ಪಿಡಿಪಿ ಅಧ್ಯಕ್ಷೆ ಮೆಹಬೂಬ ಮುಫ್ತಿ ಅವರಿಗೆ ಮೂರು ವರ್ಷಗಳ ಬಳಿಕ ಪಾಸ್‌ಪೋರ್ಟ್‌

Update: 2023-06-04 16:57 GMT

ಶ್ರೀನಗರ: ಪಿಡಿಪಿ ಅಧ್ಯಕ್ಷೆ ಹಾಗೂ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರಿಗೆ ಮೂರು ವರ್ಷಗಳ ಬಳಿಕ ಕೊನೆಗೂ 10 ವರ್ಷಗಳ ಮಾನ್ಯತೆ ಹೊಂದಿರುವ ಪಾಸ್ಪೋರ್ಟ್ ಅನ್ನು ವಿತರಿಸಲಾಗಿದೆ.

ಮುಫ್ತಿಯವರ ಪಾಸ್ಪೋರ್ಟ್ ನ ಅವಧಿ 2019ರಲ್ಲಿ ಅಂತ್ಯಗೊಂಡಿತ್ತು. ಆಗಿನಿಂದಲೂ ಅದರ ನವೀಕರಣಕ್ಕಾಗಿ ಅವರು ದಿಲ್ಲಿ ಉಚ್ಚ ನ್ಯಾಯಾಲಯದಲ್ಲಿ ಸುದೀರ್ಘ ಕಾನೂನು ಸಮರ ನಡೆಸಿದ್ದರು.

ತನಗೆ ದೇಶ-ನಿರ್ದಿಷ್ಟ ಪಾಸ್ಪೋರ್ಟ್ ನೀಡುವ ಪಾಸ್ಪೋರ್ಟ್ ಕಚೇರಿಯ ನಿರ್ಧಾರವನ್ನು ಪ್ರಶ್ನಿಸಿ ಪ್ರಶ್ನಿಸಿ ಪುತ್ರಿ ಇಲ್ತಿಜಾ ಜಮ್ಮು-ಕಾಶ್ಮೀರ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿರುವ ಅರ್ಜಿಯು ವಿಚಾರಣೆಗೆ ಬರುವ ಎರಡು ದಿನಗಳ ಮೊದಲು ಮುಫ್ತಿಯವರಿಗೆ ಪಾಸ್ಪೋರ್ಟ್ ಲಭಿಸಿದೆ. ಪಾಸ್ಪೋರ್ಟ್ 2023, ಜೂ.2ರಿಂದ 2033, ಮೇ 31ರವರೆಗೆ ಮಾನ್ಯತೆಯನ್ನು ಹೊಂದಿದೆ.

ಈ ವರ್ಷದ ಫೆಬ್ರವರಿಯಲ್ಲಿ ತನಗೆ ಪಾಸ್ಪೋರ್ಟ್ ವಿತರಣೆಯಲ್ಲಿ ಹಸ್ತಕ್ಷೇಪ ಮಾಡುವಂತೆ ಮುಫ್ತಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರನ್ನು ಕೋರಿಕೊಂಡಿದ್ದರು. ತನ್ನ 80ರ ಹರೆಯದ ತಾಯಿಯನ್ನು ಮೆಕ್ಕಾಕ್ಕೆ ಕರೆದೊಯ್ಯಲು ತಾನು ಮೂರು ವರ್ಷಗಳಿಂದಲೂ ಕಾಯುತ್ತಿದ್ದೇನೆ ಎಂದು ಅವರು ತಿಳಿಸಿದ್ದರು.

ಜಮ್ಮು-ಕಾಶ್ಮೀರ ಪೊಲೀಸರು ‘ಪ್ರತಿಕೂಲ ವರದಿ’ಯೊಂದನ್ನು ಉಲ್ಲೇಖಿಸಿದ ಬಳಿಕ ಮಾರ್ಚ್ 2021ರಲ್ಲಿ ಮುಫ್ತಿ ಮತ್ತು ಅವರ ತಾಯಿಗೆ ಪಾಸ್‌ಪೋರ್ಟ್‌ಗಳ ನಿರಾಕರಿಸಲಾಗಿತ್ತು.

Similar News