ಕಾಂಗ್ರೆಸ್ ಕಾರ್ಯಕರ್ತನ ಹತ್ಯೆ ಹಿಂದೆ ಟಿಎಂಸಿ ಕೈವಾಡ: ಆರೋಪ

Update: 2023-06-10 18:35 GMT

ಕೋಲ್ಕತಾ: ಪಶ್ಚಿಮಬಂಗಾಳದ ಮುರ್ಶಿದಾಬಾದ್ ಜಿಲ್ಲೆಯಲ್ಲಿ ಪಂಚಾಯತ್ ಚುನಾವಣೆಯ ಸಂದರ್ಭ ಕಾಂಗ್ರೆಸ್ ಕಾರ್ಯಕರ್ತರೋರ್ವರನ್ನು ಗುಂಡು ಹಾರಿಸಿ ಹತ್ಯೆಗೈದ ದಿನದ ಬಳಿಕ ಕಾಂಗ್ರೆಸ್, ಈ ಹತ್ಯೆಯ ಹಿಂದೆ ಆಡಳಿತಾರೂಡ ತೃಣಮೂಲ ಕಾಂಗ್ರೆಸ್(ಟಿಎಂಸಿ)ನ ಕೈವಾಡ ಇದೆ ಎಂದು ಆರೋಪಿಸಿದೆ.

ರತ್ನಪುರ ಗ್ರಾಮದಲ್ಲಿ ಶುಕ್ರವಾರ ಕಾರ್ಡ್ ಆಡುತ್ತಿದ್ದ ಫುಲ್ಚಂದ್ ಶೇಖ್ (45) ಅವರನ್ನು ಟಿಎಂಸಿ ಗೂಂಡಾಗಳು ಗುಂಡು ಹಾರಿಸಿ ಹತ್ಯೆಗೈದಿದ್ದಾರೆ ಎಂದು ಅವರ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ. ಆದರೆ, ಈ ಘಟನೆಯಲ್ಲಿ ತನ್ನ ಯಾವುದೇ ಪಾತ್ರವಿಲ್ಲ ಎಂದು ತೃಣಮೂಲ ಕಾಂಗ್ರೆಸ್ ಹೇಳಿದೆ. ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘‘ಪಂಚಾಯತ್ ಚುನಾವಣೆಯಲ್ಲಿ ತೋಳ್ಬಲ ಬಳಸಿ ಜಯ ಗಳಿಸಲು ಟಿಎಂಸಿ ಪ್ರಯತ್ನಿಸುತ್ತಿದೆ ಎಂಬುದನ್ನು ಇದು ಸ್ಪಷ್ಟವಾಗಿ ತೋರಿಸುತ್ತಿದೆ. ಟಿಎಂಸಿ ಬುಲೆಟ್ನಲ್ಲಿ ಜಯ ಗಳಿಸಲು ಬಯಸುವುದಾದರೆ, ಬ್ಯಾಲಟ್ ಬಳಕೆಯ ಅವಶ್ಯಕತೆ ಏನು?’’ ಎಂದು ಕಾಂಗ್ರೆಸ್ನ ರಾಜ್ಯಾಧ್ಯಕ್ಷ ಅಧೀರ್ ರಂಜನ್ ಚೌಧರಿ ಪ್ರಶ್ನಿಸಿದ್ದಾರೆ. ಜುಲೈ 8ರಂದು ನಡೆಯಲಿರುವ ಪಂಚಾಯತ್ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಕೆಯ ಮೊದಲ ದಿನ ಫುಲ್ಚಂದ್ ಶೇಖ್ ಅವರನ್ನು ಹತ್ಯೆಗೈಯಲಾಗಿದೆ. ಪಂಚಾಯತ್ ಚುನಾವಣೆಗೆ ಮುನ್ನ ಕಾಂಗ್ರೆಸ್ ಕಾರ್ಯಕರ್ತರನ್ನು ಬೆದರಿಸಲು ತೃಣಮೂಲ ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂದು ಚೌಧುರಿ ಆರೋಪಿಸಿದ್ದಾರೆ.

Similar News