×
Ad

‘ಆದಿಪುರುಷ’ದಲ್ಲಿ ಸೀತೆ ಭಾರತದ ಪುತ್ರಿ ಎಂಬ ಉಲ್ಲೇಖ: ಹಿಂದಿ ಚಿತ್ರ ಪ್ರದರ್ಶನ ನಿಷೇಧಿಸುತ್ತೇವೆಂದ ನೇಪಾಳದ ಮೇಯರ್

Update: 2023-06-16 21:33 IST

ಕಠ್ಮಂಡು: ‘ಸೀತೆ ಭಾರತದ ಪುತ್ರಿ’ ಎಂದು ಉಲ್ಲೇಖಿಸಿರುವ ಸಾಲನ್ನು ‘ಆದಿಪುರುಷ ’ ನಿರ್ಮಾಪಕರು ಚಿತ್ರದಿಂದ ಹಿಂದೆಗೆದುಕೊಳ್ಳದಿದ್ದರೆ ನಗರದಲ್ಲಿ ಹಿಂದಿ ಚಿತ್ರಗಳ ಪ್ರದರ್ಶನವನ್ನು ನಿಷೇಧಿಸುವುದಾಗಿ ಕಠ್ಮಂಡು ಮೇಯರ್ ಬಾಲೇಂದ್ರ ಶಾ ಅವರು ಗುರುವಾರ ಬೆದರಿಕೆಯೊಡ್ಡಿದ್ದಾರೆ.

ಚಿತ್ರವು ಹಿಂದು ಮಹಾಕಾವ್ಯ ರಾಮಾಯಣವನ್ನು ಆಧರಿಸಿದೆ. ಸೀತೆಯ ಜನ್ಮಸ್ಥಳದ ಕುರಿತು ವಿವಾದವಿದೆ. ಸೀತೆ ಭಾರತದಲ್ಲಿಯ ಸೀತಾಮಡಿಯಲ್ಲಿ ಜನಿಸಿದ್ದಳು ಎಂದು ಕೆಲವರು ಹೇಳುತ್ತಿದ್ದರೆ,ಆಕೆ ನೇಪಾಳದ ಜನಕಪುರದಲ್ಲಿ ಜನಿಸಿದ್ದಳು ಎಂದು ಇತರರು ಪ್ರತಿಪಾದಿಸುತ್ತಿದ್ದಾರೆ.

ಸೀತೆಯ ಜನ್ಮಸ್ಥಳಕ್ಕೆ ಸಂಬಂಧಿಸಿದ ಸಾಲನ್ನು ಚಿತ್ರದಿಂದ ತೆಗೆದುಹಾಕಲು ಆದಿಪುರುಷ ನಿರ್ಮಾಪಕರಿಗೆ ಮೂರು ದಿನಗಳ ಗಡುವು ನೀಡಿರುವ ಶಾ,ಚಿತ್ರದಲ್ಲಿಯ ‘ಜಾನಕಿ ಭಾರತದ ಪುತ್ರಿ’ ಎಂಬ ಸಾಲನ್ನು ನೇಪಾಳದಲ್ಲಿ ಮಾತ್ರವಲ್ಲ,ಭಾರತದಲ್ಲಿಯೂ ತೆಗೆದುಹಾಕದಿದ್ದರೆ ಕಠ್ಮಂಡು ಮಹಾನಗರದಲ್ಲಿ ಹಿಂದಿ ಚಿತ್ರಗಳ ಪ್ರದರ್ಶನಕ್ಕೆ ಅವಕಾಶ ನೀಡಲಾಗುವುದಿಲ್ಲ ಎಂದು ಫೇಸ್ ಬುಕ್ ಪೋಸ್ಟ್ ನಲ್ಲಿ ಎಚ್ಚರಿಕೆ ನೀಡಿದ್ದಾರೆ.

ಶಾ ಎಚ್ಚರಿಕೆಯ ಹಿನ್ನೆಲೆಯಲ್ಲಿ ಶುಕ್ರವಾರ ಕಠ್ಮಂಡುವಿನಲ್ಲಿಯ ಚಿತ್ರಮಂದಿರಗಳು ಆದಿಪುರುಷ ಚಿತ್ರದ ಪ್ರದರ್ಶನವನ್ನು ಸ್ಥಗಿತಗೊಳಿಸಿವೆ. ಓಂ ರಾವುತ್ ನಿರ್ದೇಶನದ ಈ ಚಿತ್ರದಲ್ಲಿ ಪ್ರಭಾಸ್,ಸೈಫ್ ಅಲಿ ಖಾನ್ ಮತ್ತು ಕೃತಿ ಸನೋನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ದಿಲ್ಲಿಯ ನೂತನ ಸಂಸತ್ ಕಟ್ಟಡದಲ್ಲಿ ಸ್ಥಾಪಿಸಲಾಗಿರುವ ‘ಅಖಂಡ ಭಾರತ ’ ಭಿತ್ತಿಚಿತ್ರಕ್ಕೆ ನೇಪಾಳದ ರಾಜಕೀಯ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದ ವಾರಗಳ ಬಳಿಕ ಈ ನೂತನ ಬೆಳವಣಿಗೆ ನಡೆದಿದೆ.

ಭಿತ್ತಿಚಿತ್ರದಲ್ಲಿ ಗೌತಮ ಬುದ್ಧನ ಜನ್ಮಸ್ಥಳ ಲುಂಬಿನಿಯನ್ನು ಭಾರತದ ಭಾಗವನ್ನಾಗಿ ತೋರಿಸಲಾಗಿದೆ. ನೇಪಾಳವು ತನ್ನ ನಕಾಶೆಯಲ್ಲಿ ಲುಂಬಿನಿಯನ್ನು ಪ್ರಮುಖ ಸಾಂಸ್ಕೃತಿಕ ಕೇಂದ್ರಗಳಲ್ಲಿ ಒಂದಾಗಿ ಪರಿಗಣಿಸಿದೆ. ನಂತರ ಶಾ ಅವರು ತನ್ನ ಕಚೇರಿಯಲ್ಲಿ ಭಾರತದ ಭಿತ್ತಿಚಿತ್ರಕ್ಕೆ ಉತ್ತರವಾಗಿ ‘ಗ್ರೇಟರ್ ನೇಪಾಳ ’ನಕಾಶೆಯನ್ನು ಅಳವಡಿಸಿದ್ದರು.

ನೇಪಾಳದ ಭೂ ಪ್ರದೇಶವು ಪೂರ್ವ ಹಿಮಾಲಯದಲ್ಲಿನ ತೀಸ್ತಾ ನದಿಯಿಂದ ಪಶ್ಚಿಮದ ಸಟ್ಲೆಜ್ ನದಿಯವರೆಗೆ ಹರಡಿಕೊಂಡಿದೆ ಎಂದು ‘ಗ್ರೇಟರ್ ನೇಪಾಳ’ ದ ಬೆಂಬಲಿಗರು ನಂಬಿದ್ದಾರೆ. ಆದರೆ ಉಭಯ ದೇಶಗಳ ನಡುವಿನ ಅಂತರರಾಷ್ಟ್ರೀಯ ಗಡಿಯನ್ನು ಗುರುತಿಸಲು 1816ರಲ್ಲಿ ಸುಗಾಲಿ ಒಪ್ಪಂದಕ್ಕೆ ನೇಪಾಳವು ಸಹಿ ಹಾಕಿದ ಬಳಿಕ ಇವೆರಡೂ ಪ್ರದೇಶಗಳು ಭಾರತದ ವ್ಯಾಪ್ತಿಗೊಳಪಟ್ಟಿವೆ.

Similar News