ಖಜಾನೆಗೆ ನಿಗದಿತ ಅವಧಿಯಲ್ಲಿ ಜಮೆಯಾಗದ ಕೋಟ್ಯಂತರ ರೂ. ಮೊತ್ತದ ರಾಜಸ್ವ

ಉಪ ನೋಂದಣಾಧಿಕಾರಿಗಳಿಂದ ಹಣ ದುರುಪಯೋಗ?

Update: 2023-06-08 04:57 GMT

ಬೆಂಗಳೂರು: ರಾಜ್ಯದ ಸಬ್ ರಿಜಿಸ್ಟ್ರಾರ್ಗಳ ಕಚೇರಿಯಲ್ಲಿ ದಸ್ತಾವೇಜುಗಳನ್ನು ನೋಂದಾಯಿಸಿ ವಸೂಲಾಗುತ್ತಿರುವ ಕೋಟ್ಯಂತರ ರೂ. ಮೊತ್ತದ ರಾಜಸ್ವವು ಸರಕಾರದ ಖಜಾನೆಗೆ ನಿಗದಿತ ಅವಧಿಯೊಳಗೆ ಜಮೆಯಾಗುತ್ತಿಲ್ಲ. ಸರಕಾರದ ಖಜಾನೆಗೆ ಜಮೆ ಆಗಬೇಕಿದ್ದ ರಾಜಸ್ವವನ್ನು ಉಪ ನೋಂದಣಾಧಿಕಾರಿ ಮತ್ತು ಅವರ ಕಚೇರಿಗಳಲ್ಲಿನ ಸಿಬ್ಬಂದಿ ವಿಳಂಬವಾಗಿ ಜಮೆ ಮಾಡುತ್ತಿದ್ದಾರಲ್ಲದೇ ಹಲವು ಉಪ ನೋಂದಾಣಾಧಿಕಾರಿಗಳು  ರಾಜಸ್ವದ ಮೊತ್ತವನ್ನು ದುರುಪಯೋಪಡಿಸಿಕೊಳ್ಳುತ್ತಿರುವ ಪ್ರಕರಣಗಳು ಪತ್ತೆಯಾಗಿವೆ.

ಕೋಲಾರ ಜಿಲ್ಲಾ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ 2018-19 ಮತ್ತು 2019-20ರವರೆಗೆ ದಸ್ತಾವೇಜುಗಳನ್ನು ನೋಂದಾಯಿಸಿದ ವಸೂಲಾದ ರಾಜಸ್ವವು ಸರಕಾರದ ಖಜಾನೆಗೆ ಜಮೆ ಮಾಡದೇ ಸಬ್ ರಿಜಿಸ್ಟ್ರಾರ್ ಮತ್ತು ಇತರ ನೌಕರರು ದುರುಪಯೋಗಪಡಿಸಿಕೊಳ್ಳುತ್ತಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಉಪ ನೋಂದಣಾಧಿಕಾರಿಗಳು ಸೇರಿದಂತೆ ಇನ್ನಿತರ ನಾಲ್ವರು ನೌಕರರನ್ನು ಕಡ್ಡಾಯ ನಿವೃತ್ತಿಗೊಳಿಸಲು ಸರಕಾರವು ಆದೇಶಿಸಿದೆ.

ಕೋಲಾರ ಜಿಲ್ಲಾ ಉಪ ನೋಂದಣಿ ಕಚೇರಿಗಳಲ್ಲಿ 2018-19 ಮತ್ತು 2019-20ನೇ ಸಾಲಿಗೆ ಸಂಬಂಧಿಸಿದಂತೆ ಇರಸಾಲು ಮಾಡಿರುವ ಬಗ್ಗೆ ಉನ್ನತ ಅಧಿಕಾರಿಗಳು ಪರಿವೀಕ್ಷಣೆ ನಡೆಸಿದ ವೇಳೆಯಲ್ಲಿ ಒಟ್ಟು 116 ಚಲನ್ಗಳಿಂದ 68,24,305 ರೂ.ಗಳನ್ನು ಸರಕಾರದ ಬೊಕ್ಕಸಕ್ಕೆ ಜಮೆ ಮಾಡದೇ ದುರುಪಯೋಗಪಡಿಸಿಕೊಂಡಿರುವುದನ್ನು ವಿಚಾರಣಾಧಿಕಾರಿಗಳು ತನಿಖೆ ವೇಳೆ ರುಜುವಾತುಪಡಿಸಿದ್ದಾರೆ.

ಈ ಸಂಬಂಧ ಶಿಸ್ತು ಪ್ರಾಧಿಕಾರಿ ಹಾಗೂ ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರು ಅಧಿಕಾರಿಗಳನ್ನು  ಕಡ್ಡಾಯ ನಿವೃತ್ತಿಗೊಳಿಸಿ 2023ರ ಜೂನ್ 2ರಂದು ಆದೇಶ ಹೊರಡಿಸಿದ್ದಾರೆ. ಈ ಆದೇಶದ ಪ್ರತಿಯು ‘the-file.in’ಗೆ ಲಭ್ಯವಾಗಿದೆ.

ಕೋಲಾರದ ಜಿಲ್ಲಾ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ದಸ್ತಾವೇಜುಗಳ ನೋಂದಣಿಯಿಂದ ವಸೂಲಾದ ಲಕ್ಷಾಂತರ ರೂ.ಗಳನ್ನು ಸರಕಾರದ ಖಜಾನೆಗೆ ಜಮೆ ಮಾಡದೇ ದುರುಪಯೋಗಪಡಿಸಿಕೊಂಡಿರುವುದನ್ನು ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ಎಸ್.ಸಿ.ಇಂಗಳಗಿ ಅವರು ವಿಚಾರಣೆ ನಡೆಸಿ ಮಂಜುಳಾ, ನವೀನ್, ಚೌಡಾರೆಡ್ಡಿ ಎಂಬವರ ವಿರುದ್ಧದ  ಆರೋಪವನ್ನು ರುಜುವಾತುಗೊಳಿಸಿರುವುದು ಆದೇಶದಿಂದ ತಿಳಿದು ಬಂದಿದೆ.

ದಸ್ತಾವೇಜುಗಳನ್ನು ನೋಂದಾಯಿಸುವ ವೇಳೆ ವಸೂಲಾದ ಸರಕಾರದ ರಾಜಸ್ವಕ್ಕೆ ಸಂಬಂಧಿಸಿದಂತೆ 2018-19ನೇ ಸಾಲಿನ  67 ಚಲನ್ಗಳನ್ನು ಪರಿಶೀಲಿಸಿದಾಗ 37,88,965 ರೂ. ಹಾಗೂ 2019-20ನೇ ಸಾಲಿನಲ್ಲಿ 49 ಚಲನ್ಗಳನ್ನು ಪರಿಶೀಲಿಸಿದಾಗ 30,35,340 ರೂ.ಗಳಷ್ಟು ಹೀಗೆ ಎರಡು ವರ್ಷಗಳಲ್ಲಿ 116 ಚಲನ್ಗಳಿಂದ ಒಟ್ಟು 68,24,305 ರೂ.ಗಳಷ್ಟು ವಸೂಲಾದ ಸರಕಾರದ ರಾಜಸ್ವವು ಕೆಟಿಸಿ 25ರಲ್ಲಿ ಪ್ರತಿಬಿಂಬಿಸಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

ಅಲ್ಲದೇ ಡಿ ಗ್ರೂಪ್ ನೌಕರರಾದ ಲಕ್ಷ್ಮೀ ಎಂಬವರು ಕೋಲಾರ ಉಪ ನೋಂದಣಿ ಕಚೇರಿಯಲ್ಲಿ ವಸೂಲಾದ ಸರಕಾರದ ರಾಜಸ್ವ 76,73,782 ರೂ.ಗಳನ್ನು ಬ್ಯಾಂಕ್ಗೆ

ಇರಸಾಲು ಮಾಡಲು ವಹಿಸಿದ್ದರೂ ಜಮಾ ಮಾಡದೇ ದುರುಪಯೋಗಪಡಿಸಿಕೊಂಡಿದ್ದರು. ಹೀಗಾಗಿ ಕರ್ನಾಟಕ ಆರ್ಥಿಕ ಸಂಹಿತೆ ನಿಯಮ 4(ಎ) ಹಾಗೂ ಕರ್ನಾಟಕ ನೋಂದಣಿ ನಿಯಮಗಳು 1965ರ ನಿಯಮ 197ನ್ನು ಉಲ್ಲಂಘಿಸಿದ್ದರಿಂದಾಗಿ ಅವರನ್ನು ಅಮಾನತಿನಲ್ಲಿಟ್ಟು ಆದೇಶ ಹೊರಡಿಸಲಾಗಿತ್ತು.

ಕೋಲಾರ ಉಪನೋಂದಣಾಧಿಕಾರಿ ಕಚೇರಿಯಲ್ಲಿ 2018-19ನೇ ಸಾಲಿನಲ್ಲಿ ಹಿರಿಯ ಉಪ ನೋಂದಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ  ಎಸ್.ದಿನೇಶ್ ಎಂಬವರು ದಸ್ತಾವೇಜುಗಳ ನೋಂದಣಿಯಿಂದ 8,40,539 ರೂ.ಗಳಷ್ಟು ಮೊತ್ತವು ಕೆಟಿಸಿ 25ರಲ್ಲಿ  ಪ್ರತಿಬಿಂಬಿತವಾಗಿರಲಿಲ್ಲ. ನೋಂದಣಿ ಸಮಯದಲ್ಲಿ ವಸೂಲಾದ ರಾಜಸ್ವವನ್ನು ಸರಕಾರದ ಖಾತೆಗೆ ಜಮಾ ಮಾಡದೆ ದುರುಪಯೋಗಪಡಿಸಿಕೊಂಡಿರುವುದು ತಪಾಸಣೆ ವರದಿಯಿಂದ  ಸಾಬೀತಾಗಿತ್ತು.  ಈ ಹಣವನ್ನು ಮರುದಿನವೇ ಸರಕಾರಿ ಖಜಾನೆಗೆ ಜಮಾ ಮಾಡಬೇಕು ಎಂದು ಸೂಚಿಸಿದ್ದರೂ ಮರು ದಿನ ಖಜಾನೆಗೆ ಜಮಾ ಮಾಡಿರಲಿಲ್ಲ.

ಮತ್ತೊಬ್ಬ ಉಪ ನೋಂದಣಾಧಿಕಾರಿ ಮಂಜುಳಾ ಎಂಬವರು 2018-19ರಿಂದ 2019-20ರವರೆಗೆ ಕೋಲಾರದ ಉಪ ನೋಂದಣಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂದರ್ಭದಲ್ಲಿ ವಸೂಲಾದ 53,29,450 ರೂ.ಗಳಷ್ಟು ಮೊತ್ತವು ಕೆಟಿಸಿ 25ರಲ್ಲಿ ಪ್ರತಿಬಿಂಬಿತವಾಗಿರಲಿಲ್ಲ. ಈ ಹಣವನ್ನೂ ಮಂಜುಳಾ ಅವರು ಸರಕಾರದ ಖಜಾನೆಗೆ ಜಮೆ ಮಾಡದೆ ದುರುಪಯೋಗಪಡಿಸಿಕೊಂಡಿದ್ದರು.

ಎಂ.ನವೀನ್ ಎಂಬವರು ಇದೇ ಕಚೇರಿಯಲ್ಲಿ ಉಪ ನೋಂದಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ದಸ್ತಾವೇಜುಗಳ ನೋಂದಣಿಯಿಂದ ವಸೂಲಾಗಿದ್ದ 3,58,288 ರೂ.ಗಳಷ್ಟು ಮೊತ್ತವನ್ನು ಸರಕಾರದ ಖಾತೆಗೆ ಜಮಾ ಮಾಡದೇ ದುರುಪಯೋಗಪಡಿಸಿಕೊಂಡಿದ್ದರು. ಅಲ್ಲದೆ ಇದೇ ಅಧಿಕಾರಿ 3,83,433 ರೂ.ಗಳ ರಾಜಸ್ವವನ್ನು ಮರುದಿನವೇ ಖಜಾನೆಗೆ ಜಮಾ ಮಾಡಬೇಕಿದ್ದರೂ ವಿಳಂಬವಾಗಿ ಸರಕಾರದ ಖಜಾನೆಗೆ ಜಮೆ ಮಾಡಿರುವುದು ತಪಾಸಣೆ ವೇಳೆಯಲ್ಲಿ ಕಂಡು ಬಂದಿತ್ತು.

ದ್ವಿತೀಯ ದರ್ಜೆ ಸಹಾಯಕ ಚೌಡಾರೆಡ್ಡಿ ಅವರು 2018-19, 2019-20ನೇ ಸಾಲಿನಲ್ಲಿ ಪ್ರಭಾರ ಉಪ ನೋಂದಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ವೇಳೆಯಲ್ಲಿ ದಸ್ತಾವೇಜುಗಳ ನೋಂದಣಿಯಿಂದ ವಸೂಲಾಗಿದ್ದ 9,61,559 ರೂ.ಗಳಷ್ಟು ಮೊತ್ತವನ್ನು ಸರಕಾರದ ಖಾತೆಗೆ ಜಮಾ ಮಾಡಿರಲಿಲ್ಲ. ಈ ಎಲ್ಲ ಪ್ರಕರಣಗಳ ಕುರಿತು ನಿವೃತ್ತ ನ್ಯಾಯಾಧೀಶ ಹಾಗೂ ವಿಚಾರಣಾಧಿಕಾರಿಯಾಗಿದ್ದ ಎಸ್.ಸಿ.ಇಂಗಳಗಿ ಅವರು ವಿಚಾರಣೆ ವರದಿ ಸಲ್ಲಿಸಿದ್ದರು.

ಆಪಾದಿತರಾದ ಮಂಜುಳಾ ಅವರ ಹೇಳಿಕೆ ಮತ್ತು ಲಿಖಿತವಾದವನ್ನು ಪರಿಶೀಲಿಸಿದಾಗ ಇವರು ಪ್ರತೀ ತಿಂಗಳು ತಮ್ಮ ಕಚೇರಿಯ ಸ್ಟೇಟ್ಮೆಂಟ್ಗೂ ಮತ್ತು ಖಜಾನೆಯ ಸ್ಟೇಟ್ಮೆಂಟ್ಗೂ ಸಮನ್ವಯ ಮಾಡಲು ಕ್ರಮ ಜರುಗಿಸಿದ್ದಲ್ಲಿ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ವರ್ಷಗಟ್ಟಲೇ ಇಂತಹ ಕ್ರಮ ಜರುಗಿಸದೇ ಇರುವುದು ಇವರ ಕರ್ತವ್ಯದಲ್ಲಿ ಶ್ರದ್ಧೆ ಮತ್ತು ನಿಷ್ಠೆ ಇಲ್ಲದೇ ಇರುವುದು ಸೂಚಿಸುತ್ತದೆ. ಇವರ ವಿರುದ್ಧದ ಆರೋಪವು ರುಜುವಾತಾಗಿದೆ ಎಂದು ನಿರ್ಧರಿಸಿದ್ದೇನೆ ಎಂದು ಇಂಗಳಗಿ ಅವರು ವರದಿಯಲ್ಲಿ ದಾಖಲಿಸಿದ್ದಾರೆ.

ಮುದ್ರಾಂಕ ಮತ್ತು ನೋಂದಣಿ ಶುಲ್ಕಗಳನ್ನು ನಗದು ರೂಪದಲ್ಲಿ ವಸೂಲು ಮಾಡಬಾರದು ಎಂದು 2012ರ ಎಪ್ರಿಲ್ 30ರಂದು ಸುತ್ತೋಲೆ ಹೊರಡಿಸಲಾಗಿತ್ತು. ಅಲ್ಲದೆ 2008ರ ಮಾರ್ಚ್ 3ರ ಎಸ್ಟಿಪಿ 220/05-06 ಅಡಿಯಲ್ಲಿ ನಿರ್ದೇಶನವನ್ನೂ ನೀಡಲಾಗಿತ್ತು. ಈ ನಿಯಮಗಳ ಅನ್ವಯ ಉಪ ನೋಂದಣಿ ಕಚೇರಿಗಳಲ್ಲಿ ವಸೂಲಾದ ಮುದ್ರಾಂಕ ಶುಲ್ಕ, ನೋಂದಣಿ ಶುಲ್ಕ ಮತ್ತು ಇತರ ಶುಲ್ಕಗಳನ್ನು ಸರಕಾರಿ ಲೆಕ್ಕಕ್ಕೆ ಜಮೆ ಮಾಡುವ ಕುರಿತು ಮತ್ತು ಪ್ರತೀ ತಿಂಗಳು ಮರು ಹೊಂದಾಣಿಕೆ ಮಾಡಿ ಜಿಲ್ಲಾ ನೋಂದಣಾಧಿಕಾರಿಗಳಿಗೆ ವರದಿ ಸಲ್ಲಿಸಬೇಕು ಎಂದೂ ನಿರ್ದೇಶನ ನೀಡಲಾಗಿತ್ತು.

ಆದರೆ, ಕೋಲಾರ ಜಿಲ್ಲಾ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಕಾರ್ಯನಿರ್ವಹಿಸಿದ್ದ ಉಪ ನೋಂದಣಾಧಿಕಾರಿಗಳು ಈ ಎಲ್ಲವನ್ನೂ ಗಾಳಿಗೆ ತೂರಿ ದಸ್ತಾವೇಜುಗಳನ್ನು ನೋಂದಣಿಯಿಂದ ವಸೂಲಾದ ಲಕ್ಷಾಂತರ ರೂ. ಮೊತ್ತವನ್ನು ಸರಕಾರದ ಖಜಾನೆಗೆ ಜಮೆ ಮಾಡದೆ ನಿಯಮಾವಳಿಗಳನ್ನು ಉಲ್ಲಂಘಿಸಿದ್ದರು.

Similar News