ಪ್ರತಿಭಟನಾ ನಿರತ ಕುಸ್ತಿಪಟುಗಳು ಶೀಘ್ರದಲ್ಲಿ ಮಹಾ ಪಂಚಾಯತ್ ನಡೆಸಲಿದ್ದಾರೆ: ಬಜರಂಗ್ ಪುನಿಯಾ

Update: 2023-06-05 16:48 GMT

ಗುವಾಹಟಿ: ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಭಾರತೀಯ ಕುಸ್ತಿ ಫೆಡರೇಶನ್ ನ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳು ಶೀಘ್ರದಲ್ಲಿ ಮಹಾಪಂಚಾಯತ್ ನಡೆಸಲಿದ್ದಾರೆ ಎಂದು ಒಲಿಂಪಿಕ್ ಪದಕ ವಿಜೇತ ಬಜರಂಗ್ ಪುನಿಯಾ ರವಿವಾರ ತಿಳಿಸಿದ್ದಾರೆ. 

ಬಾಲಕಿ ಸೇರಿದಂತೆ ಮಹಿಳಾ ಅಥ್ಲೆಟ್ ಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಸಿಂಗ್ ಅವರನ್ನು ಬಂಧಿಸುವಂತೆ ಆಗ್ರಹಿಸಿ ಪುನಿಯಾ ಸೇರಿದಂತೆ ಭಾರತದ ಶ್ರೇಷ್ಠ ಕುಸ್ತಿಪಟುಗಳು, ಎರಡು ಬಾರಿ ವಿಶ್ವ ಚಾಂಪಿಯನ್ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಹಾಗೂ ಒಲಿಂಪಿಕ್ ಪದಕ ವಿಜೇತೆ ಸಾಕ್ಷಿ ಮಲಿಕ್ ಎಪ್ರಿಲ್ನಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. 

ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿದ ಬಳಿಕ ಬಿಜೆಪಿಯ ಸಂಸದನೂ ಆಗಿರುವ ಸಿಂಗ್ ವಿರುದ್ಧ ದಿಲ್ಲಿ ಪೊಲೀಸರು ಎರಡು ಪ್ರಕರಣಗಳನ್ನು ದಾಖಲಿಸಿದ್ದಾರೆ. 

ಪ್ರತಿಭಟನಾ ನಿರತ ಕುಸ್ತಿ ಪಟುಗಳನ್ನು ಬೆಂಬಲಿಸಿ ಹರ್ಯಾಣದ ಸೋನಿಪತ್ ಜಿಲ್ಲೆಯ ಮುಂದ್ಲಾನ ಗ್ರಾಮದಲ್ಲಿ ರವಿವಾರ ಆಯೋಜಿಸಿದ್ದ ಮಹಾಪಂಚಾಯತ್ನಲ್ಲಿ ಪುನಿಯಾ ಅವರು ಮಾತನಾಡಿದ್ದರು. ಈ ಕಾರ್ಯಕ್ರಮದಲ್ಲಿ ಜಮ್ಮು ಹಾಗೂ ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ ಮಲಿಕ್, ರೈತ ನಾಯಕ ಗುರ್ನಾಮ್ ಸಿಂಗ್ ಚಾಡುನಿ, ಭೀಮ್ ಆರ್ಮಿಯ ಮುಖ್ಯಸ್ಥ ಚಂದ್ರಶೇಖರ್ ಆಝಾದ್, ರಾಷ್ಟ್ರೀಯ ಲೋಕ ದಳದ ನಾಯಕ ಜಯಂತ್ ಚೌಧರಿ  ಹಾಗೂ ಇತರರು ಪಾಲ್ಗೊಂಡಿದ್ದರು. 

‘‘ನಿಮ್ಮ ಬೆಂಬಲದಿಂದ ನಾವು ಧೈರ್ಯದಿಂದ ಮುಂದುವರಿಯಲು ಸಾಧ್ಯವಾಗಿದೆ’’ ಎಂದು ಪುನಿಯಾ ಅವರು ಹೇಳಿದ್ದಾರೆ. ‘‘ಇತ್ತೀಚೆಗೆ ನಮ್ಮ ಆಟಗಾರರು, ಸಹೋದರಿಯರು ಹಾಗೂ ಪುತ್ರಿಯರಿಗೆ ಸಂಭವಿಸಿದ ಎರಡು ಮೂರು ಘಟನೆಗಳು ಅವರನ್ನು ಸಂಪೂರ್ಣ ಜರ್ಝರಿತರನ್ನಾಗಿಸಿದೆ’’ ಎಂದು ಅವರು ಹೇಳಿದ್ದಾರೆ. 

ಪ್ರತಿಯೊಬ್ಬರನ್ನು ಸಂಘಟಿಸಲು ಹಾಗೂ  ಅತ್ಲೆಟ್‌ಗಳಿಗೆ ನ್ಯಾಯ ನೀಡುವಂತೆ ಆಗ್ರಹಿಸಲು ಕುಸ್ತಿಪಟುಗಳು ಒಂದೇ ಮಹಾಪಂಚಾಯತ್ ಅನ್ನು ಆಯೋಜಿಸಲಿದ್ದಾರೆ ಎಂದು ಪುನಿಯಾ ಅವರು ಹೇಳಿದರು. ಹಲವು ಮಹಾಪಂಚಾಯತ್ ಗಳನ್ನು ನಡೆಸದಂತೆ ಖಾಪ್ ನಾಯಕರು ಹಾಗೂ ರೈತ ಸಂಘಟನೆಗಳನ್ನು ಅವರು ಆಗ್ರಹಿಸಿದರು. 

ಸಿಂಗ್ ಅವರನ್ನು ಬಂಧಿಸಲು ನರೇಂದ್ರ ಮೋದಿ ಸರಕಾರಕ್ಕೆ ರೈತ ನಾಯಕರು ಜೂನ್ 9ರ ವರೆಗೆ ಗಡುವು ನೀಡಿದ ಹಾಗೂ ಬಂಧಿಸದೇ ಇದ್ದರೆ, ಕುಸ್ತಿಪಟುಗಳನ್ನು ಬೆಂಬಲಿಸಿ ರಾಷ್ಟ್ರಾದ್ಯಂತ ನಡೆಸುವ ಪಂಚಾಯತ್ ಗಳನ್ನು ಆಯೋಜಿಸಲಾಗುವುದು ಎಂದು ಖಾಪ್ ನಾಯಕರು ಎಚ್ಚರಿಕೆ ನೀಡಿದ ಬಳಿಕ ಪುನಿಯಾ ಅವರ ಈ ಹೇಳಿಕೆ ಹೊರಬಿದ್ದಿದೆ.

Similar News