ಪರಿಸರಕ್ಕಾಗಿ ಬದ್ಧತೆ ನಮಗೆಷ್ಟಿದೆ?

ಇಂದು ವಿಶ್ವ ಪರಿಸರ ದಿನ

Update: 2023-06-05 04:46 GMT

ತನ್ನ ಬದುಕಿಗೆ ಎಲ್ಲವನ್ನೂ ಕೊಟ್ಟ ಪ್ರಕೃತಿಯ ಮೇಲೆ ತೀರಾ ಸ್ವಾರ್ಥಕ್ಕಾಗಿ ಮನುಷ್ಯ ನಿರಂತರ ದಾಳಿ ನಡೆಸುತ್ತಲೇ ಬಂದಿದ್ದಾನೆ. ಇಂಥದೇ ಪರಿಸ್ಥಿತಿ ಮುಂದುವರಿದರೆ ನಮ್ಮ ಸರ್ವನಾಶ ನಮ್ಮ ಕಣ್ಣೆದುರೇ ನಡೆಯಲಿದೆ ಎಂಬುದರ ಸೂಚನೆಗಳು ಮತ್ತೆ ಮತ್ತೆ ಸಿಗುತ್ತಲೇ ಇವೆ. ಆದರೆ ಮನುಷ್ಯ ಮಾತ್ರ ಪಾಠ ಕಲಿಯುತ್ತಿಲ್ಲ.

ಇರುವುದೊಂದೇ ಭೂಮಿ?

ಪ್ರತಿದಿನವೂ ಭೂಮಿದಿನ?

ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ನಮ್ಮ ಹೆಜ್ಜೆಗಳಿರಬೇಕು ಎಂಬ ಎಚ್ಚರವನ್ನು ಸದಾ ನೀಡುವ ಪದಗಳಿವು. ಆದರೆ ನಾವೇನು ಮಾಡುತ್ತಿದ್ದೇವೆ? ಪರಿಸರದ ಬಗೆಗಿನ ನಮ್ಮ ಕಾಳಜಿ ಬರೀ ಮಾತಿಗೆ ಸೀಮಿತವೇ? ನಡೆಯಲ್ಲಿ ಅದು ದೂರ ದೂರವೇ?

ಹೇಗಾಗಿಬಿಟ್ಟಿದೆಯೆಂದರೆ, ಜನರಿಗೂ ಕಾಳಜಿಯಿಲ್ಲ, ಸರಕಾರಕ್ಕೂ ಕಾಳಜಿಯಿಲ್ಲ. ಎಲ್ಲವೂ ವಾಣಿಜ್ಯೀಕರಣಗೊಂಡಿರುವ ಕಾಲದಲ್ಲಿ ಅಭಿವೃದ್ಧಿ ಯೋಜನೆಗಳ ನೆಪದಲ್ಲಿ, ಪ್ರವಾಸೋದ್ಯಮದ ನೆಪದಲ್ಲಿ ಪರಿಸರದ ಮೇಲಾಗುತ್ತಿರುವ ದಾಳಿಗಳನ್ನು ಯಾರೂ ತಡೆಯಲಾಗು ತ್ತಿಲ್ಲ. ನಮ್ಮ ಪಾಲಿನ ವಿಪತ್ತನ್ನು ನಾವೇ ಎಳೆದುಕೊಳ್ಳುತ್ತಿದ್ದೇವೆ.

ಕೇಂದ್ರ ಸರಕಾರ ಅಭಿವೃದ್ಧಿ ಹೆಸರಿನಲ್ಲಿ ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಕಾನೂನುಗಳನ್ನು ದುರ್ಬಲಗೊಳಿಸಲು ಯತ್ನಿಸುತ್ತಿದೆ ಎಂಬ ಆರೋಪಗಳನ್ನು ಕೇಳುತ್ತಲೇ ಇದ್ದೇವೆ. ನೀತಿ ನಿರ್ಮಾಪಕರಿಗೇ ಕಾಳಜಿ ಇಲ್ಲವಾದಾಗ ಪರಿಸರಕ್ಕೆ ಭಾರೀ ಪೆಟ್ಟು ಬೀಳುವುದು ತಪ್ಪದು.

ಪರಿಸರ ರಕ್ಷಣೆಯ ಕಾನೂನುಗಳು ಇವೆ. ಅದರೆ ಅವು ಪರಿಣಾಮಕಾರಿಯಾಗಿ ಜಾರಿಯಾಗುತ್ತಿವೆಯೆ ಎಂದು ಕೇಳಿಕೊಂಡರೆ, ಇಲ್ಲ, ಹಾಗಾಗುತ್ತಿಲ್ಲ. ಸರಕಾರಗಳು ಗಣಿಗಾರಿಕೆಗೆ ಒತ್ತು ನೀಡುತ್ತಿರುವುದರಿಂ ದಾಗಿ ನೀರು, ಗಾಳಿ ಕಲುಷಿತಗೊಳ್ಳುತ್ತಿದೆ. ಅರಣ್ಯ ನಾಶವಾಗುತ್ತಿದೆ. ಸ್ಥಳೀಯರನ್ನು ಒಕ್ಕಲೆಬ್ಬಿಸಲಾಗುತ್ತಿದೆ. ಒಂದು ನೈಸರ್ಗಿಕ ಬಂಧ ಮತ್ತು ಅನುಬಂಧ ಎರಡೂ ತೀರಾ ದುರ್ಬಲಗೊಂಡಿರುವ ಹಂತಕ್ಕೆ ಬಂದು ಮುಟ್ಟಿದ್ದೇವೆ.

ಅರಣ್ಯ ಪ್ರದೇಶಗಳಲ್ಲಿ ಯೋಜನೆಗಳಿಗೆ ಒಪ್ಪಿಗೆ ನೀಡುವ ಸ್ವಾತಂತ್ರ್ಯ ಪರಿಸರ ಇಲಾಖೆಗೆ ಇತ್ತು. ಆದರೆ ಈಗ ಇತರ ಇಲಾಖೆಗಳೂ ಮೂಗು ತೂರಿಸುವುದು ಆಗುತ್ತಿದೆ. ಇದು ನಿಜಕ್ಕೂ ದುರಂತದ ಸಂಗತಿ. ಪ್ರಭಾವಿಗಳ ಪರ ಏನು ಬೇಕಾದರೂ ಮಾಡುವ, ಯಾವ ಕಾನೂನನ್ನೂ ನಿರ್ಲಕ್ಷಿಸಿ ಅನುಕೂಲತೆ ಒದಗಿಸುವ ಕೆಲಸ ಖುದ್ದು ಸರಕಾರದಿಂದಲೇ ಆಗುತ್ತಿರುತ್ತದೆ.

ಇನ್ನು ಆಧುನಿಕ ತಂತ್ರಜ್ಞಾನಗಳು ತಂದಿಟ್ಟ ಆತಂಕಗಳು ಒಂದೆರ ಡಲ್ಲ. ರೇಡಿಯೊ ತರಂಗಗಳು ಮತ್ತು ಮೊಬೈಲ್ ಟವರ್‌ಗಳಿಂದ ಜೀವವೈವಿಧ್ಯತೆಗೆ ಕುತ್ತು ಬಂದಿದೆ. ಪವನ ಮತ್ತು ಸೌರ ವಿದ್ಯುತ್ ಉತ್ಪಾದನೆಯ ವೆಚ್ಚಕ್ಕಿಂತ ಅಣು ವಿದ್ಯುತ್ ಉತ್ಪಾದನಾ ವೆಚ್ಚ ಜಾಸ್ತಿ. ಹಾಗಾಗಿಯೇ ಜರ್ಮನಿ, ಇಟಲಿ, ಜಪಾನ್ ರಾಷ್ಟ್ರಗಳು ಅಣು ವಿದ್ಯುತ್ ಘಟಕಗಳನ್ನು ಮುಚ್ಚಿವೆ.

ಕಂಪೆನಿ ಪ್ರಾಯೋಜಿತ ಸಂಶೋಧಕರು ತಂಪು ಪಾನೀಯ, ಕುಲಾಂತರಿ ತಳಿಗಳಿಂದ ಆರೋಗ್ಯಕ್ಕೆ ಮತ್ತು ಪರಿಸರಕ್ಕೆ ಯಾವುದೇ ರೀತಿಯ ಹಾನಿಯಿಲ್ಲ ಎಂದು ಹೇಳುತ್ತಾರೆ. ಆದರೆ ಸ್ವತಂತ್ರ ಸಂಶೋ ಧಕರು ವಾಸ್ತವತೆಯನ್ನು ಜನರ ಮುಂದಿಡುತ್ತಾರೆ. ಲಾಭವೊಂದನ್ನೇ ಕಣ್ಣೆದುರು ಇಟ್ಟುಕೊಂಡಿರುವ ಕಂಪೆನಿಗಳಿಗೆ ಪರಿಸರದ ಬಗ್ಗೆ ಕಾಳಜಿ ಇರಲು ಹೇಗೆ ಸಾಧ್ಯ? ಅವು ತಮ್ಮ ಕೆಲಸ ಸಾಧನೆಗಾಗಿ ಯಾವ ಬಾಗಿಲ ಮೂಲಕವಾದರೂ ಒಳ ಪ್ರವೇಶಿಸಬಲ್ಲವು.

ಪರಿಸರ ಕಾಳಜಿಯನ್ನು ದೃಷ್ಟಿಯಲ್ಲಿಟ್ಟುಕೊಂಡ ಅದೆಷ್ಟು ಸಂಶೋ ಧನೆಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ? ಅದೆಷ್ಟು ವರದಿಗಳನ್ನು ಸರಕಾರ ಮಾನ್ಯ ಮಾಡುತ್ತದೆ? ಒಂದು ವರದಿ ಸಮ್ಮತವಾಗ ದಿದ್ದರೆ ಅದರ ಇನ್ನಷ್ಟು ದುರ್ಬಲ ಆವೃತ್ತಿಯಂತಿರುವ ಮತ್ತೊಂದು ವರದಿ. ಅದಾದರೂ ಅನುಷ್ಠಾನವಾಗಿ, ಆಗಬಹುದಾದ ಅನಾಹುತ ಗಳಲ್ಲಿ ಸ್ವಲ್ಪವಾದರೂ ಆಗದಿರುವಂತೆ ಮಾಡಲಾಗುತ್ತ ದೆಯೆ? ಅದೂ ಇಲ್ಲ.

ರಾಜಕೀಯ ಹಸ್ತಕ್ಷೇಪ ಪರಿಸರಕ್ಕೆ ಪೂರಕವಾಗುವ ಯಾವುದೇ ವರದಿ ಜಾರಿಯಂಥ ಕ್ರಮ ಅಥವಾ ಇನ್ನಾವುದೇ ತೀರ್ಮಾನಗಳಲ್ಲಿ ದೊಡ್ಡ ತೊಡಕಾಗಿ ಬಂದು ನಿಲ್ಲುತ್ತದೆ. ಅಂಥ ಹಸ್ತಕ್ಷೇಪ ಖಂಡಿತ ಸಲ್ಲದು. ಪರಿಸರ ಸಂರಕ್ಷಣೆ ದೃಷ್ಟಿಯಿಂದ ಆಲೋಚಿಸಬೇಕು. ಆದರೆ, ಪರಿಸರ ಉಳಿಸುವ ಬಗೆಗಿನ ಕಳಕಳಿಯೇ ಅಧಿಕಾರಸ್ಥರಿಗೆ ಇಲ್ಲವೆಂಬುದು, ಅವರು ತಮಗೆ ಬೇಕಾದಂತೆ ಪ್ರಚೋದಿಸಿ, ತಪ್ಪು ಮಾಹಿತಿ ನೀಡಿ ಜನಾಭಿಪ್ರಾಯ ರೂಪಿಸಬಹುದಾದ ಪ್ರಭಾವ ಹೊಂದಿದ್ದಾರೆಂಬುದು ಇನ್ನಷ್ಟು ಕಳವಳಕ್ಕೆ ಕಾರಣವಾಗುವ ವಿಚಾರ.

ತಾಪಮಾನ ಬದಲಾವಣೆಯಂತೂ ನಿಸರ್ಗದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಇಂಥ ಸನ್ನಿವೇಶದಲ್ಲಿ ಪರಿಸರ ರಕ್ಷಣೆಗೆ ಜಾಗತಿಕ ಮಟ್ಟದ ನಿರ್ಧಾರದ ಅಗತ್ಯವೂ ಇದೆ. ಇಲ್ಲಿ ವಾಸ್ತವವೇನೆಂದರೆ, ಸರಕಾರಗಳು ಹವಾಮಾನ ವೈಪರೀತ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನೀತಿಗಳನ್ನು ರೂಪಿಸುತ್ತಿಲ್ಲ. ಬದಲಿಗೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ನೀತಿಗಳನ್ನೇ ಅನುಸರಿಸುತ್ತಿವೆ. ಇದು ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಸರಿ ಹೊಂದುವುದಿಲ್ಲ ಎಂಬ ಕಟು ಸತ್ಯ ಅರ್ಥವೇ ಆಗುವುದಿಲ್ಲ ಅಥವಾ ಅರ್ಥವಾದರೂ, ಅದು ಯಾರಿಗೂ ಬೇಡ.

ಉನ್ನತ ಶಿಕ್ಷಣ ಪಡೆಯುತ್ತಿರುವ ಈ ದೇಶದ ಪ್ರತಿಭಾವಂತರಿಗೂ ಪರಿಸರದ ಉಳಿವಿನ ಪ್ರಶ್ನೆ ಮುಖ್ಯವಾಗುತ್ತಿಲ್ಲ. ವ್ಯಾಸಂಗದ ಹೊತ್ತಿನಲ್ಲಿ ಅವರ ಮನಸ್ಸೆಲ್ಲ ಅಮೆರಿಕದಲ್ಲೇ ಇರುತ್ತದೆ. ಆನಂತರ ಅಲ್ಲಿಗೇ ಹಾರಿ, ತಮ್ಮ ಜೀವನ ಸಾರ್ಥಕವಾಯಿತು ಎಂದುಕೊಳ್ಳುವವರು ಅವರು. ಇವರಿಂದ ದೇಶಕ್ಕೆ ಯಾವುದೇ ಕೊಡುಗೆ ಸಿಗುತ್ತಿಲ್ಲ.

ತನ್ನ ಬದುಕಿಗೆ ಎಲ್ಲವನ್ನೂ ಕೊಟ್ಟ ಪ್ರಕೃತಿಯ ಮೇಲೆ ತೀರಾ ಸ್ವಾರ್ಥಕ್ಕಾಗಿ ಮನುಷ್ಯ ನಿರಂತರ ದಾಳಿ ನಡೆಸುತ್ತಲೇ ಬಂದಿದ್ದಾನೆ. ಇಂಥದೇ ಪರಿಸ್ಥಿತಿ ಮುಂದುವರಿದರೆ ನಮ್ಮ ಸರ್ವನಾಶ ನಮ್ಮ ಕಣ್ಣೆದುರೇ ನಡೆಯಲಿದೆ ಎಂಬುದರ ಸೂಚನೆಗಳು ಮತ್ತೆ ಮತ್ತೆ ಸಿಗುತ್ತಲೇ ಇವೆ. ಆದರೆ ಮನುಷ್ಯ ಮಾತ್ರ ಪಾಠ ಕಲಿಯುತ್ತಿಲ್ಲ.

ಪರಿಸರದ ಸಂರಕ್ಷಣೆ ಬಗ್ಗೆ ಕಾಳಜಿ ಮುಖ್ಯ. ಪರಿಸರದ ಸಂರಕ್ಷಣೆಗಾಗಿ ನಮ್ಮ ಕೆಲಸ ಕಾರ್ಯಗಳನ್ನು ಬದಿಗೊತ್ತುವ ಅವಶ್ಯಕತೆ ಇಲ್ಲ. ನಮ್ಮ ದೈನಂದಿನ ಜೀವನದಲ್ಲಿ ಕೆಲವು ಕ್ರಮಗಳನ್ನು ಅನುಸರಿಸಿದರೆ ಅದೇ ಪರಿಸರ ಉಳಿವಿಗೆ ಹಾದಿ ತೆರೆಯುತ್ತದೆ.

ನಿಸರ್ಗದ ಜೊತೆಗೆ ಸಹಬಾಳ್ವೆಯಂಥ ನಡೆಯು ಈಗ ತುರ್ತಾಗಿ ಬೇಕಿರುವ ಸಂಗತಿ. ಹೀಗೆ ಬೆರೆತು ಬಾಳಿದರೆ ಪರಿಸರದ ಮೇಲೆ ದುಷ್ಪರಿಣಾಮ ಬೀರುವ, ಪರಿಸರದ ಉಳಿವಿಗೆ ಪೂರಕವಾಗುವ ವಿಷಯಗಳ ಬಗ್ಗೆ ತಿಳಿವೊಂದು ತಾನೇ ತಾನಾಗಿ ಸಾಧ್ಯವಾಗುತ್ತದೆ. ಹಾಗೆಂದು ಅಷ್ಟು ಮಾತ್ರಕ್ಕೆ ಪರಿಸರದ ಉಳಿವು ಆಗಿಬಿಡುತ್ತದೆ ಎಂದಲ್ಲ. ಇಡೀ ವ್ಯವಸ್ಥೆಯನ್ನೇ ಸಂಕೀರ್ಣಗೊಳಿಸಿರುವ ಆಧುನಿಕ ಜಗತ್ತಿನ ತಂತ್ರಜ್ಞಾನದ ಸನ್ನಿವೇಶದಲ್ಲಿ ಬಹುತೇಕ ಪ್ರಕೃತಿಗೆ ವಿಮುಖವಾದ ಜೀವನಕ್ರಮ ಕಾಣಿಸುತ್ತಿದೆ. ಸರಿಪಡಿಸಲಾರದಷ್ಟು ದೂರವನ್ನು ಮನುಷ್ಯ ಕ್ರಮಿಸಿಬಿಟ್ಟಿದ್ದಾನೆ.

ಮನುಷ್ಯನ ಉದಾಸೀನತೆ, ತಿಳಿಗೇಡಿತನದಿಂದ ನಿಸರ್ಗ ಹೈರಾಣಾಗುತ್ತಲೇ ಇದೆ. ಇದಕ್ಕೆ ನಾವೆಲ್ಲರೂ ಪ್ರತ್ಯಕ್ಷವಾಗಿ ಅಥವಾ ಪರೋಕ್ಷ ವಾಗಿ ಕಾರಣರು ಎಂಬ ಸತ್ಯ ಕೂಡ ನಮ್ಮಲ್ಲಿ ಲಜ್ಜೆ ಮೂಡಿಸುತ್ತಿಲ್ಲ. ನಮ್ಮ ನಮ್ಮ ಮಟ್ಟದಲ್ಲಾದರೂ ಪರಿಸರದ ಉಳಿವಿನ ಬದ್ಧತೆಗೆ ಅನುಗುಣವಾಗಿ ಬದುಕಬೇಕು ಎಂದು ನಾವ್ಯಾರೂ ಚಿಂತಿಸುವುದಿಲ್ಲ. ಒಬ್ಬೊಬ್ಬರೇ ತಮ್ಮದೇ ಪಾಲಿನ ಕೊಡುಗೆ ಕೊಡತೊಡಗಿದರೂ ಒಂದು ಅಸಾಧಾರಣ ಬದಲಾವಣೆ ಸಾಧ್ಯವಾದೀತು.

ಆದರೆ ಯಾಕೆ ಅಂಥದೊಂದು ಬದ್ಧತೆ ಮೂಡುತ್ತಿಲ್ಲ? ಪ್ರವಾಸಿ ಗರೆಲ್ಲ ತಾವು ಹೋದ ಸ್ಥಳಗಳನ್ನು ತಮ್ಮದೇ ನೆಲ ಎಂಬ ಕಾಳಜಿಯಿಂದ ಕಾಣುವುದಿಲ್ಲ? ಅಲ್ಲಿನ ನೀರು ತಮ್ಮಿಂದಾಗಿ ಮಲಿನವಾಗದಂತೆ ಅವರೇಕೆ ಎಚ್ಚರ ವಹಿಸುವುದಿಲ್ಲ? ಅಲ್ಲಿ ಎಲ್ಲೆಂದರಲ್ಲಿ ಕಸ ಎಸೆದು ಬರುವಾಗ ಅವರ ನಾಗರಿಕ ಮನಸ್ಸಿಗೆ ಯಾಕೆ ಕೊಂಚವೂ ಅಪರಾಧಿ ಭಾವ ಕಾಡುವುದಿಲ್ಲ? ಪ್ರವಾಸಿ ಸ್ಥಳಗಳು, ಚಾರಣಕ್ಕೆ ಹೆಸರಾದ ತಾಣಗಳಲ್ಲೆಲ್ಲ ನಾವೇಕೆ ರಾಶಿ ಕಸ ಹಾಕಿಯೇ ಬರುತ್ತೇವೆ? ಅಲ್ಲಿರುವ ಪ್ಲಾಸ್ಟಿಕ್‌ನಂಥ ಕಸವನ್ನು ಸಂಗ್ರಹಿಸಿ ಆ ಪರಿಸರವನ್ನು ಸ್ವಚ್ಛಗೊಳಿಸುವ ಮಾತು ಹಾಗಿರಲಿ, ಆ ರಾಶಿಗೆ ನಾವೂ ಇನ್ನಷ್ಟು ಸೇರಿಸುತ್ತೇವೆ ಎಂದರೆ ಸುಶಿಕ್ಷಿತರ ಸಣ್ಣತನ ಎಂಥದ್ದು?

ಇತ್ತೀಗೆ ಉದ್ಯಮಿ ಆನಂದ್ ಮಹೀಂದ್ರಾ ಅವರು ಉತ್ತರ ಕನ್ನಡದ ಅಂಕೋಲೆಯ ಬಸ್ ನಿಲ್ದಾಣದಲ್ಲಿ ನೇರಳೆಯಂಥ ಜಾತಿಯ ಹಣ್ಣುಗಳನ್ನು ಮಾರುವ ಹಾಲಕ್ಕಿ ಮಹಿಳೆಯ ಬಗ್ಗೆ ಒಂದು ಪುಟ್ಟ ವೀಡಿಯೊ ಟ್ವಿಟ್ ಮಾಡಿದ್ದರು. ತನ್ನಿಂದ ಹಣ್ಣು ಕೊಂಡವರು, ಆ ಹಣ್ಣುಗಳನ್ನು ಇಟ್ಟುಕೊಡಲು ತಾನು ಬಳಸುವ ಎಲೆಯ ಪುಟ್ಟ ಬಟ್ಟಲನ್ನು, ಹಣ್ಣು ತಿಂದ ಬಳಿಕ ಬಸ್ ನಿಲ್ದಾಣದಲ್ಲೇ ಎಸೆದ ಬಳಿಕ ಅವನ್ನೆಲ್ಲ ಸಂಗ್ರಹಿಸಿ, ಅವುಗಳ ಜೊತೆ ಅಲ್ಲಿ ಬಿದ್ದ ಕಾಗದ ಮತ್ತಿತರ ಕಸವನ್ನೂ ಹೆಕ್ಕಿ ಒಂದೆಡೆ ಸಂಗ್ರಹಿಸಿ, ಬಸ್ ನಿಲ್ದಾಣ ಶುಚಿಯಾಗಿರುವಂತೆ ನೊಡಿಕೊಳ್ಳುವ ಆ ಅನಕ್ಷರಸ್ಥೆಗೆ ಅದನ್ನು ಯಾರಾದರೂ ಹೇಳಿಕೊಟ್ಟಿದ್ದರೆ? ಖಂಡಿತ ಇಲ್ಲ. ಅದು ಬದ್ಧತೆ. ತನ್ನ ಮನೆಯನ್ನು ಹೇಗೆ ಶುಚಿಯಾಗಿಟ್ಟುಕೊಳ್ಳುತ್ತೇನೋ ತನ್ನ ಸುತ್ತಲ ಪರಿಸರವನ್ನೂ ಶುಚಿಯಾಗಿಡಬೇಕು ಎಂಬ ಮನಸ್ಸು.

ಹಣ್ಣು ಮಾರಿ, ಕೆಲವೇ ಕೆಲವು ರೂ.ಗಳನ್ನು ಮಾತ್ರ ಗಳಿಸಲು ಶಕ್ತಳಾದ ಅಂಥ ಒಬ್ಬ ಅನಕ್ಷರಸ್ಥೆಗೂ ಈ ಬಗೆಯ ಬದ್ಧತೆ ಪರಿಸರದ ವಿಚಾರದಲ್ಲಿ ಸಾಧ್ಯವಾಗುವುದಾದರೆ, ವಿದ್ಯಾವಂತರೆನ್ನಿಸಿಕೊಂಡ ನಮಗೇಕೆ ಆಗುತ್ತಿಲ್ಲ.

ಮತ್ತೆ ಯೋಚಿಸಬೇಕಿರುವ ಪ್ರಶ್ನೆ ಇದು.

Similar News