ಅಧ್ಯಾತ್ಮದ ಸೋಗಿನಲ್ಲಿಯ ದುಷ್ಟನನ್ನು ಗೆದ್ದ ಕಥನ 'ಬಂದಾ'

Update: 2023-06-04 08:27 GMT

ಈ ಚಿತ್ರ ಈಗ ಬಹಳ ಚರ್ಚೆಯಲ್ಲಿದೆ. ಈ ಚಿತ್ರ ಸ್ವಯಂಘೋಷಿತ ದೇವಮಾನವ ಆಸಾರಾಂ ಬಾಪು ಕುರಿತದ್ದು ಎಂಬುದು ಅದಕ್ಕೆ ಮುಖ್ಯ ಕಾರಣ. ಆಸಾರಾಂ ಬಾಪು ವಿರುದ್ಧದ ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತೆಯ ಪರವಾಗಿ ನ್ಯಾಯಕ್ಕಾಗಿ ಹೋರಾಡಿದ ವಕೀಲ ಪಿ.ಸಿ. ಸೋಲಂಕಿ ಅವರ ಕಥೆಯನ್ನು ತೆರೆದಿಡುವ ಚಿತ್ರ ಇದು. ಅಧ್ಯಾತ್ಮದ ಸೋಗಿನಲ್ಲಿ ಆಸಾರಾಂ ಥರದ ಕ್ರಿಮಿನಲ್‌ಗಳು ಇರಬಹುದಾದ ಸನ್ನಿವೇಶದ ಬಗ್ಗೆ ಎಚ್ಚರಿಸುತ್ತಲೇ, ಅಂಥವರ ಅನ್ಯಾಯದ ವಿರುದ್ಧ ಏಕಾಂಗಿಯಾಗಿ ಎದ್ದುನಿಲ್ಲುವ ಸೋಲಂಕಿಯಂಥವರ ಧೈರ್ಯವನ್ನು ಎತ್ತಿ ತೋರಿಸುತ್ತದೆ ಈ ಚಿತ್ರ.



'ಸಿರ್ಫ್ ಏಕ್ ಬಂದಾ ಕಾಫಿ ಹೈ' ಚಿತ್ರ ಎಲ್ಲರ ಗಮನ ಸೆಳೆಯುತ್ತಿದೆ. ಅದ್ಭುತ ನಟ ಮನೋಜ್ ಬಾಜಪೇಯಿ ಮುಖ್ಯ ಪಾತ್ರದಲ್ಲಿರುವ ಈ ಚಿತ್ರ ಈಗ ಬಹಳ ಚರ್ಚೆಯಲ್ಲಿದೆ. ಈ ಚಿತ್ರ ಸ್ವಯಂಘೋಷಿತ ದೇವಮಾನವ ಆಸಾರಾಂ ಬಾಪು ಕುರಿತದ್ದು ಎಂಬುದು ಅದಕ್ಕೆ ಮುಖ್ಯ ಕಾರಣ. ಆಸಾರಾಂ ಬಾಪು ವಿರುದ್ಧದ ಅತ್ಯಾಚಾರ ಪ್ರಕರಣದಲ್ಲಿ ಸಂತ್ರಸ್ತೆಯ ಪರವಾಗಿ ನ್ಯಾಯಕ್ಕಾಗಿ ಹೋರಾಡಿದ ವಕೀಲ ಪಿ.ಸಿ. ಸೋಲಂಕಿ ಅವರ ಕಥೆಯನ್ನು ತೆರೆದಿಡುವ ಚಿತ್ರ ಇದು. ಅಧ್ಯಾತ್ಮದ ಸೋಗಿನಲ್ಲಿ ಆಸಾರಾಂ ಥರದ ಕ್ರಿಮಿನಲ್‌ಗಳು ಇರಬಹುದಾದ ಸನ್ನಿವೇಶದ ಬಗ್ಗೆ ಎಚ್ಚರಿಸುತ್ತಲೇ, ಅಂಥವರ ಅನ್ಯಾಯದ ವಿರುದ್ಧ ಏಕಾಂಗಿಯಾಗಿ ಎದ್ದುನಿಲ್ಲುವ ಸೋಲಂಕಿಯಂಥವರ ಧೈರ್ಯವನ್ನು ಎತ್ತಿ ತೋರಿಸುತ್ತದೆ ಈ ಚಿತ್ರ.

'ಬಂದಾ' ಚಿತ್ರ ಬಿಡುಗಡೆ ಬಳಿಕ ಆಸಾರಾಂ ಬಾಪು ಪ್ರಕರಣದಲ್ಲಿ ನಿಜವಾಗಿಯೂ ಏನಾಯಿತು ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ. ಇನ್ನೊಂದೆಡೆ ಆತನ ವಿರುದ್ಧ ಹೋರಾಡಿ ಸಂತ್ರಸ್ತೆಗೆ ನ್ಯಾಯ ಒದಗಿಸಿದ ಸೋಲಂಕಿ ಅವರ ಬಗ್ಗೆಯೂ ಎಲ್ಲರ ಗಮನ ಹರಿದಿದೆ.

ಈ ದೇಶದಲ್ಲಿ ಧರ್ಮದ ಹೆಸರಿನಲ್ಲಿ, ಅಧ್ಯಾತ್ಮದ ಹೆಸರಿನಲ್ಲಿ ಏನೇನೆಲ್ಲಾ ಆಗಬಹುದು ಎಂಬುದಕ್ಕೆ ಆಸಾರಾಂ ಬಾಪು ಪ್ರಕರಣ ಒಂದು ಉದಾಹರಣೆ. ಕ್ರಿಮಿನಲ್ ಎಂಬುದರ ಹೊರತಾಗಿಯೂ ಆತ ಎರಡು ಕೋಟಿಗೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾನೆ. ಕೋಟ್ಯಂತರ ರೂ. ಮೌಲ್ಯದ ಆಸ್ತಿ, 12 ದೇಶಗಳಲ್ಲಿ ಸುಮಾರು 400 ಆಶ್ರಮಗಳು, 50ಕ್ಕೂ ಹೆಚ್ಚು ಗುರುಕುಲ ಶಾಲೆಗಳನ್ನು ಮಾತ್ರವಲ್ಲದೆ, ಪ್ರಿಂಟಿಂಗ್ ಪ್ರೆಸ್ ಮತ್ತು ಆಯುರ್ವೇದ ಘಟಕಗಳು ಆತನಿಗಿವೆ. ಇದೆಲ್ಲ ಎಂಥ ವಿಪರ್ಯಾಸ ಅಲ್ಲವೆ? ಆಸಾರಾಂ ಜನಿಸಿದ್ದು ಈಗ ಪಾಕಿಸ್ತಾನದಲ್ಲಿರುವ ಬೆರಾನಿ ಗ್ರಾಮದಲ್ಲಿ. ಮೂಲ ಹೆಸರು ಅಸುಮಲ್ ಸಿರುಮಲಾನಿ. ದೇಶ ವಿಭಜನೆ ನಂತರ ಆಸಾರಾಂ ಕುಟುಂಬ ಅಹಮದಾಬಾದ್‌ಗೆ ತೆರಳಿತು. ತಂದೆಯ ಮರಣದ ನಂತರ ಕುಟುಂಬ ಗುಜರಾತ್‌ನ ಮೆಹಸಾನಾ ಜಿಲ್ಲೆಗೆ ಸ್ಥಳಾಂತರಗೊಂಡಿತು.

ಆಸಾರಾಂನ ಆಧ್ಯಾತ್ಮಿಕ ಗುರು ಲೀಲಾಶಾಹ್ಜಿ ಮಹಾರಾಜರು. ಅವರೇ ಆಸಾರಾಂ ಎಂದು ನಾಮಕರಣ ಮಾಡಿದ್ದು. ಆದರೆ ಅದೇನು ಎಡವಟ್ಟು ಮಾಡಿದ ಕಾರಣಕ್ಕೋ, ಆಶ್ರಮದಿಂದಲೇ ಅವರು ಹೊರಹಾಕಿದ್ದೂ ಆಗಿತ್ತು. ಆಮೇಲೆಯೇ ಆಸಾರಾಂ ಆಧ್ಯಾತ್ಮಿಕ ಜೀವನ 1971ರಲ್ಲಿ ಸಾಬರಮತಿ ನದಿ ದಂಡೆಯ ಕುಟೀರದಲ್ಲಿ ಶುರುವಾಯಿತು. ಆಗ ಇದ್ದವರು ಐದೊ ಹತ್ತೊ ಅನುಯಾಯಿಗಳು.

ಬಳಿಕ ಭಕ್ತರ ಬೆಂಬಲದಿಂದ ಗುಜರಾತ್‌ನ ಮೊಟೆರಾದಲ್ಲಿ ಅಹಮದಾಬಾದ್ ಸಮೀಪ ಆಶ್ರಮ ಸ್ಥಾಪನೆ. ತರುವಾಯ ರಾಜ್ಯ ಮತ್ತು ದೇಶಾದ್ಯಂತ ಆಶ್ರಮಗಳು, ಗುರುಕುಲಗಳು, ಪ್ರಿಂಟಿಂಗ್ ಪ್ರೆಸ್, ಜೊತೆಗೆ ಸಾಬೂನು, ಶ್ಯಾಂಪೂ, ಔಷಧಿ ತಯಾರಿಕೆ ಉದ್ಯಮ. ಟಿವಿಯಲ್ಲಿ ಆಸಾರಾಂ ಪ್ರವಚನ ಕೂಡ ಭಾರೀ ಪ್ರಸಿದ್ಧಿ ಪಡೆಯಿತು. 2008ರ ವೇಳೆಗೆ ಆಸಾರಾಂ ಸಾಮ್ರಾಜ್ಯ 5,000 ಕೋಟಿ ರೂ. ಮೌಲ್ಯದ್ದಾಗಿತ್ತು. ದೊಡ್ಡ ಸಂಖ್ಯೆಯ ಅನುಯಾಯಿಗಳು, ಅದರಲ್ಲೂ ರಾಜಕಾರಣಿಗಳು ಆಸಾರಾಂ ಭಕ್ತರಾಗಿಬಿಟ್ಟಿದ್ದರು. ಕಾಂಗ್ರೆಸ್, ಬಿಜೆಪಿ ಸರಕಾರಗಳೆಲ್ಲ ಆಸಾರಾಂ ಯೋಜನೆಗಳಿಗೆ ಧಾರಾಳ ಭೂಮಿ ನೀಡಿದ್ದವು. ವಾಜಪೇಯಿ, ಅಡ್ವಾಣಿ, ಮೋದಿ ಮೊದಲಾದ ಘಟಾನುಘಟಿಗಳೇ ಆಸಾರಾಂ ಆಶೀರ್ವಾದ ಪಡೆಯುತ್ತಿದ್ದರು. ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಆಸಾರಾಂ ಬಾಪು ದೇಶ ವಿದೇಶಗಳಲ್ಲಿ ತಮ್ಮ ಆಶ್ರಮ ಹಾಗೂ ಉದ್ಯಮ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡರು.
ಇಂಥ ಆಸಾರಾಂ ಎಂಬ ಅಧ್ಯಾತ್ಮದ ಸೋಗಿನ ಹಿಂದೆ, ಆತನ ಕೋಟ್ಯಂತರ ಮೌಲ್ಯದ ಬೃಹತ್ ಸಾಮ್ರಾಜ್ಯದ ಒಳಗೆ ಎಂಥ ಕ್ರಿಮಿನಲ್ ಕರಾಳತೆಯಿದೆ ಎಂಬುದು ಬಯಲಾದದ್ದೇ 2013ರಲ್ಲಿ. ಜೋಧ್ಪುರ ಆಶ್ರಮದಲ್ಲಿ 16ರ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಪ್ರಕರಣ ದಾಖಲಾಗಿ, 2013ರ ಆಗಸ್ಟ್ 31ರಂದು ಆತನನ್ನು ಬಂಧಿಸಲಾಯಿತು. ಅಲ್ಲಿಂದ ಶುರುವಾಯಿತು ಆಸಾರಾಂ ಅಧಃಪತನ.

2018ರಲ್ಲಿ ಕೋರ್ಟ್ ಆಸಾರಾಂ ತಪ್ಪಿತಸ್ಥನೆಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿತ್ತು. 77 ವರ್ಷದ ಸ್ವಯಂ ಘೋಷಿತ ದೇವಮಾನವ ಆಸಾರಾಂ ಬಾಪು ಸೇರಿ ನಾಲ್ವರು ಆರೋಪಿಗಳನ್ನು ದೋಷಿ ಎಂದು ಘೋಷಿಸಲಾಗಿತ್ತು.

ಈ ಮಧ್ಯೆ, 2013ರಲ್ಲಿ ಆತನ ಬಂಧನವಾಗುತ್ತಿದ್ದಂತೆಯೇ ಆತ ಎಸಗಿದ್ದ ಮತ್ತೊಂದು ಅತ್ಯಾಚಾರ ಪ್ರಕರಣ ಕೂಡ ಬಯಲಿಗೆ ಬಂದಿತ್ತು. ಸೂರತ್‌ನ ಇಬ್ಬರು ಸಹೋದರಿಯರು ಆತ ಮತ್ತವನ ಮಗ ನಾರಾಯಣ ಸಾಯಿ ವಿರುದ್ಧ ಅತ್ಯಾಚಾರದ ದೂರು ನೀಡಿದ್ದರು. ತಾವು ಆಸಾರಾಂ ಅನುಯಾಯಿಗಳಾಗಿದ್ದು, ಪುತ್ರನೊಂದಿಗೆ ಸೇರಿ ತಮ್ಮ ಮೇಲೆ ಪದೇ ಪದೇ ಅತ್ಯಾಚಾರ ಎಸಗಿ ಆಶ್ರಮದೊಳಗೆ ಬಂಧನದಲ್ಲಿಟ್ಟಿದ್ದಾರೆ ಎಂದು ಆರೋಪಿಸಿದ್ದರು. ಹಿರಿಯವಳು ತನ್ನ ವಿರುದ್ಧ 1997ರಿಂದ 2006ರ ಅವಧಿಯಲ್ಲಿ ಆಸಾರಾಂ ಅತ್ಯಾಚಾರ ಎಸಗಿರುವುದಾಗಿಯೂ, ಕಿರಿಯವಳು ಆಸಾರಾಂ ಪುತ್ರ ತನ್ನ ಮೇಲೆ 2002ರಿಂದ 2005ರ ಅವಧಿಯಲ್ಲಿ ಅತ್ಯಾಚಾರ ನಡೆಸಿರುವುದಾಗಿಯೂ ಆರೋಪಿಸಿದ್ದರು.

ಈ ಸಹೋದರಿಯರು ಆಸಾರಾಂ ಪತ್ನಿ ಲಕ್ಷ್ಮೀ, ಮಗಳು ಭಾರತಿ ಮತ್ತು ನಾಲ್ವರು ಮಹಿಳಾ ಅನುಯಾಯಿಗಳಾದ ಧ್ರುವಬೆನ್, ನಿರ್ಮಲಾ, ಜಸ್ಸಿ ಮತ್ತು ಮೀರಾ ವಿರುದ್ಧವೂ ತಮ್ಮ ಶೋಷಣೆಯಲ್ಲಿ ಅಪ್ಪ-ಮಗನಿಗೆ ನೆರವಾಗಿದ್ದಾರೆಂದು ಆರೋಪಿಸಿದ್ದರು. 2019ರಲ್ಲಿ ಪುತ್ರನಿಗೆ ಜೀವಾವಧಿ ಶಿಕ್ಷೆಯಾಗಿತ್ತು. ಆಸಾರಾಂ ಪತ್ನಿ ಸೇರಿದಂತೆ ಇತರ ಆರೋಪಿಗಳನ್ನು ಸಾಕ್ಷ್ಯಾಧಾರ ಕೊರತೆಯಿಂದ ಖುಲಾಸೆಗೊಳಿಸಲಾಗಿತ್ತು. ಆಸಾರಾಂಗೆ ಇದೇ ವರ್ಷ ಜನವರಿಯಲ್ಲಿ ಮತ್ತೊಂದು ಜೀವಾವಧಿ ಶಿಕ್ಷೆ ವಿಧಿಸಲಾಯಿತು.

ಈ ಎರಡೂ ಪ್ರಕರಣಗಳಲ್ಲಿ ಸಂತ್ರಸ್ತೆಯರ ಕುಟುಂಬಗಳು ಮತ್ತು ಸಾಕ್ಷಿಗಳನ್ನು ನಿರಂತರವಾಗಿ ಬೆದರಿಸಲಾಗಿತ್ತು. ಅವರ ಮೇಲೆ ದಾಳಿ ನಡೆಸಲಾಯಿತು. ಕೆಲವು ಸಾಕ್ಷಿಗಳ ಕೊಲೆಯೂ ಆಗಿಹೋಯಿತು.

ಜೋಧ್ಪುರ್ ಅತ್ಯಾಚಾರ ಪ್ರಕರಣದಲ್ಲಿ ಸೆಷನ್ಸ್ ನ್ಯಾಯಾಧೀಶರನ್ನೇ ಆಸಾರಾಂ ಅನುಯಾಯಿಗಳು ಬೆದರಿಸಿದ್ದ ಬಗ್ಗೆ ವರದಿಗಳಾಗಿದ್ದವು. ಪ್ರಕರಣದ ಸಾಕ್ಷಿಯಾಗಿದ್ದ ಆಸಾರಾಂನ ವೈದ್ಯನನ್ನು ಸಾಕ್ಷ ಹೇಳಲು ಬರಬೇಕಿದ್ದಾಗ ಇರಿಯಲಾಯಿತು. 2015ರಿಂದ ಆತ ಕಣ್ಮರೆಯಾಗಿ ಹೋಗಿದ್ದು ವಿಚಿತ್ರವಾಗಿತ್ತು. ಪ್ರಕರಣದ ಮತ್ತೊಬ್ಬ ಸಾಕ್ಷಿ ಕೃಪಾಲ್ ಸಿಂಗ್ ಕೊಲೆಯಾಯಿತು. ಆಸಾರಾಂನ ಅನುಯಾಯಿಗಳೇ ಈ ಕೃತ್ಯವೆಸಗಿದ್ದು ಎಂದು ಆತ ಸಾಯುವ ಮುನ್ನ ಹೇಳಿಕೆ ನೀಡಿದ್ದ.

ಸೂರತ್ ಅತ್ಯಾಚಾರ ಕೇಸ್‌ನಲ್ಲಿ ಸಾಕ್ಷಿಗಳಾಗಿದ್ದ ಇಬ್ಬರನ್ನು ಗುಂಡಿಕ್ಕಿ ಕೊಲ್ಲಲಾಯಿತು. ಇನ್ನಿಬ್ಬರು ಗಾಯಗೊಂಡಿದ್ದರು. ದೂರು ನೀಡಿದ ಸಹೋದರಿಯರಲ್ಲಿ ಕಿರಿಯವಳ ಗಂಡನ ಮೇಲೆಯೂ ದಾಳಿ ನಡೆಸಿ ಬೆನ್ನು ಮತ್ತು ಮುಖಕ್ಕೆ ಇರಿಯಲಾಗಿತ್ತು. ಇವೆಲ್ಲಕ್ಕಿಂತ ಮೊದಲೇ 2008ರಲ್ಲಿಯೇ, ಈತನ ಆಶ್ರಮದೊಳಗಿನ ಅನಾಚಾರದ ಸುಳಿವುಗಳು ಸಿಕ್ಕಿದ್ದವು. ಮೊಟೆರಾದ ಆಶ್ರಮಕ್ಕೆ ಸಮೀಪವಿರುವ ಸಾಬರಮತಿ ನದಿಯ ದಡದಿಂದ ಇಬ್ಬರು ಮಕ್ಕಳ ದೇಹಗಳು ವಿರೂಪಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದವು. ದೇಹದಿಂದ ಕೆಲವು ಪ್ರಮುಖ ಅಂಗಗಳು ನಾಪತ್ತೆಯಾಗಿರುವುದು ಕಂಡುಬಂದಿತ್ತು. ಗುಜರಾತ್ ಪೊಲೀಸರು 2009ರಲ್ಲಿ ಇಬ್ಬರು ಮಕ್ಕಳ ಹತ್ಯೆ ಸಂಬಂಧ ಆತನ ಏಳು ಅನುಯಾಯಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದರು. ಆ ಮಕ್ಕಳ ಪೋಷಕರು ಆಸಾರಾಂ ಮತ್ತವನ ಅನುಯಾಯಿಗಳ ವಿರುದ್ಧ ವಾಮಾಚಾರದ ಆರೋಪ ಹೊರಿಸಿದ್ದರು. ಆದರೆ ಆಗ ಮೋದಿ ನೇತೃತ್ವದ ಗುಜರಾತ್ ಸರಕಾರ ನೇಮಿಸಿದ್ದ ತನಿಖಾ ಆಯೋಗ ಆಸಾರಾಂ ಮತ್ತವನ ಮಗನಿಗೆ ಕ್ಲೀನ್ ಚಿಟ್ ನೀಡಿತ್ತು.

ಆಸಾರಾಂ ಹಾಗೂ ಆತನ ಅನೈತಿಕ ಸಾಮ್ರಾಜ್ಯ ಬೆಳೆದಿದ್ದೇ ರಾಜಕಾರಣಿಗಳು ಹಾಗೂ ಟಿವಿ ಚಾನೆಲ್‌ಗಳ ಸಂಪೂರ್ಣ ಬೆಂಬಲದಿಂದ. ನೀಚತನಕ್ಕೆ ಶಿಕ್ಷೆ ಕಡೆಗೂ ತಪ್ಪಲಿಲ್ಲ. ಅಪ್ಪಮಗ ಇಬ್ಬರೂ ಜೈಲುಪಾಲಾದರು.
ಆಸಾರಾಂ ವಿರುದ್ಧದ ಕಾನೂನು ಹೋರಾಟದಲ್ಲಿ ಗೆದ್ದ ಹೆಗ್ಗಳಿಕೆ ಪಿ.ಸಿ. ಸೋಲಂಕಿ ಅವರದು. ಕುಖ್ಯಾತ ಆಸಾರಾಂ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ವಕೀಲರಾಗಿದ್ದವರು ಪೂನಂ ಚಂದ್ ಸೋಲಂಕಿ ಅಥವಾ ಪಿ.ಸಿ. ಸೋಲಂಕಿ. ಅವರ ಹೋರಾಟವೇ ಈಗ ಮನೋಜ್ ಬಾಜಪೇಯಿ ಅಭಿನಯದ 'ಸಿರ್ಫ್ ಏಕ್ ಬಂದಾ ಕಾಫಿ ಹೈ' ಚಿತ್ರಕ್ಕೆ ಪ್ರೇರಣೆ.

ಸೋಲಂಕಿ ರಾಜಸ್ಥಾನದ ಜೋಧ್ಪುರದಲ್ಲಿ ವಕೀಲರು. ಅವರ ತಂದೆ ರೈಲ್ವೆಯಲ್ಲಿ ಮೆಕ್ಯಾನಿಕ್ ಆಗಿದ್ದವರು. ಕುಟುಂಬದಲ್ಲಿ ಇವರಲ್ಲದೆ ಮೂವರು ಸಹೋದರಿಯರಿದ್ದರು. ಕಷ್ಟದ ನಡುವೆಯೂ ಸೋಲಂಕಿ ಕಾನೂನು ಓದಿದರು. 1996ರಲ್ಲಿ ವಕೀಲರಾಗಿ ವೃತ್ತಿ ಶುರುಮಾಡಿದ ಅವರಿಗೆ ಹೆಸರು ಬಂದಿದ್ದು 2002ರಲ್ಲಿ. ಐತಿಹಾಸಿಕ ಘಂಟಾಘರ್ ಬಳಿಯ ಗುಲಾಬ್ ಸಾಗರ್‌ನಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ತಯಾರಿಸಿದ ಗಣೇಶ ಮೂರ್ತಿಗಳ ವಿಸರ್ಜನೆ ಸಾವಿರಾರು ಮೀನುಗಳ ಸಾವಿಗೆ ಕಾರಣವಾಗಿದ್ದರ ವಿರುದ್ಧ ಅವರು ರಾಜಸ್ಥಾನ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

2014ರಲ್ಲಿ ಆಸಾರಾಂ ವಿರುದ್ಧ ಅತ್ಯಾಚಾರ ಕೇಸ್ ಸಂಬಂಧ 16ರ ಬಾಲಕಿಯ ಪೋಷಕರು ಸೋಲಂಕಿಯನ್ನು ಸಂಪರ್ಕಿಸುತ್ತಾರೆ. ಅಲ್ಲಿಂದ ಶುರುವಾಯಿತು ಈ ಪ್ರಕರಣದಲ್ಲಿನ ಸೋಲಂಕಿ ಹೋರಾಟ.
ವಿಚಾರಣೆ ಐದು ವರ್ಷಗಳ ಕಾಲ ಮುಂದುವರಿಯಿತು. ಈ ಸಮಯದಲ್ಲಿ ಆಸಾರಾಂ ವಿರುದ್ಧ ಇತರ ಅತ್ಯಾಚಾರ ಆರೋಪಗಳಲ್ಲದೆ ಹಲವಾರು ಸಂಬಂಧಿತ ಪ್ರಕರಣಗಳು ಕೂಡ ಬೆಳಕಿಗೆ ಬಂದವು. ನಾಲ್ವರು ಪ್ರಮುಖ ಸಾಕ್ಷಿಗಳು ನಿಗೂಢ ಸಂದರ್ಭಗಳಲ್ಲಿ ಹತ್ಯೆಗೀಡಾದದ್ದೂ ಆಯಿತು. ರಾಮ್ ಜೇಠ್ಮಲಾನಿ, ಸಲ್ಮಾನ್ ಖುರ್ಷಿದ್ ಮತ್ತು ಸುಬ್ರಮಣಿಯನ್ ಸ್ವಾಮಿ ಸೇರಿದಂತೆ ದೇಶದ ಉನ್ನತ ವಕೀಲರು ಈ ಪ್ರಕರಣದಲ್ಲಿ ವಾದಿಸಿದ್ದಿದೆ. ಆದರೆ ನಿಜವಾಗಿಯೂ ಹೆಚ್ಚುಗಾರಿಕೆ ಮೆರೆದವರು ಸೋಲಂಕಿ. ಆಸಾರಾಂಗೆ ಆ ಪಕ್ರರಣದಲ್ಲಿ 2018ರಲ್ಲಿ ಸಂತ್ರಸ್ತೆಗೆ ಪಾವತಿಸಬೇಕಾದ 5 ಲಕ್ಷ ರೂ. ದಂಡದ ಜೊತೆಗೆ ಜೀವಾವಧಿ ಶಿಕ್ಷೆಯಾಯಿತು.

ಅತ್ಯಂತ ಪ್ರಭಾವಿಯೊಬ್ಬನ ವಿರುದ್ಧದ ಈ ಹೋರಾಟ ಸರಳವಾಗಿರಲಿಲ್ಲ, ಸುಲಭವೂ ಆಗಿರಲಿಲ್ಲ. ಕಡೆಗೂ ಸೋಲಂಕಿ ದಿಟ್ಟತನ ಎಲ್ಲೂ ಮಣಿಯದೆ, ಅತ್ಯಾಚಾರಿಯನ್ನು ಕಂಬಿಗಳ ಹಿಂದೆ ನಿಲ್ಲಿಸಿತು.
ಆ ತಾಕತ್ತಿನ ಕಥನವೇ ಈಗ 'ಸಿರ್ಫ್ ಏಕ್ ಬಂದಾ ಕಾಫಿ ಹೈ' ಸಿನೆಮಾ ಆಗಿದೆ. ಆದರೆ ಈ ಚಿತ್ರದಲ್ಲಿ ಸೋಲಂಕಿ ಅವರ ಹೆಸರು ಬಿಟ್ಟರೆ ಇನ್ನಾರ ನೈಜ ಹೆಸರನ್ನೂ ಬಳಸಲಾಗಿಲ್ಲ. ಹಲವಾರು ಅಂಶಗಳನ್ನು ಕಾಲ್ಪನಿಕ ಎಂದೇ ಚಿತ್ರ ತೋರಿಸಬಯಸುತ್ತದೆ.
ತಮ್ಮ ಅನುಮತಿ ಪಡೆದಿಲ್ಲ ಎಂಬ ಕಾರಣಕ್ಕೆ ಸೋಲಂಕಿ ಈ ಚಿತ್ರದ ವಿಚಾರವಾಗಿ ತಕರಾರು ತೆಗೆದಿದ್ದಾರೆ. ನಿರ್ಮಾಪಕರನ್ನು ಕೋರ್ಟ್‌ಗೆ ಎಳೆದಿದ್ದಾರೆ. ಹಾಗಾಗಿ ಚಿತ್ರ ವಿವಾದಕ್ಕೊಳಗಾಗಿದೆ.
ಇದೇನೇ ಇದ್ದರೂ, ಅಧ್ಯಾತ್ಮದ ಸೋಗಿನ ಹಿಂದೆ ಇದ್ದವನೊಬ್ಬನ ದುರುಳತನ ಮತ್ತು ಅದಕ್ಕಾಗಿ ಶಿಕ್ಷೆ ಅನುಭವಿಸುತ್ತಿರುವವನ ವಿರುದ್ಧದ ಹೋರಾಟವೊಂದು ಈ ಚಿತ್ರದ ಮೂಲಕ ಮತ್ತೆ ಎಲ್ಲರಿಗೆ ನೆನಪಾಗುತ್ತಿದೆ.

Similar News