ಸೂಕ್ಷ್ಮದಾಖಲೆ ಸ್ವಾಧೀನ ಪ್ರಕರಣ ಟ್ರಂಪ್ ವಿರುದ್ಧ ದೋಷಾರೋಪ

Update: 2023-06-09 17:27 GMT

ವಾಷಿಂಗ್ಟನ್: ಅಮೆರಿಕ ಸರಕಾರದ ಸೂಕ್ಷ್ಮದಾಖಲೆಗಳನ್ನು ಕಾನೂನುಬಾಹಿರವಾಗಿ ಸ್ವಾಧೀನದಲ್ಲಿ ಇರಿಸಿಕೊಂಡಿದ್ದ ಪ್ರಕರಣದಲ್ಲಿ ಫೆಡರಲ್ ತನಿಖಾ ಏಜೆನ್ಸಿ ತನ್ನ ವಿರುದ್ಧ ದೋಷಾರೋಪ ದಾಖಲಿಸಿದೆ ಎಂದು  ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ತನ್ನ ವಿರುದ್ಧ ಎರಡನೇ ಬಾರಿಗೆ ಕ್ರಿಮಿನಲ್ ದೋಷಾರೋಪ ದಾಖಲಿಸಿರುವುದಾಗಿ ಭ್ರಷ್ಟ ಬೈಡನ್ ಸರಕಾರ ನೀಡಿರುವ ಮಾಹಿತಿಯಿಂದ  ಆಘಾತವಾಗಿದೆ ಎಂದು ತನ್ನ ಸಾಮಾಜಿಕ ಮಾಧ್ಯಮ ವೇದಿಕೆ ‘ಟ್ರುಥ್ ಸೋಷಿಯಲ್’ನಲ್ಲಿ ಟ್ರಂಪ್ ಹೇಳಿದ್ದಾರೆ.

ಮಿಯಾಮಿಯ ಫೆಡರಲ್ ನ್ಯಾಯಾಲಯ ಮಂಗಳವಾರ ಸಮನ್ಸ್ ನೀಡಿದ್ದು ಅಮೆರಿಕದ ಮಾಜಿ ಅಧ್ಯಕ್ಷರೊಬ್ಬರಿಗೆ ಈ ರೀತಿ ಆಗಲಿದೆ ಎಂಬುದನ್ನು ಕನಸಿನಲ್ಲೂ ಊಹಿಸಿರಲಿಲ್ಲ ಎಂದು ಟ್ರಂಪ್ ಹೇಳಿದ್ದಾರೆ.  ಅಶ್ಲೀಲ ಚಿತ್ರಗಳ ನಟಿ . ಸ್ಟಾರ್ಮಿ ಡೇನಿಯಲ್ಸ್ ಜತೆಗಿನ ಸಂಬಂಧವನ್ನು ರಹಸ್ಯವಾಗಿರಿಸಲು ಆಕೆಗೆ ಹಣ ನೀಡಿದ ಪ್ರಕರಣದಲ್ಲಿ ಟ್ರಂಪ್ ವಿರುದ್ಧ ಪ್ರಥಮ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.

ಕಳೆದ ಆಗಸ್ಟ್ನಲ್ಲಿ ಸರ್ಚ್ ವಾರಂಟ್ ಪಡೆದು ಟ್ರಂಪ್ ಅವರ ಮನೆಯಲ್ಲಿ ಶೋಧ ನಡೆಸಿದ ಸಂದರ್ಭ ಸರಕಾರಕ್ಕೆ ಸಂಬಂಧಿಸಿದ ಸುಮಾರು 11,000 ಸೂಕ್ಷ್ಮ ರಹಸ್ಯ ದಾಖಲೆಗಳು ಪತ್ತೆಯಾಗಿವೆ ಎಂದು ಎಫ್ಬಿಐ ಹೇಳಿದೆ.

Similar News