ಅನಿರ್ದಿಷ್ಟವಾಗಿ ಮುಂದೂಡಲಾದ 16ನೇ ಜನಗಣತಿ

Update: 2023-06-03 04:46 GMT

2011ರ ಬಳಿಕದ ಜನಗಣತಿ 2021ರಲ್ಲಿ ಆಗಬೇಕಿತ್ತು. ಅದರ ತಯಾರಿ ನಡೆಯುತ್ತಿದ್ದಂತೆ, ಕೊರೋನದ ಹಾವಳಿ ದೇಶದ ಅನೇಕ ಚಟುವಟಿಕೆಗಳನ್ನು ಸ್ತಬ್ಧಗೊಳಿಸಿತು (ಹಾಗಿದ್ದರೂ ಕೆಲವು ರಾಜ್ಯಗಳಲ್ಲಿ ಚುನಾವಣೆಗಳನ್ನು ಕೈಗೊಳ್ಳಲಾಯಿತು.) 2022ರಲ್ಲಿ ದೇಶ ಮತ್ತೆ ಸಾಮಾನ್ಯ ಸ್ಥಿತಿಗೆ ಮರಳಿತು ಎಂದು ಸರಕಾರವೇ ಹೇಳಿಕೊಂಡಿದೆ. 2022 ಮುಗಿದು ಈಗ 2023-24ನೇ ವರ್ಷ ಆರಂಭವಾಗಿದೆ. ಇನ್ನೂ ಜನಗಣತಿಯನ್ನು ಮತ್ತೆ ಆರಂಭಿಸುವ ಇರಾದೆ ಸರಕಾರಕ್ಕೆ ಇದ್ದಂತೆ ಕಾಣುವುದಿಲ್ಲ.

1881ರಿಂದ ಹತ್ತು ವರ್ಷಗಳಿಗೊಮ್ಮೆ ನಿರಂತರವಾಗಿ ನಡೆಯುತ್ತಿದ್ದ ಭಾರತದ ಜನಗಣತಿ (Census-ಸೆನ್ಸಸ್) ಅಥವಾ ಖಾನೇಶುಮಾರಿ  ಪ್ರಕ್ರಿಯೆ ಈಗ ಸ್ಥಗಿತಗೊಂಡಿದೆ. ಕೊನೆಯ, ಅಂದರೆ 15ನೆಯ ಜನಗಣತಿ 2011ರಲ್ಲಿ ಆಗಿತ್ತು. 16ನೆಯ ಜನಗಣತಿ 2021ಕ್ಕೆ ನಡೆಯಬೇಕಿತ್ತು. 2020ರ ಆರಂಭದಲ್ಲಿ ದೇಶದ ಜನಗಣತಿಯ ಜವಾಬ್ದಾರಿ ಹೊತ್ತ ಕೇಂದ್ರ ಗೃಹ ಸಚಿವಾಲಯದ ಅಧೀನಸ್ಥ ರಾಷ್ಟ್ರೀಯ ಮುಖ್ಯ ನೋಂದಣಿ ಅಧಿಕಾರಿ ಮತ್ತು ಜನಗಣತಿ ಆಯುಕ್ತರ ಕಚೇರಿ (ಆರ್‌ಜಿಸಿಸಿ-Office of the Registrar General and Census Commissioner)2019ರಲ್ಲಿಯೇ ಪ್ರಕ್ರಿಯೆಯ ಆರಂಭದ ಕುರಿತು ಅಧಿಕೃತ ಸೂಚನೆಯನ್ನು ಹೊರಡಿಸಿದ್ದರು. ಜನಗಣತಿಯ ಪೂರ್ವಭಾವಿಯಾಗಿ 2020 ಎಪ್ರಿಲ್ನಿಂದ ದೇಶದಾದ್ಯಂತ ಮನೆಗಳ ಗಣತಿ ಆರಂಭವಾಗಲಿತ್ತು. ಈ ಗಣತಿಯ ತಯಾರಿ ನಡೆಯುತ್ತಿದ್ದಂತೆ ಕೊರೋನ ಸಾಂಕ್ರಾಮಿಕದ  ದಾಳಿಗೆ ದೇಶ ತತ್ತರಿಸಿತು; ಲಾಕ್ಡೌನ್ನಿಂದ ಎಲ್ಲ ಚಟುವಟಿಕೆಗಳು ಸ್ಥಗಿತವಾದವು. ಕೊರೋನದ ಎರಡನೆಯ ಅಲೆಯಿಂದ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತು. ಈ ಕಾರಣವನ್ನು ನೀಡಿ ಘೋಷಿತ ಜನಗಣತಿಯನ್ನು ಮುಂದೂಡಲಾಯಿತು.

2021ರಲ್ಲಿ ದೇಶದ ಪರಿಸ್ಥಿತಿ ಸುಧಾರಿಸಿ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಚಟುವಟಿಕೆಗಳು ಮತ್ತೆ ಆರಂಭವಾದವು-ಮಾತ್ರವಲ್ಲ ಕೆಲವು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳೂ ನಡೆದವು. ಈ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟ ಖಾನೇಶುಮಾರಿಗೆ ಕೇಂದ್ರದ ಆರ್ಜಿಸಿಸಿ ಮರುಚಾಲನೆ ಕೊಡಬಹುದೆಂದು ಬಲ್ಲವರ ಅಭಿಪ್ರಾಯವಾಗಿತ್ತು. ಆದರೆ, ಹೊಸ ಆರ್ಥಿಕ ವರ್ಷ-2023-24 ಆರಂಭವಾದ ಬಳಿಕವೂ ಜನಗಣತಿಯ ಪ್ರಕ್ರಿಯೆ ಕುರಿತಾದ ಸೂಚನೆಗಳೇ ಇಲ್ಲ.

ಈ ವರ್ಷ ಇನ್ನೂ ಕೆಲವು ರಾಜ್ಯಗಳ ವಿಧಾನ ಸಭೆಗಳಿಗೆ ಚುನಾವಣೆಗಳು ಆಗಲಿವೆ. ಮುಂದಿನ ವರ್ಷ ಮೇ ತಿಂಗಳ ಒಳಗಾಗಿ ಲೋಕಸಭೆಯ ಚುನಾವಣೆ ಆಗಬೇಕು. ಚುನಾವಣೆಯಾಗಲಿರುವ ವರ್ಷ ಪೂರ್ಣಪ್ರಮಾಣದ ಆಯವ್ಯಯ ಪತ್ರ-ಬಜೆಟನ್ನು ಕೇಂದ್ರ ಸರಕಾರ ಮಂಡಿಸುವುದಿಲ್ಲ. ಹಾಗಾಗಿ ಜನಗಣತಿಗೆ ಅಗತ್ಯವಾದ ಸುಮಾರು 10,000 ಕೋಟಿ ರೂ.ಗಳ ಅನುದಾನಕ್ಕಾಗಿ 2024ರ ಮುಖ್ಯ ಬಜೆಟಿಗೆ ಕಾಯಬೇಕು. ಹಣಕಾಸಿನ ಕೊರತೆಯಿಂದ ಆರ್ಜಿಸಿಸಿ ಜನಗಣತಿಯ ಕಾರ್ಯಕ್ರಮವನ್ನು ಆರಂಭಿಸುವಂತಿಲ್ಲ. ಇವೆಲ್ಲದರ ಒಟ್ಟು ಅರ್ಥ 2021ರಲ್ಲಿ ಆಗಬೇಕಾದ ದಶವಾರ್ಷಿಕ ಜನಗಣತಿ ಅನಿರ್ದಿಷ್ಟವಾಗಿ ಮುಂದೂಡಲ್ಪಡುತ್ತದೆ.

►ಜನಗಣತಿಯ ಸ್ಥೂಲ ಚರಿತ್ರೆ

ಭಾರತದಲ್ಲಿ ಸಂಪೂರ್ಣ ಜನಗಣತಿಯ ಪದ್ಧತಿ 1881ರಿಂದ ಆರಂಭವಾಯಿತು. ಆಗ ಬ್ರಿಟಿಷರ ವಸಾಹತುವಾಗಿದ್ದರೂ ದೇಶದ ಬಗ್ಗೆ ನಿಖರವಾದ ಮಾಹಿತಿಯ ಅಗತ್ಯವನ್ನು ಅರಿತ ಆಗಿನ ಸರಕಾರ ಅಧಿಕೃತವಾಗಿ 10 ವರ್ಷಗಳಿಗೊಮ್ಮೆ 1941ರ ತನಕವೂ ಜನಗಣತಿಯನ್ನು ಕೈಗೊಂಡಿತು. ಸ್ವಾತಂತ್ರ್ಯದ ನಂತರ 1948ರಲ್ಲಿ ಹೊಸ ಸರಕಾರವು ‘ಭಾರತದ ಜನಗಣತಿ ವಿಧಿ’ (Indian Census Act) ಅನ್ನು ಊರ್ಜಿತಗೊಳಿಸಿ ಈ ಪ್ರಕ್ರಿಯೆಯನ್ನು ಮುಂದುವರಿಸಲು ಶಾಸನಾತ್ಮಕ ಅಧಿಕಾರವನ್ನು ನೀಡಿತು. 1951ರಿಂದ 10ವರ್ಷಗಳಿಗೊಮ್ಮೆ ಖಾನೇಶುಮಾರಿಯನ್ನು ಮುಂದುವರಿಸಿತು. ಕೊನೆಯ ಜನಗಣತಿ 2011ರಲ್ಲಿ ನಡೆಯಿತು.

ಭಾರತದ ಜನಗಣತಿಯ ಪ್ರಕ್ರಿಯೆ ವಿಶ್ವದಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ. ಇಷ್ಟು ವಿಶಾಲವಾದ ದೇಶದಲ್ಲಿ, ಸರಿಯಾದ ಸಾರಿಗೆ ಸಂಪರ್ಕವೂ ಇಲ್ಲದ ಗುಡ್ಡಬೆಟ್ಟ, ಕಾಡುಮೇಡುಗಳಲ್ಲಿರುವ, ಓದುಬರಹದ ಗಂಧಗಾಳಿಯೂ ಇಲ್ಲದ ಜನರನ್ನು ಜನಗಣತಿಯ ಅಧಿಕಾರಿಗಳು ಸಂಪರ್ಕಿಸಿ ಮಾಹಿತಿಯನ್ನು ಕಲೆಹಾಕುವ ಕೌಶಲ ಅನನ್ಯವೆನ್ನಬೇಕು. ಮಾತ್ರವಲ್ಲ ನಮ್ಮ ಜನಗಣತಿಯಲ್ಲಿ ಅಡಕವಾಗಿರುವ ಮಾಹಿತಿಗಳು ನಂಬಲರ್ಹವೆಂಬ ಕೀರ್ತಿಯೂ ಭಾರತದ ಜನಗಣತಿಗೆ ಲಭಿಸಿತ್ತು.

ಜನಗಣತಿಯ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂಬ ಪ್ರಶ್ನೆಯೂ ಇಲ್ಲಿ ಪ್ರಸ್ತುತವಾಗುತ್ತದೆ. ಯಾವ ವರ್ಷ ಗಣತಿಯಾಗಬೇಕೋ ಅದರ ಸುಮಾರು ಒಂದು ವರ್ಷ ಮೊದಲೇ ಗಣತಿದಾರರು (Enumerators -ಎನ್ಯೂಮರೇಟರ್ಸ್) ದೇಶದಾದ್ಯಂತ ಮನೆಗಳ ಗುರುತು ಹಿಡಿದು ಅವುಗಳಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಕಲೆಹಾಕುತ್ತಾರೆ. ಎರಡನೇ ಹಂತದಲ್ಲಿ ಗುರುತು ಹಾಕಿದ ಮನೆಗಳಿಗೆ ಅವರ ತಂಡಗಳು ತೆರಳಿ ಪ್ರತಿಯೊಂದು ಮನೆಯ ಎಲ್ಲ ಜನರ ಸಂಪೂರ್ಣ ವಿವರಗಳನ್ನು ವಿಚಾರಿಸಿ ದಾಖಲಿಸುತ್ತಾರೆ. ಪ್ರತಿಯೊಂದು ಮನೆ/ಕುಟುಂಬದ ಮಾಹಿತಿಗಳನ್ನು ಸಂಗ್ರಹಿಸಿದ ಬಳಿಕ ಅವುಗಳನ್ನು ಕ್ರೋಡೀಕರಿಸಬೇಕು. ಆ ಪ್ರಕ್ರಿಯೆಗೂ ಕಾಲ ಬೇಕಾಗುತ್ತದೆ. ಇವೆಲ್ಲ ಕೆಲಸ ಮುಗಿಯಲು ಕನಿಷ್ಠ ಎರಡು ವರ್ಷಗಳು ಬೇಕಾಗಬಹುದು. ಈಗಾಗಲೇ ರಾಷ್ಟ್ರೀಯ ವಿಶಿಷ್ಟ ಗುರುತು ಚೀಟಿಯ ಪ್ರಾಧಿಕಾರದಲ್ಲಿ ಆಧಾರ್ ಕಾರ್ಡು ಹೊಂದಿದವರ ಬಗ್ಗೆ ಸಾಕಷ್ಟು ಮಾಹಿತಿ ಇದ್ದರೂ ಅದರ ನಿಖರತೆಯ ಹಾಗೂ ವಿಸ್ತಾರದ ಕುರಿತು ಪೂರ್ತಿ ವಿಶ್ವಾಸವಿಲ್ಲ. ದೇಶದಾದ್ಯಂತ ಜನಗಣತಿಯ ಮೂಲಕ ಸಂಗ್ರಹಿಸುವ ಮಾಹಿತಿಯೇ ನಂಬಲರ್ಹವಾಗಿರುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಷಯ.

►ನಿಖರವಾದ ಮಾಹಿತಿಯ ಅಗತ್ಯ

ಎರಡನೆಯ ಪ್ರಮುಖ ಪ್ರಶ್ನೆ ಜನಗಣತಿಯ ಉದ್ದೇಶ ಮತ್ತು ಅದರ ಉಪಯುಕ್ತತೆ ಏನು? 

ಆಧುನಿಕ ಯುಗದಲ್ಲಿ ದೇಶದೊಳಗಿನ ಪ್ರಜೆಗಳ ಸರ್ವಾಂಗೀಣ ಪ್ರಗತಿಯನ್ನು ಸಾಧಿಸುವಲ್ಲಿ ಸರಕಾರದ ಪಾತ್ರ ಗಣನೀಯವಾಗಿದೆ. ಸರಕಾರ ಮತ್ತು ಅದರ ಅಂಗಸಂಸ್ಥೆಗಳು ಸಮಾಜದ ವಿವಿಧ ವರ್ಗಗಳ ಬೇಕು ಬೇಡಗಳನ್ನು ಗಮನಿಸಿ, ಆ ಬಳಿಕ ಸೂಕ್ತವಾದ ಕಾರ್ಯಕ್ರಮವನ್ನು ಅಥವಾ ಯೋಜನೆಯನ್ನು ಕೈಗೊಳ್ಳಬೇಕಾಗುತ್ತದೆ. ಇಂತಹ ಕಾರ್ಯಕ್ರಮವನ್ನು ರೂಪಿಸಲು ನಿಖರವಾದ ಮಾಹಿತಿ ಅತೀ ಅಗತ್ಯ.

ಉದಾಹರಣೆಗೆ ದೇಶದಲ್ಲಿ ಎಷ್ಟು ಮಂದಿಗೆ ಓದುಬರಹವಿಲ್ಲ, ಎಷ್ಟು ಮಂದಿ ಉಚ್ಚ ಶಿಕ್ಷಣದಿಂದ ವಂಚಿತರಾಗಿದ್ದಾರೆಂದು ತಿಳಿದಿದ್ದರೆ, ಅದನ್ನು ಸರಿಮಾಡಲು ಹೊಸ ಶಾಲೆಗಳು ಬೇಕೆ, ಇರುವ ಶಾಲೆಗಳಲ್ಲಿ ಏನು ಕೊರತೆ ಇದೆ, ಎಲ್ಲಿ ಅಗತ್ಯವಿದೆ, ಕಾಲೇಜುಗಳು ಬೇಕೆ ಇತ್ಯಾದಿ ಮೂಲ ಸೌಕರ್ಯಗಳ ಕುರಿತು ಸರಕಾರಕ್ಕೆ ನಿರ್ಧರಿಸಲು ಸುಲಭವಾಗುತ್ತದೆ. ಅದೇ ರೀತಿ ಒಂದು ಪ್ರದೇಶದಲ್ಲಿ ಅಕಾಲಮೃತರಾಗುವವರ ಪ್ರಮಾಣ ಹೆಚ್ಚಿದ್ದರೆ ಅದಕ್ಕೆ ಕಾರಣವೇನು ಎಂಬುದನ್ನು ಜನಗಣತಿಯ ಮೂಲಕ ಅರಿತು ಕೊಳ್ಳಬಹುದು. ಆ ಬಳಿಕ ಅಗತ್ಯದ ಪರಿಹಾರ ಕಾರ್ಯಕ್ರಮವನ್ನು ರೂಪಿಸಬಹುದು.

ದೇಶದ ಜನತೆಯ ಬಗೆಗಿನ ಸಾಮಾಜಿಕ ಮತ್ತು ಆರ್ಥಿಕ ಮಾಹಿತಿಗಳನ್ನು ಜನಗಣತಿಯ ಮೂಲಕ ಪಡೆಯಲು ಸಾಧ್ಯವಾಗುತ್ತದೆ: ಜನಸಂಖ್ಯೆಯ ಬೆಳವಣಿಗೆ, ಜಾತಿವಾರು ಮತ್ತು ಧರ್ಮಾಧಾರಿತ ವಿಂಗಡಣೆ, ಲಿಂಗಾನುಪಾತ, ಪ್ರತಿಯೊಂದು ಭಾಷೆಯನ್ನು ಮಾತನಾಡುವವರ ಮಾಹಿತಿ, ಜನನ-ಮರಣಗಳ ಸಂಖ್ಯೆ, ಅವರ ವಿದ್ಯಾಭ್ಯಾಸದ ಮಟ್ಟ, ಅವರ ಉದ್ಯೋಗ ಅಥವಾ ತಾವು ತೊಡಗಿಸಿಕೊಂಡಿರುವ ಸಂಪಾದನೆಯ ಮಾರ್ಗಗಳು-ಮುಂತಾದ ಮಾಹಿತಿಗಳು ನಿಖರವಾಗಿ ಜನಗಣತಿಯ ಮೂಲಕ ಸರಕಾರಕ್ಕೆ ಸಿಗುತ್ತದೆ. 

ದೇಶವಾಸಿಗಳ ಆದಾಯ ಮತ್ತು ಅದರ ಮೂಲದ ಬಗ್ಗೆ ವಿವರಗಳು ಬಡತನವನ್ನು ಗುರುತು ಹಚ್ಚಲು ಅಗತ್ಯ. ಒಂದು ಕಾಲಾವಧಿಯಲ್ಲಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಜನರ ಪ್ರಗತಿಯಾಗಿದೆಯೇ ಎಂಬುದನ್ನು ತುಲನೆಮಾಡಿ ಆ ಮೂಲಕ ದೇಶದ ಆರ್ಥಿಕ ನೀತಿ ಸರಿಯಾದ ದಾರಿಯಲ್ಲಿ ಸಾಗುತ್ತಿದೆಯೇ ಎಂಬುದನ್ನು ವಿಶ್ಲೇಷಿಸಲು ನಿಖರವಾದ ಮಾಹಿತಿ ಇದ್ದರೆ ಸಾಧ್ಯವಾಗುತ್ತದೆ. ಯಾವುದಾದರೂ ಪಂಗಡಗಳು ನಿರಂತರವಾಗಿ ಹಿಂದುಳಿದಿದ್ದರೆ ಅವರ ವಿಕಾಸಕ್ಕೆ ದಾರಿಯನ್ನು ಹುಡುಕಲು ಮಾಹಿತಿ ಅನುಕೂಲಮಾಡುತ್ತದೆ.  ಅದೇ ರೀತಿ ಜನರಿಗೆ ಉಪಯೋಗವಾಗುವ ಯೋಜನೆಗಳು ಅನುಷ್ಠಾನವಾಗಿವೆಯೇ ಇಲ್ಲವೇ ಎಂದು ಕೂಡ ಫಲಾನುಭವಿಗಳ ಕುರಿತಾದ ಅಗತ್ಯ ಮಾಹಿತಿಯಿಂದ ಅರಿತುಕೊಳ್ಳಬಹುದು.

►ಆರ್ಥಿಕ ಹಾಗೂ ಸಾಮಾಜಿಕ ಅಧ್ಯಯನ ಮತ್ತು ಸಂಶೋಧನೆಗಳಿಗೆ ಪೂರಕ:

ದೇಶದ ಪ್ರಗತಿಗೆ ನಿರಂತರ ಸಾಮಾಜಿಕ ಅಧ್ಯಯನಗಳನ್ನು ನಡೆಸುವ ಅಗತ್ಯವಿದೆ. ಮಾನವ ಸಂಪನ್ಮೂಲದ ಗುಣಮಟ್ಟ, ಅದರ ಕೊಡುಗೆ ಮತ್ತು ಅದರ ಬೆಳವಣಿಗೆಯಲ್ಲಿನ ವೈಶಿಷ್ಟ್ಯಗಳ ಕುರಿತು ಅಧ್ಯಯನ ಅತೀ ಅಗತ್ಯ. ಚಾರಿತ್ರಿಕವಾದ ಒಂದು ಘಟನೆಯು ಇದಕ್ಕೆ ಉದಾಹರಣೆ. ನಮ್ಮ ದೇಶದ ಅಂತರ್ರಾಷ್ಟ್ರೀಯ ಖ್ಯಾತಿಯ ಅರ್ಥಶಾಸ್ತ್ರಜ್ಞರಾದ ಅಮರ್ತ್ಯ ಸೇನ್ 1943ರಲ್ಲಿ ಬಂಗಾಳದಲ್ಲಿ ಸಂಭವಿಸಿದ ಭೀಕರ ಕ್ಷಾಮದ ಬಗ್ಗೆ ಮಾಡಿದ ಅಧ್ಯಯನ ಅನನ್ಯವಾಗಿತ್ತು. ಕ್ಷಾಮದಲ್ಲಿ ಸುಮಾರು 30 ಲಕ್ಷ ಜನರು ಅಸು ನೀಗಿದ್ದರು.  ಕ್ಷಾಮಕ್ಕೆ ಕಾರಣಗಳೇನು, ಅದನ್ನು ತಡೆಯಲು ಸಾಧ್ಯವೇ, ಸರಕಾರಗಳು ಏನು ಮಾಡಬೇಕು ಮುಂತಾದ ಗಂಭೀರವಾದ ಪ್ರಶ್ನೆಗಳಿಗೆ ಸೇನರು ನಿಖರವಾದ ಮಾಹಿತಿಯ ಆಧಾರದಲ್ಲಿ ಉತ್ತರವನ್ನು ಹುಡುಕಿ  ಶ್ರೇಯಸ್ಸಿಗೆ ಪಾತ್ರರಾಗಿದ್ದರು. ಇದಕ್ಕೆ ವಿರುದ್ಧವಾಗಿ 2020-21ರ ಕೋವಿಡ್ ಸಾಂಕ್ರಾಮಿಕಕ್ಕೆ ದೇಶದಲ್ಲಿ ಪ್ರಾಣ ತೆತ್ತವರ ನಂಬಲರ್ಹವಾದ ಮಾಹಿತಿ ನಮ್ಮ ಸರಕಾರದ ಬಳಿ ಇರಲಿಲ್ಲ. ಬಹುಷಃ ಇಂದಿಗೂ ಅದು ಲಭ್ಯವಿಲ್ಲ!

ಇತ್ತೀಚೆಗೆ ತಮ್ಮ ಅಮೆರಿಕದ ಭೇಟಿಯ ಸಂದರ್ಭದಲ್ಲಿ ಭಾರತದ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ನಮ್ಮ ದೇಶದಲ್ಲಿ 1947ರ ಬಳಿಕ ಮುಸ್ಲಿಮರ ಸಂಖ್ಯೆ ನಿರಂತರ ಹೆಚ್ಚಾಗಿದೆ; ಅವರ ಮೇಲೆ ದಬ್ಬಾಳಿಕೆಯಾಗುತ್ತಿದ್ದರೆ ಇದು ಹೇಗೆ ಸಾಧ್ಯ ಎಂದು ಮರುಪ್ರಶ್ನೆ ಹಾಕಿದ್ದರು. ಅವರ ಹೇಳಿಕೆಯ ಸತ್ಯಾಸತ್ಯತೆಯ ವಿಮರ್ಶೆ ಈ ಲೇಖನದ ಉದ್ದೇಶವಲ್ಲ. ಅವರ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಹುಟ್ಟುವ ಕೆಲವು ಪ್ರಶ್ನೆಗಳು ದೇಶದಲ್ಲಿ ಆಗುತ್ತಿರುವ ಮಾಹಿತಿಯ ನಿರ್ವಾತದ ಬಗ್ಗೆ ಗಮನ ಹರಿಸಬೇಕಾದ ತುರ್ತನ್ನು ಒತ್ತಿ ಹೇಳುತ್ತವೆ.

ಕೇವಲ ಮುಸ್ಲಿಮರ ಜನಸಂಖ್ಯೆ ಮಾತ್ರ ಹೆಚ್ಚಾಗಿದೆಯೇ? ಹಿಂದೂ, ಕ್ರೈಸ್ತ, ಜೈನ, ಸಿಖ್ ಹಾಗೂ ಯಾವ ಧರ್ಮಕ್ಕೂ ಸೇರದವರ ಸಂಖ್ಯೆ ಹೆಚ್ಚಿಲ್ಲವೇ? ಪ್ರತಿಯೊಂದು ಮತಕ್ಕೆ ಸೇರಿದವರ ಜನಸಂಖ್ಯೆಯ ಬೆಳವಣಿಗೆಯ ದರ ಹೆಚ್ಚಾಗಿದೆಯೇ? ಅವರ ವಿದ್ಯಾರ್ಹತೆ ಏನಾಗಿದೆ? ಅವರ ಆದಾಯ? ಅವರಲ್ಲಿ ಲಿಂಗಾನುಪಾತ ಇಳಿದಿದೆಯೇ, ಹೆಚ್ಚಾಗಿದೆಯೇ? ನಿರುದ್ಯೋಗಿಗಳ ಸಂಖ್ಯೆ ಇಳಿದಿದೆಯೇ? ಇನ್ನೂ ಅನೇಕ ಪ್ರಶ್ನೆಗಳು ನಮ್ಮ ಜನ ಸಂಪನ್ಮೂಲದ ಬಗ್ಗೆ ಏಳುತ್ತವೆ. ಈ ಎಲ್ಲಾ ಮಾಹಿತಿಯ ನಿಖರವಾದ ಮೂಲ ಖಾನೇಶುಮಾರಿ.

ಪ್ರಸಕ್ತ ಸರಕಾರದ ಒಂದು ಪ್ರಮುಖ ವೈಫಲ್ಯವೆಂದರೆ ವಿಶ್ವಾಸಾರ್ಹ ಮಾಹಿತಿಯನ್ನು ನೀಡದಿರುವುದು, ಮಾತ್ರವಲ್ಲ, ಕೇಳಿದಾಗ ದಿಕ್ಕು ತಪ್ಪಿಸುವ ಪ್ರತಿಕ್ರಿಯೆಯನ್ನು ನೀಡುವುದು. ಇಡೀ ದೇಶದ ಮಾಹಿತಿಗೆ ಮೂಲ ಹತ್ತು ವರ್ಷಗಳಿಗೊಮ್ಮೆ ನಡೆಯುವ ಜನಗಣತಿ. 2011ರ ಬಳಿಕದ ಜನಗಣತಿ 2021ರಲ್ಲಿ ಆಗಬೇಕಿತ್ತು. ಅದರ ತಯಾರಿ ನಡೆಯುತ್ತಿದ್ದಂತೆ, ಕೊರೋನದ ಹಾವಳಿ ದೇಶದ ಅನೇಕ ಚಟುವಟಿಕೆಗಳನ್ನು ಸ್ತಬ್ಧಗೊಳಿಸಿತು (ಹಾಗಿದ್ದರೂ ಕೆಲವು ರಾಜ್ಯಗಳಲ್ಲಿ ಚುನಾವಣೆಗಳನ್ನು ಕೈಗೊಳ್ಳಲಾಯಿತು.) 2022ರಲ್ಲಿ ದೇಶ ಮತ್ತೆ ಸಾಮಾನ್ಯ ಸ್ಥಿತಿಗೆ ಮರಳಿತು ಎಂದು ಸರಕಾರವೇ ಹೇಳಿಕೊಂಡಿದೆ. 2022 ಮುಗಿದು ಈಗ 2023-24ನೇ ವರ್ಷ ಆರಂಭವಾಗಿದೆ. ಇನ್ನೂ ಜನಗಣತಿಯನ್ನು ಮತ್ತೆ ಆರಂಭಿಸುವ ಇರಾದೆ ಸರಕಾರಕ್ಕೆ ಇದ್ದಂತೆ ಕಾಣುವುದಿಲ್ಲ.

ದೇಶದ ದೀರ್ಘಕಾಲದ ಹಿತದೃಷ್ಟಿಯಿಂದ ಜನಗಣತಿಯನ್ನು ಆದಷ್ಟು ಬೇಗ ನಡೆಸುವ ತುರ್ತು ಇಂದಿದೆ. ಈ ನಿಟ್ಟಿನಲ್ಲಿ ನಾಗರಿಕರು, ರಾಜಕೀಯ ಪಕ್ಷಗಳು, ದೇಶದ ನೀತಿಗಳನ್ನು ರೂಪಿಸುವ ಜವಾಬ್ದಾರಿಯುಳ್ಳ ಸಂಸ್ಥೆಗಳು ಸರಕಾರದ ಮೇಲೆ ಒತ್ತಡ ಹಾಕುವುದು ಅತೀ ಅಗತ್ಯ.

Similar News