ಮಣಿಪಾಲ: ಕೆಎಂಸಿಯಲ್ಲಿ ಭ್ರೂಣಶಾಸ್ತ್ರ, ಸಂತಾನೋತ್ಪತ್ತಿ ವಿಜ್ಞಾನ ಕೇಂದ್ರ ಉದ್ಘಾಟನೆ

Update: 2023-06-07 15:54 GMT

ಉಡುಪಿ, ಜೂ.7: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಮಹಾ ವಿದ್ಯಾಲಯದಲ್ಲಿ  ಮಣಿಪಾಲ ಭ್ರೂಣಶಾಸ್ತ್ರ ಮತ್ತು ಸಂತಾನೋತ್ಪತ್ತಿ ವಿಜ್ಞಾನ ಕೇಂದ್ರದ (ಮಣಿಪಾಲ್ ಸೆಂಟರ್  ಫಾರ್ ಎಂಬ್ರಿಯಾಲಜಿ  ಆ್ಯಂಡ್  ರಿಪ್ರೊಡಕ್ಟಿವ್ ಸಾಯನ್ಸ್) ಉದ್ಘಾಟನೆ ಇಂದು ನಡೆಯಿತು.

ಬೆಂಗಳೂರಿನ ಫೆಡರಲ್ ರಿಪಬ್ಲಿಕ್ ಆಫ್ ಜರ್ಮನಿಯ ಕಾನ್ಸುಲ್ ಜನರಲ್  ಆಕಿಮ್ ಬುರ್ಕಾರ್ಟ ಮುಖ್ಯ ಅತಿಥಿ ಯಾಗಿ ಭಾಗವಹಿಸಿ ಕೇಂದ್ರ ವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ  ಬುರ್ಕಾರ್ಟ್, ಇಂಡೋ-ಜರ್ಮನ್ ಶೈಕ್ಷಣಿಕ ಪಾಲುದಾರಿಕೆಯು ಮಾನವನ ಆರೋಗ್ಯಕ್ಕೆ ಅನುಕೂಲಕರ ಅವಕಾಶಗಳನ್ನು ತೆರೆಯುತ್ತದೆ ಎಂದರು.

ಈ ಕೇಂದ್ರದ ಉದ್ಘಾಟನೆಯೊಂದಿಗೆ ಫಲವತ್ತತೆ ಹಾಗೂ ಇತರ ಸಂತಾನೋತ್ಪತ್ತಿ ಸಮಸ್ಯೆಗಳಲ್ಲಿ ಆರೋಗ್ಯ ವನ್ನು ಸುಧಾರಿಸುವ ಉದ್ದೇಶವನ್ನು ಪೂರೈಸಲಿದೆ. ಜರ್ಮನಿ ಮತ್ತು ಭಾರತವು ಕಳೆದ ಏಳು ದಶಕಗಳಲ್ಲಿ ನಿರಂತರವಾಗಿ ತಮ್ಮ ಸಂಬಂಧಗಳನ್ನು ಬಲಪಡಿಸಿಕೊಂಡಿವೆ ಎಂದೂ ಬುರ್ಕಾರ್ಟ್ ತಿಳಿಸಿದರು. 

ಮಾಹೆಯ ಪ್ರೊ ವೈಸ್ ಚಾನ್ಸಲರ್ ಡಾ.ಶರತ್ ಕುಮಾರ್ ರಾವ್ ಮಾತನಾಡಿ, ಬಂಜೆತನಕ್ಕೆ ಚಿಕಿತ್ಸೆ ಮತ್ತು ಬಂಜೆತನ ನಿರ್ಮೂಲನೆ  ಕ್ಷೇತ್ರವನ್ನು ಮುನ್ನಡೆಸುವಲ್ಲಿ ಸಂಶೋಧನೆಯು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಇದು ಹೊಸ ಚಿಕಿತ್ಸಾ ವಿಧಾನಗಳನ್ನು ಅನ್ವೇಷಿಸಲು ಮತ್ತು ಅಸ್ತಿತ್ವದಲ್ಲಿರುವ ತಂತ್ರಗಳನ್ನು ಹೆಚ್ಚಿಸಲು ವೇದಿಕೆಯನ್ನು ಒದಗಿಸುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಹೆ ಕುಲಪತಿ ಲೆ. ಜ.(ಡಾ.) ಎಂ ಡಿ ವೆಂಕಟೇಶ್, ಜರ್ಮನ್ ಸಂಸ್ಥೆಗಳೊಂದಿಗಿನ ನಮ್ಮ ಸಹಭಾಗಿತ್ವವು ಆಫ್ರಿಕನ್ ದೇಶಗಳಿಗೆ ತಮ್ಮ ಐವಿಎಫ್ ಕೇಂದ್ರಗಳಲ್ಲಿ ಕೆಲಸ ಮಾಡಲು ಸಮರ್ಥ ಮಾನವ ಸಂಪನ್ಮೂಲಗಳನ್ನು ಉತ್ಪಾದಿಸುವ ಮೂಲಕ ಈ ಕ್ಷೇತ್ರದಲ್ಲಿ ಅತ್ಯುತ್ತಮ ಆರೋಗ್ಯ ಸೇವೆ ನೀಡಲು ಸಹಾಯ ಮಾಡುತ್ತದೆ ಎಂದರು. 

ಕ್ಲಿನಿಕಲ್ ಭ್ರೂಣಶಾಸ್ತ್ರ  ವಿಭಾಗದ ಮುಖ್ಯಸ್ಥ ಪ್ರೊ.ಡಾ. ಸತೀಶ್ ಅಡಿಗ ಅವರು ಮಣಿಪಾಲ್ ಸೆಂಟರ್ ಫಾರ್ ಎಂಬ್ರಿಯಾಲಜಿ ಮತ್ತು ರಿಪ್ರೊಡಕ್ಟಿವ್ ಸಾಯನ್ಸ್‌ನ ಸಾಧನೆ ಕುರಿತು ವಿವರಿಸಿ ತಂತ್ರಜ್ಞಾನ ವರ್ಗಾವಣೆ ವಿಷಯದಲ್ಲಿ ಜರ್ಮನಿಯೊಂದಿಗಿನ  ಸಹಯೋಗವನ್ನು ಒತ್ತಿ ಹೇಳಿದರು.

ಕೆಎಂಸಿ ಮಣಿಪಾಲದ ಡೀನ್ ಡಾ ಪದ್ಮರಾಜ್ ಹೆಗ್ಡೆ ಸ್ವಾಗತಿಸಿ, ಪ್ರಜನನ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರಾಧ್ಯಾಪಕ ಡಾ.ಗುರುಪ್ರಸಾದ್ ಕಲ್ತೂರು ವಂದಿಸಿದರು. ರಿಕಿ ಜೋಶಿ ಕಾರ್ಯಕ್ರಮ ನಿರೂಪಿಸಿದರು.

Similar News