ನು ತಮ್ಮ ಕೈಗಳಲ್ಲಿ ದೊಣ್ಣೆಗಳು ಹಾಗೂ ಕ್ರಿಕೆಟ್ ವಿಕೆಟ್ಗಳನ್ನು ತಿರುಗಿಸುತ್ತಾ, ಅಡ್ಡಗಟ್ಟಿ ನಿಲ್ಲಿಸುತ್ತಾರೆ.

ಈ ಸಂದರ್ಭದಲ್ಲಿ ವಾಹನದಲ್ಲಿದ್ದ ಮೂವರು ಸಹ ದಾಳಿಕೋರರಿಂದ ಜೀವ ಉಳಿಸಿಕೊಳ್ಳಲು ಯತ್ನಿಸುತ್ತಾರೆ. ವಾಹನದ ಎಡ ಬಾಗಿಲಿನ ಬಳಿ ಕುಳಿತಿದ್ದ ಇರ್ಫಾನ್ ಮೊದಲು ಓಡುತ್ತಾರೆ, ಆನಂತರ ಇದ್ರಿಸ್ ಪಾಷಾ ಓಡಲು ಆರಂಭಿಸುತ್ತಾರೆ. ಈ ಇಬ್ಬರೂ ಕತ್ತಲೆಯಲ್ಲಿ ಜೀವ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗ ದಾಳಿಕೋರರು ಅವರ ಬೆನ್ನಟ್ಟುತ್ತಾರೆ. ಇರ್ಫಾನ್ ದಾಳಿಕೋರರಿಂದ ತಪ್ಪಿಸಿಕೊಳ್ಳಲು ಸಫಲರಾಗುತ್ತಾರೆ. ಆದರೆ ಇದ್ರಿಸ್ ಪಾಷಾ ಅವರನ್ನು ಬೆನ್ನಟ್ಟಿ ಹಿಡಿದ ದಾಳಿಕೋರರು ಅವರನ್ನು ಭೀಕರವಾಗಿ ಥಳಿಸುತ್ತಾರೆ. ಅವರ ಕೈಬೆರಳುಗಳ ಮೇಲೆ ಇದ್ದ ಬಾಹ್ಯ ಗುರುತುಗಳು ಅವರ ಮೇಲೆ ಹಲ್ಲೆ ನಡೆಸಲು ವಿದ್ಯುತ್ ಶಾಕ್ ಅನ್ನು ನೀಡಿರುವ ಸಾಧ್ಯತೆ ಇದೆ ಎಂಬುದನ್ನು ಸೂಚಿಸುತ್ತವೆ.

ಈ ನಡುವೆ, ಜಹೀರ್ ಅವರು ದಾಳಿಕೋರರಿಂದ ತಪ್ಪಿಸಿಕೊಂಡು ಅವಿತುಕೊಂಡಿದ್ದಾರೆ. ಅಕ್ಕಪಕ್ಕದಲ್ಲಿ ಯಾವುದೇ ಸದ್ದು ಅವರಿಗೆ ಕೇಳಿಸದಿದ್ದಾಗ, ಅವರು ಹೊರಬರುತ್ತಾರೆ. ಅವರು ಹೊರ ಬರುತ್ತಲೇ ಅವರನ್ನು ಹಿಡಿದುಕೊಂಡ ದಾಳಿಕೋರರು, ಅವರನ್ನು ಹಿಗ್ಗಾಮುಗ್ಗಾ ಥಳಿಸುತ್ತಾರೆ. ಈ ಸಮಯದಲ್ಲಿ ಎಂಟಿಎಂನಿಂದ ಹಣ ತೆಗೆಯಲು ಅಲ್ಲಿಗೆ ಬಂದಿದ್ದ ಸಾತನೂರು ಪೊಲೀಸ್ ಠಾಣೆಯ ಸಿಬ್ಬಂದಿಯೊಬ್ಬರು ಒಬ್ಬ ದಾಳಿಕೋರನನ್ನು ಹಾಗೂ ಜಹೀರ್ ಅವರನ್ನು ಅವರ ದ್ವಿಚಕ್ರ ವಾಹನದ ಮೇಲೆ ಪೊಲೀಸ್ ಠಾಣೆಗೆ ಕರೆದೊಯ್ಯುತ್ತಾರೆ. ಇನ್ನುಳಿದ ದಾಳಿಕೋರರು ಇವರಿಂದ ತಪ್ಪಿಸಿಕೊಂಡ ವಾಹನದ ಇನ್ನಿಬ್ಬರನ್ನು ಹುಡುಕಲು ಹೋಗುತ್ತೇವೆ ಎಂದು ಮಾತನಾಡಿಕೊಳ್ಳುವಾಗ ಕೇಳಿಸಿದೆ. ವ್ಯಕ್ತಿಗಳು ವಿವರಿಸಿದ ಘಟನೆಗಳು ಹಾಗೂ ಅಧಿಕಾರಿಗಳನ್ನು ಸಂದರ್ಶಿಸಿ ಪಡೆದುಕೊಂಡ ಹೇಳಿಕೆಗಳ ಪ್ರಕಾರ, ಸತ್ಯ ಶೋಧನಾ ತಂಡಕ್ಕೆ ತಿಳಿದು ಬಂದ ವಿಚಾರವೆಂದರೆ ಇನ್ನುಳಿದ ದಾಳಿಕೋರರನ್ನು ನಿಲ್ಲಿಸಲು ಅಥವಾ ಅವರನ್ನು ಬಂಧಿಸಲು ಸಾತನೂರು ಪೊಲೀಸರು ಯಾವುದೇ ಪ್ರಯತ್ನವನ್ನು ಮಾಡಿಲ್ಲ ಎಂಬುದು ಸ್ಪಷ್ಟವಾಗಿದೆ. ಪೊಲೀಸ್ ಠಾಣೆಯ ಅಂಗಳದಿಂದಲೇ ಈ ದಾಳಿಕೋರರು ಫೇಸ್ಬುಕ್ ಲೈವ್ ಮಾಡಿದ್ದಾರೆ. ಇನ್ನಿಬ್ಬರು ಸಂತ್ರಸ್ತರನ್ನು ಹುಡುಕಿ, ಅವರಿಗೆ ಸೂಕ್ತ ರಕ್ಷಣೆ ನೀಡುವ ಪ್ರಯತ್ನವನ್ನೂ ಈ ಪೊಲೀಸರು ಮಾಡಿಲ್ಲ. ಆ ಪ್ರದೇಶದ ನಿವಾಸಿಗಳು ಬೆಳಗ್ಗೆ ಪೊಲೀಸ್ ಠಾಣೆಯಿಂದ ಕೇವಲ 500 ಮೀ. ದೂರದಲ್ಲಿ ಬಿದ್ದಿದ್ದ ಇದ್ರಿಸ್ ಪಾಷಾ ಅವರ ಮೃತ ದೇಹವನ್ನು ಕಂಡು ಮಾಹಿತಿ ನೀಡಿದ್ದಾರೆ.

ಈ ಕೃತ್ಯದ ಕುರಿತು ದಾಖಲಾದ ಮೊದಲ ಎಫ್ಐಆರ್ (ಸಿಆರ್ 0052/2023, ಮುಂಜಾನೆ 1:00 ಗಂಟೆ, 01-04-2023) ಪೊಲೀಸ್ ಠಾಣೆಯಿಂದ ಕೇವಲ 500 ಮೀ. ದೂರದಲ್ಲಿ ಬಹಿರಂಗವಾಗಿ ಕಾನೂನನ್ನು ತಮ್ಮ ಕೈಗೆ ತೆಗೆದುಕೊಂಡ ದಾಳಿಕೋರರ ಮೇಲೆ ಆಗಿದ್ದಲ್ಲ ಬದಲಿಗೆ ದಾಳಿಯ ಸಂತ್ರಸ್ತರ ಮೇಲೆ ಆದದ್ದು! ಎರಡನೇ ಎಫ್ಐಆರ್ (ಸಿಆರ್ 0053/2023, ಬೆಳಿಗ್ಗೆ 5:30, 01-04-2023) ಮೊದಲ ಎಫ್ಐಆರ್ ಆದ 4ರಿಂದ 5 ಗಂಟೆಗಳ ನಂತರ ಆರೋಪಿಗಳ ಮೇಲೆ ದಾಖಲಾಯಿತು. ಇಷ್ಟೊತ್ತಿಗಾಗಲೇ ಆರೋಪಿಗಳು ಪೊಲೀಸ್ ಸ್ಟೇಷನ್ನಿಂದ ಹೊರಟು ಹೋಗುವಂತೆ ಮಾಡಲಾಗಿತ್ತು. ಬೆಳಗ್ಗಿನ ಸಮಯದಲ್ಲಿ ಇದ್ರಿಸ್ ಪಾಷಾರವರ ಮೃತ ದೇಹವನ್ನು ಕಂಡು ಹಿಡಿಯುವ ಹೊತ್ತಿಗೆ ಆರೋಪಿಗಳು ಪೊಲೀಸರ ಕೈಗೆಟಕದೆ ಪರಾರಿಯಾಗಿದ್ದರು. ಮೂರನೇ ಎಫ್ಐಆರ್ (ಸಿಆರ್ 0054/2023, 16:00 ಗಂಟೆಗಳು, 01-04-2023) ಅನ್ನು ಸಂಜೆ ಇದ್ರಿಸ್ ಪಾಷಾ ಅವರ ಸಹೋದರ ನೀಡಿದ ಮೇರೆಗೆ ದಾಖಲಿಸಲಾಯಿತು. ಪೊಲೀಸ್ ಸಿಬ್ಬಂದಿಯೊಬ್ಬರು ಕಣ್ಣಾರೆ ಕಂಡ ಹಲ್ಲೆಯ ನಂತರವೂ ಸಂತ್ರಸ್ತರ ದೂರನ್ನು ಪರಿಗಣಿಸದೆ ಮೊದಲು ದಾಳಿಕೋರರ ದೂರನ್ನು ಪುರಸ್ಕರಿಸಲಾಗಿದೆ ಎಂಬುದು ಎಫ್ಐಆರ್ ದಾಖಲಾದ ಕ್ರಮಗಳೇ ಹೇಳುತ್ತವೆ.

ಈ ಪ್ರಶ್ನೆಗಳನ್ನು ಪೊಲೀಸ್ ಅಧೀಕ್ಷಕರ (ರಾಮನಗರ) ಮುಂದಿಟ್ಟಾಗ ಆ ಸಂದರ್ಭದಲ್ಲಿ ಕೇವಲ ಬೆರಳೆಣಿಕೆಯಷ್ಟು (ಮೂರು) ಪೊಲೀಸ್ ಸಿಬ್ಬಂದಿ ಲಭ್ಯವಿದ್ದು, ಆ ಸನ್ನಿವೇಶದಲ್ಲಿ ದೊರಕಿದ ಮಾಹಿತಿ ಹಾಗೂ ಸಂಪನ್ಮೂಲಗಳನ್ನು ಬಳಸಿಕೊಂಡು ಕಾರ್ಯನಿರ್ವಹಿಸಿದ್ದಾರೆ ಎಂದು ಉತ್ತರಿಸಿದ ಪೊಲೀಸ್ ಅಧೀಕ್ಷಕರು ‘‘ಹಿನ್ನೋಟದ ಅನುಕೂಲವಿದೆ ಎಂಬ ಮಾತ್ರಕ್ಕೆ ಕೃತ್ಯಗಳ ಪೋಸ್ಟ್ ಮಾರ್ಟಂ ಮಾಡಬಾರದು’’ ಎಂದೂ ಹೇಳುತ್ತಾರೆ. ಯಾವುದೇ ನಾಗರಿಕರು ಕಾನೂನನ್ನು ಎಂತಹದ್ದೇ ಪರಿಸ್ಥಿತಿಯಲ್ಲಿ ಕೈಗೆ ತೆಗೆದುಕೊಳ್ಳಬಾರದು; ಯಾವುದೇ ಒಂದು ಅಪರಾಧ ನಡೆಯುತ್ತಿರುವುದನ್ನು ಅವರು ನೋಡಿದರೆ ತಕ್ಷಣವೇ ಪೊಲೀಸರ ಗಮನಕ್ಕೆ ತರಬೇಕು ಎಂಬುದನ್ನು ಪೊಲೀಸ್ ಅಧೀಕ್ಷಕರು ಒತ್ತಿ ಹೇಳಿದರು. ಇದು ನಿಜವೇ ಆದರೆ, ಯಾಕೆ ಸಾತನೂರು ಪೊಲೀಸರು ತಕ್ಷಣವೇ ದಾಳಿಕೋರರನ್ನು ಪೊಲೀಸ್ ಠಾಣೆಯಲ್ಲಿಯೇ ಬಂಧಿಸಲಿಲ್ಲ? ಇದು ಇದ್ರಿಸ್ ಪಾಷಾ ಅವರ ಪ್ರಾಣವನ್ನು ಕಾಪಾಡಬಹುದಾಗಿತ್ತು ಅಥವಾ ಸಮಯಕ್ಕೆ ಸರಿಯಾಗಿ ಅವರನ್ನು ಆಸ್ಪತ್ರೆಗೆ ಸೇರಿಸಲಾದರೂ ನೆರವಾಗುತ್ತಿತ್ತು.

ಗಮನಿಸಲಾದ ಪ್ರಮುಖ ಅಂಶಗಳು

ಈ ಮೇಲಿನ ಹೇಳಿಕೆಗಳು ಹಾಗೂ ಸತ್ಯಾಂಶಗಳಿಂದ ಕಂಡುಬರುವುದೇನೆಂದರೆ, ಹಣ ಸುಲಿಗೆ ಮಾಡುವ ಹಾಗೂ ಮುಸ್ಲಿಮ್ ಸಮುದಾಯವನ್ನು ಗುರಿಯಾಗಿಸಿ ದಾಳಿ ನಡೆಸುವ ಉದ್ದೇಶದಿಂದ ಸಮಾಜ ವಿರೋಧಿ ಗುಂಪುಗಳು ಬಹಿರಂಗವಾಗಿ ಕಾನೂನನ್ನು ಕೈಗೆತ್ತಿಕೊಂಡಿವೆ. ಪೊಲೀಸರ ಯಾವುದೇ ಭಯವಿಲ್ಲದೆ ಪೊಲೀಸ್ ಠಾಣೆಯ ಹತ್ತಿರವೇ ಮೂರು ಜನ ನಾಗರಿಕರ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾರೆ. ಆದರೆ ಪೊಲೀಸರು ತಕ್ಷಣವೇ ಈ ದಾಳಿಕೋರರನ್ನು ಬಂಧಿಸುವ ಬದಲು ಇನ್ನುಳಿದ ಸಂತ್ರಸ್ತರನ್ನು ಹುಡುಕಲು ದಾಳಿಕೋರರನ್ನು ಬಿಟ್ಟಿದ್ದಾರೆ. ಪೊಲೀಸ್ ಠಾಣೆಯ ಸಿಬ್ಬಂದಿಯೊಬ್ಬರು ಸಂತ್ರಸ್ತರ ಮೇಲೆ ನಡೆಯುತ್ತಿದ್ದ ಹಲ್ಲೆಯನ್ನು ಕಣ್ಣಾರೆ ಕಂಡ ನಂತರ ಹಾಗೂ ಪೊಲೀಸ್ ಠಾಣೆ ಹೊರಗೆ ಸ್ವತಃ ದಾಳಿಕೋರರೇ ಫೇಸ್ಬುಕ್ ಲೈವ್ ಮಾಡಿದರೂ ದಾಳಿಕೋರರನ್ನು ಬಂಧಿಸಿರುವುದಿಲ್ಲ. ಸತ್ಯ ಶೋಧನಾ ತಂಡವು ಸಂಗ್ರಹಿಸಿದ ಹೇಳಿಕೆಗಳ ಆಧಾರದ ಮೇಲೆ, ಈ ಕೆಳಗಿನ ಅಂಶಗಳನ್ನು ಗಮನಿಸಬೇಕಾಗಿದೆ:

1. ವಾಹನಗಳನ್ನು ಅಡ್ಡಗಟ್ಟಿ ನಿಲ್ಲಿಸಿ, ಪೊಲೀಸ್ ಠಾಣೆಯ ಹತ್ತಿರವೇ ಹಣ ಸುಲಿಗೆ ಮಾಡುವುದು ಹಾಗೂ ಪೊಲೀಸರು ಸಂತ್ರಸ್ತರ ರಕ್ಷಣೆಗೆ ಕಾಳಜಿ ವಹಿಸದಿರುವುದು ಈ ಗೂಂಡಾಗಳು ಎಷ್ಟು ನಿರ್ಭೀತಿಯಿಂದ ಇದನ್ನೆಲ್ಲಾ ಮಾಡುತ್ತಿದ್ದಾರೆ ಎಂಬುದನ್ನು ಸೂಚಿಸುತ್ತದೆ. ತಕ್ಷಣವೇ ಪೊಲೀಸರು ಎಲ್ಲಾ ದಾಳಿಕೋರರನ್ನು ಬಂಧಿಸಿ ಸಂತ್ರಸ್ತರನ್ನು ಹುಡುಕಿದ್ದರೆ, ಇದ್ರಿಸ್ ಪಾಷಾ ಅವರ ಪ್ರಾಣವನ್ನು ಉಳಿಸುವುದು ಸಾಧ್ಯವಿತ್ತು. ಇದಕ್ಕೂ ಮುಂಚೆ ಇಂತಹದ್ದೇ ಕೃತ್ಯಗಳಲ್ಲಿ ಪುನೀತ್ ಕೆರೆಹಳ್ಳಿ ಮತ್ತು ಆತನ ಸಹಚರರು ತೊಡಗಿಸಿಕೊಂಡಿದ್ದರೂ,  ಪದೇ ಪದೇ ಅಪರಾಧಗಳನ್ನು ಮಾಡುವ ಅಪರಾಧಿಗಳನ್ನು ಸದೆ ಬಡಿಯುವಲ್ಲಿ ಪೊಲೀಸರ ವೈಫಲ್ಯ ಹಾಗೂ ನಿಷ್ಕ್ರಿಯತೆ ಸ್ಪಷ್ಟವಾಗುತ್ತದೆ.

2. ಆರೋಪಿಯ ಮೇಲೆ ಹಣ ಸುಲಿಗೆ ಯತ್ನದಂತಹ ಆರೋಪಗಳಿದ್ದರೂ, ಮೂರನೇ ಎಫ್ಐಆರ್ (ಸಿಆರ್ 0054/2023) ನಲ್ಲಿ ಭಾರತೀಯ ದಂಡ ಸಂಹಿತೆಯ ಪ್ರಮುಖ ಸೆಕ್ಷನ್ಗಳನ್ನು ಸೇರಿಸಿರುವುದಿಲ್ಲ.

3. ಬದುಕುಳಿದ ಸಂತ್ರಸ್ತರ ಸಹಿಗಳನ್ನು ಬಿಳಿ ಹಾಳೆಯ ಮೇಲೆ ಪೊಲೀಸರು ಪಡೆದುಕೊಂಡಿದ್ದಾರೆ ಎಂಬುದು ಸತ್ಯಶೋಧನಾ ತಂಡದ ಗಮನಕ್ಕೆ ಬಂದಿದೆ.

4. ಬದುಕುಳಿದಿರುವ ಸಂತ್ರಸ್ತರು ಪ್ರತ್ಯಕ್ಷ ಸಾಕ್ಷಿಗಳೂ ಆಗಿದ್ದು, ಅಪರಾಧ ಸ್ಥಳದ ಮಹಜರು ಸಂದರ್ಭದಲ್ಲಿ ಹಾಜರಿರಲಿಲ್ಲ ಹಾಗೂ ಪೊಲೀಸರು ಸಿಆರ್ಪಿಸಿ ಸೆಕ್ಷನ್ 164ರ ಪ್ರಕಾರ ಪ್ರತ್ಯಕ್ಷದರ್ಶಿಗಳನ್ನು ಹೇಳಿಕೆ ನೀಡಲು ಮ್ಯಾಜಿಸ್ಟ್ರೇಟ್ ಮುಂದೆ ಹಾಜರು ಪಡಿಸಲಿಲ್ಲ ಎಂಬುದು ಸತ್ಯಶೋಧನಾ ತಂಡದ ಗಮನಕ್ಕೆ ಬಂದಿದೆ.

5. ಮೃತರ ಕುಟುಂಬಕ್ಕೆ ಪೋಸ್ಟ್ ಮಾರ್ಟಂ ವರದಿಯ ಪ್ರತಿಯನ್ನು ನೀಡಿರುವುದಿಲ್ಲ.

ಶಿಫಾರಸುಗಳು

ಈ ಮೇಲಿನ ಸತ್ಯಾಂಶಗಳು ಹಾಗೂ ಗಮನಿಸಲಾದ ಅಂಶಗಳ ಆಧಾರದ ಮೇಲೆ, ಸತ್ಯ ಶೋಧನಾ ತಂಡ ಈ ಕೆಳಗಿನ ಶಿಫಾರಸುಗಳನ್ನು ಮಾಡಲಿಚ್ಛಿಸಿದೆ.

ಪೊಲೀಸ್ ಇಲಾಖೆಗೆ:

1. ತನಿಖೆ:

ಈ ಕೃತ್ಯದಲ್ಲಿ ಸ್ವತಂತ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಯುವಂತೆ ಖಾತ್ರಿಪಡಿಸಿಕೊಳ್ಳಬೇಕು.

2. ಪರಿಹಾರ:

ಇದ್ರಿಸ್ ಪಾಷಾ ಅವರ ಕುಟುಂಬಕ್ಕೆ 10 ಲಕ್ಷ ರೂಪಾಯಿಗಳ ಪರಿಹಾರವನ್ನು ನೀಡಬೇಕು.

3. ಪೋಸ್ಟ್ ಮಾರ್ಟಂ ವರದಿ

ತಕ್ಷಣವೇ ಪೋಸ್ಟ್ ಮಾರ್ಟಂ ವರದಿಯ ಪ್ರತಿ ಒಂದನ್ನು ಮೃತರ ಕುಟುಂಬಕ್ಕೆ ನೀಡಬೇಕು.

4. ಪೊಲೀಸ್ ಠಾಣೆಗಳಿಗೆ ನಿರ್ದೇಶನಗಳು

ಕಾನೂನನ್ನು ಕೈಗೆತ್ತಿಕೊಳ್ಳುವ ಸಮಾಜ-ವಿರೋಧಿ ಅಂಶಗಳನ್ನು ತಕ್ಷಣವೇ ಬಂಧಿಸುವಂತೆ ಎಲ್ಲಾ ಪೊಲೀಸ್ ಠಾಣೆಗಳಿಗೆ ನಿರ್ದೇಶನವನ್ನು ನೀಡಬೇಕು.

5. ಹೇಳಿಕೆಯನ್ನು ದಾಖಲಿಸಿಕೊಳ್ಳಬೇಕು

ತಕ್ಷಣವೇ ಸಿಆರ್ಪಿಸಿ ಸೆಕ್ಷನ್ 164ರ ಅಡಿಯಲ್ಲಿ ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ದಾಖಲಿಸಿಕೊಳ್ಳಬೇಕು.

6. ಇಲಾಖಾ ತನಿಖೆ

ಈ ಕೃತ್ಯದಲ್ಲಿ ಉಂಟಾಗಿರುವ ಪೊಲೀಸ್ ವೈಫಲ್ಯದ ಕುರಿತು ಇಲಾಖಾ ತನಿಖೆಯನ್ನು ಆದೇಶಿಸಬೇಕು.

7. ಎಫ್ಐಆರ್ಗಳ ಸುಮೊಟೋ ನೋಂದಣಿ

ಬೆದರಿಕೆಯನ್ನು ಹಾಕುವಂತಹ ವಿಡಿಯೋಗಳು ಅಥವಾ ಹಿಂಸಾತ್ಮಕ ಕ್ರಿಯೆಗಳನ್ನು ಹಾಗೂ ಕಿರುಕುಳವನ್ನು ಪ್ರಚೋದಿಸುವ ಅಂಶಗಳು ಬೆಳಕಿಗೆ ಬಂದ ಕೂಡಲೇ, ಪೊಲೀಸರು ಅದನ್ನು ಪರಿಗಣನೆಗೆ ತೆಗೆದುಕೊಂಡು ಅವುಗಳ ವಿರುದ್ಧ ಸುಮೊಟೋ ಎಫ್ಐಆರ್ಗಳನ್ನು ದಾಖಲಿಸಬೇಕು.

ರಾಜ್ಯ ಸರಕಾರಕ್ಕೆ:

1. ಕಾಯ್ದೆಯನ್ನು ರದ್ದುಗೊಳಿಸಿ

ಕರ್ನಾಟಕ ಜಾನುವಾರು ಹತ್ಯೆ ನಿಷೇಧ ಮತ್ತು ಸಂರಕ್ಷಣಾ ಕಾಯ್ದೆ, 2020 ಜೀವನೋಪಾಯಗಳನ್ನು ನಾಶಮಾಡುತ್ತಿರುವ ಹಿನ್ನೆಲೆಯಲ್ಲಿ ಈ ಕಾಯ್ದೆಯನ್ನು ತಕ್ಷಣವೇ ರದ್ದುಪಡಿಸಬೇಕು.

2. ಪ್ರಕರಣಗಳನ್ನು ಹಿಂಪಡೆಯಿರಿ

2020ರ ಕಾಯ್ದೆಯಡಿ ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನು ಹಿಂಪಡೆಯಿರಿ.

3. ತಡೆಗಟ್ಟುವ ಕ್ರಮಗಳು

ದ್ವೇಷದ ಅಪರಾಧಗಳನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಇವುಗಳನ್ನು ತಡೆಗಟ್ಟುವ, ಪರಿಹಾರಾತ್ಮಕ ಹಾಗೂ ದಂಡನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಖಾತ್ರಿಪಡಿಸಿಕೊಳ್ಳಲು ಘನತೆವೆತ್ತ ಸರ್ವೋಚ್ಛ ನ್ಯಾಯಾಲಯವು ತೆಹ್ಸೀನ್ ಪೂನಾವಾಲ ವರ್ಸಸ್ ಯೂನಿಯನ್ ಆಫ್ ಇಂಡಿಯಾ (ಎಐಆರ್ 2018 ಎಸ್ಸಿ 3354) ಪ್ರಕರಣದಲ್ಲಿ ನೀಡಿರುವ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನೋಡಿಕೊಳ್ಳಬೇಕು. ಪ್ರತಿಯೊಂದು ಜಿಲ್ಲೆಯಲ್ಲಿ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಲು ನೋಡಲ್ ಅಧಿಕಾರಿಗಳನ್ನು ನೇಮಿಸುವುದು, ಯಾವುದೇ ತಡಮಾಡದೆ ಎಫ್ಐಆರ್ಗಳನ್ನು ದಾಖಲ�

Similar News