ಈ ವರ್ಷ ದೇಶ ತೊರೆಯಲಿರುವ ಕನಿಷ್ಠ 6,500 ಶ್ರೀಮಂತ ಭಾರತೀಯರು: ವರದಿ
ಹೊಸದಿಲ್ಲಿ: ತೆರಿಗೆ ನಿಯಮಗಳು ಮತ್ತು ಕಠಿಣ ರೆಮಿಟೆನ್ಸ್ ನಿಯಮಗಳಿಂದಾಗಿ ಭಾರತದ ಸಾವಿರಾರು ಶ್ರೀಮಂತರು ಈ ವರ್ಷ ದೇಶ ತೊರೆದು ದುಬೈ, ಸಿಂಗಾಪುರ ಮುಂತಾದೆಡೆಗೆ ವಲಸೆ ಹೋಗಲಿದ್ದಾರೆಂದು ವರದಿಯೊಂದು ಹೇಳಿದೆ.
ಈ ವರದಿಯ ಪ್ರಕಾರ ಹೀಗೆ ದೇಶ ತೊರೆಯಲಿರುವ ಶ್ರೀಮಂತರ ತಲಾ ಸಂಪತ್ತಿನ ಮೌಲ್ಯ 10 ಲಕ್ಷ ಡಾಲರಿಗಿಂತ ಅಧಿಕವಾಗಿದೆ.
ಹೆನ್ಲೆ ಪ್ರೈವೇಟ್ ವೆಲ್ತ್ ಮೈಗ್ರೇಶನ್ ವರದಿ 2023 ಪ್ರಕಾರ 2023 ರಲ್ಲಿ ಭಾರತದಿಂದ ಕನಿಷ್ಠ 6,500 ಮಂದಿ ವಿದೇಶಗಳಲ್ಲಿ ನೆಲೆಸಲು ತೆರಳಲಿದ್ದಾರೆ. ಕಳೆದ ವರ್ಷ ದೇಶ ತೊರೆದವರ ಸಂಖ್ಯೆ 7500 ಆಗಿತ್ತು.
ಕೇಂದ್ರ ವಿತ್ತ ಸಚಿವಾಲಯವು ಅಂತಾರಾಷ್ಟ್ರೀಯ ಕ್ರೆಡಿಟ್ ಕಾರ್ಡ್ ಬಳಕೆ ಮೇಲೆ ಜುಲೈ 1 ರಿಂದ ಶೇ 20 ಟಿಸಿಎಸ್ (ಟ್ಯಾಕ್ಸ್ ಕಲೆಕ್ಟೆಡ್ ಎಟ್ ಸೋರ್ಸ್) ವಿಧಿಸಲು ಮುಂದಾಗಿರುವ ನಡುವೆ ಈ ಬೆಳವಣಿಗೆ ನಡೆದಿದೆ.
ಇತರ ದೇಶಗಳಿಗೆ ಹೋಲಿಸಿದಾಗ ಚೀನಾದಿಂದ 2023ರಲ್ಲಿ 13,500 ವಲಸೆ ಹೋಗಲಿದ್ದಾರೆ. ಎರಡನೇ ಸ್ಥಾನದಲ್ಲಿ ಭಾರತವಿದ್ದರೆ ಮೂರನೇ ಸ್ಥಾನದಲ್ಲಿ ಇಂಗ್ಲೆಂಡ್ (3,200) ಮತ್ತು ನಾಲ್ಕನೇ ಸ್ಥಾನದಲ್ಲಿ ರಷ್ಯಾ (3,500) ಇದೆ.
ಶ್ರೀಮಂತ ವ್ಯಕ್ತಿಗಳು ವಲಸೆ ಹೋಗುವ ದೇಶಗಳು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಉತ್ತೇಜನ ನೀಡುತ್ತವೆ ಹಾಗೂ ಇದು ಪೌರತ್ವ ಪಡೆಯಲೂ ಸಹಕಾರಿಯಾಗಿದೆ.
ಉದಾಹರಣೆಗೆ ದುಬೈನಲ್ಲಿ ಗೋಲ್ಡನ್ ವೀಸಾ ಹಾಗೂ ಸ್ಪಷ್ಟ ತೆರಿಗೆ ಕಾನೂನುಗಳು ಹಾಗೂ ಉದ್ಯಮ ಸ್ನೇಹಿ ವಾತಾವರಣವಿದೆ.
10 ಲಕ್ಷ ಡಾಲರ್‌ಗೂ ಅಧಿಕ ಸಂಪತ್ತಿನ ಒಡೆಯರಾಗಿರುವ 3,57,000 ಭಾರತೀಯರು ಈಗಲೂ ಸ್ವದೇಶದಲ್ಲಿಯೇ ಇದ್ದಾರೆ ಎಂದು ವರದಿ ಹೇಳಿದೆ.