ಬಂಧನಕ್ಕೊಳಗಾದ ಕೆಲವೇ ಗಂಟೆಗಳಲ್ಲಿ ಸಚಿವ ಸೆಂಥಿಲ್ ಬಾಲಾಜಿಗೆ ತುರ್ತು ಶಸ್ತ್ರ ಚಿಕಿತ್ಸೆಗೆ ಸೂಚಿಸಿದ ವೈದ್ಯರು
ಚೆನ್ನೈ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಈಡಿ) ತಮಿಳುನಾಡು ವಿದ್ಯುತ್ ಹಾಗೂ ಅಬಕಾರಿ ಸಚಿವ ವಿ. ಸೆಂಥಿಲ್ ಬಾಲಾಜಿ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಬುಧವಾರ ಶೋಧ ನಡೆಸಿದ ನಂತರ ಅವರನ್ನು ಬಂಧಿಸಿದೆ. ಸಚಿವರು ಇದ್ದ ಅವರ ನಿವಾಸದ ಮೇಲೆ ಈಡಿ ಸರಿಯಾಗಿ 24 ಗಂಟೆಗಳ ಹಿಂದೆ ತನ್ನ ದಾಳಿಯನ್ನು ಆರಂಭಿಸಿತು. ಮಧ್ಯರಾತ್ರಿ 1.30ರ ಸುಮಾರಿಗೆ ಸಚಿವರನ್ನು ತನಿಖಾ ಸಂಸ್ಥೆ ಬಂಧಿಸುವುದಾಗಿ ತಿಳಿಸಿದಾಗ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು, ಅವರನ್ನು ಚೆನ್ನೈನ ಒಮಂದೂರಾರ್ ಸರಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಡಿಎಂಕೆ ನಾಯಕನನ್ನು ಆಸ್ಪತ್ರೆಗೆ ಕರೆತರುತ್ತಿದ್ದಂತೆಯೇ ಆಸ್ಪತ್ರೆಯ ಹೊರಗೆ ಭಾರೀ ನಾಟಕೀಯ ವಾತಾವರಣ ನಿರ್ಮಾಣವಾಗಿತ್ತು. ಈಡಿ ಕ್ರಮವನ್ನು ವಿರೋಧಿಸಿ ಅವರ ಬೆಂಬಲಿಗರು ಅಲ್ಲಿ ಜಮಾಯಿಸಿದರು.
ಡಿಎಂಕೆ ನಾಯಕ ಆಂಬ್ಯುಲೆನ್ಸ್‌ನಲ್ಲಿ ಅಳುತ್ತಿರುವುದು ಕಂಡುಬಂದಿದ್ದು, ಅವರ ಬೆಂಬಲಿಗರು ಈಡಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಾಲಾಜಿ ಅವರ ಇಸಿಜಿಯಲ್ಲಿ ವ್ಯತ್ಯಾಸಗಳನ್ನು ಕಂಡಿದ್ದರಿಂದ ವೈದ್ಯರು ಅವರನ್ನು ತೀವ್ರ ನಿಗಾ ಘಟಕಕ್ಕೆ (ಐಸಿಯು) ಸ್ಥಳಾಂತರಿಸಿದರು.
ಬಂಧನದ ನಂತರ, ತಮಿಳುನಾಡು ಸಚಿವರಿಗೆ ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾಗಲು ಸಲಹೆ ನೀಡಲಾಯಿತು. ವೈದ್ಯರು ಅವರ ಹೃದಯದಲ್ಲಿ ಮೂರು ಬ್ಲಾಕ್ ಗಳನ್ನು ಪತ್ತೆ ಹಚ್ಚಿದರು
"ರಾಜ್ಯ ಸಚಿವ ಸೆಂಥಿಲ್ ಬಾಲಾಜಿ ಅವರು ಇಂದು ಕೊರೊನರಿ ಆಂಜಿಯೋಗ್ರಾಮ್‌ಗೆ ಒಳಗಾಗಿದ್ದಾರೆ, ಬೈಪಾಸ್ ಶಸ್ತ್ರಚಿಕಿತ್ಸೆಯನ್ನು ಆದಷ್ಟು ಬೇಗ ನಡೆಸಲು ಸೂಚಿಸಲಾಗುತ್ತದೆ" ಎಂದು ತಮಿಳುನಾಡು ಸರಕಾರಿ ಮಲ್ಟಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಚೆನ್ನೈ ತನ್ನ ವೈದ್ಯಕೀಯ ಆರೋಗ್ಯ ಬುಲೆಟಿನ್‌ನಲ್ಲಿ ತಿಳಿಸಿದೆ.