×
Ad

ಲೋಕಸಭಾ ಚುನಾವಣೆಯಲ್ಲಿ ಸೋತರೆ ದೇಶವನ್ನೇ ಕಳೆದುಕೊಳ್ಳಬೇಕಾದೀತು: ಸಿ.ಟಿ.ರವಿ

ಬಿಜೆಪಿ ಉಡುಪಿ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆ ಉದ್ಘಾಟನೆ

Update: 2023-06-22 20:20 IST

ಉಡುಪಿ: ಕರ್ನಾಟಕದ ಚುನಾವಣೆಯಲ್ಲಿ ಸೋತ ನಾವು ಕೇವಲ ಅಧಿಕಾರ ಮಾತ್ರ ಕಳೆದುಕೊಂಡಿದ್ದೇವೆ. ಆದರೆ ಲೋಕಸಭಾ ಚುನಾವಣೆಯಲ್ಲಿ ಎಲ್ಲಿಯಾದರೂ ನಾವು ಸೋತರೆ ಇಡೀ ದೇಶವನ್ನೇ ಕಳೆದುಕೊಳ್ಳಬೇಕಾಗುತ್ತದೆ. ಅದಕ್ಕಾಗಿ ತುಕುಡೆ ಗ್ಯಾಂಗ್‌ಗಳು ಇವತ್ತಿಗೂ ಸಕ್ರಿಯವಾಗಿದೆ. ಬಿಜೆಪಿಯನ್ನು ಸೋಲಿಸಲು ಹತೋರೆಯುತ್ತಿದೆ. ಟೂಲ್‌ಕಿಟ್ ರಾಜಕೀಯ ನಡೆಸುತ್ತಿದೆಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆರೋಪಿಸಿದ್ದಾರೆ.

ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಉಡುಪಿ ಕಿದಿಯೂರು ಹೋಟೆಲ್ ಶೇಷಶಯನ ಹಾಲ್‌ನಲ್ಲಿ ಗುರುವಾರ ಆಯೋಜಿಸಲಾದ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಬಿಜೆಪಿ ಕೇವಲ ಅಧಿಕಾರಕ್ಕಾಗಿ ರಾಜಕೀಯ ಮಾಡುವುದಿಲ್ಲ. ದೇಶವನ್ನು ಸ್ವಾವಲಂಬಿ ಹಾಗೂ ವಿಶ್ವಗುರುವನ್ನಾಗಿ ಮಾಡುವುದೇ ಬಿಜೆಪಿಯ ಗುರಿಯಾಗಿದೆ. ಅದನ್ನು ಹಾಳು ಮಾಡುವ ಷಡ್ಯಂತರ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದು ದೂರಿದರು.

ಮತಾಂತರ ನಿಷೇಧ ಕಾಯಿದೆಯನ್ನು ವಾಪಾಸ್ಸು ಪಡೆದುಕೊಳ್ಳುತ್ತಿರುವ ಕಾಂಗ್ರೆಸ್ ಮನಸ್ಥಿತಿಯು ಔರಂಗಜೇಬನ ಬಲತ್ಕಾರದ ಮತಾಂತರದ ಮನಸ್ಥಿತಿಯಾಗಿದೆ. ಔರಂಗಜೇಬ್ ಇಲ್ಲದಿದ್ದರೂ ಆತನ ವಿಚಾರವನ್ನು ಜೀವಂತವಾಗಿ ಇಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಅವರು ಟೀಕಿಸಿದರು.

ಭಾರತದ ಸಂವಿಧಾನವನ್ನು ಒಪ್ಪುವವರು ಸಮಾನ ನಾಗರಿಕ ಸಂಹಿತೆಯನ್ನು ವಿರೋಧಿಸುವುದಿಲ್ಲ. ಜಿನ್ನಾ ಮಾನಸಿಕತೆ ಇರುವವರು ಮಾತ್ರ ಇದನ್ನು ವಿರೋಧಿಸುತ್ತಿದ್ದಾರೆ. ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಮೂಲಕ ಸಮಾನ ನಾಗರಿಕ ಸಂಹಿತೆಯನ್ನು ಸಾಕಾರಗೊಳಿಸಬೇಕು ಎಂದು ಅವರು ತಿಳಿಸಿದರು.

ಕಾಂಗ್ರೆಸ್‌ನ ಗ್ಯಾರಂಟಿ ಕೇವಲ ಚುನಾವಣೆ ಗೆಲ್ಲಲು ಮಾತ್ರ. ಚುನಾವಣೆ ಗೆದ್ದ ಬಳಿಕ ಯಾರಿಗೂ ಗೊತ್ತಿಲ್ಲದೆ, ಸದ್ದಿಲ್ಲದೆ ಬೆಲೆ ಏರಿಕೆ ಮಾಡುವ ಮೂಲಕ ಮಹಾಮೋಸ ಮಾಡಲಾಗಿದೆ ಎಂದ ಅವರು, ಮೋದಿ ನಂತರ ಯಾರು ಎಂದು ಕೇಳಿದರೆ ಅದಕ್ಕೆ ಭವಿಷ್ಯವೇ ಉತ್ತರ ಕೊಡುತ್ತದೆ. ಬಿಜೆಪಿಯಲ್ಲಿ ಡಿಎನ್‌ಎ ಮೂಲಕ ನಾಯಕತ್ವ ಆಯ್ಕೆಯಾಗಲ್ಲ. ಇದು ನಿಜವಾದ ಪ್ರಜಾ ಪ್ರಭುತ್ವ ವ್ಯವಸ್ಥೆ ಎಂದರು.

ವಿಧಾನಸಭೆಯ ಮಾಜಿ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳನ್ನು ಗೊಂದಲದ ಗೂಡಾಗಿ ಮಾಡಿರುವುದರ ಹಿಂದೆ ತಂತ್ರಗಾರಿಕೆಗಳು ಅಡಗಿದೆ. ಇದು ಉದ್ದೇಶ ಪೂರ್ವಕವಾಗಿ ಮಾಡಿರುವ ಷಡ್ಯಂತರ. ಅಭಿವೃದ್ಧಿಯ ಕೆಲಸಗಳನ್ನು ಮಾಡದೆ ಇರಲು ಈ ಗೊಂದಲವನ್ನು ಸೃಷ್ಠಿಸಲಾಗುತ್ತಿದೆ ಎಂದು ದೂರಿದರು.

ಕಾಂಗ್ರೆಸ್ ಸರಕಾರ ಕೆಲ ಎಡಪಂಥೀಯರನ್ನು ಓಲೈಸಲು ಹಾಗೂ ಕೈಗೊಂಬೆ ಯಾಗಿ ಪಠ್ಯ ಪುಸ್ತಕ ಪರಿಷ್ಕರಣೆ ಮಾಡುತ್ತಿದೆ. ಈ ಮೂಲಕ ಜನರ ಮನಸ್ಸನ್ನು ಘಾಸಿಗೊಳಿಸುತ್ತಿದೆ. ಶಿಕ್ಷಣದಲ್ಲಿ ಈ ರೀತಿಯ ರಾಜಕೀಯ ತರಲು ಪ್ರಯತ್ನ ಮಾಡುತ್ತಿರುವುದು ಅಕ್ಷಮ್ಯ ಎಂದು ಅವರು ಟೀಕಿಸಿದರು.

ಈ ಸಂದರ್ಭದಲ್ಲಿ ಉಡುಪಿ ಮಂಗಳೂರು ವಿಭಾಗ ಪ್ರಭಾರಿ ಉದಯ್ ಕುಮಾರ್ ಶೆಟ್ಟಿ, ಮಾಜಿ ಸಚಿವ ಅರಗ ಜ್ಞಾನೇಂದ್ರ, ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಯಶ್‌ಪಾಲ್ ಸುವರ್ಣ, ಕಿರಣ್ ಕುಮಾರ್ ಕೊಡ್ಗಿ, ಗುರು ರಾಜ್ ಗಂಟಿಹೊಳೆ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕರಾದ ಲಾಲಾಜಿ ಆರ್.ಮೆಂಡನ್, ಕೆ.ರಘುಪತಿ ಭಟ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ರಾಜ್ಯ ಬಿಜೆಪಿ ಎಸ್‌ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ದಿನಕರ್ ಬಾಬು, ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಶಿಲ್ಪಾಸುವರ್ಣ ಮೊದಲಾದವರು ಉಪಸ್ಥಿತರಿದ್ದರು.

ಬಿಜೆಪಿ ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ ಸ್ವಾಗತಿಸಿದರು. ಮನೋಹರ್ ಕಲ್ಮಾಡಿ ಹಾಗೂ ಸದಾನಂದ ಉಪ್ಪಿನಕುದ್ರು ಕಾರ್ಯಕ್ರಮ ನಿರೂಪಿಸಿದರು. 

Similar News