×
Ad

ಆಂಧ್ರ ಪ್ರದೇಶದಲ್ಲಿ 15 ವರ್ಷದ ಬಾಲಕನ ಮೇಲೆ ಪೆಟ್ರೋಲ್‌ ಸುರಿದು ಜೀವಂತ ದಹಿಸಿದ ದುಷ್ಕರ್ಮಿಗಳು

Update: 2023-06-16 17:46 IST

ಹೈದರಾಬಾದ್: ಆಂಧ್ರ ಪ್ರದೇಶದ ಬಪ್ತಾಲ ಜಿಲ್ಲೆಯ ಚೆರುಕುಪಳ್ಳಿ ಬ್ಲಾಕಿನ ರಾಜವೊಲು ಗ್ರಾಮದಲ್ಲಿ ಇಂದು ಬೆಳಿಗ್ಗೆ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ಕೆಲ ಅಪರಿಚಿತ ವ್ಯಕ್ತಿಗಳು ಹತ್ತನೇ ತರಗತಿಯ ವಿದ್ಯಾರ್ಥಿಯೊಬ್ಬನ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಜೀವಂತವಾಗಿ ದಹಿಸಿದ್ದಾರೆ. ವಿದ್ಯಾರ್ಥಿ 15 ವರ್ಷದ ಅಮರ್‌ನಾಥ್‌  ಟ್ಯೂಷನ್‌ ತರಗತಿಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.

ಆತನನ್ನು ತಕ್ಷಣ ಗುಂಟೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆತ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ.

ಬಾಲಕ ತನ್ನ ಸೈಕಲಿನಲ್ಲಿ ಟ್ಯೂಷನ್‌ ತರಗತಿಯತ್ತ ಸಾಗುತ್ತಿದ್ದಾಗ ರೆಡ್ಲಪಲೆಂ ಪ್ರದೇಶದಲ್ಲಿ ಕೆಲ ಯುವಕರು ಅವನನ್ನು ತಡೆದು ನಿಲ್ಲಿಸಿ ದಾಳಿ ನಡೆಸಿದ್ದರು. ಬಾಲಕನ ಬೊಬ್ಬೆ ಕೇಳಿ ಸ್ಥಳೀಯರು ಧಾವಿಸಿದ್ದರು. ಸಾಯುವ ಮೊದಲು ಬಾಲಕ ನೀಡಿದ ಹೇಳಿಕೆಯಲ್ಲಿ ತನ್ನ ಮೇಲೆ ವೆಂಕಟೇಶ್ವರ ರೆಡ್ಡಿ ಮತ್ತಿತರರು ದಾಳಿ ನಡೆಸಿದ್ದರೆಂದು ತಿಳಿಸಿದ್ದಾನೆ.

ಅಮರ್‌ನಾಥ್‌ನ ಸೋದರಿಗೆ ಕಿರುಕುಳ ನೀಡುತ್ತಿದ್ದ ಹುಡುಗನೊಬ್ಬ ಈ ಕೃತ್ಯದ ಹಿಂದೆ ಇದ್ದಾನೆಂದು ಮೃತ ಬಾಲಕನ ಅಜ್ಜ ರೆಡ್ಡಯ್ಯ ಆರೋಪಿಸಿದ್ದಾರೆ. ತನ್ನ ಸೋದರಿಗೆ ಕಿರುಕುಳ ನೀಡಿದ್ದಕ್ಕಾಗಿ ಆ ಹುಡುಗನನ್ನು ಅಮರ್‌ನಾಥ್‌ ತರಾಟೆಗೆ ತೆಗೆದುಕೊಂಡಿದ್ದ. ಸೋದರಿ ಕಲಿಯುವ ಕಾಲೇಜಿನ ಪಕ್ಕ ಆತ ಅಲೆದಾಡುತ್ತಿದ್ದುದನ್ನೂ ಅಮರ್‌ನಾಥ್‌ ಪ್ರಶ್ನಿಸಿದ್ದನೆನ್ನಲಾಗಿದೆ.

ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆಬೀಸಿದ್ದಾರೆ.

Similar News