×
Ad

ಮಣಿಪುರ: ಕೇಂದ್ರ ಸಚಿವರ ಮನೆಗೆ ಬೆಂಕಿ ಹಚ್ಚಿದ 1,000 ಕ್ಕೂ ಹೆಚ್ಚು ಜನರ ಗುಂಪು

Update: 2023-06-16 10:19 IST

ಹೊಸದಿಲ್ಲಿ: ಪರಿಶಿಷ್ಟ ಪಂಗಡ ವರ್ಗಕ್ಕೆ ಸೇರಿಸಬೇಕೆಂಬ ಬೇಡಿಕೆಗೆ ಸಂಬಂಧಿಸಿದಂತೆ ಎರಡು ಸಮುದಾಯಗಳ ನಡುವೆ ಘರ್ಷಣೆಗೆ ಸಾಕ್ಷಿಯಾಗಿರುವ ಈಶಾನ್ಯ ರಾಜ್ಯದಲ್ಲಿ ಹಿಂಸಾಚಾರ ಮುಂದುವರಿದಿದ್ದು, ಕಳೆದ ರಾತ್ರಿ ಮಣಿಪುರದಲ್ಲಿ ಕೇಂದ್ರ ಸಚಿವರೊಬ್ಬರ ಮನೆ ಮೇಲೆ 1,000 ಕ್ಕೂ ಹೆಚ್ಚು ಜನರ ಗುಂಪೊಂದು ದಾಳಿ ಮಾಡಿ ಬೆಂಕಿ ಹಚ್ಚಿದೆ.

ಘಟನೆಯ ವೇಳೆ ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಆರ್‌.ಕೆ. ರಂಜನ್ ಸಿಂಗ್ ಅವರು ಇಂಫಾಲ್‌ನ ಮನೆಯಲ್ಲಿ ಇರಲಿಲ್ಲ. ಅಧಿಕೃತ ಕೆಲಸಕ್ಕಾಗಿ ಕೇರಳಕ್ಕೆ ತೆರಳಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜೂನ್ 15 ರಂದು ಇಂಫಾಲ್‌ನಲ್ಲಿರುವ ಸಾಮಾಜಿಕ ಮಾಧ್ಯಮ ಕಲ್ಯಾಣ ಸಚಿವೆ  ಹಾಗೂ ಬಿಜೆಪಿ ನಾಯಕಿ ನೆಮ್ಚಾ ಕಿಪ್‌ಗೆನ್ ಅವರ ನಿವಾಸಕ್ಕೆ ಬೆಂಕಿ ಹಚ್ಚಿದ ಒಂದು ದಿನದ ನಂತರ ಈ ದಾಳಿ ನಡೆದಿದೆ.

ಗುರುವಾರ ತಡ ರಾತ್ರಿ ಇಂಫಾಲದಲ್ಲಿ ಕರ್ಫ್ಯೂ ಇದ್ದರೂ ಕೂಡ ಜನರ ಗುಂಪು  ಕೊಂಗ್ಬಾದಲ್ಲಿರುವ ಸಚಿವರ ಮನೆಗೆ ತಲುಪುವಲ್ಲಿ ಯಶಸ್ವಿಯಾಯಿತು. ಘಟನೆಯ ವೇಳೆ ಸಚಿವರ ನಿವಾಸದಲ್ಲಿ ಒಂಬತ್ತು ಭದ್ರತಾ ಬೆಂಗಾವಲು ಸಿಬ್ಬಂದಿ, ಐವರು ಭದ್ರತಾ ಸಿಬ್ಬಂದಿ ಮತ್ತು ಎಂಟು ಹೆಚ್ಚುವರಿ ಗಾರ್ಡ್‌ಗಳು ಕರ್ತವ್ಯದಲ್ಲಿದ್ದರು.

ದಾಳಿಯ ವೇಳೆ ಗುಂಪು ಎಲ್ಲಾ ದಿಕ್ಕುಗಳಿಂದ ಪೆಟ್ರೋಲ್ ಬಾಂಬ್‌ಗಳನ್ನು ಎಸೆದಿದೆ ಎಂದು ಸಚಿವರ ಮನೆಯ ಭದ್ರತಾ ಸಿಬ್ಬಂದಿ ತಿಳಿಸಿದ್ದಾರೆ.

" ಭಾರೀ ಸಂಖ್ಯೆಯಲ್ಲಿ ಜನರಿದ್ದ ಕಾರಣ  ನಮಗೆ ಇದನ್ನು ತಡೆಯಲು ಸಾಧ್ಯವಾಗಲಿಲ್ಲ ಹಾಗೂ ಪರಿಸ್ಥಿತಿಯನ್ನು ನಿಯಂತ್ರಿಸಲು ನಮಗೆ ಸಾಧ್ಯವಾಗಲಿಲ್ಲ. ಅವರು ಎಲ್ಲಾ ದಿಕ್ಕುಗಳಿಂದ ಪೆಟ್ರೋಲ್ ಬಾಂಬ್‌ಗಳನ್ನು ಎಸೆದರು ಹೀಗಾಗಿ  ಜನಸಮೂಹವನ್ನು ನಿಯಂತ್ರಿಸಲು ಅಸಾಧ್ಯವಾಯಿತು'' ಎಂದು ಎಸ್ಕಾರ್ಟ್ ಕಮಾಂಡರ್ ಎಲ್ ದಿನೇಶ್ವರ್ ಸಿಂಗ್ ಹೇಳಿದ್ದಾರೆ.

ಸಚಿವರ ಮನೆ ಮೇಲೆ ಗುಂಪೊಂದು ದಾಳಿ ನಡೆಸುತ್ತಿರುವುದು ಇದು ಎರಡನೇ ಬಾರಿ. ಮೇ ತಿಂಗಳಲ್ಲಿ ನಡೆದ ದಾಳಿಯ ವೇಳೆ ಗುಂಪನ್ನು ಚದುರಿಸಲು ಭದ್ರತಾ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿದ್ದರು.

Similar News