ಅಣೆಕಟ್ಟು ಕುಸಿತದಿಂದ ಉಕ್ರೇನ್‍ನ ಪರಿಸ್ಥಿತಿ ಶೋಚನೀಯ ವಿಶ್ವಸಂಸ್ಥೆ ಅಧಿಕಾರಿ ಎಚ್ಚರಿಕೆ

7 ಲಕ್ಷ ಜನರಿಗೆ ಕುಡಿಯುವ ನೀರಿನ ಕೊರತೆ

Update: 2023-06-10 17:09 GMT

ನ್ಯೂಯಾರ್ಕ್: ಕಖೋವ್ಕಾ ಅಣೆಕಟ್ಟು ಕುಸಿದ ಬಳಿಕ ಉಕ್ರೇನ್‍ನಲ್ಲಿನ ಮಾನವೀಯ ಪರಿಸ್ಥಿತಿ ಈ ಹಿಂದಿಗಿಂತಲೂ ಶೋಚನೀಯವಾಗಿದೆ ಎಂದು ವಿಶ್ವಸಂಸ್ಥೆ ಅಧಿಕಾರಿ ಮಾರ್ಟಿನ್ ಗ್ರಿಫಿತ್ಸ್ ಕಳವಳ ವ್ಯಕ್ತಪಡಿಸಿದ್ದಾರೆ.

ಅಣೆಕಟ್ಟು ಹಾನಿಗೊಳಗಾದ ಬಳಿಕ ಸುಮಾರು 7 ಲಕ್ಷ ಜನತೆಗೆ ಕುಡಿಯುವ ನೀರಿನ ಕೊರತೆಯಾಗಿದೆ. ವಿಶ್ವದ ಆಹಾರ ಕಣಜ ಎನಿಸಿರುವ ಉಕ್ರೇನ್‍ನ ಕೃಷಿಭೂಮಿ ಪ್ರವಾಹದ ನೀರಿನಲ್ಲಿ ಮುಳುಗಿರುವುದರಿಂದ ಆಹಾರ ಧಾನ್ಯ ರಫ್ತಿನ ಮೇಲೆ ಪರಿಣಾಮ ಬೀರಲಿದ್ದು , ಆಹಾರದ ಬೆಲೆ ಗಗನಕ್ಕೇರಲಿದೆ ಮತ್ತು ಆಹಾರದ ಕೊರತೆ ಎದುರಾಗಲಿದೆ ಎಂದು   ವಿಶ್ವಸಂಸ್ಥೆಯಲ್ಲಿ ಮಾನವೀಯ ವ್ಯವಹಾರಗಳ ಅಧೀನ ಕಾರ್ಯದರ್ಶಿ ಮತ್ತು ತುರ್ತು ಪರಿಹಾರ ಸಂಯೋಜಕರಾಗಿರುವ ಮಾರ್ಟಿನ್ ಗ್ರಿಫಿತ್ಸ್ ಎಚ್ಚರಿಸಿದ್ದಾರೆ.

ಇದು ವೈರಲ್ ಸಮಸ್ಯೆಯಾಗಿದೆ. ಈಗ ನಮಗೆ ದೊರಕಿರುವುದು ಈ ಸಮಸ್ಯೆಯ ಪರಿಣಾಮದ ಆರಂಭಿಕ ಮಾಹಿತಿ ಮಾತ್ರ. ಉಕ್ರೇನ್‍ನಲ್ಲಿರುವ ನೆರವು ವಿತರಣಾ ಸಂಸ್ಥೆಗಳ ಮೂಲಕ, ಉಕ್ರೇನ್‍ನ ನಿಯಂತ್ರಣದಲ್ಲಿರುವ ಪ್ರದೇಶಗಳ 30,000 ಜನರಿಗೆ ವಿಶ್ವಸಂಸ್ಥೆಯ ನೆರವನ್ನು ತಲುಪಿಸಲಾಗಿದೆ. ಆದರೆ ರಶ್ಯದ ನಿಯಂತ್ರಣದಲ್ಲಿರುವ ಪ್ರದೇಶಕ್ಕೆ ನೆರವು ವಿತರಿಸಲು ಇದುವರೆಗೆ ಆ ದೇಶ ಅನುಮತಿ ನೀಡಿಲ್ಲ.

ಬುಧವಾರ ವಿಶ್ವಸಂಸ್ಥೆಯಲ್ಲಿನ ರಶ್ಯದ ರಾಯಭಾರಿ ವ್ಯಾಸಿಲಿ ನೆಬೆಂಝಿಯಾರನ್ನು ಭೇಟಿಯಾಗಿ ಈ ಬಗ್ಗೆ ಚರ್ಚಿಸಿದ್ದೇನೆ. ಜೀವಗಳನ್ನು ಉಳಿಸಲು ತುರ್ತು ಪ್ರತಿಕ್ರಿಯೆ ಅಗತ್ಯವಾಗಿದೆ. ನಿಪ್ರೊ ನದಿಯ ಎರಡೂ ಭಾಗಗಳಲ್ಲಿನ ಸುಮಾರು 7 ಲಕ್ಷ ಜನರಿಗೆ ಕುಡಿಯುವ ನೀರಿನ ಕೊರತೆಯಾಗಿದೆ. ಜತೆಗೆ ಉಕ್ರೇನ್‍ನ ಕೃಷಿ ಭೂಮಿಗೆ ನೀರು ನುಗ್ಗಿದೆ. ಯುರೋಪ್‍ನ ಅತೀ ದೊಡ್ಡ ಪರಮಾಣು ಸ್ಥಾವರ ಝಪೋರಿಝಿಯಾವನ್ನು ತಂಪಾಗಿಡಲು ಅಗತ್ಯವಿರುವ ನೀರು ಪೂರೈಕೆಗೂ ಸಮಸ್ಯೆಯಾಗಿದೆ.

ಯುದ್ಧದ ವ್ಯಾಪ್ತಿಯಲ್ಲಿರುವ ಪ್ರದೇಶದಲ್ಲಿ ಹುಗಿದಿರಿಸಿದ್ದ ನೆಲಬಾಂಬ್‍ಗಳು ನೆರೆನೀರಿನಲ್ಲಿ ತೇಲಿಹೋಗಿ ಜನವಸತಿ ಪ್ರದೇಶದಲ್ಲಿ ಸಂಗ್ರಹವಾಗಿರುವುದು ಮತ್ತೊಂದು ಅಪಾಯದ ಸೂಚನೆಯಾಗಿದೆ. ಆದ್ದರಿಂದ ಇಲ್ಲಿ ಸಮಸ್ಯೆಗಳ ಸರಮಾಲೆಯಿದೆ. ಜನರಿಗೆ ಇಂದು ಬದುಕಲು ಅವಕಾಶ ಮಾಡಿಕೊಡುವುದರೊಂದಿಗೆ ಪ್ರಾರಂಭಿಸಿ, ನಾಳೆ ಉತ್ತಮ ಭವಿಷ್ಯ ರೂಪಿಸಬೇಕಿದೆ. ಅಣೆಕಟ್ಟಿನ ಧ್ವಂಸದ ಬಳಿಕ ವ್ಯಾಪಕ ಶ್ರೇಣಿಯ ಪರಿಣಾಮ ಅನಿವಾರ್ಯವಾಗಿರುವುದರಿಂದ  ಸಮಸ್ಯೆಯನ್ನು ಎದುರಿಸಲು ಹೆಚ್ಚಿನ ನಿಧಿ ಸಂಗ್ರಹಿಸುವ ಅಗತ್ಯವಿದ್ದು  ವಿಶ್ವಸಂಸ್ಥೆ ವಿಶೇಷ ಮನವಿ ಅಭಿಯಾನ ಆರಂಭಿಸಲಿದೆ. ಆದರೆ ಅಭಿಯಾನ ಆರಂಭಕ್ಕೂ ಮುನ್ನ ಆರ್ಥಿಕ, ಆರೋಗ್ಯ ಮತ್ತು ಪರಿಸರ ಪರಿಣಾಮಗಳನ್ನು ನೋಡಲು ಕೆಲವು ವಾರಗಳವರೆಗೆ ಕಾಯಬೇಕಾಗಿದೆ ಎಂದು ಗ್ರಿಫಿತ್ಸ್ ಹೇಳಿದ್ದಾರೆ.

ಕಖೋವ್ಕ ಅಣೆಕಟ್ಟು ಧ್ವಂಸ

ನೀಪರ್ ನದಿಯ ಪಶ್ಚಿಮ ದಂಡೆ ಉಕ್ರೇನ್‍ನ ನಿಯಂತ್ರಣದಲ್ಲಿದೆ. ನದಿಯ ಕೆಳಹರಿವಿನ ಪ್ರದೇಶ ರಶ್ಯದ ನಿಯಂತ್ರಣದಲ್ಲಿದೆ. ದಕ್ಷಿಣ ಉಕ್ರೇನ್‍ನಲ್ಲಿ ಕುಡಿಯುವ ನೀರು ಮತ್ತು ಕೃಷಿಗೆ ನೀರಾವರಿಗೆ  ಅತ್ಯಗತ್ಯವಾಗಿರುವ ಕಖೋವ್ಕ ಅಣೆಕಟ್ಟು ಖೆರ್ಸಾನ್ ಪ್ರಾಂತದಲ್ಲಿದ್ದು ಈ ಪ್ರಾಂತವನ್ನು ಕಳೆದ ಸೆಪ್ಟಂಬರ್‍ನಲ್ಲಿ ರಶ್ಯ ಅಕ್ರಮವಾಗಿ ಸ್ವಾಧೀನಪಡಿಸಿಕೊಂಡಿದೆ. ಈ ಅಣೆಕಟ್ಟು ಹಾಗೂ ಜಲವಿದ್ಯುತ್ ಸ್ಥಾವರ ಕಳೆದ ಮಂಗಳವಾರ ಒಡೆದಿದ್ದು ಅಪಾರ ಪ್ರಮಾಣದ ನೀರು ಬರಿದಾಗಿದೆ.

ರಶ್ಯದ ಒಪಡೆ ಅಣೆಕಟ್ಟು ಸ್ಫೋಟಿಸಿದೆ ಎಂದು ಉಕ್ರೇನ್ ಆರೋಪಿಸುತ್ತಿದ್ದರೆ, ಉಕ್ರೇನ್ ಪಡೆಯ ಕ್ಷಿಪಣಿ ದಾಳಿಯಲ್ಲಿ ಅಣೆಕಟ್ಟು ಧ್ವಂಸಗೊಂಡಿದೆ ಎಂದು ರಶ್ಯ ಪ್ರತಿಪಾದಿಸಿದೆ.

Similar News