×
Ad

‌ಆದಿಪುರುಷ್ ಚಿತ್ರ ಪ್ರದರ್ಶನದ ವೇಳೆ ಆಂಜನೇಯನಿಗೆ ಮೀಸಲಿಟ್ಟಿದ್ದ ಆಸನದಲ್ಲಿ ಕುಳಿತ ವ್ಯಕ್ತಿಗೆ ಥಳಿತ; ವಿಡಿಯೋ ವೈರಲ್

Update: 2023-06-16 19:21 IST

ಹೈದರಾಬಾದ್: ಆದಿಪುರುಷ್ ಚಿತ್ರ (Adipurush) ಪ್ರದರ್ಶನದ ವೇಳೆ ಆಂಜನೇಯನಿಗೆ ಮೀಸಲಿರಿಸಿದ್ದ ಸೀಟಿನಲ್ಲಿ ಕುಳಿತು ಸಿನೆಮಾ ವೀಕ್ಷಿಸುತ್ತಿದ್ದ ವ್ಯಕ್ತಿಗೆ ಗುಂಪೊಂದು ತೀವ್ರವಾಗಿ ಥಳಿಸಿದ್ದು, ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

 ಆದಿಪುರುಷ ಚಿತ್ರ ಪ್ರದರ್ಶನಗೊಳ್ಳುವ ಮಂದಿರಗಳಲ್ಲಿ ರಾಮಭಕ್ತ ಹನುಮನಿಗೆ ಆಸನವೊಂದನ್ನು ಮೀಸಲಿರಿಸುವಂತೆ ಚಿತ್ರ ನಿರ್ದೇಶಕ ಓಂ ರಾವುತ್ ಅವರ ಕೋರಿದ್ದರು. ಅದರಂತೆ ಥಿಯೇಟರ್ ಮಾಲೀಕರು ಒಂದು ಆಸನವನ್ನು ಆಂಜನೇಯನಿಗೆ ಮೀಸಲಿರಿಸಿದ್ದಾರೆ.

ಅದರಂತೆ ತೆಲಂಗಾಣದ ಹೈದರಾಬಾದ್‌ನ ಭ್ರಮರಾಂಬ ಥಿಯೇಟರ್‌ನಲ್ಲಿ ಒಂದು ಆಸನವನ್ನು ಕಾಯ್ದಿರಿಸಲಾಗಿತ್ತು. ಖಾಲಿ ಆಸನದಲ್ಲಿ ವ್ಯಕ್ತಿಯೊಬ್ಬ ಕುಳಿತಿದ್ದು, ಚಿತ್ರ ವೀಕ್ಷಿಸಲು ಬಂದವರಲ್ಲಿ ಕೆಲವರು ವ್ಯಕ್ತಿಯನ್ನು ಪ್ರಶ್ನಿಸಿ ಥಳಿಸಿದ್ದಾರೆ. ಘಟನೆಯ ವಿಡಿಯೋ ವೈರಲ್‌ ಆಗಿದ್ದು, ವ್ಯಾಪಕ ಖಂಡನೆ ವ್ಯಕ್ತವಾಗಿದೆ. 

ರಾಮಾಯಣ ಆಧರಿಸಿದ ಕತೆಯನ್ನು ಹೊಂದಿರುವ ಆದಿಪುರುಷ್‌ ಚಿತ್ರದಲ್ಲಿ ನಟ ಪ್ರಭಾಸ್‌ ರಾಮನಾಗಿ ಕಾಣಿಸಿಕೊಂಡಿದ್ದಾರೆ. ಸೀತೆ ಪಾತ್ರದಲ್ಲಿ ಕೃತಿ ಸನನ್‌ ಹಾಗೂ ರಾವಣ ಪಾತ್ರದಲ್ಲಿ ಸೈಫ್‌ ಅಲಿ ಖಾನ್‌ ಕಾಣಿಸಿಕೊಂಡಿದ್ದಾರೆ.

Similar News