ಕನ್ನಡ-ಮರಾಠಿ ಭಾಷಾ ಬಾಂಧವ್ಯ ಹದಗೆಡದಿರಲಿ

ನೂರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಮರಾಠಿ ಭಾಷೆಯು, ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಕನ್ನಡ ಭಾಷೆಯ ಅಂಗಳದಲ್ಲಿ ಅರಳಿದೆ, ಕನ್ನಡಿಗರು ಆಚರಿಸುವ ಹಬ್ಬ ಹರಿದಿನಗಳನ್ನು ಮರಾಠಿಗರು ಆಚರಿಸುತ್ತಾರೆ. ಕನ್ನಡಿಗರು ಧರಿಸುವ ಉಡುಗೆ ತೊಡುಗೆಗಳನ್ನು ಮರಾಠಿಗರು ಧರಿಸುತ್ತಾರೆ ಆದುದರಿಂದ ಕನ್ನಡ ಬೇರುಗಳು ಮಹಾರಾಷ್ಟ್ರದಲ್ಲಿ ಉಳಿದುಕೊಂಡಿವೆ ಎಂದು ಹೇಳಿದರೆ ತಪ್ಪಾಗಲಾರದು.

Update: 2023-12-27 05:30 GMT

ಪ್ರಾಚೀನ ಕಾಲದಿಂದಲೂ ಕನ್ನಡ-ಮರಾಠಿ ಭಾಷೆಗಳು, ಮಾತ್ರವಲ್ಲದೆ ಜನಾಂಗವು ಕೂಡ ಹೊಕ್ಕಳು ಬಳ್ಳಿಯ ಸಂಬಂಧವನ್ನು ಹೊಂದಿದೆ. ಸಾಹಿತ್ಯ, ಸಂಸ್ಕೃತಿ, ಭಾಷೆ, ಚರಿತ್ರೆ, ನೆಲ, ಜಲ, ಕಲೆ, ಸಂಗೀತ, ಸಮಾಜ, ಉಡುಗೆ, ತೊಡುಗೆ, ಊಟ, ಉಪಚಾರ, ಜಾತ್ರೆ, ಉತ್ಸವ, ಹೀಗೆ ವಿವಿಧ ದೃಷ್ಟಿಯಿಂದಲೂ ಕನ್ನಡ-ಮರಾಠಿ ಈ ಎರಡು ಭಾಷಾ ಜನಾಂಗಗಳನ್ನು ಬೇರೆ ಬೇರೆ ನೆಲೆಯಲ್ಲಿ ನೋಡುವ ಅಗತ್ಯವೇ ಇಲ್ಲ. ಏಕೆಂದರೆ ಈ ಎರಡೂ ಜನಾಂಗದ ಮೂಲವು ಒಂದೇ ಆಗಿದೆ. ಭಾಷೆ ಬೇರೆ ಬೇರೆ ಆಗುವುದಕ್ಕಿಂತ ಮೊದಲೇ ಮರಾಠಿಗರು ಕನ್ನಡವನ್ನು ಮಾತನಾಡುತ್ತಿದ್ದರು. ಮಹಾರಾಷ್ಟ್ರದವರು ಯದು ಮೂಲದವರು, ಕನ್ನಡಿಗರು ತುರುವಸು (ಕದಂಬ) ಮೂಲದವರು ಎಂದು ಋಗ್ವೇದದಲ್ಲಿ ಉಲ್ಲೇಖವಿದೆ. ಅಲ್ಲದೆ ಕನ್ನಡ-ಮರಾಠಿ ಬಾಂಧವ್ಯವನ್ನು ಸಹೋದರ ಸಂಬಂಧಿ ಎಂದು ಬಣ್ಣಿಸಲಾಗಿದೆ. ಈ ಇಬ್ಬರದು ಪಶು ಪಾಲನೆಯ ಉದ್ಯೋಗವಾಗಿತ್ತು. ಆದುದರಿಂದ ಈ ಇಬ್ಬರನ್ನು ಹಟ್ಟಿ ಜನಾಂಗವೆಂದು ಗುರುತಿಸಲಾಗುತ್ತದೆ. ಈ ವಿಚಾರದ ಹಿನ್ನೆಲೆಯಲ್ಲಿ ಬಾಲಗಂಗಾಧರ ತಿಲಕರು ಮಹಾರಾಷ್ಟ್ರ ಬೇರೆ ಅಲ್ಲ, ಕರ್ನಾಟಕ ಬೇರೆ ಅಲ್ಲ, ಇಬ್ಬರ ಭಾಷೆಯೂ ಕನ್ನಡವೇ ಆಗಿತ್ತು ಎಂದು ಹೇಳುತ್ತಾರೆ. ಇಂದಿಗೂ ಮಹಾರಾಷ್ಟ್ರದ ಬಹುತೇಕ ಗ್ರಾಮಗಳ ಹೆಸರುಗಳು ಕನ್ನಡ ಮೂಲದ ಹೆಸರುಗಳೇ ಆಗಿವೆ ಎಂದು ಪ್ರಮುಖ ಚಿಂತಕರಾದ ರಾಜವಾಡೆಯವರು ಹೇಳುತ್ತಾರೆ.

ಕನ್ನಡ ಭಾಷೆಯ ಬುಡಕಟ್ಟು ಜನಾಂಗ ಮಹಾರಾಷ್ಟ್ರದ ವಿವಿಧೆಡೆಯಲ್ಲಿ ಇಂದಿಗೂ ವಾಸಿಸುತ್ತಿರುವುದನ್ನು ಕಾಣಬಹುದು.

‘‘ಕಾವೇರಿಯಿಂದಮಾ ಗೋದಾವರಿ ವರಮಿರ್ದ ನಾಡದಾ ಕನ್ನಡದೊಳ್ ಭಾವಿಸಿದ ಜನಪದಂ’’ ಎಂದು ಕವಿರಾಜಮಾರ್ಗಕಾರ ಹೇಳಿದ ಮಾತಿನ ಪ್ರಕಾರ ಕರ್ನಾಟಕದ ಕಾವೇರಿ ನದಿ ಮುಖಜ ಭೂ ಪ್ರದೇಶದಿಂದ ಮಹಾರಾಷ್ಟ್ರದ ಗೋದಾವರಿ ನದಿ ಮುಖಜ ಭೂ ಪ್ರದೇಶದವರೆಗೆ ಕ್ರಿಸ್ತಪೂರ್ವ ಎರಡನೇ ಶತಮಾನದಿಂದ ಕ್ರಿಸ್ತಶಕ 13ನೇ ಶತಮಾನದವರೆಗೂ ಕನ್ನಡ ಅರಸರು ಅಂದಿನ ಮರಾಠಿ ಪ್ರದೇಶವನ್ನು ಆಳಿದ್ದು ಆನಂತರ ಮರಾಠಿಗರು ಪ್ರವರ್ಧಮಾನಕ್ಕೆ ಬಂದರು. ಕ್ರಿಸ್ತ ಪೂರ್ವ 200ರಿಂದ ಕ್ರಿಸ್ತಶಕ 225ರವರೆಗೆ ಶಾತವಾಹನರು, ಆನಂತರ ವಾಕಟಕರ ಅರಸರು ಆಳಿದರು. ಆಗ ಮರಾಠಿ ಅಸ್ತಿತ್ವದಲ್ಲಿರಲಿಲ್ಲ.

ಈ ಸಂದರ್ಭದಲ್ಲಿ ಪ್ರಾಕೃತ ಆಡಳಿತ ಭಾಷೆಯಾದರೆ ಕನ್ನಡ ಆಡು ಭಾಷೆಯಾಗಿತ್ತು. ಕ್ರಿಸ್ತಶಕ 6 ಮತ್ತು 7ನೇ ಶತಮಾನದಲ್ಲಿ ಮರಾಠಿ ಭಾಷೆ ಜನ್ಮ ತಾಳಿದರೆ ಅಲ್ಲಿಗೆ ಒಂದು ಸಾವಿರ ವರ್ಷಗಳ ಹಿಂದೆ ಕನ್ನಡ ಭಾಷೆ ಜನ್ಮ ತಾಳಿತ್ತು ಎಂದು ಗುರುತಿಸಲಾಗಿದೆ. 14ನೇ ಶತಮಾನದಲ್ಲಿ ವಿಜಯನಗರ ಅರಸರು ಕನ್ನಡ ಸಾಮ್ರಾಜ್ಯವನ್ನು ಕಟ್ಟಿದರೆ 17ನೇ ಶತಮಾನದಲ್ಲಿ ಬೋಸ್ಲೆ ಮನೆತನವು ಮರಾಠಿ ಸಾಮ್ರಾಜ್ಯವನ್ನು ಕಟ್ಟಿದೆ ಅಂದರೆ ಕನ್ನಡ ಸಾಮ್ರಾಜ್ಯ ಉದಯಿಸಿದ 300 ವರ್ಷಗಳ ನಂತರ ಮರಾಠಿ ಸಾಮ್ರಾಜ್ಯ ಉದಯಿಸಿದೆ. ಆನಂತರ ಭಾಷಾ ಮೂಲವೂ ಬೇರೆ ಬೇರೆ ಆಯಾಮಗಳನ್ನು ಪಡೆಯುತ್ತಾ ಹೋಯಿತು. ಕನ್ನಡ ದ್ರಾವಿಡ ಜನ್ಯವಾದರೆ, ಮರಾಠಿ ಆರ್ಯಜನ್ಯವಾಗಿದೆ. ಕನ್ನಡ-ಮರಾಠಿ ಭಾಷಾ ಮೂಲ ಬೇರೆ ಬೇರೆಯಾದರೂ ಜನಾಂಗದ ಮೂಲ ಒಂದೇ ಆಗಿದೆ. ಇಂದಿಗೂ ಕನ್ನಡ-ಮರಾಠಿ ಭಾಷಾ ಸಂಪತ್ತು ಸಮೃದ್ಧವಾಗಿ ಬೆಳೆದು ನಿಂತಿದೆ, ಮರಾಠಿಯ ದಂಡಕಾರಣ್ಯ ಕನ್ನಡದ ದಾಂಡೇಲಿಯಾಗಿದೆ. ಮರಾಠಿಗರು ಯಾದವ ವಂಶದವರಾಗಿದ್ದು ಈ ಯಾದವ ಎನ್ನುವ ಪದ ಕನ್ನಡದ ಮೂಲಪದ ವಾಗಿದ್ದು ಅದು ಈಗ ಮರಾಠಿಯಲ್ಲಿ ಜಾದವ ಎಂಬ ರೂಪಾಂತರವನ್ನು ಪಡೆದಿದ್ದು ಈಗ ಬಹುಪಾಲು ಕರ್ನಾಟಕ ಮತ್ತು ಮಹಾರಾಷ್ಟ್ರದ ಜನರು ಜಾದವ ಎಂಬ ಅಡ್ಡ ಹೆಸರನ್ನು ಇಟ್ಟುಕೊಂಡಿದ್ದಾರೆ. ಬಾಂಬೆ, ಬೊಂಬಾಯಿ, ಮುಂಬೈ, ಮುಂಬಾಯಿ, ಇದು ಸಪ್ತ ದ್ವೀಪ ಪ್ರದೇಶವಾಗಿದ್ದು ಈ ಪ್ರದೇಶದಲ್ಲಿ ಕನ್ನಡನಾಡಿನ ಬೆಸ್ತರು, ಮಿಂಗುಲಿಗರು, ಸುಣಗಾರರು, ಬಾರಕೇರಾ, ಡೋಲಿ, ಅಂಬಿಗ ಮತ್ತು ಗಂಗಾಮತಸ್ಥರು ಮುಂತಾದವರು ಮರಾಠಿಯ ಕೋಳಿ/ ಕೋಲಿ ಎಂಬ ಅಡ್ಡ ಹೆಸರು (ಉಪನಾಮ)ಗಳನ್ನು ಇಟ್ಟುಕೊಂಡು ವಾಸಿಸುತ್ತಿದ್ದರು. ಅಲ್ಲದೆ ಬ್ರಿಟಿಷ್ ಆಡಳಿತದಲ್ಲಿ ರೈತವಾರಿ ಪದ್ಧತಿಯನ್ನು ಜಾರಿಗೆ ತಂದ ಪತ್ರಾಂಕಿತ ಅಧಿಕಾರಿ ಗವರ್ನರ್ ಸರ್ ಥಾಮಸ್ ಮನ್ರೋ ಅವರಿಗೆ ಬಾಂಬೆಯಲ್ಲಿ ಕೊಟ್ಟ ಅಭಿನಂದನಾ ಪತ್ರ ಕನ್ನಡ ಭಾಷೆಯಲ್ಲಿದೆ. ಇದು ಇಂದಿಗೂ ಇಂಗ್ಲೆಂಡಿನ ರಾಜಧಾನಿ ಥೇಮ್ಸ್ ನದಿ ದಡದಲ್ಲಿರುವ ಲಂಡನ್ ವಸ್ತು ಸಂಗ್ರಹಾಲಯದಲ್ಲಿ ರಾರಾಜಿಸುತ್ತಿರುವುದನ್ನು ಕಾಣಬಹುದು. ಅಲ್ಲದೆ ಮರಾಠಿ ಮೂಲದವರು ಕನ್ನಡ ಭಾಷೆಯಲ್ಲಿ, ಕನ್ನಡ ಮೂಲದವರು ಮರಾಠಿ ಭಾಷೆಯಲ್ಲಿ, ಕಾರ್ಯ ಸಾಧಿಸಿ ಕನ್ನಡ ಮರಾಠಿ ಈ ಸಂಬಂಧವನ್ನು ಆಕಾಶದ ಎತ್ತರಕ್ಕೆ ಕೊಂಡೊಯ್ದಿರುವುದನ್ನು ಕಾಣಬಹುದು.

ಶಿವಾಜಿ ಮಹಾರಾಜ ಕೂಡಾ ಕನ್ನಡ ಮೂಲದವನು. ಆತನ ಊರು ಗದಗ ಜಿಲ್ಲೆಯ ಕುರ್ತುಕೋಟಿ ಪಕ್ಕದಲ್ಲಿರುವ ಬೆಳ್ಳಟ್ಟಿ ಸೊರಟೂರು ಎಂದು ಗುರುತಿಸಲಾಗುತ್ತಿದೆ.

ಇನ್ನು ಮರಾಠಿ ಮೂಲದ ಪುರಂದರದಾಸರು, ಜಯದೇವಿತಾಯಿ ಲಿಗಾಡೆ, ದ.ರಾ. ಬೇಂದ್ರೆ ಇವರುಗಳು ಕನ್ನಡ ನಾಡು ನುಡಿ ಭಾಷೆಯನ್ನು ಅಪ್ಪಿಕೊಂಡು ಅನುಭವ ಕ್ಷೇತ್ರದಲ್ಲಿ, ಸಾಹಿತ್ಯ ಕ್ಷೇತ್ರದಲ್ಲಿ, ನಿರಂತರ ಸೇವೆ ಸಲ್ಲಿಸಿ ಕನ್ನಡಿಗರಾಗಿಯೇ ಉಳಿದಿರುವುದನ್ನು ನಾವು ಕಾಣಬಹುದು. ಇನ್ನು ಕನ್ನಡದ ಶರಣ ಸಿದ್ದರಾಮನು 12ನೇ ಶತಮಾನದಲ್ಲಿ ಸೊನ್ನಲಿಗೆ ಎಂದು ಹೆಸರು ಪಡೆದಿದ್ದ ಮಹಾರಾಷ್ಟ್ರದ ಈಗಿನ ಸೊಲ್ಲಾಪುರದಲ್ಲಿ ಶರಣ ಕಾಯಕದಲ್ಲಿ ತೊಡಗಿ ಮರಾಠಿಗರ ಮನ ಗೆದ್ದಿರುವುದನ್ನು ನಾವು ಕಾಣಬಹುದು.

ಅನೇಕ ಕನ್ನಡ ಪದಗಳು ಮರಾಠಿಯಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿವೆ ಕನ್ನಡದ ‘ಗೌಡ’ ಪದವು ಮರಾಠಿಯಲ್ಲಿ ‘ಗೌಡರ್’ ಆಗಿ ಕನ್ನಡದ ಪಟೇಲ ಪದವು ಮರಾಠಿಯಲ್ಲಿ ‘ಪಾಟೀಲ’, ಮತ್ತು ‘ಪಾಟಿಧಾರ’ರಾಗಿ ‘ಅಮ್ಮ’ ‘ಅವ್ವ’ ಆಗಿ, ‘ಅಜ್ಜಿ’ ‘ಆಯಿ’ ಆಗಿ, ‘ರಜೆ’ ‘ಸೂಟಿ’ಯಾಗಿ ರೂಪಾಂತರ ಹೊಂದಿವೆ.

ಕನ್ನಡದ ಹೊಯ್ಸಳ ಎಂಬ ಪದವು ಮರಾಠಿಯ ಬೋಸ್ಲೆಯಾಗಿ ಕನ್ನಡದ ಕಂದಗುಡ್ಡ ಪದವು ಕಂದಗಡವಾಗಿ ಕನ್ನಡದ ಕೋಳಿ ಎಂಬ ಪದವು ಗೋಗಡಿ ಎಂಬ ಪದವಾಗಿ ಮರಾಠಿಗೆ ಹೋಗಿವೆ.

ಕನ್ನಡ ಮತ್ತು ಮರಾಠಿ ನಡುವೆ ಸಾಂಸ್ಕೃತಿಕವಾಗಿ ಅವಿನಾಭಾವ ಸಂಬಂಧ ಇದೆ, ಎಷ್ಟೋ ಜನ ಕನ್ನಡ ಕಲಾವಿದರಿಗೆ ಮರಾಠಿ ನೆಲ ಆಶ್ರಯ ನೀಡಿದೆ, ಅದೇ ರೀತಿ ಮರಾಠಿಗರಿಗೆ ಕನ್ನಡ ನೆಲ ಆಶ್ರಯ ನೀಡಿದೆ, ಬೆಳಗಾವಿ, ಸೊಲ್ಲಾಪುರ, ಕೊಲ್ಹಾಪುರ, ಸತಾರ, ಬಾಂಬೆ, ಸಾಂಗ್ಲಿ, ಮೀರಜ್, ಪೂನಾ ನಾಗಪುರ, ಗಡಿಂಗಲೇಜ, ಮುಂತಾದ ಪ್ರದೇಶಗಳಲ್ಲಿನ ವ್ಯಾಪಾರ ವಹಿವಾಟುಗಳಲ್ಲಿ ಕನ್ನಡಿಗರು ಮರಾಠಿಗರು ಸಮನಾಗಿ ತೊಡಗಿಸಿಕೊಂಡಿರುವುದನ್ನು ನಾವು ಕಾಣಬಹುದು.

ಮೀರಜ್ ಮತ್ತು ಸಾಂಗ್ಲಿ ಮುಂತಾದ ಪ್ರದೇಶಗಳ ಆಸ್ಪತ್ರೆಗಳಿಗೆ ಕನ್ನಡಿಗರೇ ಹೆಚ್ಚು ಹೋಗುತ್ತಾರೆ. ಹುಬ್ಬಳ್ಳಿ ಧಾರವಾಡ, ಬೆಳಗಾವಿ ಮುಂತಾದ ಕಡೆಗಳ ಆಸ್ಪತ್ರೆಗಳಿಗೆ ಮರಾಠಿಗರೇ ಹೆಚ್ಚು ಹೋಗುತ್ತಾರೆ. ಅದರಲ್ಲೂ ಮುಖ್ಯವಾಗಿ ಎರಡು ಭಾಷೆಗಳಲ್ಲಿ ಕೊಂಡುಕೊಳ್ಳುವುದರ ಮೂಲಕ ಬಾಂಧವ್ಯ ಬೆಸೆದು ಕೊಂಡಿದೆ. ಕರ್ನಾಟಕದ ಹುಡುಗ ಹುಡುಗಿಯರು ಮರಾಠಿಗರನ್ನು ವಿವಾಹವಾಗಿದ್ದಾರೆ, ಮಹಾರಾಷ್ಟ್ರದ ಹುಡುಗ ಹುಡುಗಿಯರು ಕನ್ನಡಿಗರನ್ನು ಮದುವೆಯಾಗಿ ಬಾಂಧವ್ಯ ಬೆಸೆದಿದ್ದಾರೆ. ಅದರಲ್ಲೂ ದಲಿತ ಸಾಹಿತ್ಯ ಕ್ಷೇತ್ರದಲ್ಲಂತೂ ಕನ್ನಡ-ಮರಾಠಿ ಸಾಹಿತಿಗಳು ತಮ್ಮ ತಮ್ಮ ಕೃತಿಗಳ ಮೂಲಕ ಬಾಂಧವ್ಯ ಬೆಸೆದಿದ್ದಾರೆ, ಮರಾಠಿಯ ಶರಣಕುಮಾರ ಲಿಂಬಾಳೆ ಅವರ ‘ಅಕ್ಕರಮಾಸಿ’ (ಅಕ್ರಮ ಸಂತಾನ) ಮತ್ತು ಲಕ್ಷ್ಮಣ ಗಾಯಕ್‌ವಾಡ್ ಅವರ ‘ಉಚಲ್ಯಾ’ ಮತ್ತು ಕನ್ನಡದ ದಲಿತ ಕವಿ ಡಾ. ಸಿದ್ದಲಿಂಗಯ್ಯನವರ ‘ಹೊಲೆ ಮಾದಿಗರ ಹಾಡು’ ಮತ್ತು ದೇವನೂರು ಮಹಾದೇವ ಅವರ ‘ಕುಸುಮಬಾಲೆ’ ಈ ನಾಲ್ಕು ಕೃತಿಗಳನ್ನು ಒಟ್ಟಿಗೆ ನೋಡಿದಾಗ ಕನ್ನಡ-ಮರಾಠಿ ಜಾತಿ ಸಂಬಂಧಿತ ಮತ್ತು ಸಾಹಿತ್ಯ ಸಂಬಂಧಿತ ಬಾಂಧವ್ಯವನ್ನು ಕಾಣಬಹುದು.

ನೂರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಮರಾಠಿ ಭಾಷೆಯು, ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಕನ್ನಡ ಭಾಷೆಯ ಅಂಗಳದಲ್ಲಿ ಅರಳಿದೆ, ಕನ್ನಡಿಗರು ಆಚರಿಸುವ ಹಬ್ಬ ಹರಿದಿನಗಳನ್ನು ಮರಾಠಿಗರು ಆಚರಿಸುತ್ತಾರೆ. ಕನ್ನಡಿಗರು ಧರಿಸುವ ಉಡುಗೆ ತೊಡುಗೆಗಳು ಮತ್ತು ವೇಷಭೂಷಣಗಳನ್ನು ಮರಾಠಿಗರು ಧರಿಸುತ್ತಾರೆ ಆದುದರಿಂದ ಕನ್ನಡ ಬೇರುಗಳು ಮಹಾರಾಷ್ಟ್ರದಲ್ಲಿ ಉಳಿದುಕೊಂಡಿವೆ ಎಂದು ಹೇಳಿದರೆ ತಪ್ಪಾಗಲಾರದು.

ಇಂತಹ ಭಾಷಾ ಬಾಂಧವ್ಯ, ಸಾಮಾಜಿಕ ಬಾಂಧವ್ಯ, ಮತ್ತು ಸಾಂಸ್ಕೃತಿಕ ಬಾಂಧವ್ಯವನ್ನು ಹೊಂದಿರುವ ಕನ್ನಡ ಮರಾಠಿಗರ ಮಧ್ಯೆ ಕಿಡಿ ಹಚ್ಚಿ ತಮ್ಮ ಬೇಳೆಯನ್ನು ಬೇಯಿಸಿಕೊಳ್ಳುತ್ತಿರುವ ಪಟ್ಟಭದ್ರ ಹಿತಾಸಕ್ತಿಗಳು ಕನ್ನಡ ಮರಾಠಿ ಭಾಷಾ ಬಾಂಧವ್ಯಕ್ಕೆ ಧಕ್ಕೆ ಉಂಟು ಮಾಡುತ್ತಿರುವುದನ್ನು ಈ ದಿನಗಳಲ್ಲಿ ಕಾಣಬಹುದಾಗಿದೆ. ಮರಾಠಿ-ಕನ್ನಡಿಗರು ಬಾಂಧವ್ಯದಿಂದ ಅನನ್ಯತೆಯಿಂದ ಇಂದು ಬದುಕಿ ಬಾಳಿ ತೋರಿಸಬೇಕಾಗಿದೆ. ಈಗ ಮರಾಠಿ ಭಾಷೆಯು ಶಾಸ್ತ್ರೀಯ ಭಾಷೆಯ ಸ್ಥಾನಮಾನಕ್ಕಾಗಿ ಪ್ರಯತ್ನಿಸುತ್ತಿದೆ. ಅದಕ್ಕೆ ಕನ್ನಡ ಭಾಷೆಯು ಬೆಂಬಲ ನೀಡುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಡಾ. ಆರ್. ನಾಗರಾಜು

ಮುಖ್ಯಸ್ಥರು, ಕನ್ನಡ ವಿಭಾಗ, ಬಸವೇಶ್ವರ ಕಲಾ ಮಹಾ ವಿದ್ಯಾನಿಲಯ, ಬಾಗಲಕೋಟೆ

Similar News