ಬೆದರಿಕೆ ಮೂಲಕ ನನ್ನನ್ನು ಮೌನವಾಗಿಸಲು ಸಾಧ್ಯವಿಲ್ಲ: ಕೊಲೆ ಬೆದರಿಕೆಗೆ ಶರದ್ ಪವಾರ್ ಪ್ರತಿಕ್ರಿಯೆ

Update: 2023-06-10 06:40 GMT

ಪುಣೆ: ತಮಗೆ ಸಾಮಾಜಿಕ ಮಾಧ್ಯಮಗಳಲ್ಲಿ ಬರುತ್ತಿರುವ ಕೊಲೆ ಬೆದರಿಕೆ ಕುರಿತು ಶುಕ್ರವಾರ ಪ್ರತಿಕ್ರಿಯಿಸಿರುವ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, "ಪ್ರಜಾಸತ್ತಾತ್ಮಕ ಸಮಾಜದಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ತನ್ನ ಅನಿಸಿಕೆ ವ್ಯಕ್ತಪಡಿಸುವ ಅಧಿಕಾರವಿದೆ. ಆದರೆ, ಯಾರಾದರೂ ಬೆದರಿಕೆಯ ಮೂಲಕ ಯಾರನ್ನಾದರೂ ಮೌನವಾಗಿಸಬಹುದು ಎಂದು ಅಂದುಕೊಂಡಿದ್ದರೆ ಅದು ತಪ್ಪು ತಿಳಿವಳಿಕೆಯಾಗಿದೆ" ಎಂದು ತಿರುಗೇಟು ನೀಡಿದ್ದಾರೆ.

"ನನಗೆ ಪೊಲೀಸ್ ಸಾಮರ್ಥ್ಯದ ಬಗ್ಗೆ ಸಂಪೂರ್ಣ ನಂಬಿಕೆಯಿದೆ. ನಾನು ಕಳವಳಗೊಂಡೇ ಇಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ನಿರ್ವಹಿಸಲು ಪೊಲೀಸರು ಸಮರ್ಥರಾಗಿದ್ದಾರೆ. ಆದರೆ, ಅಧಿಕಾರದಲ್ಲಿರುವವರು ತಮ್ಮ ಹೊಣೆಗಾರಿಕೆಯಿಂದ ನುಣುಚಿಕೊಳ್ಳಬಾರದು" ಎಂದೂ ಶರದ್ ಪವಾರ್ ಹೇಳಿದ್ದಾರೆ.

ಕೊಲೆ ಬೆದರಿಕೆ ಕುರಿತು ಮಹಾರಾಷ್ಟ್ರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಅಜಿತ್ ಪವಾರ್ ಕೂಡಾ ಪ್ರತಿಕ್ರಿಯಿಸಿದ್ದಾರೆ. "ಶರದ್ ಪವಾರ್ ಅವರಿಗೆ ಕೊಲೆ ಬೆದರಿಕೆ ಹಾಕಿರುವ ಸಾಮಾಜಿಕ ಮಾಧ್ಯಮ ಖಾತೆಯು ಸೌರವ್ ಪಿಂಪಲ್ಕರ್ ಎಂಬವರ ಹೆಸರಿನಲ್ಲಿದೆ. ಆತ ನಿಜಕ್ಕೂ ಬಿಜೆಪಿ ಕಾರ್ಯಕರ್ತನೇ ಎಂಬ ಸಂಗತಿ ನಮಗೆ ತಿಳಿದಿಲ್ಲ. ಪಿಂಪಲ್ಕರ್ ಹಿಂದೆ ಇರುವ ನಿಜ ಸಂಚುಕೋರರು ಯಾರು ಎಂಬುದನ್ನು ಪೊಲೀಸರು ಪತ್ತೆ ಹಚ್ಚಬೇಕಿದೆ. ಆತ ಯಾರೊಂದಿಗೆ ಸಂಪರ್ಕದಲ್ಲಿದ್ದಾನೆ ಎಂಬುದನ್ನು ಆತನ ಮೊಬೈಲ್ ನಂಬರ್ ಅನ್ನು ತಪಾಸಣೆಗೆ ಒಳಪಡಿಸಿ ಪೊಲೀಸರು ಕಂಡು ಹಿಡಿಯಬೇಕು" ಎಂದು ಆಗ್ರಹಿಸಿದ್ದಾರೆ.

ಗೃಹ ಖಾತೆಯನ್ನೂ ಹೊಂದಿರುವ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಬಳಿ ಈ ವಿಷಯ ಕೊಂಡೊಯ್ಯುವುದಾಗಿಯೂ ಅವರು ತಿಳಿಸಿದ್ದಾರೆ.

Similar News