ನಕಲಿ ಸಾಲ ವಸೂಲಾತಿ ತೋರಿಸಿದ ಆರೋಪ: ಝೀ ಮಾಲಕರ ವಿರುದ್ಧ ಸೆಬಿ ತನಿಖೆ
ಹೊಸದಿಲ್ಲಿ: ಮನೋರಂಜನಾ ಕ್ಷೇತ್ರದ ದೈತ್ಯ ಸಂಸ್ಥೆ ಝೀ ಸ್ಥಾಪಕ ಸುಭಾಷಚಂದ್ರ ಮತ್ತು ಅವರ ಪುತ್ರ ಪುನೀತ ಗೋಯೆಂಕಾ ಅವರು ಕಂಪನಿಯು ನೀಡಿದ್ದ ಸಾಲಗಳನ್ನು ಮರುವಸೂಲು ಮಾಡಲಾಗಿದೆ ಎಂದು ಸುಳ್ಳಾಗಿ ಬಿಂಬಿಸಲು ಅಂಗಸಂಸ್ಥೆಗಳ ಸಂಕೀರ್ಣ ಜಾಲವನ್ನು ಬಳಸಿಕೊಂಡಿದ್ದರು ಮತ್ತು ಹಣವನ್ನು ತಮ್ಮ ಸ್ವಂತ ಲಾಭಕ್ಕಾಗಿ ಹೊಂದಿಸಿಕೊಂಡಿದ್ದರು ಎಂದು ಮಾರುಕಟ್ಟೆ ನಿಯಂತ್ರಕ ಸೆಬಿ ಆರೋಪಿಸಿದೆ.
ಝೀ ಎಂಟರ್ಟೇನ್ಮೆಂಟ್ ಎಂಟರ್ಪ್ರೈಸಸ್ ಲಿ. (ಝೀಲ್) ಮತ್ತು ಎಸ್ಸೆಲ್ ಗ್ರೂಪ್ನ ಇತರ ಲಿಸ್ಟೆಡ್ ಕಂಪನಿಗಳ ಹಣವನ್ನು ಚಂದ್ರ ಕುಟುಂಬದ ಒಡೆತನದ ಅಥವಾ ನಿಯಂತ್ರಣದಲ್ಲಿರುವ ಕಂಪನಿಗಳ ಮೂಲಕ ರವಾನಿಸಲಾಗಿತ್ತು ಮತ್ತು ತನ್ನ ಸಹಸಂಸ್ಥೆಗಳು ಸಾಲಗಳನ್ನು ಮರುಪಾವತಿಸಿವೆ ಎನ್ನುವುದನ್ನು ತೋರಿಸಲು ಅಂತಿಮವಾಗಿ ಈ ಹಣವನ್ನು ಝೀಲ್ಗೆ ವರ್ಗಾಯಿಸಲಾಗಿತ್ತು ಎನ್ನುವುದನ್ನು ತನ್ನ ಮಧ್ಯಂತರ ಆದೇಶದಲ್ಲಿ ತಿಳಿಸಿರುವ ಸೆಬಿ,ಇದನ್ನು ರೇಖಾಚಿತ್ರಗಳ ಮೂಲಕ ವಿವರಿಸಿದೆ.
ವಾಸ್ತವದಲ್ಲಿ ಝೀಲ್ ಹಣವನ್ನು ಸ್ವೀಕರಿಸಿರಲಿಲ್ಲ ಮತ್ತು ಹಣ ಸ್ವೀಕೃತಿಯನ್ನು ತೋರಿಸಲು ಕೇವಲ ಪುಸ್ತಕ ನಮೂದುಗಳಾಗಿವೆ ಎಂದು ಸೆಬಿ ಆರೋಪಿಸಿದೆ.
ಸಹಸಂಸ್ಥೆಗಳು ತಾವು ಝೀಲ್ಗೆ ನೀಡಬೇಕಿದ್ದ ಹಣವನ್ನು ನಿಜಕ್ಕೂ ಮರಳಿಸಿವೆ ಎಂದು ಬಿಂಬಿಸಲು ಝೀಲ್ನ ಸ್ವಂತ ಹಣ/ಎಸ್ಸೆಲ್ ಗ್ರೂಪ್ನ ಇತರ ಲಿಸ್ಟೆಡ್ ಕಂಪನಿಗಳ ಹಣದ ಬಳಕೆಯಾಗಿರುವಂತೆ ಕಾಣುತ್ತಿದೆ ಎಂದು ಸೆಬಿ ಹೇಳಿದೆ.
2019ರಲ್ಲಿ ಝೀಲ್ ನ ಇಬ್ಬರು ಸ್ವತಂತ್ರ ನಿರ್ದೇಶಕರ ರಾಜೀನಾಮೆಯು ಸೆಬಿ ತನಿಖೆಯನ್ನು ಪ್ರೇರೇಪಿಸಿತ್ತು.
ಕೆಲವು ಗ್ರೂಪ್ ಕಂಪನಿಗಳು ಯೆಸ್ ಬ್ಯಾಂಕಿನಿಂದ ಪಡೆದುಕೊಂಡಿದ್ದ ಸಾಲಸೌಲಭ್ಯಗಳಿಗೆ ಚಂದ್ರ 2018ರಲ್ಲಿ ಲೆಟರ್ ಆಫ್ ಕಂಫರ್ಟ್ (ಎಲ್ಒಸಿ) ನ್ನು ನೀಡಿದ್ದರು ಎಂದು ಸೆಬಿ ಹೇಳಿದೆ.
ಎಲ್ಒಸಿ ಸಹಸಂಸ್ಥೆಯು ಪಡೆದುಕೊಳ್ಳುವ ಸಾಲಕ್ಕೆ ಬೆಂಬಲವನ್ನು ಸೂಚಿಸುತ್ತದೆ ಮತ್ತು ಸಾಮಾನ್ಯವಾಗಿ ಮೂರನೇ ಪಾರ್ಟಿಯು ಈ ಪತ್ರವನ್ನು ನೀಡುತ್ತದೆ. ಉದಾಹರಣೆಗೆ ಸರಕಾರವು ಸಾರ್ವಜನಿಕ ಕ್ಷೇತ್ರದ ಉದ್ಯಮಗಳು ಪಡೆಯುವ ಸಾಲಕ್ಕೆ ಬ್ಯಾಂಕುಗಳಿಗೆ ಭರವಸೆ ನೀಡಲು ಇಂತಹ ಪತ್ರವನ್ನು ವಿತರಿಸಬಹುದು.
ಚಂದ್ರ ಅವರ ಎಲ್ಒಸಿಯ ಆಧಾರದಲ್ಲಿ ಯೆಸ್ ಬ್ಯಾಂಕ್ ಏಳು ಇತರ ಗ್ರೂಪ್ ಕಂಪನಿಗಳ ಬಾಧ್ಯತೆಗಳನ್ನು ಪೂರೈಸಲು ಝೀಲ್ನ 200 ಕೋ.ರೂ.ಗಳ ನಿರಖು ಠೇವಣಿಯನ್ನು ಹೊಂದಿಸಿಕೊಂಡಿತ್ತು ಎನ್ನುವುದನ್ನು ಸೆಬಿ ಪತ್ತೆ ಹಚ್ಚಿದೆ. ಈ ಎಲ್ಒಸಿಯನ್ನು ನೀಡುವ ಚಂದ್ರ ಅವರ ನಡೆಯ ಬಗ್ಗೆ ಝೀಲ್ ಆಡಳಿತ ಮಂಡಳಿಗೆ ಅರಿವಿರಲಿಲ್ಲ ಎನ್ನಲಾಗಿದೆ. ಚಂದ್ರ ಮತ್ತು ಅವರ ಮಗ,ಝೀಲ್ ಸಿಇಒ ಗೊಯೆಂಕಾ ಆಡಳಿತ ಮಂಡಳಿಯೊಂದಿಗೆ ಸಮಾಲೋಚಿಸದೆ ಝೀಲ್ನ ಪರವಾಗಿ ಎಲ್ಒಸಿಗಳಿಗೆ ಸಹಿ ಹಾಕಿದ್ದರು ಎಂದೂ ಆರೋಪಿಸಲಾಗಿದೆ.
ಚಂದ್ರ ಅವರ ಎಲ್ಒಸಿ,ಹಣಕಾಸಿನ ಸ್ವೀಕೃತಿಯನ್ನು ತೋರಿಸಲು ಸಂಪರ್ಕಿತ ಕಂಪನಿಗಳ ಮೂಲಕ ಬಳಸು ಮಾರ್ಗದ ವಹಿವಾಟುಗಳು ಮತ್ತು ಸೆಬಿಗೆ ಸಲ್ಲಿಸಿರುವ ಹೇಳಿಕೆಗಳು ಇವೆಲ್ಲ ಝೀ ಮತ್ತು ಎಸ್ಸೆಲ್ ಗ್ರೂಪ್ನ ಇತರ ಲಿಸ್ಟೆಡ್ ಕಂಪನಿಗಳ ಆಸ್ತಿಗಳನ್ನು ಪ್ರವರ್ತಕರು ಕಬಳಿಸಲು ಝೀಲ್ನ ಪ್ರವರ್ತಕ ಕುಟುಂಬವು ರೂಪಿಸಿದ್ದ ವಿಸ್ತ್ರತ ಸಂಚಿನ ಭಾಗವಾಗಿತ್ತು ಎಂದು ಸೆಬಿ ಹೇಳಿದೆ.
ಮರುಪಾವತಿ ಆಗಿರದಿದ್ದರೂ ಮರುಪಾವತಿ ಮಾಡಲಾಗಿದೆ ಎಂದು ಸುಳ್ಳಾಗಿ ಬಿಂಬಿಸಲು ಝೀಲ್ ಮತ್ತು ಇತರ ಎಸ್ಸೆಲ್ ಗ್ರೂಪ್ ಕಂಪನಿಗಳಿಂದ ಕನಿಷ್ಠ 143.9 ಕೋ.ರೂ.ಗಳನ್ನು ವರ್ಗಾಯಿಸಲಾಗಿತ್ತು,ಈಗ ಈ ಹಣದ ಜಾಡನ್ನು ಪರಿಶೀಲಿಸಲಾಗುತ್ತಿದೆ ಎಂದು ಸೆಬಿ ತಿಳಿಸಿದೆ.
ಈ ಗಂಭೀರ ಆರೋಪಗಳು ಸೋನಿಯ ಅಂಗಸಂಸ್ಥೆಯೊಂದಿಗೆ ಝೀ ವಿಲೀನಗೊಳಿಸುವ ಬೃಹತ್ ಯೋಜನೆಯನ್ನು ಹಳಿ ತಪ್ಪಿಸುವ ಬೆದರಿಕೆಯನ್ನೊಡ್ಡಿವೆ. Netflix ಮತ್ತು amazon.com ಎದುರಿಸಬಲ್ಲ ಮಾಧ್ಯಮ ವೇದಿಕೆಯನ್ನು ಸೃಷ್ಟಿಸುವುದು ವಿಲೀನ ಯೋಜನೆಯ ಉದ್ದೇಶವಾಗಿದೆ.
ತನಿಖೆ ತೀವ್ರಗೊಂಡಿರುವ ನಡುವೆಯೇ ಚಂದ್ರ ಮತ್ತು ಗೊಯೆಂಕಾ ಯಾವುದೇ ಲಿಸ್ಟೆಡ್ ಕಂಪನಿಯಲ್ಲಿ ನಿರ್ದೇಶಕ ಅಥವಾ ಪ್ರಮುಖ ವ್ಯವಸ್ಥಾಪನೆ ಹುದ್ದೆಯನ್ನು ಹೊಂದುವುದನ್ನು ಸೆಬಿ ನಿಷೇಧಿಸಿದೆ.