ಒಡಿಶಾ ರೈಲು ಅಪಘಾತ: ರೈಲ್ವೆಯ ಸಿಗ್ನಲ್ ವ್ಯವಸ್ಥೆ ಬಗ್ಗೆ ಪ್ರಶ್ನೆ ಎತ್ತಿದ ವಿರೋಧ ಪಕ್ಷಗಳು

ಐಷಾರಾಮಿ ರೈಲುಗಳ ಮೇಲೆ ಮಾತ್ರ ಗಮನ ಕೇಂದ್ರೀಕರಿಸಿ, ಸಾಮಾನ್ಯ ಜನರ ರೈಲು, ಹಳಿಗಳನ್ನು ನಿರ್ಲಕ್ಷಿಸಲಾಗಿದೆ : ಬಿನೋಯ್ ವಿಶ್ವಂ

Update: 2023-06-03 04:49 GMT

ಹೊಸದಿಲ್ಲಿ: ಒಡಿಶಾ ರೈಲು ಅಪಘಾತದಲ್ಲಿ 200 ಕ್ಕೂ ಹೆಚ್ಚು ಪ್ರಯಾಣಿಕರ ಸಾವಿಗೆ ತೀವ್ರ ಸಂತಾಪ ವ್ಯಕ್ತಪಡಿಸಿದ ವಿರೋಧ ಪಕ್ಷದ ನಾಯಕರು, ಅಪಘಾತಕ್ಕೆ ಕಾರಣವಾದ ರೈಲ್ವೆಯ ಸಿಗ್ನಲಿಂಗ್ ವ್ಯವಸ್ಥೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.

ಶುಕ್ರವಾರ ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, ಶಾಲಿಮಾರ್-ಚೆನ್ನೈ ಸೆಂಟ್ರಲ್ ಕೋರಮಂಡಲ್ ಎಕ್ಸ್‌ಪ್ರೆಸ್ ಹಾಗೂ  ಗೂಡ್ಸ್ ರೈಲನ್ನು ಒಳಗೊಂಡ ಭೀಕರ ಅಪಘಾತದಲ್ಲಿ 233 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಹಾಗೂ  900 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

"ಒಡಿಶಾದಲ್ಲಿ ಕೋರಮಂಡಲ್ ಎಕ್ಸ್‌ಪ್ರೆಸ್ ಮತ್ತು ಯಶವಂತಪುರ-ಹೌರಾ ರೈಲು ಅಪಘಾತದ ದುರಂತ ಸುದ್ದಿಯನ್ನು ಕೇಳಿ ದಿಗ್ಭ್ರಮೆಗೊಂಡಿದ್ದೇನೆ ಹಾಗೂ  ದುಃಖಿತನಾಗಿದ್ದೇನೆ. ಸಂತ್ರಸ್ತರಿಗೆ ಮತ್ತು ಅವರ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಪ್ರಾರ್ಥನೆಗಳು. ... ಸಿಗ್ನಲ್ ವೈಫಲ್ಯವು 3 ರೈಲುಗಳು ಅಪಘಾತಕ್ಕೆ ಕಾರಣವಾಯಿತು ಎನ್ನುವ ವಿಚಾರವು ನಂಬಲಾಗದಷ್ಟು ಆಘಾತಕಾರಿಯಾಗಿದೆ. ಗಂಭೀರ ಪ್ರಶ್ನೆಗಳಿಗೆ ಉತ್ತರಿಸಬೇಕಾಗಿದೆ" ಎಂದು ಟಿಎಂಸಿ ವಕ್ತಾರ ಸಾಕೇತ್ ಗೋಖಲೆ ಟ್ವೀಟ್ ಮಾಡಿದ್ದಾರೆ.

ಸಿಪಿಐ(ಎಂಎಲ್) ಪ್ರಧಾನ ಕಾರ್ಯದರ್ಶಿ ದೀಪಾಂಕರ್ ಭಟ್ಟಾಚಾರ್ಯ ಕೂಡ ಇದೇ ಪ್ರಶ್ನೆಯನ್ನು ಎತ್ತಿದ್ದಾರೆ

ಭಾರತೀಯ ರೈಲ್ವೇಯಲ್ಲಿ ನಾವು ಇನ್ನೂ  ಯಾವುದೇ ಸಿಗ್ನಲಿಂಗ್ ಹಾಗೂ  ಸುರಕ್ಷತಾ ವ್ಯವಸ್ಥೆಯನ್ನು ಹೊಂದಿಲ್ಲವೇ? ಅಥವಾ ಇಂತಹ ಭೀಕರ ದುರಂತಗಳು ಭಾರತದಲ್ಲಿ ರೈಲು ಪ್ರಯಾಣದಲ್ಲಿ ಸಾಮಾನ್ಯವಾಗುತ್ತದೆಯೇ? ಈ ದುರ್ಘಟನೆಯಲ್ಲಿ ಸಂತ್ರಸ್ತರಿಗೆ ಹಾಗೂ  ತಮ್ಮ ಹತ್ತಿರದ ಮತ್ತು ಆತ್ಮೀಯರನ್ನು ಕಳೆದುಕೊಂಡ ಕುಟುಂಬಗಳಿಗೆ ನಾವು ಉತ್ತರವನ್ನು ನೀಡಬೇಕಾಗಿದೆ ”ಎಂದು ದೀಪಾಂಕರ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ರಾಜೀನಾಮೆ ನೀಡಬೇಕು ಎಂದು ಸಿಪಿಐ ಸಂಸದ ಬಿನೋಯ್ ವಿಶ್ವಂ ಒತ್ತಾಯಿಸಿದ್ದಾರೆ.

"ಸರಕಾರವು ಐಷಾರಾಮಿ ರೈಲುಗಳ ಮೇಲೆ ಮಾತ್ರ ಕೇಂದ್ರೀಕರಿಸುತ್ತದೆ  ಒಡಿಶಾದ  ಸಾವುಗಳು ಅದರ ಪರಿಣಾಮವಾಗಿದೆ. ರೈಲ್ವೆ ಸಚಿವರು ರಾಜೀನಾಮೆ ನೀಡಬೇಕು. ಐಷಾರಾಮಿ ರೈಲುಗಳ ಮೇಲೆ ಮಾತ್ರ ಗಮನಹರಿಸಿ. ಸಾಮಾನ್ಯ ಜನರ ರೈಲುಗಳು ಹಾಗೂ  ಟ್ರ್ಯಾಕ್‌ಗಳನ್ನು ನಿರ್ಲಕ್ಷಿಸಲಾಗಿದೆ  ಎಂದು ವಿಶ್ವಂ ಟ್ವೀಟ್ ಮಾಡಿದ್ದಾರೆ.

ಒಡಿಶಾದಲ್ಲಿ ಸಂಭವಿಸಿದ ರೈಲು ದುರಂತದ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ  ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಶುಕ್ರವಾರ ದುಃಖ ವ್ಯಕ್ತಪಡಿಸಿದ್ದಾರೆ ಮತ್ತು ರಕ್ಷಣಾ ಪ್ರಯತ್ನಗಳಿಗೆ ಅಗತ್ಯವಿರುವ ಎಲ್ಲಾ ಬೆಂಬಲವನ್ನು ನೀಡುವಂತೆ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರನ್ನು ಒತ್ತಾಯಿಸಿದ್ದಾರೆ.

Similar News