×
Ad

Assam | ದಿಬ್ರುಗಢ ಹೆದ್ದಾರಿಯಲ್ಲಿನ ಈಶಾನ್ಯ ಭಾರತದ ಮೊದಲ ತುರ್ತು ಲ್ಯಾಂಡಿಂಗ್ ಸೌಲಭ್ಯದಲ್ಲಿ ಇಳಿದ ಪ್ರಧಾನಿ ಮೋದಿ ವಿಮಾನ

ಮಣಿಪುರಕ್ಕೆ ಭೇಟಿ ನೀಡಿ ಎಂದು ಟಿಕೆಟ್ ಬುಕಿಂಗ್ ಮಾಡಿ ಒತ್ತಾಯಿಸಿದ ಕಾಂಗ್ರೆಸ್

Update: 2026-02-14 12:46 IST

ಹೊಸದಿಲ್ಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶನಿವಾರ ಅಸ್ಸಾಂಗೆ ಕೈಗೊಂಡಿರುವ ಒಂದು ದಿನದ ಪ್ರವಾಸದ ವೇಳೆ ದಿಬ್ರುಗಢದ ಮೋರನ್ ಬೈಪಾಸ್‌ ನಲ್ಲಿರುವ ತುರ್ತು ಲ್ಯಾಂಡಿಂಗ್ ಸೌಲಭ್ಯದಲ್ಲಿ, ಮೋದಿಯವರ ವಿಮಾನ ಲ್ಯಾಂಡ್ ಆಯಿತು.

ಚಾಬುವಾ ವಾಯುನೆಲೆಯಲ್ಲಿ ಅಸ್ಸಾಂ ರಾಜ್ಯಪಾಲ ಲಕ್ಷ್ಮಣ್ ಪ್ರಸಾದ್ ಆಚಾರ್ಯ, ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್ ಸೇರಿದಂತೆ ಹಿರಿಯ ಅಧಿಕಾರಿಗಳು ಅವರನ್ನು ಬರಮಾಡಿಕೊಂಡರು.

ತುರ್ತು ಲ್ಯಾಂಡಿಂಗ್ ಸೌಲಭ್ಯದಲ್ಲಿ ಭಾರತೀಯ ವಾಯುಪಡೆಯ ವೈಮಾನಿಕ ಪ್ರದರ್ಶನವನ್ನು ಪ್ರಧಾನಿಯವರು ವೀಕ್ಷಿಸಿದರು. ಸುಖೋಯ್ ಸು–30 ಎಂಕೆಐ ಮತ್ತು ರಫೇಲ್ ಯುದ್ಧ ವಿಮಾನಗಳು, ಸಾರಿಗೆ ವಿಮಾನಗಳು ಹಾಗೂ ಹೆಲಿಕಾಪ್ಟರ್‌ ಗಳ ಲ್ಯಾಂಡಿಂಗ್, ಟೇಕ್‌ಆಫ್ ಮತ್ತು ಫ್ಲೈ–ಪಾಸ್ಟ್ ಪ್ರದರ್ಶನ ನಡೆಸಿದವು. ಹೊಸದಾಗಿ ಅಭಿವೃದ್ಧಿಪಡಿಸಿದ ಸೌಲಭ್ಯದ ಸಾಮರ್ಥ್ಯವನ್ನು ತೋರಿಸುವ ಉದ್ದೇಶದಿಂದ ಈ ಕಾರ್ಯಾಚರಣೆಗಳು ನಡೆದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ತುರ್ತು ಲ್ಯಾಂಡಿಂಗ್ ಸೌಲಭ್ಯವು ಈಶಾನ್ಯ ಭಾರತದಲ್ಲಿಯೇ ಮೊದಲನೆಯದು. ಭಾರತೀಯ ವಾಯುಪಡೆಯ ಮೇಲ್ವಿಚಾರಣೆಯಲ್ಲಿ ವಿನ್ಯಾಸಗೊಳಿಸಿ ನಿರ್ಮಿಸಲಾದ ಈ ಕೇಂದ್ರವು ತುರ್ತು ಸಂದರ್ಭಗಳಲ್ಲಿ ಮಿಲಿಟರಿ ಹಾಗೂ ನಾಗರಿಕ ವಿಮಾನಗಳಿಗೆ ನೆರವಾಗಲಿದೆ. 40 ಟನ್‌ವರೆಗೆ ಯುದ್ಧ ವಿಮಾನಗಳು ಮತ್ತು 74 ಟನ್‌ವರೆಗೆ ಗರಿಷ್ಠ ಟೇಕ್‌ಆಫ್ ತೂಕ ಹೊಂದಿದ ವಿಮಾನಗಳನ್ನು ನಿರ್ವಹಿಸುವ ಸಾಮರ್ಥ್ಯ ಇದಕ್ಕಿದೆ. ವಾಯು ಪ್ರದರ್ಶನದ ಬಳಿಕ ಪ್ರಧಾನಿ ಸಿ–130 ವಿಮಾನದಲ್ಲಿ ಗುವಾಹಟಿಗೆ ತೆರಳಿದರು.

ಒಂದು ದಿನದ ಅಸ್ಸಾಂ ಭೇಟಿಯ ವೇಳೆ ಪ್ರಧಾನಿ ಮೋದಿ ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಸುಮಾರು ₹3,030 ಕೋಟಿ ವೆಚ್ಚದ ಆರು ಪಥಗಳ ಕುಮಾರ್ ಭಾಸ್ಕರ್ ವರ್ಮಾ ಸೇತುವೆಯನ್ನು ವೀಕ್ಷಿಸಲಿದ್ದಾರೆ. ಈ ಸೇತುವೆ ಗುವಾಹಟಿ–ಉತ್ತರ ಗುವಾಹಟಿ ನಡುವಿನ ಪ್ರಯಾಣ ಸಮಯವನ್ನು ಸುಮಾರು ಕಡಿಮೆ ಮಾಡಲಿದೆ ಎಂದು ಅಂದಾಜಿಸಲಾಗಿದೆ. ಭೂಕಂಪನ ಸೂಕ್ಷ್ಮ ವಲಯದ ಹಿನ್ನೆಲೆ ಆಧುನಿಕ ತಂತ್ರಜ್ಞಾನಗಳನ್ನು ಸೇತುವೆಯಲ್ಲಿ ಅಳವಡಿಸಲಾಗಿದೆ.

ಇದೇ ವೇಳೆ, ₹5,450 ಕೋಟಿಗೂ ಅಧಿಕ ಮೌಲ್ಯದ ಸಂಪರ್ಕ, ಡಿಜಿಟಲ್ ಮೂಲಸೌಕರ್ಯ, ಉನ್ನತ ಶಿಕ್ಷಣ ಹಾಗೂ ನಗರ ಸಾರಿಗೆ ಯೋಜನೆಗಳನ್ನು ಲಚಿತ್ ಘಾಟ್‌ನಲ್ಲಿ ಉದ್ಘಾಟಿಸಲಿದ್ದಾರೆ. ಅಮಿಂಗಾವ್‌ನಲ್ಲಿ ಈಶಾನ್ಯ ಪ್ರದೇಶದ ರಾಷ್ಟ್ರೀಯ ದತ್ತಾಂಶ ಕೇಂದ್ರ ಹಾಗೂ ಐಐಎಂ ಗುವಾಹಟಿ ತಾತ್ಕಾಲಿಕ ಕ್ಯಾಂಪಸ್ ಉದ್ಘಾಟನೆಯೂ ಕಾರ್ಯಕ್ರಮದಲ್ಲಿದೆ. ಪಿಎಂ–ಇಬಸ್ ಯೋಜನೆಯಡಿ ಗುವಾಹಟಿ ಸೇರಿದಂತೆ ನಾಲ್ಕು ನಗರಗಳಲ್ಲಿ 225 ವಿದ್ಯುತ್ ಬಸ್‌ಗಳಿಗೆ ಚಾಲನೆ ನೀಡಲಿದ್ದಾರೆ.

ಈ ಮಧ್ಯೆ ಮಣಿಪುರಕ್ಕೆ ಭೇಟಿ ನೀಡುವಂತೆ ಕಾಂಗ್ರೆಸ್ ನಾಯಕ ಪವನ್ ಖೇರಾ ಪ್ರಧಾನಿಯನ್ನು ಒತ್ತಾಯಿಸಿದ್ದಾರೆ. ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ಮಣಿಪುರದಲ್ಲಿ ಮುಂದುವರಿದಿರುವ ಉದ್ವಿಗ್ನತೆಯನ್ನು ಉಲ್ಲೇಖಿಸಿ ಪ್ರಧಾನಿಯ ಭೇಟಿ ಜನತೆಗೆ ಧೈರ್ಯ ತುಂಬಲಿದೆ ಎಂದು ಹೇಳಿದ್ದಾರೆ. ಗುವಾಹಟಿಯಿಂದ ಇಂಫಾಲ್‌ಗೆ ವಿಮಾನ ಟಿಕೆಟ್ ಕಾಯ್ದಿರಿಸಿದ್ದೇವೆ ಎಂಬ ಹೇಳಿಕೆಯೂ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.

ಮಣಿಪುರದಲ್ಲಿ 2023ರಿಂದ ಅಶಾಂತಿ ಮುಂದುವರಿದಿರುವ ಹಿನ್ನೆಲೆ ವಿರೋಧ ಪಕ್ಷಗಳು ಕೇಂದ್ರದ ಕ್ರಮಗಳನ್ನು ಟೀಕಿಸುತ್ತಿದ್ದರೆ, ಸರ್ಕಾರವು ಶಾಂತಿ ಪುನಃಸ್ಥಾಪನೆಗೆ ಕ್ರಮಗಳು ನಡೆಯುತ್ತಿವೆ ಎಂದು ತಿಳಿಸಿದೆ. ಪ್ರಧಾನಿ ಕಚೇರಿಯಿಂದ ಈ ಕುರಿತು ತಕ್ಷಣದ ಪ್ರತಿಕ್ರಿಯೆ ಲಭ್ಯವಾಗಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News