×
Ad

ಕುಸ್ತಿಪಟುಗಳ ಪ್ರಕರಣದ ಕಳಪೆ ನಿರ್ವಹಣೆ: ದಿಲ್ಲಿ ಪೊಲೀಸರಿಗೆ ನ್ಯಾ. ಲೋಕೂರ್ ತರಾಟೆ

Update: 2023-06-14 15:53 IST

ಹೊಸದಿಲ್ಲಿ, ಜೂ.14: ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ಎಂ.ಬಿ.ಲೋಕೂರ ಅವರು ಭಾರತೀಯ ಕುಸ್ತಿ ಒಕ್ಕೂಟ (ಡಬ್ಲ್ಯುಎಫ್ಐ)ದ ಮುಖ್ಯಸ್ಥ ಬ್ರಿಜ್ಭೂಷಣ ಶರಣ ಸಿಂಗ್ ವಿರುದ್ಧದ ಆರೋಪಗಳ ಕಳಪೆ ನಿರ್ವಹಣೆಗಾಗಿ ಮತ್ತು ಕ್ರಮ ಕೈಗೊಳ್ಳುವಲ್ಲಿ ಸರಕಾರದ ವಿಳಂಬದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳನ್ನು ನಡೆಸಿಕೊಳ್ಳುತ್ತಿರುವ ರೀತಿಗಾಗಿ ದಿಲ್ಲಿ ಪೊಲೀಸರನ್ನು ತೀವ್ರ ತರಾಟೆಗೆತ್ತಿಕೊಂಡಿದ್ದಾರೆ.

‘ಕುಸ್ತಿಪಟುಗಳ ಹೋರಾಟ:ಸಂಸ್ಥೆಗಳ ಉತ್ತರದಾಯಿತ್ವ’ ಕುರಿತು ಪ್ಯಾನೆಲ್ ಚರ್ಚೆಯಲ್ಲಿ ಪಾಲ್ಗೊಂಡಿದ್ದ ನ್ಯಾ.ಲೋಕೂರ, ಕುಸ್ತಿಪಟುಗಳು ನ್ಯಾಯಕ್ಕಾಗಿ ತಮ್ಮ ಕಾಯುವಿಕೆಯನ್ನು ಮುಂದುವರಿಸಿದ್ದು, ಈಗಾಗಲೇ ಬಲಿಪಶುಗಳಾಗಿರುವವರನ್ನು ಮತ್ತೊಮ್ಮೆ ಬಲಿಪಶುಗಳನ್ನಾಗಿ ಮಾಡಲಾಗುತ್ತಿದೆ ಎನ್ನುವುದು ಸ್ಪಷ್ಟವಾಗಿದೆ. ತಾವು ಒತ್ತಡದಲ್ಲಿದ್ದೇವೆ ಎಂದು ಕುಸ್ತಿಪಟುಗಳು ಹೇಳಿದ್ದಾರೆ ಎಂದರು.

ಸಿಂಗ್ ವಿರುದ್ಧದ ದೂರುಗಳನ್ನು ಸಕಾಲದಲ್ಲಿ ಬಗೆಹರಿಸದಿದ್ದರಿಂದ ಕುಸ್ತಿಪಟುಗಳು ಅನಿವಾರ್ಯವಾಗಿ ಬೀದಿಗಿಳಿಯಬೇಕಾಯಿತು ಎಂದು ಹೇಳಿದ ಅವರು,ವಿಳಂಬ ನೀತಿಯನ್ನು ಅನುಸರಿಸಿದ್ದಕ್ಕಾಗಿ ದಿಲ್ಲಿ ಪೊಲೀಸರನ್ನು ಕಟುವಾಗಿ ಟೀಕಿಸಿದರು.

ಈ ವಿಷಯದಲ್ಲಿ ದಿಲ್ಲಿ ಪೊಲೀಸರ ತನಿಖೆಯನ್ನು ಸರ್ವೋಚ್ಚ ನ್ಯಾಯಾಲಯವು ಮೇಲ್ವಿಚಾರಣೆ ಮಾಡಬೇಕಿತ್ತು ಎಂದರು. ದಿಲ್ಲಿ ಪೊಲೀಸರು ಕೇಂದ್ರ ಗೃಹ ಸಚಿವಾಲಯದ ಅಧೀನಕ್ಕೊಳಪಟ್ಟಿದ್ದಾರೆ ಎನ್ನುವುದನ್ನು ಇಲ್ಲಿ ಗಮನಿಸಬೇಕು.

ಲೈಂಗಿಕ ಕಿರುಕುಳದ ದೂರುಗಳನ್ನು ನಿರ್ವಹಿಸಲು ಡಬ್ಲ್ಯುಎಫ್ಐ ಯಾವುದೇ ಸಮಿತಿಯನ್ನು ಹೊಂದಿಲ್ಲ,ಇದು ಕಾನೂನಿಗೆ ವಿರುದ್ಧವಾಗಿದೆ ಎಂದು ಬೆಟ್ಟು ಮಾಡಿದ ನ್ಯಾ.ಲೋಕೂರ,ಜನವರಿಯಲ್ಲಿ ಕುಸ್ತಿಪಟುಗಳ ಪ್ರತಿಭಟನೆ ಆರಂಭಗೊಂಡಾಗ ನೇರವಾಗಿ ಜಂತರ್ ಮಂತರ್ಗೆ ತೆರಳಲು ಅವರು ನಿರ್ಧರಿಸಿದಂತಿರಲಿಲ್ಲ. ಲೈಂಗಿಕ ಕಿರುಕುಳ ಬಹು ಹಿಂದೆಯೇ ಆರಂಭವಾಗಿತ್ತು. ಅವರು ದೂರುಗಳನ್ನು ಸಲ್ಲಿಸಿದ್ದರು,ಆದರೆ ಡಬ್ಲ್ಯುಎಫ್ಐನಲ್ಲಿ ದೂರು ಸಮಿತಿ ಇರಲಿಲ್ಲ ಎಂದು ಹೇಳಿದರು.

Similar News