×
Ad

ಮಧ್ಯಪ್ರದೇಶ ಶಾಲೆಯಲ್ಲಿ ‘ಹಿಜಾಬ್’ ವಿವಾದ: ಪ್ರಿನ್ಸಿಪಾಲ್ ಸೇರಿ ಮೂವರ ಬಂಧನ

Update: 2023-06-14 21:35 IST

ಭೋಪಾಲ: ಹಿಜಾಬ್ ಧರಿಸುವಂತೆ ಮುಸ್ಲಿಮೇತರ ವಿದ್ಯಾರ್ಥಿಗಳನ್ನು ಬಲವಂತಪಡಿಸುತ್ತಿದೆ ಎನ್ನುವ ಆರೋಪ ಎದುರಿಸುತ್ತಿರುವ ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯ ಶಾಲೆಯೊಂದರ ಪ್ರಿನ್ಸಿಪಾಲರು ಮತ್ತು ಇತರ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೋರ್ಡ್ ಪರೀಕ್ಷೆಯಲ್ಲಿ ತೋರಿದ ನಿರ್ವಹಣೆಗಾಗಿ 18 ವಿದ್ಯಾರ್ಥಿಗಳನ್ನು ಅಭಿನಂದಿಸಿ ಗಂಗಾ ಜಮುನಾ ಹೈಯರ್ ಸೆಕೆಂಡರಿ ಶಾಲೆಯು ಹಚ್ಚಿರುವ ಪೋಸ್ಟರೊಂದು ಕಳೆದ ತಿಂಗಳು ವಿವಾದಕ್ಕೆ ಕಾರಣವಾಗಿದೆ. ಅದರಲ್ಲಿ ಎಲ್ಲಾ ಧರ್ಮಗಳ ವಿದ್ಯಾರ್ಥಿನಿಯರು ಶಿರವಸ್ತ್ರಗಳನ್ನು ಧರಿಸಿದ್ದರು. ಆ ಪೋಸ್ಟರ್ ಈಗ ವೈರಲ್ ಆಗಿದೆ.

ಶಾಲೆಯಲ್ಲಿ ಮತಾಂತರ ನಡೆಸಲಾಗುತ್ತಿದೆ ಎಂದು ಆರೋಪಿಸಿರುವ ಹಿಂದುತ್ವ ಗುಂಪುಗಳು ಪ್ರತಿಭಟನೆ ನಡೆಸಿವೆ. ಶಾಲೆಯ ನೋಂದಣಿಯನ್ನು ರದ್ದುಪಡಿಸಬೇಕು ಎಂದು ಅವು ಒತ್ತಾಯಿಸಿವೆ. ಆದರೆ, ಶಿರವಸ್ತ್ರವು ಸಮವಸ್ತ್ರದ ಭಾಗವಾಗಿದೆ ಮತ್ತು ಅದನ್ನು ಧರಿಸಬೇಕೆಂದು ವಿದ್ಯಾರ್ಥಿಗಳನ್ನು ಬಲವಂತಪಡಿಸಲಾಗುತ್ತಿಲ್ಲ ಎಂದು ಶಾಲೆಯ ಆಡಳಿತ ಮಂಡಳಿಯು ಹೇಳಿಕೆಯೊಂದರಲ್ಲಿ ತಿಳಿಸಿದೆ.

ಪ್ರಕರಣಕ್ಕೆ ಸಂಬಂಧಿಸಿ ಶಾಲಾ ಪ್ರಿನ್ಸಿಪಾಲ್ ಅಫ್ಶಾ ಶೇಖ್, ಗಣಿತ ಶಿಕ್ಷಕಿ ಅನಸ್ ಅತಹರ್ ಮತ್ತು ಭದ್ರತಾ ಸಿಬ್ಬಂದಿ ರುಸ್ತಮ್ ಅಲಿಯನ್ನು ಪೊಲೀಸರು ಬಂಧಿಸಿದ್ದಾರೆ.

ಶಾಲಾ ವಿದ್ಯಾರ್ಥಿನಿಯರು ಮತ್ತು ಅವರ ಕುಟುಂಬ ಸದಸ್ಯರು ಸೇರಿದಂತೆ, ಆರೇಳು ಸಾಕ್ಷಿಗಳ ಹೇಳಿಕೆಗಳನ್ನು ಆಧರಿಸಿ ಅವರನ್ನು ಬಂಧಿಸಲಾಗಿದೆ ಎಂದು ದಾಮೋಹ್ ಪೊಲೀಸ್ ಸೂಪರಿಂಟೆಂಡೆಂಟ್ ರಾಕೇಶ್ ಸಿಂಗ್ ಹೇಳಿದ್ದಾರೆ. ಅವರನ್ನು ರವಿವಾರ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಅವರಿಗೆ ನ್ಯಾಯಾಂಗ ಬಂಧವನ್ನು ವಿಧಿಸಿದೆ.

ಜೂನ್ 7ರಂದು, ಭಾರತೀಯ ದಂಡ ಸಂಹಿತೆಯ ಪರಿಚ್ಛೇದ 295 (ಯಾವುದೇ ವರ್ಗದ ಜನರು ಪವಿತ್ರವೆಂದು ಭಾವಿಸುವ ವಸ್ತುವಿಗೆ ಹಾನಿ ಮಾಡುವುದು ಅಥವಾ ಅಪವಿತ್ರಗೊಳಿಸುವುದು) ಮತ್ತು ಪರಿಚ್ಛೇದ 506 (ಕ್ರಿಮಿನಲ್ ಬೆದರಿಕೆ) ಹಾಗೂ ಬಾಲ ನ್ಯಾಯ ಕಾಯ್ದೆ ಮತ್ತು ಮಧ್ಯಪ್ರದೇಶ ಧಾರ್ಮಿಕ ಸ್ವಾತಂತ್ರ ಕಾಯ್ದೆ, 2021ರ ವಿವಿಧ ವಿಧಿಗಳನ್ವಯ ಪೊಲೀಸರು ಶಾಲಾ ಆಡಳಿತ ಮಂಡಳಿಯ 11 ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಿದ್ದರು.

ವಿದ್ಯಾರ್ಥಿಗಳು ಕೂಲಿಕಾರರು, ರೈತರು, ಬೀಡಿ ಕಟ್ಟುವವರ ಮಕ್ಕಳು

ಜೂನ್ 2ರಂದು ರಾಜ್ಯ ಶಿಕ್ಷಣ ಇಲಾಖೆಯು ಶಾಲೆಯ ಮಾನ್ಯತೆಯನ್ನು ರದ್ದುಗೊಳಿಸಿತ್ತು. ವಿದ್ಯಾರ್ಥಿಗಳಿಗೆ ನೀಡಬೇಕಾಗಿದ್ದ ಹಲವಾರು ಸವಲತ್ತುಗಳು ಲಭ್ಯವಿಲ್ಲ ಅಥವಾ ಸಾಕಷ್ಟಿಲ್ಲ ಎಂದು ಇಲಾಖೆಯು ತನ್ನ ನಿರ್ಧಾರಕ್ಕೆ ಕಾರಣ ನೀಡಿತ್ತು. ಶಾಲೆಯ ಕೆಲವು ಭಾಗಗಳು ಅನಧಿಕೃತವಾಗಿವೆ ಎಂದು ಹೇಳಿ ಅವುಗಳನ್ನು ಧ್ವಂಸಗೊಳಿಸುವುದಾಗಿ ಸ್ಥಳೀಯ ಮುನಿಸಿಪಾಲಿಟಿ ಬೆದರಿಸಿದೆ.

ಶಾಲೆಯನ್ನು ಗಂಗಾ ಜಮುನಾ ವೆಲ್ಫೇರ್ ಸೊಸೈಟಿಯು 2010ರಲ್ಲಿ ಸ್ಥಾಪಿಸಿತ್ತು. ಶಾಲೆಯಲ್ಲಿ ಸುಮಾರು 1,200 ವಿದ್ಯಾರ್ಥಿಗಳಿದ್ದಾರೆ. ಈ ಪೈಕಿ ಹೆಚ್ಚಿನವರು ಕೂಲಿಕಾರರು, ರೈತರು ಮತ್ತು ಬೀಡಿ ಕಟ್ಟುವವರ ಮಕ್ಕಳು.

Similar News