×
Ad

ವಿಶ್ವಸಂಸ್ಥೆ ನಿಯೋಗದಿಂದ ಬೇಹುಗಾರಿಕೆ; ಮಾಲಿ ಸೇನಾಡಳಿತದ ದೋಷಾರೋಪಣೆ

► ಶಾಂತಿಪಾಲನೆ ಪಡೆ ಹಿಂಪಡೆಯಲು ಆಗ್ರಹ

Update: 2023-06-20 22:54 IST

ದಕಾರ್: ಮಾಲಿ ದೇಶದಲ್ಲಿರುವ ವಿಶ್ವಸಂಸ್ಥೆಯ ಶಾಂತಿಪಾಲನಾ ನಿಯೋಗವು ಬೇಹುಗಾರಿಕೆ ನಡೆಸುತ್ತಿದೆ ಎಂದು ಅಲ್ಲಿನ ಸೇನಾಡಳಿತ ದೂರು ದಾಖಲಿಸಿದ್ದು ಈ ಬಗ್ಗೆ ತನಿಖೆ ನಡೆಸಲು ಪ್ರಾಸಿಕ್ಯೂಟರ್(ಸರಕಾರಿ ಅಭಿಯೋಜಕ)ಗೆ ಸೂಚಿಸಿರುವುದಾಗಿ ವರದಿಯಾಗಿದೆ.

ಮಾಲಿಯಲ್ಲಿರುವ ‘ಯುನೈಟೆಡ್ ಸ್ಟೇಟ್ಸ್ ಮಲ್ಟಿಡೈಮೆನ್ಷನಲ್ ಇಂಟಿಗ್ರೇಟೆಡ್ ಸ್ಟೆಬಿಲೈಸೇಷನ್ ಮಿಷನ್( ವಿಶ್ವಸಂಸ್ಥೆ  ಬಹು ಆಯಾಮದ ಸಮಗ್ರ ಸ್ಥಿರೀಕರಣ ನಿಯೋಗ)-ಮಿನುಸ್ಮ ನಿಯೋಗದ ಸದಸ್ಯರ ಬಗ್ಗೆ ದೂರು ಸಲ್ಲಿಸಲಾಗಿದೆ ಎಂದು ಪ್ರಾಸಿಕ್ಯೂಟರ್ ಕಚೇರಿ ಹೇಳಿದೆ. ಮಾಲಿ ದೇಶದ ಪಡೆ ಹಾಗೂ ಅದರ ಮಿತ್ರದೇಶಗಳ ಪಡೆಗಳು ಕಳೆದ ವರ್ಷ ನೂರಾರು ಜನರ ಸಾಮೂಹಿಕ ಹತ್ಯೆ ನಡೆಸಿದೆ ಎಂದು ಮಿನುಸ್ಮ ವರದಿ ಮಾಡಿದ ಬೆನ್ನಲ್ಲೇ ಈ ದೂರು ಸಲ್ಲಿಕೆಯಾಗಿದೆ.

2022ರ ಮೇ 27ರಿಂದ 31ರ ಅವಧಿಯಲ್ಲಿ ಮೌರಾ ನಗರದಲ್ಲಿ ನಡೆದ ಘಟನೆಗಳ ಬಗ್ಗೆ ಮಿನುಸ್ಮ ನಿಯೋಗದ ಮಾನವ ಹಕ್ಕುಗಳ ವಿಭಾಗವು ತನಿಖೆ ನಡೆಸಿದೆ. ಕನಿಷ್ಠ 500 ಜನರನ್ನು ಮಾಲಿ ದೇಶದ ಸೇನೆ ಹಾಗೂ ವಿದೇಶದ ಸಶಸ್ತ್ರ ಹೋರಾಟಗಾರರ ಗುಂಪು ಹತ್ಯೆಮಾಡಿದೆ ಎಂದು ಕಳೆದ ತಿಂಗಳು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್(ಒಎಚ್ಸಿಎಚ್ಆರ್) ಬಿಡುಗಡೆಗೊಳಿಸಿದ ವರದಿ ಹೇಳಿದೆ. 2012ರ ಸೇನಾದಂಗೆಯ ಬಳಿಕ ಮಾಲಿಯಲ್ಲಿ ನಡೆದಿರುವ ಅತ್ಯಂತ ಕರಾಳ ದೌರ್ಜನ್ಯ ಪ್ರಕರಣ ಇದಾಗಿದೆ. 

ಅಲ್ಲದೆ ಇದು ಮಾಲಿಯ ಸಶಸ್ತ್ರ ಪಡೆ ಹಾಗೂ ಅದರ ವಿದೇಶಿ ಮಿತ್ರರ ವಿರುದ್ಧದ ಅತ್ಯಂತ ಖಂಡನೀಯ ದಾಖಲೆಯಾಗಿದೆ. ಮಾಲಿಯ ಸೇನಾಡಳಿತಕ್ಕೆ ನೆರವಾಗುತ್ತಿರುವ ವಿದೇಶಿ ಹೋರಾಟಗಾರರ ರಾಷ್ಟ್ರೀಯತೆಯ ಬಗ್ಗೆ ವರದಿಯಲ್ಲಿ ಮಾಹಿತಿಯಿಲ್ಲ. ಆದರೆ ‘ವಾಗ್ನರ್ ಬಾಡಿಗೆ ಸಿಪಾಯಿಗಳು’ ಎಂದು ಕರೆಯಲಾಗುವ ರಶ್ಯದ ಅರೆಸೇನಾ ಪಡೆ ಮಾಲಿಯಲ್ಲಿ ಕಾರ್ಯನಿರತವಾಗಿದೆ ಎಂದು ಕಳೆದ ವರ್ಷ ಮಾಧ್ಯಮಗಳು ವರದಿ ಮಾಡಿದ್ದವು. 

ಮಿನುಸ್ಮ ನಿಯೋಗದ ಬಗ್ಗೆ ಅಸಹನೆ ಹೊಂದಿದ್ದ ಮಾಲಿಯ ಸೇನಾಡಳಿತ ಈ ವರದಿ ಪ್ರಕಟವಾದ ಬಳಿಕ ಮತ್ತಷ್ಟು ಆಕ್ರೋಶಗೊಂಡಿದೆ. ಇದೊಂದು ಕಪೋಲ ಕಲ್ಪಿತ ವರದಿಯಾಗಿದ್ದು ಮೃತರು ಭಯೋತ್ಪಾದನೆಯಲ್ಲಿ ನಿರತರಾಗಿರುವ ಸಶಸ್ತ್ರ ಹೋರಾಟಗಾರರು ಎಂದು ಸೇನಾಡಳಿತ ಪ್ರತಿಕ್ರಿಯಿಸಿದೆ. ವಿಶ್ವಸಂಸ್ಥೆಯ ನಿಯೋಗವು ಸರಕಾರದ ಅನುಮತಿ ಪಡೆಯದೆ ಉಪಗ್ರಹಗಳನ್ನು ಬಳಸಿ ಮಾಹಿತಿ ಕಲೆಹಾಕಿದ್ದು ಇದು ಬೇಹುಗಾರಿಕೆ ಕೃತ್ಯಕ್ಕೆ ಸಮವಾಗಿರುವುದರಿಂದ ತನಿಖೆ ಅತ್ಯಗತ್ಯವಾಗಿದೆ ಎಂದು ಸೇನೆ ಹೇಳಿದೆ.  

ಮಿನುಸ್ಮ ನಿಯೋಗದ ಸದಸ್ಯರು ‘ಅಪರಾಧ ಕೃತ್ಯದಲ್ಲಿ ಸಹಚರರಾಗಿದ್ದಾರೆ. ಬೇಹುಗಾರಿಕೆ ನಡೆಸುವ ಜತೆಗೆ  ಸೇನಾಪಡೆ ಅಥವಾ ವಾಯುಪಡೆಯ ಆತ್ಮಸ್ಥೈರ್ಯಕ್ಕೆ ಕುಂದುಂಟು ಮಾಡುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಸುಳ್ಳು ದಾಖಲೆ ಬಳಸಿಕೊಂಡು ದೇಶದ ಬಾಹ್ಯ ಭದ್ರತೆಗೆ ಘಾಸಿ ಎಸಗುತ್ತಿದ್ದಾರೆ’ ಎಂದು ಸೇನಾಡಳಿತ ದೂರಿದೆ.ಮಾಲಿ ದೇಶದ ಚುನಾಯಿತ ಅಧ್ಯಕ್ಷ ಇಬ್ರಾಹೀಂ ಕೆಯಟಾರನ್ನು ಕ್ಷಿಪ್ರದಂಗೆಯ ಮೂಲಕ ಪದಚ್ಯುತಗೊಳಿಸಿದ್ದ ಸೇನೆ 2020ರಿಂದ ದೇಶದಲ್ಲಿ ಆಡಳಿತ ನಡೆಸುತ್ತಿದೆ. ಆಡಳಿತ ಕೈಗೆತ್ತಿಕೊಂಡ ಬಳಿಕ ಸೇನೆಯು ದೇಶದ ಸಾಂಪ್ರದಾಯಿಕ ಮಿತ್ರದೇಶ ಫ್ರಾನ್ಸ್ನ ಸೇನಾ ತುಕಡಿಯನ್ನು ದೇಶದಿಂದ ಹೊರಗೆ ಕಳುಹಿಸಿ, ರಶ್ಯದೊಂದಿಗೆ ಮೈತ್ರಿ ಮಾಡಿಕೊಂಡಿದ್ದು ಈಗ ಅಲ್ಲಿನ ಸೇನಾಡಳಿತಕ್ಕೆ ರಶ್ಯ ಮಿಲಿಟರಿ ನೆರವನ್ನು ಒದಗಿಸುತ್ತಿದೆ.

► ಶಾಂತಿಪಾಲನೆ ಪಡೆ ಹಿಂಪಡೆಯಲು ಆಗ್ರಹ

ಈ ಮಧ್ಯೆ, ಮಾಲಿ ದೇಶದಲ್ಲಿ ನಿಯೋಜನೆಗೊಂಡಿರುವ 15,000 ಸದಸ್ಯರ ಶಾಂತಿಪಾಲನಾ ಪಡೆಯನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಮಾಲಿ ಶುಕ್ರವಾರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ಆಗ್ರಹಿಸಿದೆ. ಶಾಂತಿಪಾಲನಾ ಪಡೆ 10 ವರ್ಷದಿಂದ ದೇಶದಲ್ಲಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಭದ್ರತೆಗೆ ಎದುರಾಗುವ ಸವಾಲುಗಳಿಗೆ ಉತ್ತರಿಸಲು ಶಾಂತಿಪಾಲನಾ ಪಡೆ ವಿಫಲವಾಗಿದೆ ಎಂದು ಮಾಲಿ ಸೇನಾಡಳಿತ ಆರೋಪಿಸಿದೆ.

Similar News