ಬಿ.ಎಲ್. ಸಂತೋಷ್ ‘ಪ್ರಭಾವ’ ಮತ್ತು ಕರ್ನಾಟಕದಲ್ಲಿ ಬಿಜೆಪಿ ತೆತ್ತ ಬೆಲೆ

Update: 2023-06-08 07:15 GMT

ಒಂದೇ ಒಂದು ಚುನಾವಣೆಯಲ್ಲಿ ಸ್ಪರ್ಧಿಸಿಲ್ಲವಾದರೂ, ಬಿಜೆಪಿಯ ಚುನಾವಣಾ ತಂತ್ರಕ್ಕೆ ಬಂದಾಗ, ಅದರಲ್ಲೂ ದಕ್ಷಿಣದ ರಾಜ್ಯಗಳ ವಿಚಾರದಲ್ಲಿ ಪ್ರಶ್ನಾತೀತ ನಿರ್ಧಾರ ತೆಗೆದುಕೊಳ್ಳುವಷ್ಟು ಸಂತೋಷ್ ಪ್ರಭಾವಿ. ಆರೆಸ್ಸೆಸ್‌ಗೆ ನಿಕಟವಾಗಿರುವ ಅನೇಕರು ಪಕ್ಷದಲ್ಲಿ ಇಂಥ ಪ್ರಭಾವ ಹೊಂದಿ ರುವುದು ನಿಜವಾದರೂ, ಸಂತೋಷ್ ಭಿನ್ನವೆನ್ನಿಸುವುದು ಬಿಜೆಪಿಯ ಅತ್ಯಂತ ಶಕ್ತಿಶಾಲಿ ಜೋಡಿಯಾದ ಮೋದಿ ಮತ್ತು ಶಾ ಮೇಲೆ ಹಿಡಿತ ಹೊಂದಿದ್ದಾರೆಂಬ ಕಾರಣದಿಂದ. ಪಕ್ಷದ ಕೆಲಸ, ಯಾರಿಗೆ ಭಡ್ತಿ ಸಿಗಬೇಕು, ಬಿಜೆಪಿ ಸರಕಾರಗಳ ಕಾರ್ಯನಿರ್ವಹಣೆ ಎಲ್ಲದರಲ್ಲಿಯೂ ಸಂತೋಷ್ ಅಭಿಪ್ರಾಯಕ್ಕೆ ಮಹತ್ವವಿದೆ.

ಮೋದಿ, ಶಾ ಬಳಿಕ ಬಿಜೆಪಿಯ ಮೇಲೆ ಪ್ರಬಲ ಹಿಡಿತ ಹೊಂದಿರುವ ವ್ಯಕ್ತಿ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್. ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ತಮಗೆ ಟಿಕೆಟ್ ನಿರಾಕರಿಸಿದಾಗ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಕರ್ನಾಟಕ ಬಿಜೆಪಿ ಘಟಕವನ್ನು ಸಂತೋಷ್ ದುರುಪಯೋಗ ಮಾಡಿಕೊಳುತ್ತಿರುವ ಬಗ್ಗೆ ದೂಷಿಸಿದರು. ಸಂತೋಷ್ ಬಗ್ಗೆ ಹಿರಿಯ ನಾಯಕರೊಬ್ಬರು ಬಹಿರಂಗವಾಗಿ ಮಾತನಾಡಿದ್ದು ಅದೇ ಮೊದಲು. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ನಿಂದ ಮೂರು ಬಾರಿ ಶಾಸಕರಾಗಿದ್ದ ಶೆಟ್ಟರ್ ಟಿಕೆಟ್ ನಿರಾಕರಣೆ ಬಳಿಕ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರು. ಬಿಜೆಪಿಯಲ್ಲಿದ್ದಾಗ ಮಾತನಾಡದೆ, ಆರೋಪ ಮಾಡಲು ಕಾಂಗ್ರೆಸ್ ಸೇರುವವರೆಗೆ ಏಕೆ ಕಾಯುತ್ತಿದ್ದರು ಎಂದು ಸಂತೋಷ್ ಬೆಂಬಲಿಗರು ಪ್ರಶ್ನಿಸಿದ್ದಕ್ಕೆ ಶೆಟ್ಟರ್ ಉತ್ತರ, ಬಿಜೆಪಿಯಲ್ಲಿ ಯಾರೂ ಸಂತೋಷ್ ವಿರುದ್ಧ ಬಹಿರಂಗವಾಗಿ ಮಾತನಾಡಲು ಸಾಧ್ಯವಿಲ್ಲ ಎಂಬುದಾಗಿತ್ತು.

ಬಿಜೆಪಿಯಲ್ಲಿ ನಂಬರ್ ಥ್ರೀ ಎಂದು ಹಲವರು ನಂಬಿರುವ ಸಂತೋಷ್, ಆರೆಸ್ಸೆಸ್‌ನ ಸರಳ, ನಿಸ್ವಾರ್ಥ ಕಾರ್ಯಕರ್ತ ಎಂದೇ ಕಾಣಿಸಿಕೊಳ್ಳುತ್ತಿರುವವರು. ಪಕ್ಷದ ಅನೇಕ ನಾಯಕರು ಅವರ ಸರಳತೆ, ವಿನಮ್ರತೆಯ ಬಗ್ಗೆಯೇ ಹೇಳುತ್ತಾರೆ. ಸುಮಾರು ಎರಡು ದಶಕಗಳಿಂದ ಪಕ್ಷಕ್ಕಾಗಿ ದುಡಿಯುತ್ತಿದ್ದರೂ ಅವರಿಗೆ ರಾಜಕೀಯ ಮಹತ್ವಾಕಾಂಕ್ಷೆಗಳಿಲ್ಲ ಎಂದು ಕೂಡ ಹೇಳುವುದುಂಟು.

ಆದರೆ ರಾಜ್ಯ ಬಿಜೆಪಿಯ ಕೆಲವರೂ ಸೇರಿದಂತೆ ಸಂತೋಷ್ ವಿರೋಧಿಗಳು ಮಾತ್ರ ಅವರ ಸರಳತೆಯನ್ನು ತೋರಿಕೆ ಎನ್ನುತ್ತಾರೆ. ಅವರು ಪಕ್ಷದ ಹಿತಾಸಕ್ತಿಗಳಿಗಿಂತ ಹೆಚ್ಚಾಗಿ ತಮ್ಮ ಹಿತಾಸಕ್ತಿಗಳನ್ನು ಪೋಷಿಸುತ್ತಿರುವ ತಂತ್ರಗಾರ ಎಂದು ಆರೋಪಿಸುತ್ತಾರೆ. ತಾವು ಮೇಲಕ್ಕೇರಲು ಪಕ್ಷದಲ್ಲಿನ ಪ್ರತಿಸ್ಪರ್ಧಿಗಳನ್ನು ವ್ಯವಸ್ಥಿತವಾಗಿ ತುಳಿಯುತ್ತಿದ್ದಾರೆ ಎಂದೂ ದೂಷಿಸುತ್ತಾರೆ.

ಐವತ್ತೇಳು ವರ್ಷದ ಸಂತೋಷ್ ಶಿವಳ್ಳಿ ಬ್ರಾಹ್ಮಣ ಸಮುದಾಯದವರಾಗಿದ್ದು, ಜಾತಿಬಲದಲ್ಲಿ ಅವರಿಗೆ ಮತ ಬ್ಯಾಂಕ್ ಇಲ್ಲ. ಅವರು ಒಂದೇ ಒಂದು ಚುನಾವಣೆಯಲ್ಲಿ ಸ್ಪರ್ಧಿಸಿದವರೂ ಅಲ್ಲ. ಆದರೆ ಪಕ್ಷದ ಕಾರ್ಯಕರ್ತರನ್ನು ಸಜ್ಜುಗೊಳಿಸುವ ವ್ಯಕ್ತಿಯಾಗಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಕರ್ನಾಟಕದಲ್ಲಿಯೂ ಅವರು ಇಂಥದೇ ಪಡೆಯನ್ನು ಕಟ್ಟಿದ್ದಕ್ಕಾಗಿ ಪ್ರಭಾವಿಯಾಗಿದ್ದಾರೆ.

ಬಿಜೆಪಿಯೊಳಗೆ ಸಂಘಟನಾ ಪ್ರಧಾನ ಕಾರ್ಯದರ್ಶಿ ಯಾಗುವವರು ಸಾಮಾನ್ಯವಾಗಿ ಆರೆಸ್ಸೆಸ್‌ನವರೇ ಆಗಿದ್ದು, ಸಂಘದ ಸಿದ್ಧಾಂತವನ್ನು ಪಕ್ಷದಲ್ಲಿ ಜಾರಿಗೊಳಿಸುವ ಹೊಣೆ ಇರುತ್ತದೆ. ಹಿಂದೆ ಈ ಸ್ಥಾನದಲ್ಲಿದ್ದವರು ಪಕ್ಷದೊಳಗೆ ಪ್ರಭಾವಿಯಾಗುತ್ತಿದ್ದ ಸಂದರ್ಭದಲ್ಲಿ ನಿರ್ಬಂಧಕ್ಕೊಳಗಾದ ಉದಾಹರಣೆಗಳಿವೆ. ಅದರೆ ಸಂತೋಷ್ ಹಾಗೆ ಸೀಮಿತರಾಗದೆ ಸೈದ್ಧಾಂತಿಕ ವಿಚಾರಕ್ಕಿಂತ ರಾಜಕೀಯ ತಂತ್ರಗಾರಿಕೆಗೆ ಒತ್ತುಕೊಟ್ಟು, ಮೋದಿಯ ಹಿಂದೆ ನಿಂತವರು.

ಒಂದು ರಾಜ್ಯದ ಹಿರಿಯ ಸಚಿವರು ಅಥವಾ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕಾದಾಗ ಸಂತೋಷ್ ಅವರಿಂದ ಕರೆ ಬರುತ್ತದೆ. ಯಾವುದೇ ನಿರ್ದಿಷ್ಟ ವಿಷಯದ ಬಗ್ಗೆ ಪ್ರಧಾನಿ ಮೋದಿಯವರ ಆದೇಶದಂತೆ ಕೇಂದ್ರ ಮಂತ್ರಿಗಳನ್ನು ಕೇಳಬೇಕಾದರೆ, ಅದನ್ನು ತಿಳಿಸುವವರು ಸಂತೋಷ್. ಹೀಗೆ ರಾಜಕೀಯವಾಗಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿರುವ ಅವರಿಗೆ ಮೋದಿಯ ರಾಜಕೀಯ ನಿರ್ವಾಹಕರಾಗಿ ಕಾರ್ಯನಿರ್ವಹಿಸಲು ಇಷ್ಟ. ಮೋದಿ ಕೂಡ ಒಂದು ಕಾಲದಲ್ಲಿ ಸಂತೋಷ್ ಈಗ ಹೊಂದಿದ್ದ ಸ್ಥಾನವನ್ನೇ ಹೊಂದಿದ್ದರು ಮತ್ತು ಬಳಿಕ ಗುಜರಾತ್ ಸಿಎಂ, ಪ್ರಧಾನಿ ಹುದ್ದೆ ಏರಿದರು.

ಒಂದೇ ಒಂದು ಚುನಾವಣೆಯಲ್ಲಿ ಸ್ಪರ್ಧಿಸಿಲ್ಲವಾದರೂ, ಬಿಜೆಪಿಯ ಚುನಾವಣಾ ತಂತ್ರಕ್ಕೆ ಬಂದಾಗ, ಅದರಲ್ಲೂ ದಕ್ಷಿಣದ ರಾಜ್ಯಗಳ ವಿಚಾರದಲ್ಲಿ ಪ್ರಶ್ನಾತೀತ ನಿರ್ಧಾರ ತೆಗೆದುಕೊಳ್ಳುವಷ್ಟು ಸಂತೋಷ್ ಪ್ರಭಾವಿ. ಆರೆಸ್ಸೆಸ್‌ಗೆ ನಿಕಟವಾಗಿರುವ ಅನೇಕರು ಪಕ್ಷದಲ್ಲಿ ಇಂಥ ಪ್ರಭಾವ ಹೊಂದಿರುವುದು ನಿಜವಾದರೂ, ಸಂತೋಷ್ ಭಿನ್ನವೆನ್ನಿಸುವುದು ಬಿಜೆಪಿಯ ಅತ್ಯಂತ ಶಕ್ತಿಶಾಲಿ ಜೋಡಿಯಾದ ಮೋದಿ ಮತ್ತು ಶಾ ಮೇಲೆ ಹಿಡಿತ ಹೊಂದಿದ್ದಾರೆಂಬ ಕಾರಣದಿಂದ. ಪಕ್ಷದ ಕೆಲಸ, ಯಾರಿಗೆ ಭಡ್ತಿ ಸಿಗಬೇಕು, ಬಿಜೆಪಿ ಸರಕಾರಗಳ ಕಾರ್ಯನಿರ್ವಹಣೆ ಎಲ್ಲದರಲ್ಲಿಯೂ ಸಂತೋಷ್ ಅಭಿಪ್ರಾಯಕ್ಕೆ ಮಹತ್ವವಿದೆ.

2006ರಿಂದ 2014ರ ಅವಧಿಯಲ್ಲಿ ಕರ್ನಾಟಕ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಸಮಯದಿಂದ ಪಕ್ಷದ ಮೇಲಿನ ಅವರ ಹಿಡಿತ ಶುರುವಾಯಿತು. ಈ ಸಮಯದಲ್ಲಿ ಅವರು ನಿರಂತರವಾಗಿ ಹತ್ತಿಕ್ಕಲು ಯತ್ನಿಸಿದ್ದು ಇಬ್ಬರನ್ನು. ಒಬ್ಬರು ದಿ. ಅನಂತ್ ಕುಮಾರ್ ಮತ್ತು ಇನ್ನೊಬ್ಬರು ಮಾಜಿ ಸಿಎಂ ಯಡಿಯೂರಪ್ಪ.

ಅನಂತ್ ಕುಮಾರ್ ಮೇಲಿನ ಸಿಟ್ಟಿಗೆ ಅವರು ಕೂಡ ಬ್ರಾಹ್ಮಣ ಮತ್ತು ಆರೆಸ್ಸೆಸ್‌ಗೆ ಹತ್ತಿರವಾಗಿದ್ದರು ಎಂಬುದು ಕಾರಣವಾಗಿತ್ತು ಎನ್ನಲಾಗುತ್ತದೆ. ಆದರೆ ಅನಂತ್ ಕುಮಾರ್ ಚುನಾವಣಾ ರಾಜಕೀಯದಲ್ಲಿ ಮತ್ತು ಆಡಳಿತಾತ್ಮಕವಾಗಿ ಯಶಸ್ಸು ಕಂಡವರಾಗಿದ್ದರು. ಅದು ಸಂತೋಷ್‌ಗೆ ಸಾಧ್ಯವಾಗಿರಲಿಲ್ಲ. 2014ರಲ್ಲಿ ಮೋದಿ ಮತ್ತು ಶಾ ಕೈಗೆ ಪಕ್ಷದ ಅಧಿಕಾರ ಬಂದಾಗ, ಮೋದಿ ದೂರವಿಟ್ಟಿದ್ದ ಅಡ್ವಾಣಿ ಅವರ ಜೊತೆ ಅನಂತ್ ಕುಮಾರ್ ಆಪ್ತತೆಯ ಬಗ್ಗೆ ಪದೇ ಪದೇ ಹೇಳುವ ಮೂಲಕ ಅನಂತ್ ಕುಮಾರ್ ಅವರನ್ನು ಬದಿಗೆ ಸರಿಸುವಲ್ಲಿ ಸಂತೋಷ್ ಗೆದ್ದರು.

ಆದರೆ ಯಡಿಯೂರಪ್ಪವಿಚಾರದಲ್ಲಿ ಅದು ಅಷ್ಟು ಸುಲಭವಿರಲಿಲ್ಲ. ಅವರನ್ನು ತಡೆಯುವುದು ಕಷ್ಟವಾಗಿತ್ತು. ಅವರು ಬಿಜೆಪಿಯನ್ನೂ ಮೀರಿ ನಿಂತ ಪ್ರಭಾವಿಯಾಗಿದ್ದರು. ರಾಜ್ಯ ಬಿಜೆಪಿಗೂ ಅವರು ಅನಿವಾರ್ಯವಾಗಿದ್ದರು. ಹಾಗಾಗಿ ಸಂತೋಷ್ ತಮಗೆ ಇನ್ನೂ ಹೆಚ್ಚು ಮಹತ್ವ ಸಿಗುವ ಸನ್ನಿವೇಶಕ್ಕಾಗಿ ಕಾದಿದ್ದರು.

ಮೋದಿ-ಶಾ ಹಿಡಿತದಲ್ಲಿ ಬಿಜೆಪಿ ಆರೆಸ್ಸೆಸ್‌ಗಿಂತ ದೊಡ್ಡ ದಾಗಿ ಬೆಳೆಯುತ್ತಿರುವಾಗ ಸಂಘದ ಪ್ರತಿನಿಧಿ ಸಂತೋಷ್ ಆ ಜೋಡಿಯನ್ನು ಎಂದೂ ಎದುರುಹಾಕಿಕೊಳ್ಳದೆ, ಅವರ ವಿಶ್ವಾಸವನ್ನು ಗಳಿಸಿದರು. ಆ ಜೋಡಿಗೆ ಯಾವ ವಿಚಾರದಲ್ಲಿ ತಿಳಿವಳಿಕೆ ಮತ್ತು ಒಳನೋಟ ಕಡಿಮೆಯಿದೆ ಎಂಬುದನ್ನು ಕಂಡುಕೊಂಡರು. ಅದು ದಕ್ಷಿಣ ಭಾರತವಾಗಿತ್ತು. ಇಲ್ಲಿ ಪಕ್ಷದ ವಿಸ್ತರಣೆಗೆ ಸಂತೋಷ್ ಅವರೇ ಸರಿ ಎಂಬ ಅಭಿಪ್ರಾಯಕ್ಕೆ ಮೋದಿ-ಶಾ ಜೋಡಿ ಬರುವಂತೆ ಮಾಡುವಲ್ಲಿಯೂ ಯಶಸ್ವಿಯಾದರು.

2018ರ ಚುನಾವಣೆಯಲ್ಲಿ ಬಿಜೆಪಿ ಸರಳ ಬಹುಮತವನ್ನು ಪಡೆಯಲು ವಿಫಲವಾದ ನಂತರ, ಅವರು ಜಾಣ್ಮೆಯಿಂದ ಎಲ್ಲ ಆರೋಪಗಳನ್ನೂ ಯಡಿಯೂರಪ್ಪನವರ ಮೇಲೆ ಹೊರಿಸಿದರು. ಅಷ್ಟಕ್ಕೇ ನಿಲ್ಲದೆ, ಕಾಂಗ್ರೆಸ್‌ನಿಂದ ಯಾವೆಲ್ಲ ಅತೃಪ್ತರನ್ನು ಸೆಳೆಯಬಹುದು ಎಂದು ನೋಡಿದರು. ಅದಕ್ಕಾಗಿ ಅವರು ತಮ್ಮ ಆಪ್ತರಾದ ಲಕ್ಷ್ಮಣ ಸವದಿಯವರನ್ನು ಬಳಸಿಕೊಂಡರು. ಬೆಳಗಾವಿ ಜಿಲ್ಲೆ ಅಥಣಿಯ ಲಿಂಗಾಯತ ಮುಖಂಡ ಸವದಿಯ ಪಾತ್ರ ಆಪರೇಷನ್ ಕಮಲದಲ್ಲಿ ಪ್ರಮುಖವಾಗಿತ್ತು. ಯಡಿಯೂರಪ್ಪಸರಕಾರದಲ್ಲಿ ಸವದಿ ಅವರನ್ನು ಡಿಸಿಎಂ ಮಾಡಲಾಯಿತು. ವಿಪರ್ಯಾಸವೆಂದರೆ, ಕಳೆದ ಚುನಾವಣೆಯಲ್ಲಿ ಸವದಿಗೆ ಟಿಕೆಟ್ ಸಿಗದೇ ಇದ್ದುದು ಕೂಡ ಸಂತೋಷ್ ಸೂಚನೆಯ ಮೇರೆಗೆ ಎಂದೇ ಹೇಳಲಾಗುತ್ತಿದೆ.

2014ರಿಂದ, ಸಂತೋಷ್ ಅನೇಕ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದ ಖ್ಯಾತಿಯನ್ನು ಹೊಂದಿದ್ದಾರೆ. ಗುಜರಾತ್, ಉತ್ತರಾಖಂಡ ಮತ್ತು ತ್ರಿಪುರಾ ವಿಧಾನಸಭೆ ಚುನಾವಣೆಯಲ್ಲಿ ಅವರ ಪಾತ್ರವಿತ್ತು. ಮಹಾರಾಷ್ಟ್ರ ರಾಜಕಾರಣದಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು ಎಂದು ಹೇಳಲಾಗುತ್ತದೆ. ಯಥಾಸ್ಥಿತಿಯನ್ನು ಬದಲಿಸಿ ಹೊಸ ನಾಯಕತ್ವವನ್ನು ತರಬಲ್ಲವರು ಎಂಬ ಕಾರಣದಿಂದ ಸಂತೋಷ್ ಮೋದಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಪಕ್ಷದಲ್ಲಿನ ಫೈರ್ ಬ್ರಾಂಡ್ ನಾಯಕರ ದೊಡ್ಡ ಪಟ್ಟಿಯಲ್ಲಿ ಇರುವವರೆಲ್ಲ ಸಂತೋಷ್ ಮುಂದೆ ತಂದ ನಾಯಕರು ಎನ್ನಲಾಗುತ್ತದೆ. ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ತಮಿಳುನಾಡು ಬಿಜೆಪಿ ಮುಖ್ಯಸ್ಥ ಅಣ್ಣಾಮಲೈ, ಮೈಸೂರು ಸಂಸದ ಪ್ರತಾಪ್ ಸಿಂಹ ಮತ್ತು ರಾಷ್ಟ್ರೀಯ ಕಾರ್ಯದರ್ಶಿ ಹುದ್ದೆ ಪಡೆದಿರುವ ಸಿ.ಟಿ.ರವಿ ಇವರೆಲ್ಲ ಅಂಥವರು.

ಆದರೆ ತಮ್ಮ ತವರು ರಾಜ್ಯ ಕರ್ನಾಟಕದಲ್ಲಿ ಸಂತೋಷ್ ಅಗತ್ಯಕ್ಕಿಂತ ಹೆಚ್ಚು ಮೂಗು ತೂರಿಸಿರುವುದು ಪಕ್ಷದ ಅನೇಕ ನಾಯಕರಿಗೆ ಕಂಡಿದೆ. ವಿಧಾನಸಭೆ ಚುನಾವಣೆ ಘೋಷಣೆಯಾ ಗುವ ಮುನ್ನವೇ ರಾಜ್ಯದಲ್ಲಿ ಸಂತೋಷ್ ಅವರ ತಪ್ಪುಕಾರ್ಯತಂತ್ರ ಶುರುವಾಯಿತು. 2019ರಲ್ಲಿ ನಳಿನ್ ಕುಮಾರ್ ಕಟೀಲು ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಲಾಯಿತು. ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರ ವಿಶ್ವಾಸ ಗಳಿಸುವಲ್ಲಿ ಕಟೀಲು ವಿಫಲವಾಗಿದ್ದರೂ ಸಂತೋಷ್ ತಲೆಕೆಡಿಸಿಕೊಳ್ಳಲಿಲ್ಲ. 2023ರ ಆರಂಭದಲ್ಲಿ, ಚುನಾವಣೆಗೆ ಮುಂಚಿತವಾಗಿ ಪ್ರಬಲ ಅಧ್ಯಕ್ಷರ ನೇಮಕಕ್ಕೆ ಕೂಗು ಎದ್ದಾಗಲೂ ಕಟೀಲು ಅವರನ್ನೇ ಆ ಹುದ್ದೆಯಲ್ಲಿ ಉಳಿಸುವಲ್ಲಿ ಸಂತೋಷ್ ಯಶಸ್ವಿಯಾದರು.

2020ರಲ್ಲಿ ಪಕ್ಷದ ಜಿಲ್ಲಾಧ್ಯಕ್ಷರುಗಳ ನೇಮಕಕ್ಕೂ ಹೆಸರುಗಳ ಪಟ್ಟಿ ಬಂದದ್ದು ಸಂತೋಷ್ ಅವರ ಕಚೇರಿಯಿಂದ. ಜಿಲ್ಲೆಯ ನಾಯಕರನ್ನು ಸಂಪರ್ಕಿಸದೆ, ತಮ್ಮ ನಿಕಟವರ್ತಿಗಳನ್ನೇ ಅವರು ತಂದರು. ಮೈಸೂರಿನಲ್ಲಿ ಟಿ.ಎಸ್. ಶ್ರೀವತ್ಸ, ದಕ್ಷಿಣ ಕನ್ನಡದಲ್ಲಿ ಎಂ.ಸುದರ್ಶನ್ ಮತ್ತು ಉಡುಪಿಯಲ್ಲಿ ಕುಯಿಲಾಡಿ ಸುರೇಶ್ ನಾಯಕ್ ಅವರನ್ನು ಕೂರಿಸಲಾಯಿತು. ಈ ಏಕಪಕ್ಷೀಯ ನಿರ್ಧಾರ ಪಕ್ಷದ ಪ್ರತಿಯೊಬ್ಬ ಹಿರಿಯ ನಾಯಕರ ಅಸಮಾಧಾನಕ್ಕೆ ಕಾರಣವಾಗಿತ್ತು. ನೇಮಕವಾದವರ ಏಕೈಕ ಅರ್ಹತೆಯೆಂದರೆ ಅವರೆಲ್ಲ ಸಂತೋಷ್ ಹೇಳಿದಂತೆ ಕೇಳುವವರಾಗಿದ್ದರು ಎಂಬುದು. ಟಿ.ಎಸ್. ಶ್ರೀವತ್ಸ ಕೂಡ ಬ್ರಾಹ್ಮಣ ಸಮುದಾಯದವರಾಗಿದ್ದರು ಮತ್ತು ಆರೆಸ್ಸೆಸ್‌ನಲ್ಲಿದ್ದ ದಿನಗಳಿಂದ ಸಂತೋಷ್ ಅವರ ಅನುಯಾಯಿಯಾಗಿದ್ದರು. ಎಂ. ಸುದರ್ಶನ್ ‘ಲವ್ ಜಿಹಾದ್’ ಮಿಥ್ಯದ ಪ್ರಬಲ ಪ್ರತಿಪಾದಕರಲ್ಲಿ ಒಬ್ಬರಾಗಿದ್ದರು.

2022ರಲ್ಲಿ ನಿಗಮ ಮಂಡಳಿ ಅಧ್ಯಕ್ಷರ ನೇಮಕದಲ್ಲೂ ಹೀಗೆಯೇ ಆಯಿತು. ಸಾಮಾನ್ಯವಾಗಿ ಸಚಿವ ಸ್ಥಾನ ಸಿಗದ ಶಾಸಕರಿಗೆ ನಿಗಮ ಮಂಡಳಿಗಳ ಅಧ್ಯಕ್ಷ ಹುದ್ದೆ ನೀಡಲಾಗುತ್ತದೆ. ಆದರೆ ಸಂತೋಷ್ ಪ್ರಭಾವದಲ್ಲಿ ಹಾಗಾಗಲಿಲ್ಲ. 2020ರಲ್ಲಿ ರಾಜ್ಯಸಭಾ ಸದಸ್ಯರ ನಾಮನಿರ್ದೇಶನ ಮಾಡಬೇಕಾದಾಗಲೂ, ಸಂತೋಷ್ ಅವರು ಮಂಗಳೂರಿನಿಂದ ಕೆ. ನಾರಾಯಣ ಅವರಂತಹ ಅಪರಿಚಿತ ಮುಖಗಳನ್ನು ಕರೆತಂದು ಅವರ ಹೆಸರನ್ನು ಹೈಕಮಾಂಡ್‌ಗೆ ಕಳಿಸಿದ್ದರು. ನಾರಾಯಣ ಅವರು ಮಂಗಳೂರಿನಲ್ಲಿ ಪ್ರಿಂಟಿಂಗ್ ಪ್ರೆಸ್ ನಡೆಸುತ್ತಿದ್ದರು. ಅವರಿಗೆ ರಾಜ್ಯಸಭಾ ಟಿಕೆಟ್ ನೀಡುವುದರಿಂದ ಪಕ್ಷಕ್ಕೆ ಯಾವುದೇ ಪ್ರಯೋಜನವಿಲ್ಲ ಎಂದು ಹಲವರು ವಾದಿಸಿದರೆ, ಸಂತೋಷ್ ಮಾತ್ರ ಅವರು ಕರಪತ್ರಗಳು ಮತ್ತು ಪುಸ್ತಕಗಳನ್ನು ಮುದ್ರಿಸುವಲ್ಲಿ ಸ್ಥಳೀಯ ಸಂಘದ ನಾಯಕರಿಗೆ ಸಹಾಯ ಮಾಡಿರುವುದನ್ನು ಒತ್ತಿಹೇಳಿದರು. ವಿಧಾನ ಪರಿಷತ್ತಿಗೆ ಕೂಡ ಕೇಶವ ಪ್ರಸಾದ್ ಮತ್ತು ಹೇಮಲತಾ ನಾಯಕ್ ಎಂಬ ಇಬ್ಬರು ಅಭ್ಯರ್ಥಿಗಳ ನಾಮನಿರ್ದೇಶನವನ್ನು ಯಾವುದೇ ಸಮಾಲೋಚನೆ ನಡೆಸದೆ ಘೋಷಿಸಲಾಯಿತು. ಕೇಶವ ಪ್ರಸಾದ್ ಬೆಂಗಳೂರಿನ ಬಿಜೆಪಿ ಕಚೇರಿ ಕಾರ್ಯದರ್ಶಿಯಾಗಿದ್ದು, ಪಕ್ಷದ ಕಚೇರಿಯಲ್ಲಿ ಏನೇ ಆದರೂ ಸಂತೋಷ್ ಅವರಿಗೆ ಮುಟ್ಟಿಸುವವರು ಎಂದು ಒಳಗಿನವರೇ ಹೇಳುತ್ತಾರೆ.

2022ರ ಎಪ್ರಿಲ್‌ನಲ್ಲಿ ಸಚಿವರಾಗಿದ್ದ ಈಶ್ವರಪ್ಪವಿರುದ್ಧ ಶೇ. 40 ಕಮಿಷನ್ ಆರೋಪ ಹೊರಿಸಿ ಗುತ್ತಿಗೆದಾರರೊಬ್ಬರು ಆತ್ಮಹತ್ಯೆ ಮಾಡಿಕೊಂಡಾಗ, ಈಶ್ವರಪ್ಪವಿರುದ್ಧ ಕ್ರಮ ಕೈಗೊಳ್ಳದಂತೆ ತಡೆದವರು ಸಂತೋಷ್ ಎಂದು ಬಿಜೆಪಿ ಮೂಲಗಳು ಹೇಳುತ್ತವೆ. ಒತ್ತಡಕ್ಕೆ ಮಣಿದು ಈಶ್ವರಪ್ಪಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರೂ ಪಕ್ಷದ ಮುಖಂಡರು ಅವರ ಪರವೇ ಮಾತನಾಡುತ್ತಿದ್ದರು. ಇದು, ಬೊಮ್ಮಾಯಿ ಸರಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಬಲಗೊಳ್ಳುವುದಕ್ಕೆ ಕಾರಣವಾಯಿತು.

2023ರ ಚುನಾವಣೆಯಲ್ಲಿ ಸ್ಪರ್ಧಿಸಲು ಈಶ್ವರಪ್ಪಅವರಿಗೆ ಟಿಕೆಟ್ ನಿರಾಕರಿಸಿದಾಗ, ಪ್ರಧಾನಿ ಮೋದಿ ಈಶ್ವರಪ್ಪಅವರಿಗೆ ಕರೆ ಮಾಡಿ ಭವಿಷ್ಯದಲ್ಲಿ ಪಕ್ಷವು ಅವರ ಬೆಂಬಲಕ್ಕೆ ನಿಲ್ಲುತ್ತದೆ ಎಂದು ಭರವಸೆ ನೀಡಿದ ವೀಡಿಯೊವನ್ನು ಬಿಜೆಪಿ ಬಿಡುಗಡೆ ಮಾಡಿತು. ಭ್ರಷ್ಟಾಚಾರ ಆರೋಪ ಹೊತ್ತವರನ್ನು ಹೀಗೆ ಮೆರೆಸಿದ್ದರಿಂದ ಪಕ್ಷದ ಕಾರ್ಯಕರ್ತರು ಕೆರಳುವಂತಾಯಿತು. ಆದರೆ, ಶಿವಮೊಗ್ಗದಲ್ಲಿ ಯಡಿಯೂರಪ್ಪನವರ ಹಿಡಿತವನ್ನು ಕಡಿಮೆ ಮಾಡುವುದಕ್ಕಾಗಿ ಈಶ್ವರಪ್ಪನವರನ್ನು ಮೆರೆಸಿದಂತೆ ಮಾಡುವುದು ಸಂತೋಷ್ ಉದ್ದೇಶವಾಗಿತ್ತು.

ಚುನಾವಣಾ ಪೂರ್ವದಲ್ಲಿ ಯಡಿಯೂರಪ್ಪವಿರುದ್ಧ ಸಂತೋಷ್ ಅವರ ಮತ್ತೊಬ್ಬ ಆಪ್ತ ಸಹಾಯಕ ಸಿ.ಟಿ.ರವಿ ಅವರನ್ನು ಬಳಸಿಕೊಳ್ಳಲಾಗಿತ್ತು. ವಿಜಯೇಂದ್ರಗೆ ಟಿಕೆಟ್ ನೀಡುವ ನಿರ್ಧಾರ ಯಾರ ಅಡುಗೆಮನೆಯಲ್ಲಿಯೂ ಆಗುವುದಿಲ್ಲ ಎಂದು ಯಡಿಯೂರಪ್ಪಮತ್ತು ಅವರ ಪುತ್ರ ವಿಜಯೇಂದ್ರ ವಿರುದ್ಧ ಸಿ.ಟಿ ರವಿ ವಾಗ್ದಾಳಿ ನಡೆಸಿದರು.

ಸಚಿವರಾದ ವಿ.ಸೋಮಣ್ಣ ಮತ್ತು ಆರ್.ಅಶೋಕ್ ಅವರನ್ನು ಎರಡು ಸ್ಥಾನಗಳಲ್ಲಿ ಸ್ಪರ್ಧಿಸುವಂತೆ ಮಾಡಿದ್ದು ಕೂಡ ಸಂತೋಷ್ ಒತ್ತಾಯದಿಂದ ಎಂದು ಹೇಳಲಾಗುತ್ತದೆ. ಮೈಸೂರಿನಲ್ಲಿ ಅನುಭವಿ ಎಸ್.ಎ. ರಾಮದಾಸ್ ಅವರನ್ನು ಬದಿಗೆ ಸರಿಸಿ, ಸಂತೋಷ್ ಆಪ್ತ ಟಿ.ಎಸ್. ಶ್ರೀವತ್ಸ ಅವರಿಗೆ ಟಿಕೆಟ್ ನೀಡಲಾಯಿತು. ಹಳೆ ಮೈಸೂರು ಭಾಗದಲ್ಲಿ ಸಂತೋಷ್ ಆಯ್ಕೆಯ ಹಲವಾರು ಅಭ್ಯರ್ಥಿಗಳು ಹೆಚ್ಚಿನ ಅಂತರದಿಂದ ಸೋತರು. ಜಗದೀಶ್ ಶೆಟ್ಟರ್ ಅವರನ್ನು ವಿನಾಕಾರಣ ದೂರವಿಟ್ಟು, ಬದಲಾಗಿ ಸಂತೋಷ್ ಅವರ ಮತ್ತೊಬ್ಬ ಅನುಯಾಯಿ ಮಹೇಶ್ ಟೆಂಗಿನಕಾಯಿ ಅವರನ್ನು ಕಣಕ್ಕಿಳಿಸಿದ್ದು ದೊಡ್ಡ ತಪ್ಪು. ಅನೇಕ ಲಿಂಗಾಯತ ಮಠಗಳು ಬಿಜೆಪಿಯಿಂದ ದೂರವಾಗತೊಡಗಿದವು. 2023ರ ಚುನಾವಣೆಯಲ್ಲಿ 34 ಲಿಂಗಾಯತ ಅಭ್ಯರ್ಥಿಗಳು ಕಾಂಗ್ರೆಸ್ ಟಿಕೆಟ್‌ನಲ್ಲಿ ಗೆದ್ದಿದ್ದಾರೆ. 1989ರಿಂದ ಈವರೆಗಿನ ಚುನಾವಣೆಗಳಲ್ಲಿಯೇ ಇದು ಅತಿ ಹೆಚ್ಚು.

ಟಿಕೆಟ್ ಹಂಚಿಕೆಯ ಕಸರತ್ತು ಎಷ್ಟರಮಟ್ಟಿಗೆ ವಿಫಲವಾಗಿತ್ತು ಎಂದರೆ ಅಸಮಾಧಾನಗೊಂಡ ಯಡಿಯೂರಪ್ಪಅಭ್ಯರ್ಥಿ ಪಟ್ಟಿ ಪ್ರಕಟಣೆಗೆ ಮೊದಲೇ ದಿಲ್ಲಿಯಿಂದ ಬೆಂಗಳೂರಿಗೆ ಮರಳಿದ್ದರು. ವರಾಹೆ ಅನಾಲಿಟಿಕ್ಸ್ ಎಂಬ ಪೊಲಿಟಿಕಲ್ ಕನ್ಸಲ್ಟೆನ್ಸಿ ಸಂಸ್ಥೆ ನಡೆಸಿದ ಸಮೀಕ್ಷೆಯನ್ನು ಸಂತೋಷ್ ಮುಂದಿಟ್ಟಿದ್ದಾರೆ ಎಂದು ಬಿಜೆಪಿಯ ಹಲವರು ನಂಬಿದ್ದಾರೆ. ಆದರೆ ಈ ಸಮೀಕ್ಷೆಯು ಸಂತೋಷ್ ಕಡೆಯ ಮಂದಿಗೆ ಅವಕಾಶ ಕಲ್ಪಿಸುವ ನಿಟ್ಟಿನ ಒಂದು ಕಸರತ್ತಾಗಿತ್ತು ಅಷ್ಟೆ ಎಂಬುದು ಅನೇಕರ ಅನುಮಾನ.

ಸಂತೋಷ್ ಯಾವಾಗಲೂ ತಮ್ಮ ಎಲ್ಲಾ ನಿರ್ಧಾರಗಳನ್ನು ಮೋದಿ ಮತ್ತು ಶಾ ಅವರ ಆದೇಶದ ಮೇರೆಗೆ ತೆಗೆದುಕೊಳ್ಳಲಾದ ನಿರ್ಧಾರ ಎಂಬ ಭಾವನೆ ಬರುವಂತೆ ಮಂಡಿಸುತ್ತಾರೆ ಎಂಬುದು ಪಕ್ಷದ ಹಿರಿಯ ನಾಯಕರೊಬ್ಬರ ಅಭಿಪ್ರಾಯ. ಸಂತೋಷ್‌ಗೆ ತಾತ್ವಿಕವಾಗಿ ಮುಕ್ತ ಅವಕಾಶ ಕೊಡಲಾಗಿತ್ತು. ಅಲ್ಲದೆ ಯಡಿಯೂರಪ್ಪ ಅವರನ್ನು ಚುನಾವಣಾ ಪ್ರಚಾರದ ಮುಂಚೂಣಿಯಲ್ಲಿ ಇಡದಿರುವುದಕ್ಕೆ ಹೈಮಾಂಡ್ ಸಮ್ಮತಿಯೂ ಇತ್ತು. ಆದರೆ, ಯಡಿಯೂರಪ್ಪ ಅವರ ಅನೇಕ ಬೆಂಬಲಿಗರನ್ನು ದೂರವಿಡುವುದು ಸಂತೋಷ್ ಅವರದೇ ನಿರ್ಧಾರವಾಗಿತ್ತು ಎನ್ನುತ್ತವೆ ಪ್ರಧಾನಿ ಕಚೇರಿಯ ಆಪ್ತ ಮೂಲಗಳು.

ಅಂತೂ ಈ ಬಾರಿ ಬಿಜೆಪಿಯ ಸೋಲಿನ ಹೊಣೆಗಾರಿಕೆಯಿಂದ ಸಂತೋಷ್‌ಗೆ ನುಣುಚಿಕೊಳ್ಳುವುದು ಕಷ್ಟವಾಗಿದೆ ಎಂಬುದು ಬಿಜೆಪಿಯೊಳಗೆ ಕೇಳಿಬರುತ್ತಿರುವ ಮಾತು. ಸಂತೋಷ್ ಅವರ ತೀರ್ಮಾನದಲ್ಲಿನ ಹಲವಾರು ತಪ್ಪುಗಳಿಗಾಗಿ ಪಕ್ಷ ದೊಡ್ಡ ಬೆಲೆಯನ್ನೇ ತೆತ್ತಿದೆ.

2022ರಲ್ಲಿ, ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ತೆಲಂಗಾಣದಲ್ಲಿ ತಮ್ಮ ಸರಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಮತ್ತು ಆರೆಸ್ಸೆಸ್ ಪ್ರಯತ್ನಿಸಿದೆ ಎಂದು ಆರೋಪಿಸಿದಾಗ, ಎಸ್‌ಐಟಿ ಬಿ.ಎಲ್. ಸಂತೋಷ್ ಮತ್ತಿತರ ಮೂವರನ್ನು ಆರೋಪಿಗಳೆಂದು ಹೆಸರಿಸಿತ್ತು. ಶಾಸಕರ ಕುದುರೆ ವ್ಯಾಪಾರಕ್ಕೆ ಸಂಬಂಧಿಸಿದಂತೆ ನಿರಂತರ ಮಾಹಿತಿ ನೀಡುತ್ತಿದ್ದ ಸಂತೋಷ್ ಮತ್ತು ಪ್ರಮುಖ ಆರೋಪಿಗಳ ನಡುವಿನ ಸಂಭಾಷಣೆಯ ಇಲೆಕ್ಟ್ರಾನಿಕ್ ಸಾಕ್ಷ್ಯಗಳು ತನ್ನ ಬಳಿ ಇರುವುದಾಗಿ ಎಸ್‌ಐಟಿ ಹೇಳಿದೆ.

ಈಗ ತೆಲಂಗಾಣ ಈ ವರ್ಷದ ಕೊನೆಯಲ್ಲಿ ಚುನಾವಣೆ ಇರುವ ದಕ್ಷಿಣ ರಾಜ್ಯವಾಗಿರುವುದರಿಂದ, ಬಿಜೆಪಿ ಸುನೀಲ್ ಬನ್ಸಾಲ್ ಅವರನ್ನು ತೆಲಂಗಾಣಕ್ಕೆ ಉಸ್ತುವಾರಿಯಾಗಿ ನಿಯೋಜಿಸಿದೆ. ಬನ್ಸಾಲ್ ಪ್ರಸಕ್ತ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಉತ್ತರ ಪ್ರದೇಶದಲ್ಲಿ ಯಶಸ್ವಿ ಪ್ರಚಾರಗಳನ್ನು ನಡೆಸಿದ ದಾಖಲೆಯುಳ್ಳವರು. ಈ ಬೆಳವಣಿಗೆ ತೆಲಂಗಾಣದಲ್ಲಿ ಸಂತೋಷ್‌ಗೆ ಎಷ್ಟರ ಮಟ್ಟಿಗೆ ಹಿನ್ನಡೆಯಾಗಲಿದೆ ಎಂಬುದು ಸದ್ಯದ ಪ್ರಶ್ನೆಯಾಗಿದೆ.

ಚುನಾವಣೆಯಲ್ಲಾದ ಈ ಹಿನ್ನಡೆ, ಪಕ್ಷದಲ್ಲಿ ಸಂತೋಷ್ ಪ್ರಭಾವದ ಮೇಲೆ ಪರಿಣಾಮ ಬೀರಿದ್ದರೂ, ಈ ಹಿನ್ನಡೆ ತಾತ್ಕಾಲಿಕ ಎಂದೇ ಹೇಳಲಾಗುತ್ತದೆ. ಇನ್ನು ಆಟ ಮುಗಿಯಿತು ಎಂದು ಸಂತೋಷ್ ವಿರೋಧಿಗಳು ಅಂದುಕೊಳ್ಳುತ್ತಿದ್ದರೂ, ಇದೇ ಸಂತೋಷ್ ರಾಜಕೀಯ ಹಾದಿಯ ಅಂತ್ಯ ಎಂದು ಹೇಳಲು ಸಾಧ್ಯವಿಲ್ಲ. 1995ರಲ್ಲಿ ನರೇಂದ್ರ ಮೋದಿಯವರನ್ನು ಅವರ ರಾಜಕೀಯ ಹಸ್ತಕ್ಷೇಪದ ಕಾರಣಕ್ಕೇ ಗುಜರಾತ್ ರಾಜಕಾರಣದಿಂದ ದೂರವಿಡಲಾಗಿತ್ತು. ಅದರೆ ಅವರು ಸತತ ನಾಲ್ಕು ಅವಧಿಗೆ ಸಿಎಂ ಆಗುವುದನ್ನು ಯಾರೂ ತಪ್ಪಿಸಲಿಕ್ಕಾಗಲಿಲ್ಲ.

(ಕೃಪೆ:thenewsminute.com)

Similar News