ಫ್ಯಾಕ್ಟ್‌ಚೆಕ್ | ರೈಲು ಅಪಘಾತಕ್ಕೆ ಕಾರಣನಾದ ಸ್ಟೇಷನ್ ಮಾಸ್ಟರ್ ಷರೀಫ್ ನಾಪತ್ತೆ ಎಂಬ ಸುದ್ದಿಯ ಸತ್ಯಾವಸ್ಥೆ ಏನು?

Update: 2023-06-07 18:24 GMT

ಭುವನೇಶ್ವರ್:‌ ಒಡಿಶಾದ ಬಾಲಾಸೋರ್ ರೈಲು ಅಪಘಾತಕ್ಕೆ ಓರ್ವ ಮುಸ್ಲಿಂ ಸ್ಟೇಷನ್ ಮಾಸ್ಟರ್ ಕಾರಣ ಎಂದು ಪ್ರತಿಪಾದಿಸಿ ರೈಲು ದುರಂತಕ್ಕೆ ಕೋಮು ಆಯಾಮ ನೀಡಲು ಹಲವು ಬಲಪಂಥೀಯ ಸಾಮಾಜಿಕ ಜಾಲತಾಣ ಬಳಕೆದಾರರು ಪ್ರಚಾರ ಮಾಡುತ್ತಿದ್ದಾರೆ.   ಅವಘಡಕ್ಕೆ ಕಾರಣಕರ್ತರಾದ ಸ್ಟೇಷನ್‌ ಮಾಸ್ಟರ್ ಷರೀಫ್ ಎಂಬುವವರು ನಾಪತ್ತೆಯಾಗಿದ್ದಾರೆ ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಸುಳ್ಳು ಸುದ್ದಿಯನ್ನು ವೈರಲ್‌ ಮಾಡುತ್ತಿದ್ದಾರೆ. 

ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಮು ವಿಭಜನೆ ರೀತಿ ಸುದ್ದಿ ಹರಡಿದರೆ ಕ್ರಮ ಕೈಗೊಳ್ಳುವುದಾಗಿ ಒಡಿಶಾ ಪೊಲೀಸರು ಎಚ್ಚರಿಸಿದ್ದರೂ, ದುರಂತವನ್ನು ಮುಸ್ಲಿಮರ ತಲೆ ಮೇಲೆ ಹೊರಿಸುವ ಪ್ರಯತ್ನದಲ್ಲಿ ಬಲಪಂಥೀಯರು ನಿರತರಾಗಿದ್ದಾರೆ. 

“ರೈಲು ಅಪಘಾತದ ತನಿಖೆಗೆ ಆದೇಶಿದ ನಂತರ ಷರೀಫ್‌ ಎಂಬ ಸ್ಟೇಷನ್ ಮಾಸ್ಟರ್ ತಲೆಮರಸಿಕೊಂಡಿದ್ದಾರೆ. ಇದೇ ಈ ಸಮುದಾಯದ ಸಮಸ್ಯೆ” ಎಂಬ ಶಿರ್ಷಿಕೆಯೊಂದಿಗೆ ಹಲವು ಪೋಸ್ಟ್‌ ಗಳು ವೈರಲ್‌ ಆಗಿದೆ. 

 “ಅಪಘಾತದ ನಂತರ ಸ್ಟೇಷನ್ ಮಾಸ್ಟರ್ ಷರೀಫ್ ನಾಪತ್ತೆಯಾಗಿದ್ದಾರೆ. ರೋಹಿಂಗ್ಯಾ ಬಾಂಗ್ಲಾದೇಶಿ ಮತ್ತು ಐಎಸ್‌ಐ ಎಂಬ ಆಯಾಮ ಮುನ್ನೆಲೆಗೆ ಬರುತ್ತಿದೆ. ಅಂದರೆ ಈ ಅಪಘಾತ ಭಯೋತ್ಪಾದಕ ಚಟುವಟಿಕೆಯಾಗಿರಬಹುದು. ಅಪಘಾತ ಸಂಭವಿಸಿದ ಸ್ಥಳಕ್ಕೆ ಸಮೀಪದಲ್ಲಿ ಮಸೀದಿ ಇದೆ.” ಎಂದು ಮತ್ತೊಬ್ಬ ವ್ಯಕ್ತಿ ಪೋಸ್ಟ್‌ ಹಾಕಿದ್ದಾರೆ. 

“ಶರೀಫ್ ಹೆಸರನ್ನು ಹೆಸರಿಸಿ. ಪೋಸ್ಟ್ ಮಾಡಿದ್ದು ಸ್ಟೇಷನ್ ಮಾಸ್ಟರ್ ಸದ್ಯ ತನಿಖೆಯ ಆದೇಶದ ನಂತರ ತಲೆಮರೆಸಿಕೊಂಡಿದ್ದಾನೆ. ಇಂದಿನಿಂದ ಉದ್ಯೋಗ ನೀಡುವ ಮೊದಲು ಹೆಸರನ್ನು ಪರಿಶೀಲಿಸಬೇಕಾಗಿದೆ. ಸ್ಟೇಷನ್ ಮಾಸ್ಟರ್ ಷರೀಫನನ್ನು ಪತ್ತೆಹಚ್ಚಿದರೆ ಅಪಘಾತ ಹೇಗೆ ಸಂಭವಿಸಿತು ಎಂದು ತಿಳಿಯುತ್ತದೆ. ಇದು ಅಪಘಾತವೂ ಅಲ್ಲ, ನಿರ್ಲಕ್ಷ್ಯವೂ ಅಲ್ಲ, ತಲೆಮರೆಸಿಕೊಂಡಿರುವ ಸ್ಟೇಷನ್ ಮಾಸ್ಟರ್ ಷರೀಫ್ ಇದನ್ನು ಉದ್ದೇಶಪೂರ್ವಕವಾಗಿ ಮಾಡಿದ್ದಾನೆ” ಎಂದು ಹಲವು ಪೋಸ್ಟ್‌ಗಳಲ್ಲಿ  ಪ್ರತಿಪಾದಿಸಲಾಗಿದೆ.

►► ಫ್ಯಾಕ್ಟ್‌ ಚೆಕ್:‌

ಬಹನಾಗಾ ಬಜಾರ್ ನಿಲ್ದಾಣದ ಸಮೀಪವಿರುವ ರೈಲು ಅಪಘಾತದ ಸ್ಥಳವು ಆಗ್ನೇಯ ರೈಲ್ವೆಯ ಖರಗ್‌ಪುರ ವಿಭಾಗದ ಅಡಿಯಲ್ಲಿ ಬರುತ್ತದೆ. ಆಗ್ನೇಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ (CPRO) ಆದಿತ್ಯ ಕುಮಾರ್ ಚೌಧರಿ ಅವರನ್ನು boomlive.in ಸಂಪರ್ಕಿಸಿದ್ದು, ಅವರು ಸ್ಟೇಷನ್ ಮಾಸ್ಟರ್ ಹೆಸರು ಎಸ್ ಬಿ ಮೊಹಂತಿ, ಷರೀಫ್‌ ಅಲಿ ಅಲ್ಲ  ಎಂದು ಸ್ಪಷ್ಟಪಡಿಸಿದ್ದಾರೆ. 

[Photo- boomlive.in]

ಅಪಘಾತದ ಸ್ಥಳದಿಂದ ಮೊಹಂತಿ ಓಡಿಹೋದರು ಎಂಬ ಪ್ರತಿಪಾದನೆಯನ್ನು ಚೌಧರಿ ತಳ್ಳಿಹಾಕಿದ್ದಾರೆ.
“ಘಟನೆ ಸಂಭವಿಸಿದ ನಂತರ ಎಸ್‌ಬಿ ಮೊಹಂತಿ ಪಲಾಯನ ಮಾಡಲಿಲ್ಲ. ಅಪಘಾತದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ ಅವರು ಇತರರೊಂದಿಗೆ ಸಹಕರಿಸುತ್ತಿದ್ದರು. ಯಾವುದೇ ಠಾಣಾಧಿಕಾರಿಗಳನ್ನು ಅಮಾನತು ಮಾಡಿಲ್ಲ” ಎಂದು ಚೌಧರಿ ಹೇಳಿದ್ದಾರೆ.

ಆಲ್ಟ್‌ನ್ಯೂಸ್ ಕೂಡ ಇದೇ ವಿಚಾರಕ್ಕೆ ಸಂಬಂಧಿಸಿ ಒಡಿಶಾದ ಹಿರಿಯ ಐಪಿಎಸ್ ಅಧಿಕಾರಿಗಳನ್ನು ಸಂಪರ್ಕಿಸಿದ್ದು,  ನಿಲ್ದಾಣದ ಸಿಬ್ಬಂದಿ ಯಾರೂ ತಲೆಮರೆಸಿಕೊಂಡಿಲ್ಲ ಮತ್ತು ಪೊಲೀಸ್ ಇಲಾಖೆ ಅವರೊಂದಿಗೆ ಸಂಪರ್ಕದಲ್ಲಿದೆ ಎಂದು ಖಚಿತಪಡಿಸಿದೆ. ಅಲ್ಲದೆ ನಿಲ್ದಾಣದ ಸಿಬ್ಬಂದಿಯಲ್ಲಿ ‘ಷರೀಫ್’ ಎಂಬ ಹೆಸರಿನ ಯಾವ ವ್ಯಕ್ತಿಯೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Similar News