ದಾರ್ಶನಿಕ ಚಿಂತಕ ಕೆ.ಸಿ.ರಘು ಮರಣ ಜೀವಂತ ವಿಶ್ವವಿದ್ಯಾನಿಲಯವೊಂದರ ಅವಸಾನದ ರೂಪಕ

ರಘು ಅವರನ್ನು ನಾಡಿನ ಜನರು ಆಹಾರ ತಜ್ಞರು ಎಂದು ಕರೆಯುತ್ತಿದ್ದರು. ಅವರು ಮರಣ ಹೊಂದಿದ ಮೇಲೆ ಕೂಡ ಅನೇಕ ಮಾಧ್ಯಮಗಳು ಆಹಾರ ತಜ್ಞ ಎಂದೇ ಕರೆದವು. ಅದರಲ್ಲೇನೂ ತಪ್ಪಿಲ್ಲ. ಅವರು ಆಹಾರ ತಜ್ಞರು ಎಂಬುದರಲ್ಲಿ ಅನುಮಾನಗಳೇನೂ ಇಲ್ಲ. ಆದರೆ ಆಹಾರ ತಜ್ಞರಷ್ಟೇ ಆಗಿರಲಿಲ್ಲ, ಅವರು ಆಹಾರ ವಿಜ್ಞಾನಿಯೂ ಆಗಿದ್ದರು. ತಾಯಿಯ ಹೊಟ್ಟೆಯಲ್ಲಿರುವ ಭ್ರೂಣಗಳು ವಂಶವಾಹಿಯ ಕಾರಣದಿಂದ ಅಮೈನೊ ಆ್ಯಸಿಡ್ಗಳು ವ್ಯತ್ಯಾಸವಾಗಿ ಹುಟ್ಟಿದ ಮೇಲೆ ಆಹಾರ ಅರಗಿಸಿಕೊಳ್ಳಲಾಗದೆ ಮರಣ ಹೊಂದುವ ಕಾಯಿಲೆಯನ್ನು ಈಗ ಪತ್ತೆ ಹಚ್ಚಲಾಗುತ್ತಿದೆ. ಜಿನೋಮುಗಳ ಕಾರಣದಿಂದ ಉಂಟಾಗುವ ಸಮಸ್ಯೆಯನ್ನು ಎಪಿಜಿನೋಮುಗಳ ಮೂಲಕ ಸರಿಪಡಿಸಬಹುದು ಎಂದು ಅರಿತುಕೊಂಡಿದ್ದ ರಘು ಅದಕ್ಕೆ ಔಷಧವನ್ನು ಕಂಡು ಹಿಡಿದಿದ್ದರು. ಈ ಔಷಧಕ್ಕೆ ವಿಶ್ವ ಆರೋಗ್ಯ ಸಂಸ್ಥೆಯ ಮಾನ್ಯತೆ ಕೂಡ ಸಿಕ್ಕಿದೆ ಎಂದು ಕೂಡ ಹೇಳಿದ್ದ ನೆನಪು. ಔಷಧವನ್ನು ಮಧ್ಯವರ್ತಿಗಳ ಮೂಲಕ ಕೊಟ್ಟರೆ ಅದು ದುರ್ವ್ಯವಹಾರಕ್ಕೆ ಕಾರಣವಾಗುತ್ತದೆಂದು ಜಗತ್ತಿನಾದ್ಯಂತ ತಾಯಂದಿರ ಹೊಟ್ಟೆಯಲ್ಲಿರುವ ಭ್ರೂಣಗಳಿಗೆ ನೇರವಾಗಿ ಸಂಬಂಧಿಸಿದವರಿಗೆ ಔಷಧ ತಲುಪಿಸುತ್ತಿದ್ದರು. ವೈದ್ಯರ ಮೂಲಕ ಚಿಕಿತ್ಸೆ ಕೊಡಿಸುತ್ತಿದ್ದರು. ನನಗೆ ಹೇಳಿದ್ದ ಮಾಹಿತಿಯ ಪ್ರಕಾರ ಸುಮಾರು ೬,೦೦೦ ಕ್ಕೂ ಹೆಚ್ಚು ಮಕ್ಕಳನ್ನು ಉಳಿಸಿದ್ದ ಹೆಗ್ಗಳಿಕೆ ರಘು ಅವರಿಗೆ ಇತ್ತು. ಆ ಕಾರಣಕ್ಕೆ ಇವರನ್ನು ಅನೇಕರು ಆಹಾರದ ವಿಜ್ಞಾನಿ ಎಂದು ಕರೆಯುತ್ತಿದ್ದರು. ಅವರ ಕಂಪೆನಿಗೆ ವರ್ಷಕ್ಕೆ ಹತ್ತತ್ತಿರ ನೂರು ಕೋಟಿ ರೂಪಾಯಿಗಳಷ್ಟು ವ್ಯವಹಾರ ಇದ್ದಿರಬಹುದು. ಸಿರಿಧಾನ್ಯಗಳಿಂದ ಬ್ರೆಡ್ಡು, ಬಿಸ್ಕೆಟ್ಟು ಮಾಡುತ್ತಿದ್ದರು, ಅದ್ಭುತವಾದ ಕಾಫಿ ಪುಡಿ ತಯಾರಿಸುತ್ತಿದ್ದರು. ಹೊಸ ಪದಾರ್ಥವನ್ನೇನಾದರೂ ಸಿದ್ಧಪಡಿಸಿದರೆ ಅದನ್ನು ನನಗೆ ಕಳಿಸಿ ಅಭಿಪ್ರಾಯ ಕೇಳುತ್ತಿದ್ದರು. ಹೊಸ ಪುಸ್ತಕ ಓದಿದರೂ ಸಹ ಇದನ್ನು ಓದದಿದ್ದರೆ ಓದಿ ಎಂದು ಸಲಹೆ ನೀಡುತ್ತಿದ್ದರು. ಓದಿದ ಮೇಲೆ ಚರ್ಚೆ ಮಾಡುತ್ತಿದ್ದರು. ನಮ್ಮಿಬ್ಬರ ನಡುವೆ ನಡೆಯುತ್ತಿದ್ದ ಅರ್ಧ ಗಂಟೆಯಿಂದ-ಒಂದು ಗಂಟೆಯವರೆಗಿನ ಮಾತುಕತೆಗಳಲ್ಲಿ ಕನಿಷ್ಠ ೨೦ಕ್ಕೂ ಹೆಚ್ಚು ಪುಸ್ತಕಗಳ ರೆಫರೆನ್ಸ್ ಇರುತ್ತಿತ್ತು.

Update: 2023-10-17 04:23 GMT

ಕೆ.ಸಿ.ರಘು ಅವರ ಕುರಿತು ಅವರ ಮರಣದ ನಂತರ ಬರೆಯುವ ದುರವಸ್ಥೆ ಬರುತ್ತದೆ ಎಂದು ನಾನು ಊಹಿಸಿರಲಿಲ್ಲ. ಕೋವಿಡ್ ನಂತರ ಪ್ರಾರಂಭವಾದ ಕೆಮ್ಮು ಅವರನ್ನು ಸಾವಿನವರೆಗೆ ಎಳೆದುಕೊಂಡು ಹೋಗುತ್ತದೆ ಎಂದು ನಾವ್ಯಾರೂ ಗ್ರಹಿಸಿರಲಿಲ್ಲ. ಅವರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರ ನಿರ್ಲಕ್ಷ್ಯವೊ ಏನೊ ರಘು ಅವರನ್ನು ನಾವಿಂದು ಕಳೆದುಕೊಂಡು ಪರಿತಪಿಸುವಂತಾಗಿದೆ.

ರಘು ಅವರಿಗೆ ತಮ್ಮ ಕೆಮ್ಮಿನ ಬಗ್ಗೆ ಆತಂಕವಿತ್ತು. ಅವರೇ ಹೇಳಿದ ಹಾಗೆ ಕೆಮ್ಮಿನ ಕುರಿತು ಅವರ ವೈದ್ಯರ ಬಳಿ ಮಾತನಾಡುತ್ತಲೆ ಇದ್ದರಂತೆ. ಅವರು ಯಾವುದೋ ಅಲರ್ಜಿ ಇರಬಹುದೆಂದು ಔಷಧ ಬರೆದು ಕೊಡುತ್ತಿದ್ದರಂತೆ. ಒಂದು ಸಣ್ಣ ಎಕ್ಸ್ರೇ ಮಾಡಿದ್ದರೂ ಪರಿಸ್ಥಿತಿ ಈ ಮಟ್ಟಕ್ಕೆ ಹೋಗುತ್ತಿರಲಿಲ್ಲ ಎಂದು ಅನೇಕ ಬಾರಿ ಹೇಳಿದ್ದರು. ಅವರೇ ಒತ್ತಾಯ ಮಾಡಿ ಪರೀಕ್ಷೆ ಮಾಡುವ ವೇಳೆಗೆ ಶ್ವಾಸಕೋಶದ ಕ್ಯಾನ್ಸರ್ ಕಾಯಿಲೆ ಮೆದುಳಿಗೂ ವ್ಯಾಪಿಸಿಕೊಂಡಿರುವುದಾಗಿ ವರದಿ ಬಂತು. ರಘು ಕುಸಿದು ಹೋಗಲಿಲ್ಲ. ಮೊದಲಿನಂತೆ ನಗುತ್ತಲೇ ಇದ್ದರು. ಆಗಲೂ ಫೋನ್ ಮಾಡಿದರೆ ಕನಿಷ್ಠ ಒಂದೊಂದು ಗಂಟೆ ಮಾತನಾಡುತ್ತಿದ್ದರು. ನಾನು ಅಮೆರಿಕಕ್ಕೊ ಇಲ್ಲ ಸಿಂಗಾಪುರಕ್ಕೊ ಹೋಗಿ ಎಂದು ಒತ್ತಾಯ ಮಾಡುತ್ತಲೇ ಇದ್ದೆ. ಎಲ್ಲ ಕಡೆಯೂ ಒಂದೇ ಚಿಕಿತ್ಸೆ ಎಂದು ಸಬೂಬು ಹೇಳುತ್ತಿದ್ದರು.

ಇಮ್ಯುನೊಥೆರಪಿ ಮಾಡಬೇಕಾದರೆ ಯಾವ ಜೀನಿನಲ್ಲಿ ಮ್ಯುಟೇಶನ್ನುಗಳಾಗಿ ಈ ಸಮಸ್ಯೆಯಾಗಿದೆ ಎಂಬುದನ್ನು ಪತ್ತೆ ಹಚ್ಚಿ ಪರೀಕ್ಷೆಗೆ ಕಳಿಸಲು ಸಂಗ್ರಹಿಸಬೇಕಾದ ಸ್ಯಾಂಪಲ್ಲನ್ನೆ ಸರಿಯಾಗಿ ಸಂಗ್ರಹಿಸಲು ಅವರಿಗೆ ಚಿಕಿತ್ಸೆ ನೀಡುತ್ತಿದ್ದ ಆಸ್ಪತ್ರೆಯವರಿಗೆ ಸಾಧ್ಯವಾಗಿರಲಿಲ್ಲ. ಸ್ಯಾಂಪಲ್ ಸರಿಯಿಲ್ಲ ಎಂದು ಅಮೆರಿಕದಿಂದ ವರದಿ ಬರಲು ಸುಮಾರು ೪೫ ದಿನಗಳು ಮುಗಿದು ಹೋಗಿದ್ದವು. ಅತ್ಯಂತ ಅಮೂಲ್ಯ ಸಮಯವನ್ನು ಆಸ್ಪತ್ರೆಯವರು ಹಾಳು ಮಾಡಿದರೆಂದು ಹಾಗೂ ಭಾರತದ ಆಸ್ಪತ್ರೆಗಳ ದುರವಸ್ಥೆಯ ಕುರಿತು ಮಾತನಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಆಸ್ಪತ್ರೆ ಬದಲಾಯಿಸಿದ್ದರು. ಅಲ್ಲಿ ಮತ್ತೆ ಸ್ಯಾಂಪಲ್ ಸಂಗ್ರಹಿಸಿ ವರದಿ ತರಿಸಿದಾಗ ನಿರ್ದಿಷ್ಟ ಜೀನು ಯಾವುದು? ಅದು ಯಾವ ಪ್ರಮಾಣದಲ್ಲಿ ಹಾನಿಯಾಗಿದೆ ಎಂದು ವರದಿ ಪಡೆದು ಚಿಕಿತ್ಸೆ ಪ್ರಾರಂಭವಾಗುವ ಹೊತ್ತಿಗೆ ಕ್ಯಾನ್ಸರ್ ಅವರ ಬಹುಪಾಲು ದೇಹಕ್ಕೆ ವ್ಯಾಪಿಸಿತ್ತು. ಅಷ್ಟರ ನಡುವೆಯೂ ಅವರು ಆತ್ಮವಿಶ್ವಾಸ ಕಳೆದುಕೊಂಡಿರಲಿಲ್ಲ. ಕಳೆದ ನವೆಂಬರಿನಲ್ಲಿ ನಾನು ಗೆಳೆಯರೊಬ್ಬರ ಜೊತೆ ಆಸ್ಪತ್ರೆಗೆ ಹೋದಾಗ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಕ್ಯಾನ್ಸರ್ ಅಡ್ವಾನ್ಸ್ಡ್ ಹಂತ ಮುಟ್ಟಿದೆ ಹೆಚ್ಚೆಂದರೆ ಒಂದೆರಡು ತಿಂಗಳು ಎಂದು ಹೇಳಿದ್ದರು. ಆದರೆ ನಿರ್ದಿಷ್ಟ ಜೀನಿಗೆ ಚಿಕಿತ್ಸೆ ನೀಡಲಾರಂಭಿಸಿದ ಮೇಲೆ ಮತ್ತೆ ಮೊದಲಿನಂತಾದರು. ಈ ವರ್ಷದ ಎಪ್ರಿಲ್ ಹೊತ್ತಿಗೆ ಕ್ಯಾನ್ಸರ್ ಜಯಿಸಿದೆ ಎನ್ನುವ ಮಟ್ಟಕ್ಕೆ ಮಾಮೂಲಾಗಿಬಿಟ್ಟರು. ಅವರ ಮೆದುಳಿನಲ್ಲಿದ್ದ ಟ್ಯೂಮರ್ ವಾಸಿಯಾಗಿತ್ತೆಂದೂ ಶ್ವಾಸಕೋಶದಲ್ಲಿ ೧೩ ಸೆಂಟಿಮೀಟರಿನಿಂದ ೩ ಸೆಂಟಿಮೀಟರಿಗೆ ಇಳಿಕೆಯಾಗಿದೆಯೆಂದು ಹೇಳಿದ್ದರು. ಅದಾದ ಮೇಲೆ ಅನೇಕ ಕಡೆ ಓಡಾಡಿದರು, ಸಭೆಗಳಲ್ಲಿ ಮಾತನಾಡಿದರು, ಘನವಾದುದನ್ನು ಓದಿದರು. ತಮ್ಮ ಕಂಪೆನಿ ಕಡೆಗೆ ಗಮನ ಕೊಟ್ಟರು. ಕಳೆದೊಂದು ತಿಂಗಳಿಂದ ಮತ್ತೆ ಕುಸಿಯತೊಡಗಿದರು. ಇದೇ ತಿಂಗಳ ೫ ನೇ ತಾರೀಕಿನಂದು ಸಿಎಂ ಭೇಟಿಯಾಗಬೇಕು, ನಿಮ್ಹಾನ್ಸ್ ಮತ್ತು ಸಂಜಯ್ ಗಾಂಧಿ ಆಸ್ಪತ್ರೆಯವರ ಜೊತೆ ಮಾತುಕತೆ ಮಾಡಬೇಕು, ರೋಗಗ್ರಸ್ತ ಮಕ್ಕಳಿಗೆ ನೀಡುವ ಔಷಧದ ಬಗ್ಗೆ ಮಾತನಾಡಬೇಕು ಎಂದಿದ್ದರು. ಬನ್ನಿ ಎಂದಿದ್ದೆ. ಹೇಗಿದ್ದೀರಿ ಅಂದೆ ‘ಇನ್ನೇನು ಎಲ್ಲ ಮುಗಿಯಿತಲ್ಲ, ಮಾಡಬೇಕಾದ್ದನ್ನು ಮಾಡಿಯಾಯಿತಲ್ಲ ಎಂದರು’ ಎದೆ ಧಸಕ್ಕೆಂದಿತು.

ಕಳೆದ ವರ್ಷದ ಎಪ್ರಿಲ್ ತಿಂಗಳ ಆಸುಪಾಸಿನಲ್ಲಿ ಪತ್ತೆಯಾದ ಶ್ವಾಸಕೋಶದ ಕ್ಯಾನ್ಸರ್ ಅಂತಿಮವಾಗಿ ರವಿವಾರ ಅವರ ದೇಹವನ್ನು ತಿಂದು ಮುಗಿಸಿತು. ನಾಡಿನ ದೇಹ ಮತ್ತು ಮನಸ್ಸುಗಳಿಗೆ ಎಂದೂ ಕ್ಯಾನ್ಸರ್ ಬರಬಾರದೆಂದು ನಿರಂತರ ಹೋರಾಟ ನಡೆಸುತ್ತಿದ್ದ ರಘು ಅವರ ಶ್ವಾಸಕೋಶ ಮತ್ತು ಮೆದುಳನ್ನೇ ಕ್ಯಾನ್ಸರ್ ತಿಂದು ಮುಗಿಸಿದ್ದು ಮಾತ್ರ ಮನುಷ್ಯ ಜೀವನದ ಅತ್ಯಂತ ಕ್ರೂರ ವ್ಯಂಗ್ಯದ ರೂಪಕದಂತೆ ಕಾಣಿಸುತ್ತದೆ.

ರಘು ನಾನು ಕಂಡ ಜೀನಿಯಸ್ಗಳಲ್ಲಿ ಒಬ್ಬರು. ಅವರನ್ನು ತಜ್ಞ ಇತ್ಯಾದಿ ಸೀಮಿತ ಪದಕೋಶದ ಮೂಲಕ ನೋಡಲು ಸಾಧ್ಯವೇ ಇಲ್ಲ. ರಾಜ್ಯ ಮತ್ತು ರಾಷ್ಟ್ರಮಟ್ಟದ ಅನೇಕ ವಿದ್ವಾಂಸರ ಕುರಿತು ನನಗೆ ಕುತೂಹಲವಿದೆ. ಅವರುಗಳ ಕುರಿತು ಅಷ್ಟಿಷ್ಟು ಪರಿಚಯವೂ ಇದೆ ಆದರೆ ನಮ್ಮ ನಡುವೆಯೆ ಇದ್ದ ಅಗಾಧ ತಿಳುವಳಿಕೆಯ ರಘು ಅವರೆಲ್ಲರಿಗಿಂತ ಒಂದು ಕೈ ಮಿಗಿಲು ಎಂಬುದು ನನ್ನ ತಿಳುವಳಿಕೆ. ಸುದ್ದಿ ತಿಳಿದ ತಕ್ಷಣ ನಿನ್ನೆ ದೇವನೂರು ಅವರಿಗೆ ಫೋನು ಮಾಡಿದೆ. ಗೊತ್ತಾಯ್ತು ‘ರಘು ಅಗಾಧ, ಅಪಾರ ಮತ್ತು ಅಮೂಲ್ಯ ಜೀವನಪ್ರೇಮದ ಮನುಷ್ಯ’ ಎಂದಷ್ಟೆ ಹೇಳಿ ಮೌನವಾದರು. ನಮ್ಮ ಸೀಮಿತ ಪದಗಳಿಗೆ ಸಿಲುಕದ ವ್ಯಕ್ತಿತ್ವ ರಘು ಅವರದ್ದು. ನಮಗಿರುವ ದುಃಖಕ್ಕೆ ಕಾರಣ ರಘು ಹೊರಟು ಹೋದರು ಎಂಬುದಷ್ಟೆ ಅಲ್ಲ; ರಘು ಅವರು ಕರ್ನಾಟಕದ ವಿದ್ವತ್ವಲಯಕ್ಕೆ ಅರ್ಥವೇ ಆಗಲಿಲ್ಲ ಎಂಬುದೂ ಕೂಡ ಕಾರಣ. ನಾಡಿನ ಅನೇಕ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಿದ್ದ ರಘು ದೊಡ್ಡ ದಾರ್ಶನಿಕ ವ್ಯಕ್ತಿತ್ವವನ್ನು ಕಟ್ಟಿಕೊಂಡಿದ್ದರು. ಮನುಷ್ಯ ಅಂದರೆ ಏನು ಗೊತ್ತೆ ವೆಂಕಟೇಶ್? ನಿಮಗೆ ತಿಳಿದಿರಲಿ ನಾವು ನಮಗಾಗಿ ಬದುಕುತ್ತಿಲ್ಲ, ನಾವು ನಮ್ಮೊಳಗೆ ಇರುವ ಅಸಂಖ್ಯಾತ ವೈರಸ್ಸು, ಬ್ಯಾಕ್ಟೀರಿಯಾಗಳಿಗಾಗಿ ಬದುಕಿದ್ದೇವೆ. ಅವು ನಮ್ಮಿಂದ ಬದುಕಿವೆ ಎಂದು ನಗುತ್ತಿದ್ದರು.

ಅವರಿಗೆ ಹಲವು ಏರಿಯಾಗಳಲ್ಲಿ ಅಪಾರ ತಿಳುವಳಿಕೆ ಇತ್ತು. ವಿಜ್ಞಾನ, ತಳಿವಿಜ್ಞಾನ, ಆಹಾರ ವಿಜ್ಞಾನ, ಪರಿಸರ ವಿಜ್ಞಾನ, ಇಮ್ಯುನಾಲಜಿ ಹೀಗೆ ವಿಜ್ಞಾನ ಮತ್ತು ವೈದ್ಯಕೀಯ ಶಾಸ್ತ್ರದಲ್ಲಿ ತಿಳುವಳಿಕೆ ಇದ್ದರೆ ಇತಿಹಾಸ, ಸಾಹಿತ್ಯ, ಕಲೆ, ಆರ್ಥಿಕತೆ, ರಾಜಕೀಯ, ಸಮಾಜ ವಿಜ್ಞಾನ, ಪುರಾತತ್ವ ವಿಜ್ಞಾನ, ತತ್ವಶಾಸ್ತ್ರ ಹೀಗೆ ಅನೇಕ ವಿಷಯಗಳ ಮೇಲೆ ಆಳವಾದ ಒಳನೋಟಗಳಿಂದ ಮಾತನಾಡುತ್ತಿದ್ದರು. ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಪ್ರಕಟವಾಗುವ ಬಹುಪಾಲು ಪುಸ್ತಕಗಳು ಅವರ ವೈಯಕ್ತಿಕ ಲೈಬ್ರರಿಯಲ್ಲಿದ್ದವು. ಯಾವುದಾದರೂ ವಿಷಯದ ಮೇಲೆ ಚರ್ಚೆ ಪ್ರಾರಂಭಿಸಿದರೆ ಅದರ ಆಳ-ವಿಸ್ತಾರಗಳನ್ನು ಮುಟ್ಟಿ ಮಾತನಾಡುತ್ತಿದ್ದರು.

ನಾಡಿನ ಅನೇಕರ ದೃಷ್ಟಿಯಲ್ಲಿ ರಘು ಆಹಾರ ತಜ್ಞ ಮಾತ್ರ. ಇನ್ನೂ ಕೆಲವರು ಅವರನ್ನು ಸಾಮಾಜಿಕ ಕಾರ್ಯಕರ್ತ ಎಂದು ಮಾತ್ರ ನೋಡುತ್ತಿದ್ದರು. ಈ ಎರಡೂ ವ್ಯಾಖ್ಯಾನಗಳು ಅವರ ವ್ಯಕ್ತಿತ್ವವನ್ನು ಪೂರ್ಣ ಪ್ರಮಾಣದಲ್ಲಿ ಕಟ್ಟಿಕೊಡಲು ವಿಫಲವಾಗುತ್ತವೆ. ಕರ್ನಾಟಕದ ಬೌದ್ಧಿಕತೆಯು ಅಪಾಯಕಾರಿ ಎಂಬಷ್ಟರ ಮಟ್ಟಿಗೆ ಕುಸಿದಿದೆ ಎಂಬುದರ ಧ್ಯೋತಕವಿದು. ಬೌದ್ಧಿಕ ಕ್ಷೇತ್ರವು ಆರೋಗ್ಯಕರವಾಗಿದ್ದರೆ ನಾಡಿನ ಯಾವುದೋ ಮೂಲೆಯಲ್ಲಿ ಉದಿಸುವ ಪ್ರತಿಭೆಯೊಂದನ್ನು ಪತ್ತೆ ಹಚ್ಚಿ ಅದನ್ನು ಪೋಷಿಸುವ ಕೆಲಸ ಮಾಡಲಾಗುತ್ತದೆ. ಆದರೆ ನಾಡು ಬೌದ್ಧಿಕವಾಗಿ ನಿಷ್ಕ್ರಿಯವಾಗಿರುವ ಕಾರಣ ಅದನ್ನು ಮಾಡಲಾಗುತ್ತಿಲ್ಲ. ನಾಡಿಗೆ ರಘು ಸರಿಯಾಗಿ ಅರ್ಥವಾಗಲೇ ಇಲ್ಲ.

ಸಾಹಿತ್ಯ, ತತ್ವಜ್ಞಾನ, ಇತಿಹಾಸ ಮತ್ತು ತಳಿವಿಜ್ಞಾನ ಮುಂತಾದ ಕುರಿತು ಯಾವುದಾದರೂ ಸಂದೇಹಗಳು ಬಂದರೆ ಮೊದಲು ನೆನಪಾಗುತ್ತಿದ್ದುದೆ ಕೆ.ಸಿ.ರಘು. ಥಟ್ಟನೆ ಮಾತುಕತೆ ಪ್ರಾರಂಭಿಸುತ್ತಿದ್ದ ರಘು ನಾವು ಊಹಿಸದ ಅನೇಕ ಒಳನೋಟಗಳನ್ನು ಒದಗಿಸುತ್ತಿದ್ದರು. ಬೇಂದ್ರೆಯವರ ಕಾವ್ಯದ ಬಗ್ಗೆ, ರವೀಂದ್ರನಾಥ ಟಾಗೋರರ ವಿಚಾರಧಾರೆಯ ಬಗ್ಗೆ ನಾವು ಅದೆಷ್ಟೊ ಗಂಟೆಗಳ ಕಾಲ ಚರ್ಚಿಸಿದ್ದೇವೆ. ರಘು ಅವರಿಗೆ ಕ್ರಿಸ್ತಪೂರ್ವ ಭಾರತದ ಬಗ್ಗೆ ಅಪಾರ ಕುತೂಹಲವಿತ್ತು. ಮಹಾಕಾವ್ಯ ಮತ್ತು ವೇದಾಂತಗಳ ಬಗ್ಗೆ ಮೂಲ ಉಲ್ಲೇಖಗಳೊಂದಿಗೆ ದಿನಗಟ್ಟಲೆ ಮಾತನಾಡುತ್ತಿದ್ದರು. ಸಾಂಪ್ರದಾಯಿಕ ಸಾಹಿತ್ಯ ವಿಮರ್ಶಕರು ನೀಡದ ಒಳನೋಟಗಳು ರಘು ಅವರಿಗೆ ಇದ್ದವು.

ಕರ್ನಾಟಕದಲ್ಲಿ ಬಹುಶಿಸ್ತುಗಳ ವಿಚಾರದಲ್ಲಿ ಅಪಾರ ಆಸಕ್ತಿ ಇದ್ದವರಲ್ಲಿ ಡಿ.ಆರ್.ನಾಗರಾಜ ಮತ್ತು ಕಿ.ರಂ.ನಾಗರಾಜ್ ಪ್ರಮುಖರು. ಕಾರಂತರು ಮತ್ತು ತೇಜಸ್ವಿಯವರೂ ಸಹ ಈ ಏರಿಯಾಗಳಲ್ಲಿ ಕುತೂಹಲದಿಂದ ಕೆಲಸ ಮಾಡಿದ್ದರು. ಇವರೆಲ್ಲರೂ ಸಾಹಿತ್ಯದ ಹಿನ್ನೆಲೆಯಿಂದ ಬಂದವರು. ಆದರೆ ರಘು ಅವರಿಗೆ ಸಾಹಿತ್ಯದ ಹಿನ್ನೆಲೆ ಇರಲಿಲ್ಲ. ಅವರು ಆಹಾರ ವಿಜ್ಞಾನ ವಿಭಾಗದಿಂದ ಬಂದಿದ್ದರು. ವಿಜ್ಞಾನದ ಸಂಗತಿಗಳನ್ನು ಅವರದ್ದೇ ಆದ ಕನ್ನಡದಲ್ಲಿ ವಿವರಿಸುತ್ತಿದ್ದರು.

ರಘು ನನಗಿಂತ ಹನ್ನೆರಡು-ಹದಿಮೂರು ವರ್ಷಗಳಷ್ಟು ದೊಡ್ಡವರು. ಈಗ ೫ ವರ್ಷಕ್ಕೆ ಜನರೇಶನ್ ಗ್ಯಾಪ್ ಶುರುವಾಗುವಷ್ಟು ವೇಗವಾಗಿ ಜಗತ್ತು ಬದಲಾಗುತ್ತಿದೆ. ಆದರೆ ರಘು ಕಿರಿಯ ತಲೆಮಾರಿಗೆ ಕಿವಿ ಕೊಡುತ್ತಿದ್ದರು. ಹೊಸದೇನನ್ನಾದರೂ ಹೇಳಿದರೆ ರೆಕ್ಕೆ ಬಂದ ಮರಿಗಳು ಹಾರಲು ಪ್ರಯತ್ನಿಸಿ ಸಫಲವಾದಾಗ ತಾಯಿ ಹಕ್ಕಿ ರೆಕ್ಕೆ ಬಡಿದು ಖುಷಿ ಪಡುವಂತೆ ಅವರ ವರ್ತನೆ ಇರುತ್ತಿತ್ತು. ಸದಾ ನಗುತ್ತಲೇ ಇರುತ್ತಿದ್ದ ಅವರ ವೈಯಕ್ತಿಕ ಜೀವನ ದುಃಖಕರವಾಗಿತ್ತೆಂದು ಯಾವಾಗಲೊ ಒಮ್ಮೊಮ್ಮೆ ಪ್ರಸ್ತಾಪಿಸುತ್ತಿದ್ದರು. ವೈಯಕ್ತಿಕ ಜೀವನದ ಬಗ್ಗೆ ಹೆಚ್ಚು ಮಾತನಾಡದೆ ಜಗತ್ತೆಂಬ ಬಹುದೊಡ್ಡ ಆಲದ ಮರದಲ್ಲಿರುವ ಇರುವೆಗಳು ನಾವು ನಮ್ಮ ದುಃಖಕ್ಕಿಂತ ಜಗತ್ತಿನ ದುಃಖ-ಸುಖಗಳೇ ಹೆಚ್ಚು ಎಂದು ವರ್ತಿಸುತ್ತಿದ್ದರು. ನಾಡಿನ ಸಂಕಟ ಕಡಿಮೆ ಮಾಡುವುದು ಹೇಗೆ ಎಂಬುದೇ ಅವರ ಪ್ರಮುಖ ಕಾಳಜಿಯಾಗಿತ್ತು. ನಿತ್ಯ ಮಾತುಕತೆಗಳಲ್ಲಿ ನಾಡಿನ ಆಗು ಹೋಗುಗಳು ಜನರ ತಲಾದಾಯ, ಕೊಂಡುಕೊಳ್ಳುವ ಶಕ್ತಿ, ಆಹಾರ ಮತ್ತು ಔಷಧಕ್ಕೆ ಖರ್ಚು ಮಾಡುವ ಶಕ್ತಿ, ನಾಡಿನ ಬೌದ್ಧಿಕ ದಾರಿದ್ರ್ಯ ಇಂಥವುಗಳ ಬಗ್ಗೆಯೇ ಹೆಚ್ಚು ಮಾತನಾಡುತ್ತಿದ್ದರು.

ರಘು ಅವರಿಗೆ ಉಪನಿಷತ್ತಿನ ಪ್ರಮೇಯಗಳನ್ನು ವಿಜ್ಞಾನದ ತರ್ಕ ನಿಕಷತೆಗೆ ಒಡ್ಡಿ ಅವುಗಳನ್ನು ವಿವರಿಸುವ ಆಸಕ್ತಿ ಬಹಳ ಇತ್ತು. ವೇದ ವೇದಾಂತಗಳ ಅಧ್ಯಯನವೆಂಬುದು ಉಸುಕು ಇದ್ದ ಹಾಗೆ, ಅದರ ಮೋಹದಲ್ಲಿ ಸಿಕ್ಕಿ ಬೀಳಬಾರದು ಎಂಬ ಎಚ್ಚರಿಕೆಯನ್ನು ಸದಾ ನೀಡುತ್ತಿದ್ದರು. ವೇದಾಂತದ ಮೇಲೆ ಕನ್ನಡದಲ್ಲಿ ಬರೆಯುತ್ತೇನೆಂದು ಹೇಳಿದ್ದರು. ಆದರೆ ಸಾವು ಎಂಬುದು ಅವರ ಉತ್ಸಾಹ-ಚೈತನ್ಯಗಳನ್ನು ಎಂದೆಂದೂ ಚಿಗುರದ ಹಾಗೆ ಅಡಗಿಸಿಬಿಟ್ಟಿತು. ನಮ್ಮ ಜೀವಿತಾವಧಿಯಲ್ಲಿ ರಘು ಅವರಂಥ ದೊಡ್ಡ ಚಿಂತಕ, ದಾರ್ಶನಿಕ, ಓದುಗ ಹಾಗೂ ಮನುಷ್ಯನನ್ನು ನೋಡಲು ಸಾಧ್ಯವೇ ಇಲ್ಲ. ನಾನು ಜಗತ್ತಿನ ಅಪ್ರತಿಮ ಚಿಂತಕ ಎಂದು ಕರೆಸಿಕೊಳ್ಳುವ ಯುವಾಲ್ ಹರಾರಿಯೊಂದಿಗೂ ಮಾತನಾಡಿದ್ದೇನೆ, ಅವರ ಎಲ್ಲ ಭಾಷಣ-ಬರಹಗಳನ್ನು ಗಮನಿಸುತ್ತಿರುತ್ತೇನೆ. ರಘು ಅನೇಕ ಸಾರಿ ಹರಾರಿಗಿಂತ ದೊಡ್ಡ ಚಿಂತಕ ಎನ್ನಿಸಿದ್ದಿದೆ. ರಘು ಬೌದ್ಧಿಕ ಚಟುವಟಿಕೆಯೊಂದನ್ನೆ ಮಾಡಿದ್ದರೆ ಈ ಜಗತ್ತು ಕಂಡ ಅಪ್ರತಿಮ ಇಂಟೆಲೆಕ್ಚ್ಯುವಲ್ ಎನ್ನಿಸಿಕೊಳ್ಳುತ್ತಿದ್ದರು. ರಘು ಅವರ ವಿದ್ವತ್ತು ಹೇಗಿರುತ್ತಿತ್ತೆಂದರೆ; ಹರಾರಿ ಮುಂತಾದವರ ಕುರಿತು ಆತ ದೊಡ್ಡ ಚಿಂತಕ ಓದ್ರಿ ಎಂದು ಹೇಳುತ್ತಿದ್ದರು, ನಾವು ಓದಿನ ಗುಂಗಿನೊಳಗೆ ಮುಳುಗಿ ಕಳೆದು ಹೋಗುತ್ತಿದ್ದಾಗಲೇ ಅವರ ಮಿತಿಗಳ ಕುರಿತು, ಸಮಸ್ಯೆಗಳ ಕುರಿತು ರಾಶಿ ರಾಶಿ ಮಾತನಾಡುತ್ತಿದ್ದರು. ಹಾಗಾಗಿ ಅತ್ಯಂತ ಒರಿಜಿನಲ್ಲಾದ ಚಿಂತನೆಯನ್ನು ಮಾತ್ರ ಸೃಜಿಸಲು ಪ್ರಯತ್ನಿಸುತ್ತಿದ್ದರು. ಹೆರಾಲ್ಡ್ಬ್ಲೂಮ್ ಬಗ್ಗೆ ಅವರಿಗೆ ಅಪ್ರತಿಮ ಗೌರವವಿತ್ತು. ಕರೆನ್ ಆರ್ಮ್ಸ್ಟ್ರಾಂಗ್ರನ್ನು ಪದೇ ಪದೇ ನೆನಪಿಸಿಕೊಳ್ಳುತ್ತಿದ್ದರು. ಬುದ್ಧ ಮತ್ತು ಬಾಬಾ ಸಾಹೇಬರ ಕುರಿತು ಅಗಾಧ ತಿಳುವಳಿಕೆ ಇತ್ತು.

ಯಾರನ್ನೂ ದ್ವೇಷಿಸದ, ಯಾರ ಬಗ್ಗೆಯೂ ಕೆಟ್ಟದ್ದನ್ನು ಮಾತನಾಡದ ರಘು ಅವರ ದೊಡ್ಡ ವ್ಯಕ್ತಿತ್ವ ಸಾಹಿತ್ಯ, ಸಾಮಾಜಿಕ ರಂಗಗಳಲ್ಲಿ ತೊಡಗಿಸಿಕೊಂಡವರಿಗೆ ಮಾದರಿಯಾಗಿತ್ತು. ಅವರು ಜಗತ್ತಿನ ಎಲ್ಲ ಧರ್ಮಗಳ ಬಗ್ಗೆಯೂ ತಿಳುವಳಿಕೆ ಹೊಂದಿದ್ದರು. ಎಲ್ಲ ಒಳಿತುಗಳ ಬಗ್ಗೆಯೂ ಅದಮ್ಯ ಕುತೂಹಲ ಹೊಂದಿದ್ದರು. ಬುದ್ಧ ಮತ್ತು ಬುದ್ಧಿಸಂ ಬಗ್ಗೆ ರಘು ಅವರಿಗೆ ಇದ್ದಷ್ಟು ತಿಳುವಳಿಕೆ ನನಗೆ ಗೊತ್ತಿರುವ ಹಾಗೆ ಕರ್ನಾಟಕದಲ್ಲಿ ಯಾರಿಗೂ ಇರಲಿಲ್ಲ. ಅವರು ನಾಡಿನ ಅನೇಕ ಜನ ಚಳವಳಿಗಳಲ್ಲಿ ಭಾಗವಹಿಸಿ ಮಾತನಾಡಿದ್ದಾರೆ. ಇನ್ನೊಂದಿಷ್ಟು ವರ್ಷ ಬದುಕಿದ್ದರೆ ಅವರು ದೊಡ್ಡ ಪಬ್ಲಿಕ್ ಇಂಟೆಲೆಕ್ಚ್ಯುವಲ್ ಆಗಿರುತ್ತಿದ್ದರು. ಆದರೆ ಸಾವೆಂಬುದು ನಮ್ಮೆಲ್ಲರ ಕನಸುಗಳನ್ನು ಅಳಿಸಿ ಹಾಕಿತು. ನಮ್ಮ ಕಣ್ಣ ಮುಂದೆಯೇ ಇದ್ದ ವಿಶ್ವವಿದ್ಯಾನಿಲಯವೊಂದು ಅವಸಾನ ಹೊಂದಿತು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ನೆಲ್ಲುಕುಂಟೆ ವೆಂಕಟೇಶ್

contributor

Similar News